ನಟ್ಟ ನಡುರಾತ್ರಿ ಬಾಂಬ್ ಬೆದರಿಕೆ ಹಾಕಿದ್ರು, 3 ಗಂಟೆ ತಡವಾಯಿತು ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಸಂಚಾರ, ನಾಲ್ವರನ್ನು ಬಂಧಿಸಿದ್ರು ಪೊಲೀಸರು
ಕನ್ನಡ ಸುದ್ದಿ  /  ಕರ್ನಾಟಕ  /  ನಟ್ಟ ನಡುರಾತ್ರಿ ಬಾಂಬ್ ಬೆದರಿಕೆ ಹಾಕಿದ್ರು, 3 ಗಂಟೆ ತಡವಾಯಿತು ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಸಂಚಾರ, ನಾಲ್ವರನ್ನು ಬಂಧಿಸಿದ್ರು ಪೊಲೀಸರು

ನಟ್ಟ ನಡುರಾತ್ರಿ ಬಾಂಬ್ ಬೆದರಿಕೆ ಹಾಕಿದ್ರು, 3 ಗಂಟೆ ತಡವಾಯಿತು ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಸಂಚಾರ, ನಾಲ್ವರನ್ನು ಬಂಧಿಸಿದ್ರು ಪೊಲೀಸರು

ದುಷ್ಕರ್ಮಿಗಳು ನಟ್ಟ ನಡುರಾತ್ರಿ ಬಾಂಬ್ ಬೆದರಿಕೆ ಹಾಕಿದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಸಂಚಾರ ಮೂರು ಗಂಟೆ ತಡವಾಯಿತು. ಈ ಕೇಸ್ ಸಂಬಂಧ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ಧಾರೆ.

ವಾಡಿ ನಿಲ್ದಾಣದಲ್ಲಿ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ನಿಲ್ಲಿಸಿ ಬಾಂಬ್‌ಗಾಗಿ ಶೋಧ ನಡೆಸಿದ ಪೊಲೀಸರು.
ವಾಡಿ ನಿಲ್ದಾಣದಲ್ಲಿ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ನಿಲ್ಲಿಸಿ ಬಾಂಬ್‌ಗಾಗಿ ಶೋಧ ನಡೆಸಿದ ಪೊಲೀಸರು.

ಬೆಂಗಳೂರು: ದುಷ್ಕರ್ಮಿಗಳು ನಟ್ಟ ನಡುರಾತ್ರಿ ಬಾಂಬ್ ಬೆದರಿಕೆ ಹಾಕಿದ ಕಾರಣ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಕರ್ನಾಟಕ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 12628) ಸಂಚಾರ 3 ಗಂಟೆ ತಡವಾಯಿತು. ಭಾನುವಾರ ನಸುಕಿನ ವೇಳೆ ಅಂದರೆ 1.05ರ ಸುಮಾರಿಗೆ ಬಾಂಬ್ ಬೆದರಿಕೆ ಕರೆಯನ್ನು ಅಧಿಕಾರಿಗಳು ಸ್ವೀಕರಿಸಿದ್ದರು. ಈ ಕೇಸ್ ಸಂಬಂಧ ಪೊಲೀಸರು ನಾಲ್ವರನ್ನು ಬಂಧಿಸಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ. ಭಾನುವಾರ ನಸುಕಿನಲ್ಲಿ ಈ ಬೆದರಿಕೆ ಕರೆ ಬಂದ ಕಾರಣ ಸ್ಥಳದಲ್ಲಿ ಉದ್ವಿಗ್ನತೆ ಉಂಟಾಗಿತ್ತು.

