Kannada News  /  Karnataka  /  Bjp State President Nalin Kumar Kateel Slams Congress For Paycm Campaign
'ಸ್ಕ್ಯಾಮ್ ರಾಮಯ್ಯ' ಪುಸ್ತಕ ಬಿಡುಗಡೆ
'ಸ್ಕ್ಯಾಮ್ ರಾಮಯ್ಯ' ಪುಸ್ತಕ ಬಿಡುಗಡೆ (Verified Twitter)

PayCM Campaign: ಪೇಸಿಎಂ ಅಂದ್ರೆ ʼಪೇ ಕಾಂಗ್ರೆಸ್‌ ಮೇಡಂʼ ಎಂದರ್ಥ: ಕಟೀಲ್‌ ಕಿಡಿನುಡಿ!

23 September 2022, 6:10 ISTHT Kannada Desk
  • Share on Twitter
  • Share on FaceBook
23 September 2022, 6:10 IST

ಪೇಸಿಎಂ ಅಭಿಯಾನಕ್ಕೆ ತೀವ್ರ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಪೇಸಿಎಂ ಎಂದರೆ ʼಪೇ ಕಾಂಗ್ರೆಸ್‌ ಮೇಡಂʼ ಎಂದು ವ್ಯಂಗ್ಯವಾಡಿದ್ದಾರೆ. 'ಸ್ಕ್ಯಾಮ್ ರಾಮಯ್ಯ' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕಟೀಲ್‌, ಸಿದ್ದರಾಮಯ್ಯ ಅವಧಿಯ ಎಲ್ಲಾ ಹಗರಣಗಳನ್ನು ಬಯಲಿಗೆಳೆಯಲಾಗುವುದು ಎಂದು ಕಿಡಿಕಾರಿದರು. ಅತ್ತ ವಿಧಾನಸಭೆಯಲ್ಲೂ ಪೇಸಿಎಂ ಅಭಿಯಾನ ಭಾರೀ ಸದ್ದು ಮಾಡಿದೆ.

ಬೆಂಗಳೂರು: ಪೇಸಿಎಂ ಅಭಿಯಾನ ಪೋಸ್ಟರ್‌ ಅಭಿಯಾನ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್‌ ವಿರುದ್ಧ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಭಾವಚಿತ್ರ ಬಳಸಿ ಪೇಸಿಎಂ ಅಭಿಯಾನ ಆರಂಭಿಸಿರುವುದಕ್ಕೆ ಬಿಜೆಪಿ ಕೆಂಡಾಮಂಡಲವಾಗಿದೆ. ಅಲ್ಲದೇ ಈ ಸುಳ್ಳು ಅಭಿಯಾನದ ಹಿಂದೆ ಕಾಂಗ್ರೆಸ್‌ ಕೈವಾಡವಿದೆ ಎಂದು ಆರೋಪಿಸಿದೆ.

ಟ್ರೆಂಡಿಂಗ್​ ಸುದ್ದಿ

ಇದಕ್ಕೆ ತಿರುಗೇಟು ನೀಡಿರುವ ಪ್ರತಿಪಕ್ಷ ಕಾಂಗ್ರೆಸ್‌, ಅಭಿಯಾನಕ್ಕೂ ಕಾಂಗ್ರೆಸ್‌ಗೂ ಸಂಬಂಧವಿಲ್ಲ. ಯಾರೇ ಈ ಅಭಿಯಾನ ಆರಂಭಿಸಿದ್ದರೂ, ಅವರು ಸತ್ಯದ ಪರವಾಗಿ ಧ್ವನಿ ಎತ್ತಿದ್ದಾರೆ ಎಂದು ಹೇಳಿದೆ. ವಿಧಾನಸಭೆಯಲ್ಲೂ ಈ ಕುರಿತು ಬಿರುಸಿನ ಚರ್ಚೆ ನಡೆದಿದೆ. ಪೇಸಿಎಂ ಅಭಿಯಾನ ಸದನದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಸದಸ್ಯರ ನಡುವಿನ ವಾಗ್ವಾದಕ್ಕೂ ಕಾರಣವಾಗಿದೆ.

ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಬಿಜೆಪಿ ಸದಸ್ಯ ಪಿ. ರಾಜೀವ್, ಇದು ಕಾಂಗ್ರೆಸ್ ಪ್ರಾಯೋಜಿತ ಅಭಿಯಾನ ಎಂದು ಅರೋಪಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ನ ಕೃಷ್ಣ ಭೈರೇಗೌಡ, ಯಾವುದೇ ಆಧಾರವಿಲ್ಲದೇ ಕಾಂಗ್ರೆಸ್‌ ವಿರುದ್ಧ ಆರೋಪ ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದರು. ಈ ವೇಳೆ ಗದ್ದಲ ಜೋರಾದಾಗ, ಸ್ಪೀಕರ್‌ ವಿಶ್ವೇಶ್ವರ್‌ ಹೆಗಡೆ ಕಾಗೇರಿ ಅವರು ಉಭಯ ಪಕ್ಷಗಳ ಸದಸ್ಯರ ಮೇಲೆ ಗರಂ ಆದರು.

ಕಟೀಲ್‌ ಕಿಡಿನುಡಿ:

ಇನ್ನು ಪೇಸಿಎಂ ಅಭಿಯಾನಕ್ಕೆ ತೀವ್ರ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಪೇಸಿಎಂ ಎಂದರೆ ʼಪೇ ಕಾಂಗ್ರೆಸ್‌ ಮೇಡಂʼ ಎಂದು ವ್ಯಂಗ್ಯವಾಡಿದ್ದಾರೆ. ನಿನ್ನೆ(ಸೆ.22-ಗುರುವಾರ) ಬೆಂಗಳೂರಿನಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಮಾತನಾಡಿದ ಕಟೀಲ್‌, ಸಿದ್ದರಾಮಯ್ಯ ಅಧಿಕಾರಾವಧಿಯ ಶೇ 100 ಭ್ರಷ್ಟಾಚಾರವನ್ನು ಅನಾವರಣಗೊಳಿಸುವ 'ಸ್ಕ್ಯಾಮ್ ರಾಮಯ್ಯ' ಪುಸ್ತಕವನ್ನು ಬಿಡುಗಡೆ ಮಾಡಿ ಮಾತನಾಡಿದರು.

ಕಾಂಗ್ರೆಸ್ ಮೇಡಂಗೆ ಮಾಡುವ ಪೇಮೆಂಟ್ ಬಗ್ಗೆ ಈ ಪುಸ್ತಕದಲ್ಲಿ ಉಲ್ಲೇಖವಿದೆ. ಚೀಟಿ ಹಣ ನುಂಗಿದ್ದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರ ಹಗರಣಗಳ ಬಗ್ಗೆಯೂ ಈ ಪುಸ್ತಕದಲ್ಲಿ ಮಾಹಿತಿ ಇದೆ ಎಂದು ಕಟೀಲ್‌ ಹೇಳಿದರು.ಪೇಸಿಎಂ ಅಭಿಯಾನವು ಕರ್ನಾಟಕಕ್ಕೆ ಮಾಡುತ್ತಿರುವ ಅವಮಾನ ಎಂದು ಟೀಕಿಸಿದ ಕಟೀಲ್, ಈ ದೇಶದಲ್ಲಿ ಭ್ರಷ್ಟಾಚಾರ ಉಗಮವಾಗಲು ಕಾಂಗ್ರೆಸ್ ಪಕ್ಷವೇ ಕಾರಣ. ಅಲ್ಲದೇ ಕಾಂಗ್ರೆಸ್‌ ಭಯೋತ್ಪಾದನೆಯನ್ನೂ ಬೆಳೆಸಿದೆ ಎಂದು ಕಟೀಲ್‌ ಗಂಭೀರ ಆರೋಪ ಮಾಡಿದರು.

