ಐದು ವರ್ಷಗಳಿಂದ ಮುಚ್ಚಿದ್ದ ಕಾಮರಾಜ್ ರಸ್ತೆ ಓಪನ್; ಎಂಜಿ ರಸ್ತೆ, ಬ್ರಿಗೇಡ್ ರಸ್ತೆಗೆ ಹೋಗುವ ಪ್ರಯಾಣಿಕರು ಫುಲ್ ಖುಷ್
Bengalurus Kamaraj Road to reopen : ಐದು ವರ್ಷಗಳಿಂದ ಮುಚ್ಚಿದ್ದ ಕಾಮರಾಜ್ ರಸ್ತೆ ಸಂಚಾರಕ್ಕೆ ಮುಕ್ತವಾಗಿದ್ದು, ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ಗೆ ಸುತ್ತು ಬಳಸಿ ಹೋಗಬೇಕಿದ್ದ ಪ್ರಯಾಣಿಕರು ಫುಲ್ ಖುಷ್ ಆಗಿದ್ದಾರೆ. (ವರದಿ- ಎಚ್.ಮಾರುತಿ)
ಬೆಂಗಳೂರು: ನಗರದ ಹೃದಯ ಭಾಗದ ಕಾಮರಾಜ್ ರಸ್ತೆ ಕೊನೆಗೂ ಸಂಚಾರಕ್ಕೆ ಮುಕ್ತವಾಗುತ್ತಿದೆ. ಮೆಟ್ರೊ ಕಾಮಗಾರಿ ಕಾರಣ ಐದು ವರ್ಷಗಳಿಂದ ಮುಚ್ಚಲಾಗಿತ್ತು. ಎಂಜಿ ರಸ್ತೆ, ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಇತರ ಸ್ಥಳಗಳಿಗೆ ಸಂಚರಿಸಲು ವಾಹನ ಬಳಕೆದಾರರು ಸುತ್ತು ಹಾಕಿಕೊಂಡು ಬರಬೇಕಿತ್ತು. ಇದರಿಂದ ಟ್ರಾಫಿಕ್ ಸಮಸ್ಯೆ ಹೆಚ್ಚುತ್ತಿದ್ದಲ್ಲದೆ, ವಾಹನ ಸವಾರರ ಸಮಯ ಸಹ ವ್ಯರ್ಥವಾಗುತ್ತಿತ್ತು.
ಯಾವಾಗ ರಸ್ತೆ ಓಪನ್ ಆಗುತ್ತದೆಯೋ ಎಂದು ಗೊಣಗಿಕೊಂಡು ರಸ್ತೆಯಲ್ಲಿ ಪ್ರತಿದಿನ ಪ್ರಯಾಣಿಸಿದವರೇ ಹೆಚ್ಚು. ಕೊನೆಗೂ ಕಾಮರಾಜ ರಸ್ತೆಯು ಏಪ್ರಿಲ್‌ನಲ್ಲಿ ವಾಹನ ಸಂಚಾರಕ್ಕೆ ಭಾಗಶಃ ಮುಕ್ತಗೊಳ್ಳಲಿದೆ. ಕಾವೇರಿ ಎಂಪೋರಿಯಂ ಜಂಕ್ಷನ್‌ನಿಂದ ಕಬ್ಬನ್ ರಸ್ತೆ ಜಂಕ್ಷನ್‌ವರೆಗೆ ಇಂಟರ್‌ಚೇಂಜ್ ಎಂಜಿ ರಸ್ತೆ ಮೆಟ್ರೊ ಭೂಗತ ನಿಲ್ದಾಣವನ್ನು ನಿರ್ಮಿಸಲು 2019ರಲ್ಲಿ ಕಾಮರಾಜ ರಸ್ತೆಯನ್ನು ಮುಚ್ಚಲಾಗಿತ್ತು.
ಹೀಗಾಗಿ ಬ್ರಿಗೇಡ್ ರಸ್ತೆ, ಕಮರ್ಷಿಯಲ್ ಸ್ಟ್ರೀಟ್ ಮತ್ತು ಇತರ ಸ್ಥಳಗಳನ್ನು ತಲುಪಲು ವಾಹನ ಬಳಕೆದಾರರು ಸುತ್ತು ಹಾಕಿಕೊಂಡು ಬರಬೇಕಿತ್ತು. ಕಾಮರಾಜ ರಸ್ತೆ ಸಂಚಾರಕ್ಕೆ ತೆರೆದುಕೊಂಡರೆ ಈ ಸಮಸ್ಯೆ ತಪ್ಪಲಿದೆ. ಸದ್ಯಕ್ಕೆ ಏಪ್ರಿಲ್‌ನಲ್ಲಿ ಈ ರಸ್ತೆಯ ಒಂದು ಬದಿಯಿಂದ ಸಂಚಾರಕ್ಕೆ ಅನುವು ಮಾಡಿಕೊಡಲು ಬಿಎಂಆರ್‌ಸಿಎಲ್ ನಿರ್ಧರಿಸಿದೆ.