ನಟ್ಟ ನಡುರಾತ್ರಿ ಬಾಂಬ್ ಬೆದರಿಕೆ ಹಾಕಿದ್ರು

ಸೋಲಾಪುರ ಪೊಲೀಸ್ ಠಾಣೆಗೆ 112 ಸಹಾಯವಾಣಿ ಸಂಖ್ಯೆ ಮೂಲಕ ತುರ್ತು ಕರೆ ಹೋಗಿದೆ. ಕರೆ ಮಾಡಿದವರು ಕರ್ನಾಟಕ ಎಕ್ಸ್‌ಪ್ರೆಸ್‌ ರೈಲಿನ ಹಿಂಬದಿಯ ಜನರಲ್ ಬೋಗಿಯಲ್ಲಿ ಬಾಂಬ್ ಇದೆ ಎಂದು ತಿಳಿಸಿದ್ದರು. ಕ್ಷಿಪ್ರವಾಗಿ ಸ್ಪಂದಿಸಿದ ಪೊಲೀಸರು, ಸೋಲಾಪುರದ ಡಿವಿಷನಲ್ ಸೆಕ್ಯೂರಿಟಿ ಕಂಟ್ರೋಲ್ ರೂಮ್ ಸಿಬ್ಬಂದಿಯನ್ನು ಜಾಗೃತಗೊಳಿಸಿದರು. ಅಲ್ಲಿಂದ ಬೆಂಗಳೂರಿನ ರೈಲ್ವೆ ಪೊಲೀಸರು, ಕಲಬುರಗಿ ನಗರ, ಗ್ರಾಮಾಂತರ ಪೊಲೀಸರು ಹಾಗೂ ಹಿರಿಯ ರೈಲ್ವೆ ಅಧಿಕಾರಿಗಳನ್ನು ಜಾಗೃತಗೊಳಿಸುವ ಕೆಲಸ ಮಾಡಿದ್ದರು. ರಾತ್ರಿ 1.05 ನಿಮಿಷಕ್ಕೆ ಕರೆ ಬಂದಿತ್ತು.

ಕರ್ನಾಟಕ ಎಕ್ಸ್‌ಪ್ರೆಸ್ ರೈಲು ನಸುಕಿನ 1.21 ನಿಮಿಷಕ್ಕೆ ವಾಡಿ ರೈಲ್ವೆ ನಿಲ್ದಾಣಕ್ಕೆ ಬಂದಿದೆ. ಕೂಡಲೇ ರೈಲ್ವೆ ಪೊಲೀಸರು, ಸ್ಥಳೀಯ ಪೊಲೀಸರು ಹಾಗೂ ರೈಲ್ವೆ ಪ್ರೊಟೆಕ್ಷನ್ ಫೋರ್ಸ್ ಸಿಬ್ಬಂದಿ ಜಂಟಿಯಾಗಿ ಬಾಂಬ್ ಶೋಧ ಕಾರ್ಯಾಚರಣೆ ನಡೆಸಿದರು. ರೈಲಿನಲ್ಲಿ ಶೋಧ ನಡೆಸಿದಾಗ ಬಾಂಬ್‌, ಸ್ಫೋಟಕ ಪತ್ತೆಯಾಗಿಲ್ಲ. ಸಂದೇಹಾಸ್ಪದವಾಗಿರುವ ಯಾವ ವಸ್ತುಗಳೂ ಬೋಗಿಯಲ್ಲಿ ಕಾಣಲಿಲ್ಲ. ಹೀಗಾಗಿ ಇದು ಹುಸಿ ಬಾಂಬ್ ಬೆದರಿಕೆ ಎಂಬ ತೀರ್ಮಾನಕ್ಕೆ ಅಧಿಕಾರಿಗಳು ಬಂದಿದ್ದರು.

