100 ಜನ ಸುದ್ದಿಯೋಧರ ಯಶೋಗಾಥೆಯ ಉತ್ತರದ ಸಾಲು ದೀಪಗಳು ಕೃತಿ ಲೋಕಾರ್ಪಣೆಗೆ ಸಜ್ಜು
ಕನ್ನಡ ಸುದ್ದಿ  /  ಕರ್ನಾಟಕ  /  100 ಜನ ಸುದ್ದಿಯೋಧರ ಯಶೋಗಾಥೆಯ ಉತ್ತರದ ಸಾಲು ದೀಪಗಳು ಕೃತಿ ಲೋಕಾರ್ಪಣೆಗೆ ಸಜ್ಜು

100 ಜನ ಸುದ್ದಿಯೋಧರ ಯಶೋಗಾಥೆಯ ಉತ್ತರದ ಸಾಲು ದೀಪಗಳು ಕೃತಿ ಲೋಕಾರ್ಪಣೆಗೆ ಸಜ್ಜು

ಈ ವರೆಗೆ ಆಯಾ ರಾಜ್ಯಗಳ ಮಾಧ್ಯಮಕ್ಕೆ ಸಂಬಂಧಿಸಿದ ಅಕಾಡೆಮಿಗಳು, ಸಮಿತಿಗಳು, ಪತ್ರಿಕಾ ಸಂಘಗಳು ಆಯ್ದ ಕೆಲವು ಪತ್ರಕರ್ತರ ಕುರಿತಂತೆ ಪುಸ್ತಕಗಳನ್ನು ಹೊರತಂದಿವೆ. ಆದರೆ ಹೀಗೆ ಒಂದು ಪ್ರದೇಶದ ಮಾಧ್ಯಮ ಇತಿಹಾಸ ಮತ್ತು ಅಲ್ಲಿನ ಪ್ರಮುಖ ಪತ್ರಕರ್ತರ ಬದುಕು ಕಟ್ಟಿಕೊಟ್ಟಿದ್ದು ಇದೇ ಮೊದಲು.

ಪ್ರಮುಖ ನೂರು ಜನ ಪತ್ರಕರ್ತರ ಬದುಕು ಮತ್ತು ಸಾಧನೆಯ ಚಿತ್ರಣ ದಾಖಲಿಸಿದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ
ಪ್ರಮುಖ ನೂರು ಜನ ಪತ್ರಕರ್ತರ ಬದುಕು ಮತ್ತು ಸಾಧನೆಯ ಚಿತ್ರಣ ದಾಖಲಿಸಿದ ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿ-ಧಾರವಾಡ ಮಹಾನಗರವನ್ನು ಕೇಂದ್ರಸ್ಥಾನ ಮಾಡಿಕೊಂಡು ಈ ನಾಡಿಗೆ ಅನುಪಮ ಪತ್ರಿಕಾ ಸೇವೆ ಸಲ್ಲಿಸಿದ ಒಂದು ನೂರು ಜನ ಸುದ್ದಿಯೋಧರ ಬದುಕಿನ ಯಶೋಗಾಥೆ ದಾಖಲಿಸಿದ `ಉತ್ತರದ ಸಾಲು ದೀಪಗಳು’ ಎನ್ನುವ ಅಪರೂಪದ ಕೃತಿ ಮೇ. 18ರ ಭಾನುವಾರ ಲೋಕಾರ್ಪಣೆಯಾಗಲಿದೆ. ಹಿರಿಯ ಪತ್ರಕರ್ತ ಮಲ್ಲಿಕಾರ್ಜುನ ಸಿದ್ದಣ್ಣವರ ಅವರು ಹಲವರ ಸಹಕಾರದಿಂದ ಈ ಕೃತಿ ಸಂಪಾದಿಸಿದ್ದು, ಒಂದು ಪ್ರದೇಶದಲ್ಲಿ ಬಾಳಿದ ಎರಡು ತಲೆಮಾರಿನ ಪ್ರಮುಖ ನೂರು ಜನ ಪತ್ರಕರ್ತರ ಬದುಕು ಮತ್ತು ಸಾಧನೆಯ ಚಿತ್ರಣ ದಾಖಲಿಸಿದ ಅಪರೂಪದ ಮತ್ತು ದೇಶದಲ್ಲೇ ಮೊದಲ ಪ್ರಯತ್ನ ಇದು.