ಕಾಂಗ್ರೆಸ್‍ನ ರಾಷ್ಟ್ರೀಯ ನಾಯಕರು, ರಾಜ್ಯದ ನಾಯಕರು ಹಗರಣಗಳಲ್ಲಿ ಸಿಲುಕಿದ್ದಾರೆ. ತನಿಖೆಯ ಫಲಿತಾಂಶಗಳು ಕಾಂಗ್ರೆಸ್ ಪಕ್ಷವನ್ನು ಹಲವು ಬಾರಿ ಮುಜುಗರಕ್ಕೆ ಈಡು ಮಾಡಿವೆ. ಜನರ ದಾರಿ ತಪ್ಪಿಸಲು ಕಾಂಗ್ರೆಸ್ ಪಕ್ಷ ಪ್ರಯತ್ನಿಸುತ್ತಿದೆ. ಮಾಜಿ ಪ್ರಧಾನಮಂತ್ರಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರನ್ನು ಹೊರತುಪಡಿಸಿ, ಕಾಂಗ್ರೆಸ್ ಪಕ್ಷದ ಇತರ ಎಲ್ಲಾ ಪ್ರಧಾನಮಂತ್ರಿಗಳು ಭ್ರಷ್ಟಾಚಾರ ಮತ್ತು ವಿವಿಧ ಹಗರಣಗಳಲ್ಲಿ ಸಿಲುಕಿದವರೇ ಆಗಿದ್ದಾರೆ ಎಂದು ಕಟೀಲ್‌ ಕಿಡಿಕಾರಿದರು.

ಅಧಿಕಾರಿಗಳಾದ ಕೆಂಪಯ್ಯ ಮತ್ತು ಕಾಂಟ್ರಾಕ್ಟರ್ ಕೆಂಪಣ್ಣನ ಮೂಲಕ ಸಿದ್ದರಾಮಯ್ಯ ರಾಜಕೀಯ ಮಾಡುತ್ತಿದ್ದಾರೆ. ಆದರೆ ನಾವು ಲೋಕಾಯುಕ್ತಕ್ಕೆ ಜೀವ ಕೊಡುವ ಕೆಲಸ ನಾವು ಮಾಡಿದ್ದೇವೆ. ಕಾಂಗ್ರೆಸ್ ಆಡಳಿತ ಅವಧಿಯ ಎಲ್ಲ ಹಗರಣಗಳನ್ನು ತನಿಖೆ ಮಾಡಿಸಲಿದ್ದೇವೆ. ಪ್ರಕರಣ ದಾಖಲಿಸಿ, ಎಷ್ಟೇ ದೊಡ್ಡವರಿದ್ದರೂ ಬಂಧಿಸಲಿದ್ದೇವೆ. ಪಾರದರ್ಶಕ ಆಡಳಿತ ನಡೆಸಲಿದ್ದೇವೆ ಎಂದು ಕಟೀಲ್‌ ಭರವಸೆ ನೀಡಿದರು.

ಕಾಂಗ್ರೆಸ್ ಪಕ್ಷವು ಭ್ರಷ್ಟರ ಮೂಲ. ಕೇಂದ್ರ. ಭಾರತ್ ಜೋಡೋಗಿಂತ ಮೊದಲು ಕಾಂಗ್ರೆಸ್ ಜೋಡೋ ಮಾಡಬೇಕಿದೆ. ಜಾತಿ ಜಾತಿಗಳನ್ನು ಒಡೆದ, ರಾಜ್ಯಗಳನ್ನು ಮತ್ತು ದೇಶ ಒಡೆದ ಶಾಪ ಕಾಂಗ್ರೆಸ್‍ಗಿದ ಎಂದೂ ಕಟೀಲ್‌ ಇದೇ ವೇಳೆ ತೀವ್ರ ವಾಗ್ದಾಳಿ ನಡೆಸಿದರು.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.