ಸುರಂಗ ಮಾರ್ಗದಲ್ಲಿ ಕಾಮಗಾರಿ ನಡೆಸಲು ಬೇಕಿರುವ ಯಂತ್ರೋಪಕರಣಗಳ ಸಾಗಾಟಕ್ಕಾಗಿ ಇನ್ನೊಂದು ಬದಿಯ ರಸ್ತೆ ಅಗತ್ಯ ಇರುವುದರಿಂದ ಕಾಮರಾಜ ರಸ್ತೆಯ ಅರ್ಧ ಭಾಗ ಮಾತ್ರ ಸಂಚಾರಕ್ಕೆ ಮುಕ್ತವಾಗಿರುತ್ತದೆ. ಪೂರ್ಣ ರಸ್ತೆ ಮುಕ್ತವಾಗಲು ಮತ್ತಷ್ಟು ಸಮಯ ಬೇಕಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಭೂಗತ ನಿಲ್ದಾಣವು ತಲಾ 4 ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ಹೊಂದಿರುತ್ತದೆ. ಇದರಲ್ಲಿ ಒಂದು ಪ್ರವೇಶ ಮತ್ತು ನಿರ್ಗಮನ ದ್ವಾರವನ್ನು ಎಂಜಿ ರಸ್ತೆಯ ಎತ್ತರಿಸಿದ ನಿಲ್ದಾಣದೊಂದಿಗೆ ಸಂಪರ್ಕಿಸಲಾಗುತ್ತದೆ. ಇದೇ ಮಾರ್ಗದಲ್ಲಿ ಜಯದೇವ ಆಸ್ಪತ್ರೆ ಬಳಿ 3 ಹಂತದ ರಸ್ತೆ ಮತ್ತು 2 ಹಂತಗಳ ಮೆಟ್ರೊ ರೈಲು ಮಾರ್ಗಗಳು, ಐದು ಹಂತದ ಎತ್ತರಿಸಿದ ನಿಲ್ದಾಣವನ್ನು ನಿರ್ಮಿಸಲಾಗಿದೆ.
ಕಂಟೋನ್ಮೆಂಟ್ ರೈಲು ನಿಲ್ದಾಣದ ಬಳಿಯೂ ಭೂಗತ ಮೆಟ್ರೊ ನಿಲ್ದಾಣವನ್ನು ನಿರ್ಮಿಸಲಾಗುತ್ತಿದೆ. 2025ರ ವೇಳೆಗೆ ಈ ಮಾರ್ಗ ಮೆಟ್ರೊ ಸಂಚಾರಕ್ಕೆ ತೆರೆದುಕೊಳ್ಳಲಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೈಯಪ್ಪನಹಳ್ಳಿಯಲ್ಲಿ ಮೇಲ್ಸೇತುವೆ ನಿರ್ಮಾಣಕ್ಕೆ ಅನುಮೋದನೆ
ಬೈಯಪ್ಪನಹಳ್ಳಿಯಲ್ಲಿರುವ ಸರ್ ಎಂ ವಿಶ್ವೇಶ್ವರಯ್ಯ ರೈಲ್ವೆ ಟರ್ಮಿನಲ್‌ಗೆ ಸಂಪರ್ಕ ಕಲ್ಪಿಸುವ ಮೇಲ್ಸೇತುವೆ ನಿರ್ಮಿಸಲು ಸರ್ಕಾರ ಆಡಳಿತಾತ್ಮಕ ಅನುಮೋದನೆ ನೀಡಿದೆ. ಟರ್ಮಿನಲ್ ಸುತ್ತಮುತ್ತ ವಾಹನ ದಟ್ಟಣೆ ನಿಯಂತ್ರಿಸಲು, ವಾಹನಗಳ ಸುಗಮ ಸಂಚಾರಕ್ಕೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವತಿಯಿಂದ ಮೇಲ್ಸೇತುವೆ ನಿರ್ಮಿಸಲು ಸರ್ಕಾರವು 263 ಕೋಟಿ ಅನುದಾನವನ್ನು ಒದಗಿಸಿತ್ತು.
ಬಳಿಕ ಈ ಯೋಜನೆಯನ್ನು ಹೊಸ ವಿನ್ಯಾಸದ ಮಾದರಿಯಲ್ಲಿ (ಡಿಸೈನ್ ಬಿಲ್ಡ್ ಟ್ರಾನ್ಸ್‌ಫರ್ ಆ್ಯಂಡ್ ಲಂಪ್ಸಮ್– ಟರ್ನ್‌ಕೀ– ನೋ ವೇರಿಯೇಶನ್, ನೋ ಎಸ್ಕಲೇಶನ್ ಮಾದರಿ) ನಿರ್ಮಿಸಲು ವಿಸ್ತೃತ ಯೋಜನಾ ವರದಿ ತಯಾರಿಸಲಾಗಿದೆ. ಯೋಜನೆಗೆ ಕಮ್ಮನಹಳ್ಳಿ ಮುಖ್ಯರಸ್ತೆ, ಮಾರುತಿ ಸೇವಾನಗರ, ಬೈಯಪ್ಪನಹಳ್ಳಿ ಮುಖ್ಯರಸ್ತೆ, ಬಾಣಸವಾಡಿ ಮುಖ್ಯರಸ್ತೆಗಳಲ್ಲಿ ಭೂ ಸ್ವಾಧೀನ ಮಾಡಬೇಕಾಗಿದೆ. ಅದಕ್ಕಾಗಿ 2023–24ನೇ ಸಾಲಿನಲ್ಲಿ ಸರ್ಕಾರ ಒದಗಿಸಿದ ರೂ. 263 ಕೋಟಿ ಮತ್ತು 2024–25ನೇ ಸಾಲಿನಲ್ಲಿ ರೂ. 117 ಕೋಟಿ ಒದಗಿಸಲು ಅನುಮೋದನೆ ನೀಡಿದೆ.