ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ; ಆರೋಪಿ ತೆನ್ನಿರಾ ಮೈನಾ ಹೇಳಿಕೆ ದಾಖಲು
ಕನ್ನಡ ಸುದ್ದಿ  /  ಕರ್ನಾಟಕ  /  ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ; ಆರೋಪಿ ತೆನ್ನಿರಾ ಮೈನಾ ಹೇಳಿಕೆ ದಾಖಲು

ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ; ಆರೋಪಿ ತೆನ್ನಿರಾ ಮೈನಾ ಹೇಳಿಕೆ ದಾಖಲು

ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್‌: ಬೆಂಗಳೂರು ನಾಗವಾರದ ಎಚ್‌ಬಿಆರ್ ಲೇಔಟ್‌ನ ಕಂಪನಿಯ ಗೋದಾಮಿನಲ್ಲಿ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ತೆನ್ನಿರಾ ಮೈನಾ ತನಿಖಾಧಿಕಾರಿಗಳ ಎದುರು ಹಾಜರಾಗಿ ಹೇಳಿಕೆ ದಾಖಲಿಸಿದರು.

ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್‌ನ ಆರೋಪಿ ತೆನ್ನಿರಾ ಮೈನಾ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ರಾಜಕೀಯ ಸಂಚಲನಕ್ಕೆ ಕಾರಣವಾಗಿದ್ದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್‌ನ ಆರೋಪಿ ತೆನ್ನಿರಾ ಮೈನಾ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.

ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್‌: ಕೊಡಗು ಜಿಲ್ಲೆಯ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಕೇಸ್‌ ಸಂಬಂಧ ಭಾನುವಾರ, ಆರೋಪಿ ಕಾಂಗ್ರೆಸ್ ಮುಖಂಡ ತೆನ್ನಿರಾ ಮೈನಾ ಅವರು ಹೆಣ್ಣೂರು ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದರು.

ಆತ್ಮಹತ್ಯೆಗೂ ತನಗೂ ಸಂಬಂಧವಿಲ್ಲ: ತೆನ್ನಿರಾ ಮೈನಾ ಹೇಳಿಕೆ

ನನಗೂ ಹಾಗೂ ಮೃತ ವಿನಯ್ ಸೋಮಯ್ಯಗೂ ವೈಯಕ್ತಿಕ ದ್ವೇಷ ಇಲ್ಲ. ವಿನಯ್ ಅಡ್ಮಿನ್ ಆಗಿದ್ದ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಕುರಿತು ಅಪಹಾಸ್ಯ ಮಾಡುವ ಪೋಸ್ಟ್‌ ಹಂಚಿಕೊಂಡಿದ್ದರು. ಹಾಗಾಗಿ ವಿನಯ್ ಸೋಮಯ್ಯ ಸೇರಿ ಗ್ರೂಪ್‌ನ ಮೂವರು ಅಡ್ಮಿನ್‌ಗಳ ವಿರುದ್ಧ ಮಡಿಕೇರಿ ಪೊಲೀಸ್ ಠಾಣೆಗೆ ದೂರು ನೀಡಿದ್ದೆ. ಅದರಂತೆ ಪೊಲೀಸರು ಆರೋಪಿಗಳನ್ನು ವಿಚಾರಣೆ ನಡೆಸಿದ್ದರು. ಈ ಕೇಸ್‌ನ ಮೂವರು ಆರೋಪಿಗಳು ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದರು. ಹೀಗಾಗಿ ವಿನಯ್ ಸೋಮಯ್ಯ ಆತ್ಮಹತ್ಯೆಗೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಕಾಂಗ್ರೆಸ್ ಮುಖಂಡ ತೆನ್ನಿರಾ ಮೈನಾ ತನಿಖಾಧಿಕಾರಿ ಎದುರು ಹಾಜಾರಾಗಿ ಹೇಳಿಕೆ ನೀಡಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿದ್ದಾಗಿ ಪ್ರಜಾವಾಣಿ ವರದಿ ಮಾಡಿದೆ.

ವಿಚಾರಣೆಗೆ ಹಾಜರಾಗಲು ತೆನ್ನಿರಾಗೆ 2 ಸಲ ನೋಟಿಸ್

ವಿನಯ್ ಸೋಮಯ್ಯ ಅವರು ಆತ್ಮಹತ್ಯೆಗೂ ಮೊದಲು, ತನ್ನ ವಿರುದ್ಧ ರಾಜ ಕೀಯ ಪ್ರೇರಿತವಾದ ಎಫ್‌ಐಆರ್ ದಾಖಲಿಸಿ ಕಿರುಕುಳ ನೀಡಲಾಗುತ್ತಿದೆ ಎಂದು ಕೊಡಗಿನ ಶಾಸಕರಾದ ಮಂಥರ್ ಗೌಡ, ಎ.ಎಸ್.ಪೊನ್ನಣ್ಣ ಹಾಗೂ ಕೊಡಗು ಕಾಂಗ್ರೆಸ್ ಮುಖಂಡ ತೆನ್ನಿರಾ ಮೈನಾ ಹೆಸರು ಉಲ್ಲೇಖಿಸಿ ಮರಣಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಹೀಗಾಗಿ, ಕೇಸ್ ದಾಖಲಿಸಿಕೊಂಡ ಹೆಣ್ಣೂರು ಠಾಣೆ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ತೆನ್ನಿರಾ ಮೈನಾ ಅವರಿಗೆ ಎರಡು ಬಾರಿ ನೋಟಿಸ್ ನೀಡಿದ್ದರು.

ಮತ್ತೊಂದೆಡೆ, ವಿನಯ್ ಸೋಮಯ್ಯ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿರುವ ಶಾಸಕರಾದ ಮಂಥರ್ ಗೌಡ ಮತ್ತು ಎ.ಎಸ್.ಪೊನ್ನಣ್ಣ ಅವರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸಲಿದ್ದಾರೆ. ಈ ನಿಟ್ಟಿನಲ್ಲಿ ಶೀಘ್ರದಲ್ಲೇ ಇಬ್ಬರಿಗೂ ನೋಟಿಸ್ ನೀಡಲಿದ್ದಾರೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ಏನಿದು ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣ

ಕೊಡಗು ಮೂಲದ ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಪತ್ನಿ ಹಾಗೂ ಮಗು ಜತೆಗೆ ಬೆಂಗಳೂರು ನಗರದಲ್ಲಿ ನೆಲಸಿದ್ದರು. ನಾಗವಾರದ ಎಚ್‌ಬಿಆರ್ ಲೇಔಟ್‌ನ ಖಾಸಗಿ ಕಂಪನಿಯಲ್ಲಿ ಕಾರ್ಯಾಚರಣೆ ವಿಭಾಗದ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಏಪ್ರಿಲ್ 4ರಂದು ಮುಂಜಾನೆ ತಾನು ಕೆಲಸ ಮಾಡುವ ಕಂಪನಿಯ ಗೋದಾಮಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಬಗ್ಗೆ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದರು. ಈ ಆತ್ಮಹತ್ಯೆ ಪ್ರಕರಣ ರಾಜಕೀಯವಾಗಿ ಸಂಚಲನ ಮೂಡಿಸಿತ್ತು.

ಗಮನಿಸಿ: ಸಮಸ್ಯೆಗಳಿಗೆ ಆತ್ಮಹತ್ಯೆ ಮಾಡುವುದು ಪರಿಹಾರ ಅಲ್ಲ

ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಿ. ಅದಕ್ಕೆ ಬೇಕಾದ ಅಗತ್ಯ ಕ್ರಮಗಳನ್ನು ಅನುಸರಿಸಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.