ಪ್ರಯಾಣಿಕರ ಆಗ್ರಹಕ್ಕೆ ಮಣಿದ ಬಿಎಂಆರ್‌ಸಿಎಲ್: ಶೌಚಾಲಯ ಬಳಕೆಗೆ ನಿಗದಿಯಾಗಿದ್ದ ಶುಲ್ಕ ಹಿಂಪಡೆದ ನಮ್ಮ ಮೆಟ್ರೋ
ಕನ್ನಡ ಸುದ್ದಿ  /  ಕರ್ನಾಟಕ  /  ಪ್ರಯಾಣಿಕರ ಆಗ್ರಹಕ್ಕೆ ಮಣಿದ ಬಿಎಂಆರ್‌ಸಿಎಲ್: ಶೌಚಾಲಯ ಬಳಕೆಗೆ ನಿಗದಿಯಾಗಿದ್ದ ಶುಲ್ಕ ಹಿಂಪಡೆದ ನಮ್ಮ ಮೆಟ್ರೋ

ಪ್ರಯಾಣಿಕರ ಆಗ್ರಹಕ್ಕೆ ಮಣಿದ ಬಿಎಂಆರ್‌ಸಿಎಲ್: ಶೌಚಾಲಯ ಬಳಕೆಗೆ ನಿಗದಿಯಾಗಿದ್ದ ಶುಲ್ಕ ಹಿಂಪಡೆದ ನಮ್ಮ ಮೆಟ್ರೋ

ಸುಲಭ್‌ ಶೌಚಾಲಯ ಜತೆ ಮಾಡಿಕೊಂಡ ಒಪ್ಪಂದವನ್ನೂ ಬಿಎಂಆರ್‌ಸಿಎಲ್ ರದ್ದು ಪಡಿಸಿದ್ದು, ಸಾವರ್ಜನಿಕರ ಆಕ್ರೋಶಕ್ಕೆ ಕೊನೆಗೂ ಮಣಿದಿದೆ. ನಗರದ 12 ಮೆಟ್ರೋ ನಿಲ್ದಾಣಗಳಲ್ಲಿರುವ ಶೌಚಾಲಯಗಳ ಬಳಕೆಗೆ ಶುಲ್ಕ ವಿಧಿಸಲಾಗಿತ್ತು. (ವರದಿ: ಎಚ್. ಮಾರುತಿ)

ನಗರದ 12 ಮೆಟ್ರೋ ನಿಲ್ದಾಣಗಳಲ್ಲಿರುವ ಶೌಚಾಲಯಗಳ ಬಳಕೆಗೆ ಶುಲ್ಕ ವಿಧಿಸಲಾಗಿತ್ತು.
ನಗರದ 12 ಮೆಟ್ರೋ ನಿಲ್ದಾಣಗಳಲ್ಲಿರುವ ಶೌಚಾಲಯಗಳ ಬಳಕೆಗೆ ಶುಲ್ಕ ವಿಧಿಸಲಾಗಿತ್ತು. (HT_PRINT)

ಬೆಂಗಳೂರು: ಸಾರ್ವಜನಿಕರು ಮತ್ತು ಪ್ರಯಾಣಿಕರ ಆಕ್ರೋಶಕ್ಕೆ ಮಣಿದ ಬೆಂಗಳೂರು ಮೆಟ್ರೋ ರೈಲ್‌ ಕಾರ್ಪೋರೇಷನ್‌ ಲಿ (ಬಿಎಂಆರ್‌ಸಿಎಲ್‌) ಮೆಟ್ರೋ ನಿಲ್ದಾಣಗಳಲ್ಲಿರುವ ಸಾರ್ವಜನಿಕ ಶೌಚಾಲಯಗಳ ಬಳಕೆಗೆ ವಿಧಿಸಿದ್ದ ಶುಲ್ಕವವನ್ನು ರದ್ದುಗೊಳಿಸಿದೆ. ನಗರದ 12 ಮೆಟ್ರೋ ನಿಲ್ದಾಣಗಳಲ್ಲಿರುವ ಶೌಚಾಲಯಗಳ ಬಳಕೆಗೆ ಶುಲ್ಕ ವಿಧಿಸಿತ್ತು. ಇದಕ್ಕಾಗಿ ಲಾಭ ರಹಿತ ಸಂಘಟನೆಯಾದ ಸುಲಭ್‌ ಇಂಟರ್‌ನ್ಯಾಶನಲ್ ಜತೆ ಒಪ್ಪಂದ ಮಾಡಿಕೊಂಡಿತ್ತು. ಇದೀಗ ಒಪ್ಪಂದವನ್ನು ರದ್ದುಗೊಳಿಸಿದೆ.