ಈ ವರೆಗೆ ಆಯಾ ರಾಜ್ಯಗಳ ಮಾಧ್ಯಮಕ್ಕೆ ಸಂಬಂಧಿಸಿದ ಅಕಾಡೆಮಿಗಳು, ಸಮಿತಿಗಳು, ಪತ್ರಿಕಾ ಸಂಘಗಳು ಆಯ್ದ ಕೆಲವು ಪತ್ರಕರ್ತರ ಕುರಿತಂತೆ ಪುಸ್ತಕಗಳನ್ನು ಹೊರತಂದಿವೆ. ಆದರೆ ಹೀಗೆ ಒಂದು ಪ್ರದೇಶದ ಮಾಧ್ಯಮ ಇತಿಹಾಸ ಮತ್ತು ಅಲ್ಲಿನ ಪ್ರಮುಖ ಪತ್ರಕರ್ತರ ಬದುಕು ಕಟ್ಟಿಕೊಟ್ಟಿದ್ದು ಇದೇ ಮೊದಲು.

ಹುಲುಸಾದ ಮಾಧ್ಯಮ:

ಕರ್ನಾಟಕ ಪತ್ರಿಕೋದ್ಯಮಕ್ಕೆ ಈಗ ಹದಿನಾರು ದಶಕಕ್ಕೂ ಹೆಚ್ಚಿನ ಅವಧಿಯ ದೀರ್ಘ ಇತಿಹಾಸವಿದೆ. ಕಲ್ಲಚ್ಚಿನಲ್ಲಿ ಮಂಗಳೂರು ಸಮಾಚಾರ ಪ್ರಕಟಣೆಯಿಂದ (1943ರ ಜುಲೈ 1ರಂದು) ಪ್ರಾರಂಭವಾದ ಪತ್ರಿಕೋದ್ಯಮದ ಬಿತ್ತನೆ ಅಂದಿನ ಮುಂಬಯಿ ಕರ್ನಾಟಕದಲ್ಲಿದ್ದ ಧಾರವಾಡ ಜಿಲ್ಲೆಯಲ್ಲಿ ಹುಲುಸಾಗಿ ಬೆಳೆದದ್ದು ಇತಿಹಾಸದ ಪುಟಗಳಲ್ಲಿದೆ. ನಾಡಿನ ಬಹುತೇಕ ಪತ್ರಿಕೆಗಳು ಕನ್ನಡ ನವೋದಯದ ಕಾಲದಲ್ಲಿ ಊರ್ಜಿತಗೊಂಡು ದೇಶಾಭಿಮಾನ ಹಾಗೂ ಸ್ವಾತಂತ್ರö್ಯಕ್ಕಾಗಿ ಹೋರಾಡಿದವು. ನಂತರದ ದಿನಗಳಲ್ಲಿ ಏಕೀಕೃತ ಕರ್ನಾಟಕ ನಾಡು, ನುಡಿ, ಸಂಸ್ಕೃತಿಯ ಸಂವರ್ಧನೆಗೆ ದೀಕ್ಷೆ ತೊಟ್ಟು ಅಹರ್ನಿಶಿ ದುಡಿದದ್ದು ಇತಿಹಾಸದಿಂದ ವ್ಯಕ್ತವಾಗುತ್ತದೆ.

