ಪುಸ್ತಕ ಪರಿಚಯ: ತುಳುನಾಡ ಕಂಬಳದ ಸಾಧಕರ ಮಾಹಿತಿ ತೆರೆದಿಡುವ ರಮ್ಯಾ ನಿತ್ಯಾನಂದ ಶೆಟ್ಟಿ ಪುಸ್ತಕ ಕಂಬಳಲೋಕ-ಕಂಬಳ ಸಾಧಕರ ಯಶೋಗಾಥೆ
ಯುವ ಲೇಖಕಿ ರಮ್ಯಾ ನಿತ್ಯಾನಂದ ಶೆಟ್ಟಿ ಬರೆದಿರುವ ಕಂಬಳಲೋಕ ಎನ್ನುವ ಕುರಿತು ತುಳುನಾಡಿನ ಸಂಸ್ಕೃತಿ ಹಾಗೂ ಸಾಧಕರ ಸಾಧನೆಯನ್ನು ಅನಾವರಣಗೊಳಿಸಿದೆ.(ಹರೀಶ ಮಾಂಬಾಡಿ, ಮಂಗಳೂರು)
ಮಂಗಳೂರು: ತುಳುನಾಡಿನ ಅಪ್ಪಟ ಜನಪದೀಯ ಕ್ರೀಡೆ ಕಂಬಳವನ್ನು ಉಳಿಸಿ-ಬೆಳೆಸುವ ನಿಟ್ಟಿನಲ್ಲಿ ಹಲವು ರೀತಿಯ ಪ್ರಯತ್ನಗಳು ನಡೆಯುತ್ತಿದ್ದು, ಅದಕ್ಕೆ ಪೂರಕವಾಗಿ ಗುಬ್ಬಚ್ಚಿಗೂಡು ಹೆಸರಿನಲ್ಲಿ ಪಕ್ಷಿಸಂಕುಲದ ರಕ್ಷಣೆಯ ವಿನೂತನ ಪ್ರಯತ್ನದಲ್ಲಿ ತೊಡಗಿರುವ ಬಂಟ್ವಾಳದ ವಾಮದಪದವು ಮೂಲದ ದಂಪತಿ ಇದೀಗ ಕಂಬಳಕ್ಕಾಗಿ ದುಡಿಯುವ ಸರ್ವರನ್ನೂ ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಕಂಬಳ ಲೋಕ-ಕಂಬಳ ಸಾಧಕರ ಯಶೋಗಾಥೆ ಎಂಬ ಪುಸ್ತಕವನ್ನು ಪ್ರಕಟಿಸಿದ್ದಾರೆ. ವಾಮದಪದವು ಸಮೀಪದ ಎಲಿಯನಡುಗೋಡು ಗ್ರಾಮ ನಿವಾಸಿ ನಿತ್ಯಾನಂದ ಶೆಟ್ಟಿ ಹಾಗೂ ರಮ್ಯಾ ನಿತ್ಯಾನಂದ ಶೆಟ್ಟಿ ಅವರು ಹಲವು ವರ್ಷಗಳ ಹಿಂದೆ ಹೊಕ್ಕಾಡಿಗೋಳಿ ವೀರ-ವಿಕ್ರಮ ಕಂಬಳಕ್ಕೆ ಸಾಮಾನ್ಯರಂತೆ ವೀಕ್ಷಕರಾಗಿ ತೆರಳಿದ್ದರು. ಅಲ್ಲಿ ಕಂಬಳದ ಸೌಂದರ್ಯವನ್ನು ಕಂಡು ನಾವೇಕೆ ಕಂಬಳದ ಕುರಿತು ಪುಸ್ತಕ ಮಾಡಬಾರದು ಎಂದು ರಮ್ಯಾ ಅವರ ಮನಸ್ಸಿನಲ್ಲಿ ಆಲೋಚನೆಯೊಂದು ಮೂಡಿದ್ದು, ಪ್ರಸ್ತುತ ಅದು ಪತಿ ನಿತ್ಯಾನಂದ ಶೆಟ್ಟಿ ಅವರ ಸಹಕಾರದಿಂದ ಕಂಬಳಕ್ಕಾಗಿ ದುಡಿಯುವ ಸಾಮಾನ್ಯರನ್ನೂ ಒಳಗೊಂಡಂತೆ ಪುಸ್ತಕ ಹೊರತರುವ ಹಂತಕ್ಕೆ ಬೆಳೆದಿದೆ.
