ಬಿಎಂಟಿಸಿ ಪ್ರಯಾಣ ದರ ಪರಿಷ್ಕರಣೆ: ಟಿಕೆಟ್ ದರ ಮೆಜೆಸ್ಟಿಕ್‌ನಿಂದ ಎಲ್ಲೆಲ್ಲಿಗೆ-ಎಷ್ಟು ಹೆಚ್ಚಳವಾಗಿದೆ; ಸಂಪೂರ್ಣ ಮಾಹಿತಿ ಇಲ್ಲಿದೆ
ಬಿಎಂಟಿಸಿ ಬಸ್ ಪ್ರಯಾಣ ದರಗಳನ್ನು ಪರಿಷ್ಕರಣೆ ಮಾಡಿದ್ದು, ಹೊಸ ದರಗಳು ಜನವರಿ 5ರ ಭಾನುವಾರದಿಂದಲೇ ಜಾರಿಗೆ ಬಂದಿವೆ. ಕೆಂಪೇಗೌಡ ಬಸ್ ನಿಲ್ದಾಣದಿಂದ ಯಾವ ಪ್ರದೇಶಕ್ಕೆ ಎಷ್ಟು ಟಿಕೆಟ್ ದರ ಹೆಚ್ಚಾಗಿದೆ ಎಂಬುದರ ವಿವರಗಳನ್ನು ಇಲ್ಲಿ ನೀಡಲಾಗಿದೆ. ಸಾಮಾನ್ಯ ಬಸ್ ದರಗಳ ಜೊತೆಗೆ ಬಿಎಂಟಿಎಸಿ ವಜ್ರ ಬಸ್ ದರಗಳ ವಿವರಗಳು ಇಲ್ಲಿವೆ.
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ದಶಕದ ಬಳಿಕ ಬಸ್ ಟಿಕೆಟ್ ದರ ಪರಿಷ್ಕರಣೆ ಮಾಡಿದೆ. ಕೆಎಸ್‌ಆರ್‌ಟಿಸಿಯಲ್ಲಿ ದರ ಏರಿಕೆ ಬೆನ್ನಲ್ಲೇ ಬಿಎಂಟಿಸಿಯೂ ಟಿಕೆಟ್ ಬೆಲೆಯನ್ನು ಹೆಚ್ಚಿಸಲಾಗಿದೆ. ವಿರೋಧ ಪಕ್ಷಗಳ ತೀವ್ರ ವಿರೋಧದ ನಡುವೆಯೂ ರಾಜ್ಯ ಕಾಂಗ್ರೆಸ್ ಸರ್ಕಾರ ಬಿಎಂಟಿಸಿ ಬಸ್ ದರ ಏರಿಕೆಗೆ ಸಚಿವ ಸಂಪುಟದಲ್ಲಿ ಗ್ರೀನ್ ಸಿಗ್ನಲ್ ನೀಡಿತ್ತು. ಪರಿಷ್ಕೃತ ದರಗಳು ಇಂದಿನಿಂದಲೇ (ಜವನರಿ 5, ಭಾನುವಾರ) ಜಾರಿಗೆ ಬಂದಿವೆ. ಮೆಜೆಸ್ಟಿಕ್‌ನಿಂದ ನಗರದ ವಿವಿಧ ಪ್ರದೇಶಗಳಿಗೆ ಪ್ರಸ್ತುತ ಇರುವ ಟಿಕೆಟ್ ದರ ಹಾಗೂ ಪರಿಷ್ಕರಣೆಯಾಗಿರುವ ಬಸ್ ಪ್ರಯಾಣದ ದರಗಳ ವಿವರ ಇಲ್ಲಿದೆ.
ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್) ದಿಂದ ಕುಮಾರಸ್ವಾಮಿ ಬಡಾವಣೆ, ಬಿಟಿಎಂ ಬಡಾವಣೆ, ಎಜಿಎಸ್ ಲೇಔಟ್, ನಂದಿನಿ ಲೇಔಟ್‌ಗೆ ಹಾಲಿ ಪ್ರಯಾಣ ದರಗಳು 25 ರೂಪಾಯಿ ಇದೆ. ಪರಿಷ್ಕೃತ ಪ್ರಯಾಣ ದರ 28 ರೂಪಾಯಿ ಆಗಲಿದೆ. ಅದೇ ರೀತಿಯಾಗಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಯಶವಂತಪುರ ರೈಲ್ವೆ ನಿಲ್ದಾಣ, ಶಂಕರನಾಗ್ ಬಸ್ ನಿಲ್ದಾಣ, ನೀಲಸಂದ್ರಕ್ಕೆ ಹಾಲಿ ದರ ತಲಾ 20 ರೂಪಾಯಿ ಇದೆ. ಪರಿಷ್ಕೃತ ದರ 23 ರೂಪಾಯಿ ಮಾಡಲಾಗಿದೆ.
ಸಾಮಾನ್ಯ ಬಸ್‌ಗಳ ಟಿಕೆಟ್ ದರವನ್ನು ನೋಡುವುದಾದರೆ ಈವರೆಗೆ 2 ಕಿಲೋ ಮೀಟರ್ ಗಳ ಸ್ಟೇಜ್ 1 ಗೆ 5 ರೂಪಾಯಿ ಇತ್ತು. ಪರಿಷ್ಕೃತ ಪ್ರಯಾಣದ ದರ 6 ರೂಪಾಯಿ ಮಾಡಲಾಗಿದೆ. ಅದೇ ರೀತಿಯಾಗಿ 4 ಕಿಲೋ ಮೀಟರ್‌ಗಳ ಸ್ಟೇಜ್ 2 ಗೆ 10 ರೂಪಾಯಿ ಇತ್ತು. ಪರಿಷ್ಕೃತ ದರ 12 ರೂಪಾಯಿ ಆಗಿದೆ. 6 ಕಿಲೋ ಮೀಟರ್‌ಗಳ ಸ್ಟೇಜ್ 3ಕ್ಕೆ 15 ರೂಪಾಯಿ ಇತ್ತು. ಪ್ರಸ್ತುತ 18 ರೂಪಾಯಿಗೆ ಹೆಚ್ಚಿಸಲಾಗಿದೆ. 8 ಕಿಲೋ ಮೀಟರ್‌ಗಳ ಸ್ಟೇಜ್ 4ಕ್ಕೆ 20 ರೂಪಾಯಿ ಇತ್ತು. ಪರಿಷ್ಕೃತ ದರ 23 ರೂಪಾಯಿ ಆಗಿದೆ.
ಹಾಲಿ ಇರುವ 20 ರೂಪಾಯಿಗಳ ಟಿಕೆಟ್ ದರವನ್ನು 23 ರೂಪಾಯಿಗೆ, 25 ರೂಪಾಯಿ ಇರುವ ಟಿಕೆಟ್ ದರವನ್ನು 28 ರೂಪಾಯಿಗೆ ಹೆಚ್ಚಿಸಲಾಗಿದೆ. ವಾಯು ವಜ್ರ ಬಸ್‌ಗಳ ಟಿಕೆಟ್ ದರವನ್ನೂ ಹೆಚ್ಚಿಸಲಾಗಿದ್ದು, 35 ರೂಪಾಯಿಗಳ ಟಿಕೆಟ್ ಅನ್ನು 40 ರೂಪಾಯಿಗೆ, 45 ರೂಪಾಯಿ ಇದ್ದ ಟಿಕೆಟ್ ದರವನ್ನು 50 ರೂಪಾಯಿಗೆ ಹಾಗೂ 50 ರೂಪಾಯಿಗಳ ಟಿಕೆಟ್ ದರವನ್ನು 55 ರೂಪಾಯಿಗೆ ಹೆಚ್ಚಳ ಮಾಡಲಾಗಿದೆ.