ಘಟಾನುಘಟಿ ಪತ್ರಕರ್ತರು:

ಕನ್ನಡ ಪತ್ರಿಕೋದ್ಯಮದ ಬಹುತೇಕ ಆದ್ಯರು ಮತ್ತು ಘಟಾನುಘಟಿಗಳು ಹುಬ್ಬಳ್ಳಿ-ಧಾರವಾಡದವರು ಎನ್ನುವುದು ನಿರ್ವಿವಾದ. ಕನ್ನಡ ಪತ್ರಿಕೋದ್ಯಮದ ಬಹುದೊಡ್ಡ ಅಧ್ಯಾಯ ಇಲ್ಲಿದೆ. ಈ ದಿಸೆಯಲ್ಲಿ ಪ್ರಾಯಶಃ ಕರ್ನಾಟಕದ ಯಾವ ಜಿಲ್ಲೆಯೂ ಹುಬ್ಬಳ್ಳಿ- ಧಾರವಾಡಕ್ಕೆ ಸರಿಸಾಟಿ ಆಗಲಾರದು. ಈ ಸಾಧನೆ ಮತ್ತು ಇತಿಹಾಸವನ್ನು ಸಿದ್ದಣ್ಣವರ ಈ ಕೃತಿಯಲ್ಲಿ ಅತ್ಯಂತ ಶ್ರದ್ಧೆಯಿಂದ ದಾಖಲಿಸಿದ್ದಾರೆ.

ಮೊಹರೆ ಹಣಮಂತರಾಯರು, ಆರ್.ಆರ್.ದಿವಾಕರ್, ಪಾಟೀಲ ಪುಟ್ಟಪ್ಪ, ಕೆ.ಶಾಮರಾವ್ ಅವರಿಂದ ಮೊದಲಾಗುವ ಈ ಸುದ್ದಿಯೋಧರ ಪಟ್ಟಿಯಲ್ಲಿ ಎಂ.ಜೀವನ್, ಪಿ.ಎಲ್. ಬಂಕಾಪುರ, ಮಾರುತಿ ಬೆಳ್ಳಿಗಟ್ಟಿ, ಹನುಮಂತ ಹೂಗಾರ, ಜಿಬಿಎಸ್ ಜಗದೀಶ, ಜಿ.ಎಸ್.ಪುರಾಣಿಕಮಠ, ಗುರುರಾಜ ಜೋಶಿ, ಶಿವಾನಂದ ಜೋಶಿ, ಎಚ್.ಜಿ.ಬೆಳಗಾಂವಕರ, ಐ.ಕೆ.ಜಾಗೀರದಾರ, ಮತ್ತೀಹಳ್ಳಿ ಮದನ ಮೋಹನ್, ಖಾದ್ರಿ ಅಚ್ಯುತನ್, ಶಿವಾಜಿ ಗಣೇಶನ್, ರವಿ ಬೆಳಗೆರೆ, ರಂಜಾನ ದರ್ಗಾ ಅವರ ತನಕ ಕೊನೆಯಿಲ್ಲದಷ್ಟು ಸಾಲುದೀಪಗಳು ಈ ಕೃತಿಯಲ್ಲಿವೆ.

ಉತ್ತರದ ಗಟ್ಟಿ ದನಿಗಳು:

ಹಿಂದುಳಿದ ಉತ್ತರ ಕರ್ನಾಟಕದ ಪರ ಗಟ್ಟಿ ದನಿ ಎತ್ತಿ ಸಂಪನ್ಮೂಲ ಹಂಚಿಕೆಯಲ್ಲಿ, ವಿಶೇಷ ಸ್ಥಾನಮಾನ ಒದಗಿಸಿಕೊಡುವಲ್ಲಿ ಇಲ್ಲಿನ ಪತ್ರಕರ್ತರ ಪಾತ್ರ ಅದ್ವಿತೀಯ. ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಎಂದೇ ಗುರುತಿಸಲಾಗುವ ಧಾರವಾಡ ಜಿಲ್ಲೆ ಪತ್ರಿಕೋದ್ಯಮದಲ್ಲೂ ಸಹ ಮುಂಚೂಣಿಯಲ್ಲಿದೆ. ಪತ್ರಿಕೋದ್ಯಮಕ್ಕೆ ಇದರ ಕೊಡುಗೆ ಮಹತ್ತರವಾದದ್ದು. ಬೆಂಗಳೂರು ನಂತರ ಬಹು ದೊಡ್ಡ ಪತ್ರಿಕಾ ಕೇಂದ್ರವೆಂದರೆ ಅದು ಹುಬ್ಬಳ್ಳಿಯೇ ಆಗಿದೆ. ಆರಂಭದ ದಿನಗಳಲ್ಲಿ ಈ ಪ್ರದೇಶದಲ್ಲಿ ಲಭ್ಯವಿದ್ದ ಕಲ್ಲಚ್ಚು ಹಾಗೂ ಮುದ್ರಣ ಸೌಲಭ್ಯ ಪಯೋಗಿಸಿಕೊಂಡು ಅನೇಕ ಪತ್ರಿಕೆಗಳು ಹೊರಬಂದವು.