ಜೀವ ವೈವಿಧ್ಯಗಳ ಛಾಯಾಗ್ರಹಣ ಕುರಿತು ವಿಶೇಷ ಆಸಕ್ತಿ ಹೊಂದಿರುವ ಈ ದಂಪತಿ ಕಂಬಳಕ್ಕೆ ಹೋಗಿ ಛಾಯಾಗ್ರಹಣವನ್ನೂ ಮಾಡುತ್ತಿದ್ದರು. ಹೀಗೆ ಕಂಬಳದ ಕುರಿತು ಆಸಕ್ತಿ ಮೂಡಿ ಪ್ರತಿವಾರವೂ ಒಂದೊಂದು ಕಂಬಳಕ್ಕೆ ತೆರಳಿ ಛಾಯಾಗ್ರಹಣದ ಜತೆಗೆ ಅಲ್ಲಿ ಕಂಬಳಕ್ಕೆ ಸಂಬಂಧಪಟ್ಟವರ ಜತೆ ಮಾತುಕತೆ ನಡೆಸಿ ಅದನ್ನು ತಮ್ಮ ಗುಬ್ಬಚ್ಚಿಗೂಡು ನಿತ್ಯಾನಂದ ಶೆಟ್ಟಿ ಯೂಟ್ಯೂಬ್ ಚಾನೆಲ್ ಮೂಲಕ ಬಿತ್ತರಿಸುತ್ತಿದ್ದರು. ಮುಂದೆ ಅದೇ ಹವ್ಯಾಸ ಬೆಳೆದು ಪ್ರಸ್ತುತ ದಾಖಲೀಕರಣದ ಕಾರ್ಯಕ್ಕೆ ಇಳಿದಿದ್ದಾರೆ.
ಸಣ್ಣ ಪುಸ್ತಕಗಳು ಸೇರಿ ದೊಡ್ಡ ಪುಸ್ತಕ
ಲೇಖಕಿ ರಮ್ಯಾ ನಿತ್ಯಾನಂದ ಶೆಟ್ಟಿ ಅವರು 2019ರಿಂದಲೇ ಕಂಬಳದ ಓಟಗಾರರು, ಯಜಮಾನರು, ಕೋಣಗಳು, ಕಂಬಳದ ಪರಿಕರಗಳು-ಅಲಂಕಾರಿಕ ವಸ್ತುಗಳ ತಯಾರಕರು, ವೀಕ್ಷಕ ವಿವರಣೆಗಾರರು, ತೀರ್ಪುಗಾರರು, ಫ್ಲ್ಯಾಗ್ ತೀರ್ಪುಗಾರರು, ಛಾಯಾಗ್ರಾಹಕರು ಮೊದಲಾದವರ ವ್ಯಕ್ತಿ ಪರಿಚಯವನ್ನು ಅಕ್ಷರ ರೂಪಕ್ಕಿಳಿಸಿದ್ದು, ಆದರೆ ಪುಸ್ತಕ ಮಾಡಿರಲಿಲ್ಲ. 2024ರಲ್ಲಿ ಅದನ್ನು ಪುಸ್ತಕ ಮಾಡಬೇಕು ಎಂಬ ಯೋಚನೆಯಿಂದ ಮಾರ್ಚ್‌ನಿಂದ ಕಂಬಳ ಲೋಕ 1, 2, 3, 4 ಎಂದು ಹಂತ ಹಂತವಾಗಿ 4 ಸಣ್ಣ ಪುಸ್ತಕಗಳನ್ನು ಪ್ರಕಟಿಸಿದ್ದರು.
