Dr K Sudhakar: ಸುಳ್ಳು ಭರವಸೆಗಳಿಂದ ಜನರನ್ನ ವಂಚಿಸಿ, ಮತ ಕಸಿಯುವ ಕೆಲಸವನ್ನ ಬಿಜೆಪಿ ಮಾಡಲ್ಲ: ಸಚಿವ ಸುಧಾಕರ್
ಬಿಜೆಪಿ ಪ್ರಣಾಳಿಕೆ ನೈಜತೆಯಿಂದ ಕೂಡಿರಲಿದೆ. ಮತ ಕಸಿಯಲು ಅಥವಾ ಸುಳ್ಳು ಹೇಳಲು ಬಿಜೆಪಿ ತಯಾರಿಲ್ಲ. ಬಿಜೆಪಿಗೆ ಪ್ರಣಾಳಿಕೆಯು ಪವಿತ್ರವಾದುದು. 50-60 ಕ್ಷೇತ್ರಗಳ ಜನರ ಜೊತೆ ಸಭೆ, ಸಮಾಲೋಚನೆ ಮಾಡಿ, ಸಲಹೆ ಪಡೆಯಲಾಗಿದೆ. ಪ್ರತಿಯೊಬ್ಬರ ಆಲೋಚನೆ, ಕನಸುಗಳಿಗೂ ಇಲ್ಲಿ ಜಾಗವಿದೆ ಎಂದು ಸಚಿವ ಸುಧಾಕರ್ ಹೇಳಿದ್ದಾರೆ.
ಬೆಂಗಳೂರು: ಸುಳ್ಳು ಭರವಸೆಗಳಿಂದ ಜನರನ್ನು ವಂಚಿಸಿ, ಮತ ಕಸಿಯುವ ಕೆಲಸವನ್ನು ಬಿಜೆಪಿ ಮಾಡುವುದಿಲ್ಲ. ಜನರ ಸಲಹೆಗಳನ್ನು ಸ್ವೀಕರಿಸಿಯೇ ಅವರಿಗೆ ನೆರವಾಗುವ ಪ್ರಣಾಳಿಕೆಯನ್ನು ಬಿಜೆಪಿ ರೂಪಿಸಲಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.
ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ಬಿಜೆಪಿ ಪ್ರಣಾಳಿಕೆ ವಿಶೇಷ ಸಂವಾದದಲ್ಲಿ ಮಾತನಾಡಿದ ಅವರು, ಬಿಜೆಪಿ ಪ್ರಣಾಳಿಕೆ ನೈಜತೆಯಿಂದ ಕೂಡಿರಲಿದೆ. ಮತ ಕಸಿಯಲು ಅಥವಾ ಸುಳ್ಳು ಹೇಳಲು ಬಿಜೆಪಿ ತಯಾರಿಲ್ಲ. ಬಿಜೆಪಿಗೆ ಪ್ರಣಾಳಿಕೆಯು ಪವಿತ್ರವಾದುದು. 50-60 ಕ್ಷೇತ್ರಗಳ ಜನರ ಜೊತೆ ಸಭೆ, ಸಮಾಲೋಚನೆ ಮಾಡಿ, ಸಲಹೆ ಪಡೆಯಲಾಗಿದೆ. ರಾಜ್ಯದ ಉದ್ದಗಲಕ್ಕೂ ಪ್ರವಾಸ ಮಾಡಿದ್ದೇವೆ. ಪ್ರತಿಯೊಬ್ಬರ ಆಲೋಚನೆ, ಕನಸುಗಳಿಗೂ ಇಲ್ಲಿ ಜಾಗವಿದೆ ಎಂದಿದ್ದಾರೆ.
ಪ್ರಣಾಳಿಕೆಯನ್ನ ಯಾರೂ ಬೇಕಾದರೂ ಘೋಷಿಸಬಹುದು
ಪ್ರಣಾಳಿಕೆಯನ್ನು ಯಾರೂ ಬೇಕಾದರೂ ಘೋಷಿಸಬಹುದು. ಆದರೆ ನಾವು ಎಲ್ಲರ ಬಳಿಯೂ ಅಭಿಪ್ರಾಯ ಸಂಗ್ರಹಿಸಿ ಪ್ರಣಾಳಿಕೆ ಮಾಡುತ್ತೇವೆ. ಎಲ್ಲಾ ವರ್ಗದ ಅಭಿಪ್ರಾಯ ಆಲಿಸಿ ಜನಪ್ರಿಯ ಕಾರ್ಯಕ್ರಮವನ್ನು ರೂಪಿಸಲು ಬಯಸಿದ್ದೇವೆ. ನಿಮ್ಮ ಸಲಹೆಗಳನ್ನು ಸಲಹಾ ಬಾಕ್ಸ್‌ಗಳಲ್ಲಿ, ಪತ್ರದ ಮೂಲಕ ಅಥವಾ ಬಿಜೆಪಿಯ ವೆಬ್‌ಸೈಟ್ ಮೂಲಕ ನಮಗೆ ಕಳುಹಿಸಬಹುದು ಎಂದು ಹೇಳಿದ್ದಾರೆ.