ನಾಲ್ವರು ಪೊಲೀಸರ ವಶಕ್ಕೆ

ನವದೆಹಲಿಯಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಉತ್ತರ ಪ್ರದೇಶ ಜಲೌನ್ ಜಿಲ್ಲೆಯ ದೀಪ್ ಸಿಂಗ್ ರಾಥೋಡ್ ಎಂಬಾತ 112 ಸಹಾಯವಾಣಿಗೆ ಕರೆ ಮಾಡಿ ಬಾಂಬ್‌ ಇರುವ ವಿಚಾರ ತಿಳಿಸಿದ್ದ. ಆತನ ಜತೆಗೆ ನೇಪಾಳದ ಗಣೇಶ್ ಮಾಗರ್ (24), ಬಿಹಾರದ ಮಿಂಟು ಕುಮಾರ್ (25), ಕರ್ನಾಟಕದ ಶಿವ ಥಾಪಾ (26) ಇದ್ದರು. ಅವರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಅವರ ಬಳಿಕ ಅಕ್ರಮ ವಸ್ತುಗಳು, ಸ್ಫೋಟಕಗಳು ಇದ್ದವು. ಪ್ರಾಥಮಿಕ ತನಿಖೆ ಬಳಿಕ ಕರೆ ಮಾಡಿದ್ದ ದೀಪ್ ಸಿಂಗ್ ರಾಥೋಡ್‌, ಮೂವರ ಬಳಿ ಸ್ಫೋಟಕಗಳು ಇದ್ದುದನ್ನು ವಿಡಿಯೋ ಚಿತ್ರೀಕರಿಸಿದಾಗ ಅವರು ಮೊಬೈಲ್ ಕಸಿದುಕೊಂಡಿದ್ದರು. ಸೋಲಾಪುರದಲ್ಲಿ ಆರ್‌ಪಿಎಫ್‌ ಸಿಬ್ಬಂದಿ ನೆರವು ಪಡೆದು ಅವರಿಂದ ಮೊಬೈಲ್ ಹಿಂಪಡೆದೆ ಎಂದು ಹೇಳಿದ್ದಾರೆ. ಉಳಿದ ಮೂವರು ವಿಚಾರಣೆ ವೇಳೆ, ತಮ್ಮ ಅನುಮತಿ ಇಲ್ಲದೇ ವಿಡಿಯೋ ಚಿತ್ರೀಕರಿಸಿದ್ದಕ್ಕಾಗಿ ಅದನ್ನು ಡಿಲೀಟ್ ಮಾಡುವುದಕ್ಕಾಗಿ ಮೊಬೈಲ್ ಕಸಿದುಕೊಂಡಿರುವುದಾಗಿ ಹೇಳಿದ್ದಾರೆ ಎಂದು ವರದಿ ವಿವರಿಸಿದೆ.

3 ಗಂಟೆ ತಡವಾಯಿತು ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಸಂಚಾರ

ಪ್ರಯಾಣಿಕರ ಸುರಕ್ಷೆಯ ದೃಷ್ಟಿಯಿಂದ ನಾಲ್ವರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ಧಾರೆ. ಕಲಬುರಗಿ ಬಾಂಬ್ ಪತ್ತೆ ಮತ್ತು ನಿಷ್ಕ್ರಿಯ ತಂಡ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ಬೋಗಿ ಪರಿಶೀಲಿಸಿತು. ನಸುಕಿನ 2.25ಕ್ಕೆ ಶೋಧ ಕಾರ್ಯ ಪೂರ್ಣಗೊಂಡಿದೆ. ಮುಂಜಾನೆ 4.15ಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್ ಸುರಕ್ಷಿತ ಎಂದು ಘೋಷಿಸಲಾಗಿದೆ. 4.34ಕ್ಕೆ ಕರ್ನಾಟಕ ಎಕ್ಸ್‌ಪ್ರೆಸ್ ರೈಲು ತನ್ನ ಪ್ರಯಾಣ ಮುಂದುವರಿಸಿತು ಎಂದು ಮೂಲಗಳು ತಿಳಿಸಿದ್ದಾಗಿ ವರದಿ ಹೇಳಿದೆ.

ಸುಳ್ಳು ಸುದ್ದಿ ಹರಡದಂತೆ, ಪ್ರಯಾಣಿಕ ಸುರಕ್ಷೆ ವಿಚಾರದಲ್ಲಿ ಆಟವಾಡದಂತೆ ಪ್ರಯಾಣಿಕರಲ್ಲಿ ಕೇಂದ್ರೀಯ ರೈಲ್ವೆ ಮನವಿ ಮಾಡಿದೆ. ಈ ಪ್ರಕರಣ ಸಂಬಂಧ ಭಾರತೀಯ ರೈಲ್ವೆ ಪೊಲೀಸರು ತನಿಖೆ ಮುಂದುವರಿಸಿದೆ.

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.