ಬೆಂಗಳೂರು ಮತ್ತು ಮಣಿಪಾಲ ಮೂಲದ ಪ್ರಮುಖ ದಿನಪತ್ರಿಕೆಗಳಾದ ಪ್ರಜಾವಾಣಿ, ಡೆಕ್ಕನ್ ಹೆರಾಲ್ಡ್, ಕನ್ನಡಪ್ರಭ, ಸಂಜೆವಾಣಿ, ಉದಯವಾಣಿ, ವಿಜಯ ಕರ್ನಾಟಕ, ಟೈಮ್ಸ್, ಹೊಸ ದಿಗಂತ, ವಿಶ್ವವಾಣಿ, ರಾಜಸ್ಥಾನ ಪತ್ರಿಕಾ ಆಫ್ ಇಂಡಿಯಾ, ದಿ ಹಿಂದೂ, ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗಳು ಹುಬ್ಬಳ್ಳಿಯಿಂದ ತಮ್ಮ ಆವೃತ್ತಿಗಳನ್ನು ಹೊರತರುತ್ತಿವೆ. ಇದಲ್ಲದೆ ಸಂಜೆ ದರ್ಪಣ, ಹುಬ್ಬಳ್ಳಿ ಸಂಜೆ ಎಂಬ ದೈನಿಕಗಳು ಈ ನಗರದಿಂದಲೇ ಹೊರಡುತ್ತಿವೆ. ಇತ್ತೀಚೆಗೆ ಬೆಂಗಳೂರಿನ ಇಂದು ಸಂಜೆ ಮತ್ತು ಈ ಸಂಜೆ ಆವೃತ್ತಿಗಳು ನಗರ ಪ್ರವೇಶಿಸಿವೆ. ಇವುಗಳಲ್ಲದೆ ಇನ್ನೂ ಹಲವು ನಿಯತಕಾಲಿಕೆಗಳು ಇಲ್ಲಿ ಮುದ್ರಿತವಾಗುವ ಮೂಲಕ ಎಲ್ಲ ಪತ್ರಿಕೆಗಳು ಧಾರವಾಡ ಜಿಲ್ಲೆಯ ಪತ್ರಿಕೋದ್ಯಮ ಬೆಳವಣಿಗೆಗೆ ಸ್ತುತ್ಯ ಕಾಣಿಕೆ ಸಲ್ಲಿಸುತ್ತಿವೆ.

ಟಿವಿ ಚಾನೆಲ್‌ಗಳು:

ಈಗ ಇಲೆಕ್ಟ್ರಾನಿಕ್ ಮಾಧ್ಯಮಗಳ ಬೆಳವಣಿಗೆಯನ್ನು ಸಹ ಇಲ್ಲಿ ಅಗಾಧ ಪ್ರಮಾಣದಲ್ಲಿ ಕಾಣಬಹುದಾಗಿದೆ. ದೂರದರ್ಶನ, ನ್ಯೂಸ್-18, ಸುವರ್ಣ ನ್ಯೂಸ್, ಟಿವಿ-9, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ಕಸ್ತೂರಿ ನ್ಯೂಸ್, ಬಿ-ಟಿವಿ, ದಿಗ್ವಿಜಯ ನ್ಯೂಸ್, ಟಿವಿ-5, ಜನತಾ ಟಿವಿ, ಎಎನ್‌ಐ, ಸೂರ್ಯ ಚಾನೆಲ್ ಮಾಧ್ಯಮಗಳೊಂದಿಗೆ ಸ್ಥಳೀಯ ಹಲವು ಸುದ್ಧಿ ಚಾನೆಲ್‌ಗಳು ಕಾರ್ಯನಿರ್ವಹಿಸುತ್ತ ಇಲ್ಲಿ ಘಟಿಸಿದ ಸುದ್ದಿಗಳಿಗೆ ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ಪ್ರಾಧಾನ್ಯತೆ ದೊರಕಿಸಿಕೊಡುತ್ತಿರುವುದನ್ನು ಈ ಕೃತಿಯಲ್ಲಿ ಸ್ಪಷ್ಟವಾಗಿ ದಾಖಲಿಸಲಾಗಿದೆ.

ಅಷ್ಟೇ ಅಲ್ಲ ಇಲ್ಲಿನ ಪತ್ರಿಕೋದ್ಯಮದ ಮಹಿಳಾ ಹೆಜ್ಜೆಗುರುತುಗಳನ್ನೂ ಶ್ರದ್ಧೆಯಿಂದ ದಾಖಲಿಸಲಾಗಿದೆ. ಸ್ಥಳೀಯರೇ ಆದ ಉದ್ಯಮಿ ವಿಜಯ ಸಂಕೇಶ್ವರ ಅವರು ಪತ್ರಿಕೆ ಮತ್ತು ಟಿವಿ ಎರಡನ್ನು ಆರಂಭಿಸಿ ಯಶಶ್ವಿಯಾದ ಕಥೆ ಇದರಲ್ಲಿದೆ. ಪತ್ರಿಕೆ ಮತ್ತು ಸುದ್ದಿ ವಾಹಿನಿಗಳಲ್ಲಿ ದುಡಿದ, ಸರ್ಕಾರಿ ಮಾಧ್ಯಮ ಸಂಸ್ಥೆಗಳಾದ ವಾರ್ತಾ ಇಲಾಖೆ, ಆಕಾಶವಾಣಿ, ದೂರದರ್ಶನ, ಪಿಟಿಐಗಳಲ್ಲಿ ಅಹರ್ನಿಸಿ ಸೇವೆ ಸಲ್ಲಿಸಿದ ಹಿರಿಯರ ಪತ್ರಕರ್ತರ ಸೇವೆಯನ್ನು ಒಂದೆಡೆ ದಾಖಲಿಸಿರುವುದು ವಿಶೇಷ.

ಪ್ರಮುಖ ಆಕರ ಗ್ರಂಥ:

ಪತ್ರಿಕೋದ್ಯಮ ವಿಕಾಸ, ಬೆಳವಣಿಗೆ, ಅಭ್ಯುದಯವನ್ನು ಗಮನದಲ್ಲಿಟ್ಟುಕೊಂಡು ಉತ್ತರ ಕರ್ನಾಟಕದ ಪತ್ರಿಕಾ ಕೃಷಿಯ ಅಧ್ಯಯನಕ್ಕೆ ಮುಂದಾಗುವವರಿಗೆ ಬಹು ದೊಡ್ಡ ಆಕರ ಗ್ರಂಥ ಇದಾಗಲಿದೆ.