ಆರೋಗ್ಯ ಸೇವೆ ಸುಲಭ, ಕೈಗೆಟಕುವ ದರದಲ್ಲಿ ಲಭ್ಯವಾಗಬೇಕು
ಕರ್ನಾಟಕವು ಮೆಡಿಕಲ್ ಕಾಲೇಜುಗಳ ಸಂಖ್ಯೆಯಲ್ಲಿ ಉತ್ತರ ಪ್ರದೇಶದ ಬಳಿಕ 2ನೇ ಸ್ಥಾನ ಪಡೆದಿದೆ. ರಾಜ್ಯದಲ್ಲಿ 67 ಕಾಲೇಜು, 11,000 ಎಂಬಿಬಿಎಸ್, 5,000 ಪಿಜಿ ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ವೈದ್ಯರ ಕೊರತೆಯಿಲ್ಲ. ಆದರೆ ಕೆಲವೊಂದು ಸಮಸ್ಯೆಗಳಿಗೆ ಪರಿಹಾರ ಸಿಗಬೇಕಿದ್ದು, ಅದರ ಬಗ್ಗೆ ಸಲಹೆಗಳು ಬಂದಿವೆ. ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸಮನಾದ ಆರೋಗ್ಯ ಮೂಲಸೌಕರ್ಯ ದೊರಕಬೇಕು. ಆರೋಗ್ಯ ಸೇವೆಗಳು ಎಲ್ಲರಿಗೂ ಸುಲಭವಾಗಿ ಲಭ್ಯವಾಗಬೇಕು. ಕೈಗೆಟಕುವಂತೆ ಆಗಿರಬೇಕು. ರೋಗಪೂರ್ವ ಕ್ರಮಗಳಿಗೆ ಹೆಚ್ಚು ಒತ್ತು ನೀಡುತ್ತೇವೆ ಎಂದು ಮಾಹಿತಿ ನೀಡಿದ್ದಾರೆ.
ಎಂಬಿಬಿಎಸ್ ಶುಲ್ಕವನ್ನು ಹೆಚ್ಚಳ ಮಾಡಿಲ್ಲ
ವೈದ್ಯಕೀಯ ಶಿಕ್ಷಣ ಎಲ್ಲೆಡೆಯೂ ದುಬಾರಿ ಖರ್ಚಾಗಿದೆ. ಇದನ್ನು ಹೇಗೆ ಕಡಿಮೆ ಮಾಡಬಹುದು ಎನ್ನುವುದನ್ನು ಹಲವು ಯೋಜನೆಗಳ ಮೂಲಕ ಜಾರಿಗೊಳಿಸುತ್ತಿದ್ದೇವೆ. ಅದು ಇನ್ನೂ ಕೂಡ ಕಡಿಮೆಯಾಗಬೇಕಿದೆ. ವೈದ್ಯಕೀಯ ಶಿಕ್ಷಣ ಎಲ್ಲರಿಗೂ ಕೈಗೆಟಕುವಂತಾಗಬೇಕು. ನಮ್ಮ ಸರ್ಕಾರ ಎಂಬಿಬಿಎಸ್ ಶುಲ್ಕವನ್ನು ಹೆಚ್ಚಳ ಮಾಡಿಲ್ಲ ಎಂದು ಸಚಿವ ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಸರ್ಕಾರ ಈಗಾಗಲೇ ಜನೌಷಧಿ ಮಳಿಗೆಗಳ ಮೂಲಕ ಜನರ ವೈದ್ಯಕೀಯ ವೆಚ್ಚದ ಹೊರೆ ತಗ್ಗಿಸಿದೆ. 