ಟಿಕೆಟ್‌ ವಲಯಗಳಿಂದ ಹೊರಗೆ ಇರುವ ಶೌಚಾಲಯಗಳ ನಿರ್ವಹಣೆಯನ್ನು ಸುಲಭ್‌ ಶೌಚಾಲಯ ಇಂಟರ್‌ನ್ಯಾಶನಲ್‌ಗೆ ವಹಿಸಿತ್ತು. ಒಪ್ಪಂದದ ಪ್ರಕಾರ ಮೂತ್ರ ವಿಸರ್ಜನೆಗೆ 2 ರೂ. ಮತ್ತು ಶೌಚಾಲಯ ಬಳಕೆಗೆ ರೂ. 5 ನಿಗದಿಪಡಿಸಲಾಗಿತ್ತು. ನಮ್ಮ ಮೆಟ್ರೋದ ಈ ನಿರ್ಧಾರಕ್ಕೆ ಪ್ರತಿದಿನ ಮೆಟ್ರೋ ರೈಲುಗಳಲ್ಲಿ ಸಂಚರಿಸುವ ಪ್ರಯಾಣಿಕರು ಮತ್ತು ಸಾರ್ವಜನಿಕರು ಶುಲ್ಕ ನಿಗದಿಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಈಗಾಗಲೇ ಶೇ. 71 ರಷ್ಟು ಪ್ರಯಣ ದರ ಹೆಚ್ಚಿಸಲಾಗಿದ್ದು, ಶೌಚಾಲಯ ಬಳಕೆಗೂ ದರದ ಬರೆ ಎಳೆಯುವುದು ಸರಿಯೇ ಎಂದು ಪ್ರಶ್ನಿಸಿದ್ದರು.

ಕಳೆದ ಸೋಮವಾರ ವಕೀಲರು ಮತ್ತು ಪ್ರಯಾಣಿಕರು ವಿಧಾನಸೌಧದ ಬಿ ಆರ್‌ ಅಂಬೇಡ್ಕರ್‌ ನಿಲ್ದಾಣದ ಎದುರು ಪ್ರತಿಭಟನೆ ನಡೆಸಿದ್ದರು. ಬ್ಯಾನರ್‌ ಹಿಡಿದು ಘೋಷಣೆಗಳನ್ನು ಕೂಗಿ ನಮ್ಮ ಮೆಟ್ರೋ ವಿರುದ್ಧ ಕಿಡಿ ಕಾರಿದ್ದರು. ಶೌಚಾಲಯಗಳು ಮೂಲಭೂತ ಸೌಕರ್ಯವಾಗಿದ್ದು ಇದರಿಂದ ಲಾಭ ಮಾಡಿಕೊಳ್ಳಬಾರದು ಎಂದು ಒತ್ತಾಯಿಸಿದ್ದರು.

ಈ ಪ್ರತಿಭಟನೆಯ ನಂತರ ಬಿಎಂಆರ್‌ಸಿಎಲ್‌ ಅಧಿಕಾರಿಗಳು ಶೌಚಾಲಯ ಬಳಕೆಗೆ ವಿಧಿಸಲಾಗಿದ್ದ ಶುಲ್ಕದ ಆದೇಶವನ್ನು ಹಿಂಪಡೆಯಲಾಗಿದೆ. ಸುಲಭ್‌ ಜತೆ ಮಾಡಿಕೊಂಡ ಒಪ್ಪಂದವನ್ನು ರದ್ದುಗೊಳಿಸಲಾಗಿದೆ ಎಂದು ತಿಳಿಸಿದ್ದಾರೆ. ಆರಂಭದಲ್ಲಿ ಶೌಚಾಲಯಗಳ ನಿರ್ವಹಣೆಗಾಗಿ ಶುಲ್ಕ ವಿಧಿಸಲಾಗುತ್ತಿತ್ತೇ ಹೊರತು ಲಾಭ ಮಾಡಲು ಅಲ್ಲ . ಇನ್ನು ಮುಂದೆ ಬಿಎಂಆರ್‌ಸಿಎಲ್‌ ಶೌಚಾಲಯಗಳ ನಿರ್ವಹಣೆ ಮಾಡಲಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಟಿಕೆಟ್‌ ಸ್ವೈಪ್‌ ಮಾಡಿದ ನಂತರ ಇರುವ ಶೌಚಾಲಯಗಳ ಬಳಕೆ ಉಚಿತವಾಗಿರುತ್ತದೆ. ಟಿಕೆಟ್ ನೀಡುವ ಸ್ಥಳದಲ್ಲಿ ಇರುವ ಶೌಚಾಲಯಗಳನ್ನು ಪ್ರಯಾಣಿಕರಷ್ಟೇ ಅಲ್ಲದೆ ಸಾರ್ವಜನಿಕರೂ ಬಳಸುತ್ತಿದ್ದಾರೆ.

ವರದಿ: ಎಚ್.ಮಾರುತಿ

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in