ದಿ. ಮತ್ತಿಹಳ್ಳಿ ಮದನ ಮೋಹನ, ನಾರಾಯಣ ಘಳಗಿ, ಕೃಷ್ಣಮೂರ್ತಿ ಹೆಗಡೆ, ದಿನೇಶ್ ಅಮೀನ ಮಟ್ಟು, ಕೂಡ್ಲಿ ಗುರುರಾಜ, ಪಿ.ಎಸ್.ಪರ್ವತಿ, ಗಣೇಶ ಜೋಶಿ ಸೇರಿದಂತೆ ಹಲವರ ಅನುಭವದ ಲೇಖನಗಳು ಇದರಲ್ಲಿವೆ. ಡಿ.ಉಮಾಪತಿ ಅವರು ಈ ಕೃತಿಗೆ ಮುನ್ನುಡಿ ಬರೆದು ಪ್ರಸ್ತುತ ಸುದ್ದಿಮನೆಗಳ ತಾರತಮ್ಯಕ್ಕೆ ಕನ್ನಡಿ ಹಿಡಿಯುವ ಜತೆಗೆ ಕೆಲವು ಉಪಯುಕ್ತ, ಅದರಲ್ಲೂ ಎಲ್ಲರನ್ನು ಒಳಗೊಳ್ಳುವ ಆದರ್ಶ ಸುದ್ದಿಮನೆಗಳು ಆಗಲಿ ಎನ್ನುವ ಮೌಲಿಕ ಸಲಹೆಗಳನ್ನು ನೀಡಿದ್ದಾರೆ.

ಹುಬ್ಬಳ್ಳಿಯ ವಾಣಿಜ್ಯೋದ್ಯಮ ಸಂಸ್ಥೆಯ ಸಭಾಭವನದಲ್ಲಿ ಮೇ 18, ಭಾನುವಾರ ಬೆಳಗ್ಗೆ10:30 ಕ್ಕೆ ನಡೆಯಲಿರುವ ಈ ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಕೃತಿ ಬಿಡುಗಡೆ ಮಾಡುವರು. ಸಭಾಪತಿ ಬಸವರಾಜ ಹೊರಟ್ಟಿ ಕಾರ್ಯಕ್ರಮ ಉದ್ಘಾಟಿಸುವರು. ಹಿರಿಯ ಪತ್ರಕರ್ತ ದಿನೇಶ ಅಮೀನ ಮಟ್ಟು, ಸಂಘದ ಜಿಲ್ಲಾಧ್ಯಕ್ಷ ಲೋಚನೇಶ ಹೂಗಾರ, ಕಾರ್ಯಕಾರಿ ಸಮಿತಿ ರಾಜ್ಯ ಸದಸ್ಯ ಗಣಪತಿ ಗಂಗೊಳ್ಳಿ, ಕರ್ನಾಟಕ ಮಾಧ್ಯಮ ಅಕಾಡೆಮಿ ಸದಸ್ಯ ಅಬ್ಬಾಸ್ ಮುಲ್ಲಾ, ಸಂಘದ ರಾಜ್ಯ ಉಪಾಧ್ಯಕ್ಷ ಪುಂಡಲೀಕ ಬಾಳೋಜಿ ಭಾಗವಹಿಸಲಿದ್ದಾರೆ.

ವರದಿ: ಪ್ರಸನ್ನಕುಮಾರ್

Kiran Kumar I G

TwittereMail
ಕಿರಣ್ ಐ.ಜಿ.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಜನರ ಬದುಕು ಸುಧಾರಿಸಬಲ್ಲ ಟೆಕ್‌ ಮತ್ತು ಗ್ಯಾಜೆಟ್ ಇವರ ಆಸಕ್ತಿಯ ಕ್ಷೇತ್ರ. ಯಾವುದೇ ವಿಷಯವಾದರೂ ಶ್ರದ್ಧೆಯಿಂದ ಕಲಿಯಬಲ್ಲೆ, ಬರೆಯಬಲ್ಲೆ ಎನ್ನುವುದು ಇವರ ವಿಶ್ವಾಸ. ಊರು ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ. ಪ್ರಜಾವಾಣಿ, ವಿಜಯವಾಣಿ ಮತ್ತು ವಿಜಯ ಕರ್ನಾಟಕ ವೆಬ್ ಹಾಗೂ ಟಿವಿ9 ಕನ್ನಡ ಡಿಜಿಟಲ್‌ನ ವಿವಿಧ ವಿಭಾಗಗಳಲ್ಲಿ ಒಟ್ಟು 10 ವರ್ಷ ಕೆಲಸ ಮಾಡಿದ ಅನುಭವ. ಇಮೇಲ್: kiran.kumar@htdigital.in