21 ಮೆಡಿಕಲ್ ಕಾಲೇಜುಗಳಲ್ಲಿ ಅಂಗ ಕಸಿ ಘಟಕ ತೆರೆಯಲಾಗಿದೆ. ನಮ್ಮ ಕ್ಲಿನಿಕ್ ತೆರೆದು ನಗರ ಪ್ರದೇಶದ ಬಡ ಜನರಿಗೂ ಆರೋಗ್ಯ ಸೌಕರ್ಯ ಒದಗಿಸಲಾಗುತ್ತಿದೆ. ಇದರಿಂದ ಎಲ್ಲರೂ ನಿಯಮಿತ ತಪಾಸಣೆ ಮಾಡಿಸಿಕೊಳ್ಳಲು ಅನುಕೂಲವಾಗಲಿದೆ. ಮಹಿಳೆಯರಿಗೆ ಆಯುಷ್ಮತಿ ಕ್ಲಿನಿಕ್ ತೆರೆಯಲಾಗುವುದು. ಡಯಾಲಿಸಿಸ್ ಸೈಕಲ್‌ನ್ನು 30,000 ದಿಂದ 1 ಲಕ್ಷ ಸೈಕಲ್‌ಗೆ ಏರಿಸಲಾಗಿದೆ. ವಾಣಿ ವಿಲಾಸ ಆಸ್ಪತ್ರೆಯಲ್ಲಿ ಮೊದಲ ಎದೆ ಹಾಲು ಬ್ಯಾಂಕ್, ಮೊದಲ ಸರ್ಕಾರಿ IVF ಕ್ಲಿನಿಕ್ ಮೊದಲಾದ ಕ್ರಮಗಳು ಆರೋಗ್ಯ ಕ್ಷೇತ್ರದ ಅಭಿವೃದ್ಧಿಗೆ ಸಾಕ್ಷಿಗಳು ಎಂದು ಹೇಳಿದ್ದಾರೆ.
ಬಿಜೆಪಿ ಪ್ರಣಾಳಿಕೆಯಲ್ಲಿ ವಾಸ್ತವ ಮಾತ್ರ ಇರುತ್ತದೆ
ಕೇಂದ್ರ ಆರೋಗ್ಯ ಸಚಿವ ಮನ್‌ಸುಖ್ ಮಾಂಡವೀಯ, ಬಿಜೆಪಿ ಪ್ರಣಾಳಿಕೆಯಲ್ಲಿ ವಾಸ್ತವ ಮಾತ್ರ ಇರುತ್ತದೆ. ಜನಸಾಮಾನ್ಯರಿಗೆ ಏನು ಬೇಕು ಎಂಬುದಕ್ಕೆ ಮಾತ್ರ ಮಹತ್ವವಿರಲಿದೆ. ಕಾಂಗ್ರೆಸ್‌ನಂತೆ ಘೋಷಣೆಗೆ ಸೀಮಿತವಾಗುವ ಭರವಸೆಗಳನ್ನು ನೀಡುವುದಿಲ್ಲ ಎಂದರು.
ಕಾಂಗ್ರೆಸ್ ಉಚಿತ ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿದ್ದು, ವಾಸ್ತವವಾಗಿ ಇದು ಅಸಾಧ್ಯ. ಕಾಂಗ್ರೆಸ್ ಗ್ಯಾರಂಟಿಗಳಿಗೆ 80,000 ಕೋಟಿ ರೂ. ಬೇಕು. ಅಷ್ಟು ಮೊತ್ತ ಹೊಂದಿಸುವುದು ಸಾಧ್ಯವಿಲ್ಲ. ಬಿಜೆಪಿಗೆ ಪ್ರಣಾಳಿಕೆ ಎಂದರೆ ಒಂದು ಬದ್ಧತೆ. ನಾವು ಕಾರ್ಯರೂಪಕ್ಕೆ ತರಲಾಗದ ಭರವಸೆ ನೀಡುವುದಿಲ್ಲ. ಕೇಂದ್ರ ಬಜೆಟ್‌ನಲ್ಲಿ 157 ನರ್ಸಿಂಗ್ ಕಾಲೇಜು ಘೋಷಣೆ ಮಾಡಲಾಗಿದೆ. ನಮ್ಮ ದೇಶದಲ್ಲಿ ಗುಣಮಟ್ಟದ ವೈದ್ಯರು ಹೊರಬರಬೇಕೆಂಬುದು ನಮ್ಮ ಧ್ಯೇಯ ಎಂದಿದ್ದಾರೆ.