ರಕ್ತದಾನಿಗಳೇ ಗಮನಿಸಿ:ಮಂಗಳೂರು, ಉಡುಪಿಗಳ ಬ್ಲಡ್ ಬ್ಯಾಂಕ್ ಗಳಲ್ಲಿ ರಕ್ತದ ಅಭಾವ, ದಾನಿಗಳ ನೆರವಿಗೆ ಮೊರೆ
ಕರಾವಳಿ ಕರ್ನಾಟಕದ ಜಿಲ್ಲೆಗಳಾದ ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿರುವ ಬ್ಲಡ್ ಬ್ಯಾಂಕ್‌ಗಳಲ್ಲಿ ರಕ್ತದ ಕೊರತೆ ಕಂಡು ಬಂದಿದ್ದು.ದಾನಿಗಳ ಹುಡುಕಾಟ ನಡೆಸಲಾಗುತ್ತಿದೆ.ವರದಿ: ಹರೀಶ ಮಾಂಬಾಡಿ, ಮಂಗಳೂರು

ಮಂಗಳೂರು: ರಕ್ತದಾನಿಗಳೇ ಇತ್ತ ಗಮನಿಸಿ…ಮಂಗಳೂರು, ಉಡುಪಿಗಳ ಬ್ಲಡ್ ಬ್ಯಾಂಕ್ ನಲ್ಲಿ ರಕ್ತ ಖಾಲಿಯಾಗುತ್ತಿದೆ!!. ಸಾಧ್ಯವಾದರೆ, ಬ್ಲಡ್ ಬ್ಯಾಂಕ್ ನಲ್ಲಿ ರಕ್ತ ನೀಡುವ ಮೂಲಕ ಸಹಾಯ ಮಾಡಿ…ಸಾವಿರಾರು ರೋಗಿಗಳು ಇದಕ್ಕೆ ಪ್ರಯೋಜನ ಪಡೆಯಬಹುದು. ಮಾಧ್ಯಮಗಳ ಮೂಲಕ ಈಗಾಗಲೇ ಬ್ಲಡ್ ಬ್ಯಾಂಕ್ ಅಧಿಕಾರಿಗಳು ರಕ್ತದಾನ ಮಾಡುವಂತೆ ಕರೆ ನೀಡುತ್ತಿದ್ದಾರೆ. ಬ್ಲಡ್ ಬ್ಯಾಂಕ್ ಅಧಿಕಾರಿ ಡಾ.ಶರತ್ ಕುಮಾರ್ ರಕ್ತದಾನ ಅಭಿಯಾನ ಆರಂಭಿಸಿದ್ದಾರೆ. ರಕ್ತದಾನದ ಕ್ಯಾಂಪ್‌ಗಳನ್ನು ಆಯೋಜಿಸುವಂತೆ ಸಂಘ ಸಂಸ್ಥೆಗಳಿಗೆ ಅವರು ಕರೆ ನೀಡಿದ್ದಾರೆ.ಮಂಗಳೂರು ನಗರದ ಬ್ಲಡ್ ಬ್ಯಾಂಕ್‌ಗಳಲ್ಲಿ ಭಾರೀ ರಕ್ತದ ಅಭಾವ ಉಂಟಾಗಿದೆ. ಪರಿಣಾಮ ವಿವಿಧ ಆಸ್ಪತ್ರೆಗಳಲ್ಲಿ ಬೇಡಿಕೆಗೆ ಅನುಗುಣವಾಗಿ ರಕ್ತ ದೊರೆಯುತ್ತಿಲ್ಲ ಎಂಬುದೀಗ ಆತಂಕಕಾರಿ ಸುದ್ದಿ. ಬಹುತೇಕ ಬ್ಲಡ್ ಬ್ಯಾಂಕ್‌ಗಳು ರಕ್ತದ ಕೊರತೆಯನ್ನು ಎದುರಿಸುತ್ತಿದೆ. ಪರಿಣಾಮ ಸರಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಗೆ ತಕ್ಷಣಕ್ಕೆ ಬೇಕಾದಷ್ಟು ರಕ್ತ ದೊರೆಯುತ್ತಿಲ್ಲ. ಆದ್ದರಿಂದ ತುರ್ತು ಸಂದರ್ಭ ರಕ್ತದ ಕೊರತೆಯಾಗದಂತೆ ಮುಂಜಾಗ್ರತೆ ವಹಿಸುವಂತೆ ಸೂಚನೆ ನೀಡಲಾಗಿದೆ.
ಮಂಗಳೂರಿನ ಸರಕಾರಿ ವೆನ್ಲಾಕ್ ಆಸ್ಪತ್ರೆಯ ಬ್ಲಡ್ ಬ್ಯಾಂಕ್‌ನಲ್ಲಿ ರಕ್ತದ ಭಾರೀ ಕೊರತೆ ಉಂಟಾಗಿದೆ. ಪರಿಣಾಮ ರೋಗಿಗಳಿಗೆ ರಕ್ತ ಪೂರೈಕೆಯಲ್ಲಿ ಅಭಾವವುಂಟಾಗಿದೆ. 500 ಯುನಿಟ್ ರಕ್ತದ ಶೇಖರಣೆ ಇರಬೇಕಾದ ರಕ್ತಪೂರಣ ಕೇಂದ್ರದಲ್ಲಿ ಕೇವಲ 90ಯುನಿಟ್ ರಕ್ತವಿದೆ. ಸದ್ಯ A+, A-, B+, B-, AB+, AB- , O ಮಾದರಿಯ ರಕ್ತದ ಕೊರತೆ ಎದುರಾಗಿದೆ.