ಪ್ರಸ್ತುತ ಅವೆಲ್ಲವನ್ನೂ ಒಳಗೊಂಡು ಕಂಬಳ ಲೋಕ-ಕಂಬಳ ಸಾಧಕರ ಯಶೋಗಾಥೆ ಎಂಬ 272 ಪುಟಗಳ ಪುಸ್ತಕವನ್ನು ಸಿದ್ಧಪಡಿಸಿದ್ದಾರೆ. ಈ ಪ್ರಯತ್ನ ಇಲ್ಲಿಗೇ ಮುಗಿಯುವುದಿಲ್ಲ ಮುಂದೆಯೂ ಇದೇ ರೀತಿ ಕಂಬಳಕ್ಕೆ ದುಡಿದವರ ದಾಖಲೀಕರಣ ಮಾಡುವ ಕಾರ್ಯ ಮಾಡಲಿದ್ದೇವೆ. ಪ್ರಸ್ತುತ ಈ ಪುಸ್ತಕವನ್ನು ಕಂಬಳ ಲೋಕಕ್ಕೆ ತಮ್ಮದೇ ರೀತಿಯಲ್ಲಿ ಕೊಡುಗೆ ನೀಡುತ್ತಿರುವ ಎಲ್ಲಾ ಛಾಯಾಗ್ರಾಹಕರು ಹಾಗೂ ಮಾಧ್ಯಮ ಲೋಕಕ್ಕೆ ಅರ್ಪಿಸುವುದಾಗಿ ಪುಸ್ತಕದಲ್ಲಿ ಮುದ್ರಿಸಿದ್ದಾರೆ.
ಲೋಕಾರ್ಪಣೆ ವೇಳೆ ಮೆಚ್ಚುಗೆ
ಕಂಬಳ ಲೋಕ ಪುಸ್ತಕವು ಡಿ. 30ರಂದು ಸಿದ್ಧಕಟ್ಟೆಯ ಅಶ್ವಿನಿ ಸಭಾಂಗಣದಲ್ಲಿ ಲೋಕಾರ್ಪಣೆಗೊಂಡಿತು. ಕಂಬಳ ಕ್ಷೇತ್ರದ ಪ್ರಮುಖರು, ಹಿರಿಯ ಲೇಖಕರು ಆಗಮಿಸಿ ಪುಸ್ತಕದ ಗುಣಮಟ್ಟವನ್ನು ಶ್ಲಾಘಿಸಿದರು.
ಪುಸ್ತಕದಲ್ಲೇನಿದೆ?
2019-20ರ ಸಮಯದಲ್ಲಿ ಹೊಕ್ಕಾಡಿಗೋಳಿ ಕಂಬಳ ವೀಕ್ಷಿಸುವ ಸಂದರ್ಭದಲ್ಲಿ ಹುಟ್ಟಿದ ಯೋಚನೆಯಿಂದ ಪುಸ್ತಕ ಪ್ರಕಟನೆಗಾಗಿ ಬರೆಯಲು ಆರಂಭಿಸಿದ್ದು, ಪ್ರಸ್ತುತ ಅದನ್ನು ಪುಸ್ತಕವಾಗಿ ಪ್ರಕಟಿಸುತ್ತಿದ್ದೇವೆ. ಪ್ರತಿ ಕಂಬಳಕ್ಕೂ ಹೋಗಿ ಪೋಟೊಗ್ರಾಫಿಯ ಜತೆಗೆ ಕಂಬಳಕ್ಕಾಗಿ ದುಡಿಯುವ ಒಂದಷ್ಟು ಮಂದಿಯಲ್ಲಿ ಮಾತುಕತೆ ನಡೆಸಿ, ಮೊಬೈಲ್ ಮೂಲಕ ಸಂಪರ್ಕಿಸಿ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಿದ್ದೇವೆ. ಜತೆಗೆ ಕೆಲವರ ಮನೆಗೂ ಹೋಗಿ ಮಾಹಿತಿ ಸಂಗ್ರಹದ ಕಾರ್ಯ ನಡೆದಿದೆ. ಇದರ ಜತೆಗೆ ನಮ್ಮ ಗುಬ್ಬಚ್ಚಿಗೂಡು ಪಕ್ಷಿಸಂಕುಲದ ರಕ್ಷಣೆಯ ಅಭಿಯಾನಕ್ಕಾಗಿ 300 ಶಾಲೆಗಳನ್ನು ತಲುಪುತ್ತಿದೆ ಎಂದು ಲೇಖಕಿ ರಮ್ಯಾ ನಿತ್ಯಾನಂದ ಶೆಟ್ಟಿ ಈ ಸಂದರ್ಭ ಹೇಳಿದರು.
(ಪುಸ್ತಕ ಪರಿಚಯ: ಹರೀಶ ಮಾಂಬಾಡಿ, ಮಂಗಳೂರು)