ಬಿಸಿಲಿನ ಧಗೆ ಕಾರಣ
ಕರಾವಳಿ ಜಿಲ್ಲೆಗಳಲ್ಲಿ ಈಗ ಸುಡುಬಿಸಿಲು.ತೀವ್ರ ಸೆಖೆಯ ಸ್ವರೂಪದಿಂದ ಜನರು ಮನೆಯಿಂದ ಹೊರಬರಲು ಹಿಂಜರಿಯುತ್ತಿದ್ದಾರೆ. ಹೆಚ್ಚಿನ ಕಡೆಗಳಲ್ಲಿ ಎಸಿ ಕೂಡ ಇರುವುದಿಲ್ಲ. ರಕ್ತದಾನ ಶಿಬಿರಗಳನ್ನು ಆಯೋಜಿಸುವ ಸ್ಥಳಗಳಲ್ಲೂ ವಿಪರೀತ ಸೆಖೆಯ ಪರಿಸ್ಥಿತಿ. ಹೀಗಾಗಿ ಜನರು ರಕ್ತ ನೀಡಲು ಮುಂದಾಗುತ್ತಿಲ್ಲ. ಹೀಗಾಗಿ ನೀವು ಈಗ ಕರಾವಳಿಯಲ್ಲಿ ರಕ್ತದಾನ ಶಿಬಿರ ಏರ್ಪಡಿಸಿದರೆ, ದಾನಿಗಳು ಬರುವುದೇ ಕಷ್ಟವಾಗಿರುವ ಪರಿಸ್ಥಿತಿ. ಮೊದಲೇ ದೇಹದಲ್ಲಿ ನೀರಿನ ಅಂಶ ಕಡಿಮೆಯಾಗುವ ಹೊತ್ತು. ಅಲ್ಲದೆ ವಿದ್ಯಾರ್ಥಿಗಳಿಗೆ ಪರೀಕ್ಷೆಗಳೂ ನಡೆಯುತ್ತಿವೆ. ರಜೆಯ ಕಾರಣಕ್ಕೆ ಹಲವರು ಪ್ರವಾಸದಲ್ಲೂ ಇರುತ್ತಾರೆ. ಈ ಕಾರಣಗಳಿಂದ ಸರಿಯಾಗಿ ರಕ್ತದಾನ ಶಿಬಿರಗಳು ನಡೆಯುತ್ತಿಲ್ಲ.
ದಿನಕ್ಕೆ ಎಷ್ಟು ಯೂನಿಟ್ ರಕ್ತ ಬೇಕಾಗುತ್ತದೆ
ಬೇಸಗೆ ಕಾಲ ಎಂದು ಆಸ್ಪತ್ರೆಗಳಲ್ಲಿ ಬೆಡ್ ಗಳು ಖಾಲಿ ಇರುವುದಿಲ್ಲ. ಪೇಶಂಟ್ ಗಳು ಅಷ್ಟೇ ಸಂಖ್ಯೆಯಲ್ಲಿ ಇರುತ್ತಾರೆ. ಆದರೆ ಅವರಿಗೆ ಅವಶ್ಯಕತೆ ಇರುವ ರಕ್ತದ ಅಭಾವ ಕಾಡುತ್ತಿದೆ. ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಜಿಲ್ಲಾಸ್ಪತ್ರೆಗಳು ನೀಡುವ ಮಾಹಿತಿಯಂತೆ, ಉಡುಪಿ ಆಸ್ಪತ್ರೆಗೆ ದಿನವೊಂದಕ್ಕೆ 40 ಯೂನಿಟ್ ರಕ್ತದ ಬೇಡಿಕೆಯಿದೆ. ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಿನವೊಂದಕ್ಕೆ ಕನಿಷ್ಠ 80 ಯೂನಿಟ್ ರಕ್ತ ಬೇಕಾಗುತ್ತದೆ. ಈಗ ಅಷ್ಟೇ ರಕ್ತದ ಲಭ್ಯತೆ ಇರುತ್ತದೆ. ದಾನಿಗಳ ಸಂಖ್ಯೆ ತೀವ್ರ ಇಳಿಕೆಯಾಗಿರುವ ಕಾರಣ, ರಕ್ತದ ಕೊರತೆಯಿಂದಾಗಿ ರೋಗಿಗಳ ಸಂಬಂಧಿಕರು ರಕ್ತದ ಹುಡುಕಾಟದಲ್ಲಿರುತ್ತಾರೆ. ವಿಶೇಷವಾಗಿ ಹೆರಿಗೆ ಸಂದರ್ಭ ರಕ್ತಸ್ರಾವವಾದರೆ ರಕ್ತ ಬೇಕಾಗುತ್ತದೆ. ಅಪಘಾತ ಸಂಭವಿಸುತ್ತಿರುವ ಹೊತ್ತಿನಲ್ಲಿ ಕೆಲವರಿಗೆ ತುರ್ತು ರಕ್ತ ಅಗತ್ಯವಿದೆ. ಇಂತಹ ಸಂದರ್ಭದಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ದಾನಿಗಳು ಮುಂದೆ ಬಂದರೆ ಅಗತ್ಯ ಇರುವವರಿಗೆ ತುರ್ತಾಗಿ ರಕ್ತ ಒದಗಿಸಬಹುದು.ಕೊರತೆಯನ್ನು ನೀಗಿಸಬಹುದು ಎನ್ನುವ ಮಾತುಗಳು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಆರೋಗ್ಯ ಇಲಾಖೆ ಕಡೆಯಿಂದಲೇ ಕೇಳಿ ಬಂದಿದೆ.
ವರದಿ: ಹರೀಶ ಮಾಂಬಾಡಿ,ಮಂಗಳೂರು