ಕನ್ನಡದ ಬಾನು ಎಲ್ಲೆ ಮೀರಿ ಬೆಳಗಿತು, ಎಲ್ಲೆ ಇಲ್ಲದ ಬಾನು ಎಲ್ಲೆಲ್ಲೂ ಕನ್ನಡದ ದೀಪ: ಬೂಕರ್ ಪ್ರಶಸ್ತಿ ವಿಜೇತ ಸಾಹಿತಿಗೆ ಜೈ ಹೋ
ಕನ್ನಡದ ಕಂಪನ್ನು ಜಾಗತಿಕ ಮಟ್ಟದಲ್ಲಿ ಪಸರಿಸಿ ಬೂಕರ್ ಪ್ರಶಸ್ತಿಗೆ ಭಾಜನರಾದ ಸಾಹಿತಿ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿ ಅವರನ್ನು ಮನದುಂಬಿ ಕನ್ನಡದ ಸಾಹಿತಿಗಳು,ಲೇಖಕರು, ವಿಭಿನ್ನ ಚಿಂತನೆಯ ಬರಹಗಾರರು ಅಭಿನಂದಿಸಿದ್ದಾರೆ.

ಕನ್ನಡದ ಹೆಮ್ಮೆಯ ಲೇಖಕಿ ಬಾನು ಮುಷ್ತಾಕ್ ಅವರ ಕೃತಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಬಂದಿರುವುದಕ್ಕೆ ಭಾರೀ ಅಭಿನಂದನೆಯೇ ವ್ಯಕ್ತವಾಗುತ್ತಿದೆ. ಕನ್ನಡದ ಸಾಹಿತಿಗಳು, ಲೇಖಕರು, ಬರಹಗಾರರು, ಹೋರಾಟಗಾರರು, ಪತ್ರಕರ್ತರು, ವಿಭಿನ್ನ ನೆಲೆಯ ಚಿಂತಕರು ಮನದುಂಬಿ ಅಭಿನಂದಿಸಿದ್ದಾರೆ. ಕನ್ನಡದ ಬಾನು ಎಲ್ಲೆ ಮೀರಿ ಬೆಳಗಿತು, ಎಲ್ಲೆ ಇಲ್ಲದ ಬಾನು ಎಲ್ಲೆಲ್ಲೂ ಕನ್ನಡದ ದೀಪ ಎನ್ನುವ ಸಾಲುಗಳೊಂದಿಗೆ ಬಾನು ಮುಷ್ತಾಕ್ ಅವರ ಜತೆಗೆ ಅವರ ಸಣ್ಣ ಕಥೆಗಳನ್ನು ಇಂಗ್ಲೀಷಿಗೆ ಅನುವಾದ ಮಾಡಿ ಅವರೊಂದಿಗೆ ಬೂಕರ್ ಪ್ರಶಸ್ತಿಯನ್ನು ಲಂಡನ್‌ನಲ್ಲಿ ಸ್ವೀಕರಿಸಿದ ಕನ್ನಡಗಿ ದೀಪಾ ಭಾಸ್ತಿ ಅವರಿಗೂ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ. ನಿಮ್ಮದಿಂದಾಗಿ ಕನ್ನಡ ಜಾಗತಿಕ ಮಟ್ಟದಲ್ಲಿ ಬೆಳಗಿತು. ನಿಜಕ್ಕೂ ಕನ್ನಡಿಗರೆಲ್ಲರಿಗೂ ಇದು ಹೆಮ್ಮೆಯ ಕ್ಷಣ ಎಂದು ಹಲವರು ಸಂತಸ ವ್ಯಕ್ತಪಡಿಸಿದ್ದಾರೆ. ಅದರ ನೋಟ ಇಲ್ಲಿದೆ.
ಎಲ್ಲೆ ಮೀರಿದ `ಬಾನು'
ಕನ್ನಡ ಸಾಹಿತ್ಯದಲ್ಲಿರುವ ಸಾಂಸ್ಕೃತಿಕ ಸತ್ವದಲ್ಲಿ ಎರಡು ಮಾದರಿ/ಆಯಾಮಗಳಿವೆ. ಮೊದಲನೆಯದು-ತಮ್ಮ ಮನೆಮಾತಿನಲ್ಲೇ ಸಾಹಿತ್ಯ ಬರೆಯುವವರದು. ಈ ಮಾದರಿಯೂ ಪರಿಣಾಮದಲ್ಲಿ ಏಕರೂಪಿಯಲ್ಲ. ಪ್ರತಿಯೊಬ್ಬ ಲೇಖಕರೂ ತಮ್ಮ ವಿಶಿಷ್ಟ ಲೋಕದೃಷ್ಟಿಯ ಸಮೇತ, ತಮ್ಮ ಸಾಮಾಜಿಕ ಧಾರ್ಮಿಕ ಪ್ರಾದೇಶಿಕ ಹಿನ್ನೆಲೆಯ ಅನುಭವಲೋಕವನ್ನು ಕನ್ನಡ ಸಾಹಿತ್ಯಕ್ಕೆ ಜೋಡಿಸುತ್ತಿರುತ್ತಾರೆ. ಎರಡನೆಯ ಮಾದರಿ- ಕೊಂಕಣಿ ತುಳು ಬ್ಯಾರಿ ಉರ್ದು ತಮಿಳು ತೆಲುಗು ಲಂಬಾಣಿ ಕೊಡವ ಮನೆಮಾತುಳ್ಳ ಲೇಖಕರು ಕನ್ನಡದಲ್ಲಿ ಬರೆಯುವುದು. ಇವರು ತಮ್ಮ ಪ್ರಾದೇಶಿಕ ಸಾಮಾಜಿಕ ಧಾರ್ಮಿಕ ಹಿನ್ನೆಲೆಯ ಕಸುವಿನ ಜತೆಗೆ, ತಮ್ಮ ಮನೆಮಾತಿನ ಸೊಗಡನ್ನೂ ಕನ್ನಡಕ್ಕೆ ಬೆಸೆಯುತ್ತಿರುತ್ತಾರೆ. ಇವರು ಹೆಣ್ಣಾಗಿದ್ದರೆ ಸಂವೇದನೆಯ ಇನ್ನೊಂದು ಆಯಾಮವೂ ಜೋಡಣೆಯಾಗುತ್ತದೆ-ಸಾರಾ, ಬಾನು, ಶರೀಫಾ, ರಲಿಯಾ ಮೊದಲಾದ ಲೇಖಕಿಯರು `ಮುಸ್ಲಿಂ’ ಎಂಬ ಚೌಕಟ್ಟನ್ನು ಒಳಗೊಂಡೂ ಮೀರಿ ಬರೆದಿರುವುದು ಈ ಪ್ರಕ್ರಿಯೆಯಲ್ಲಿ. ಒಳಗೊಂಡೂ ಮೀರುವ ಈ ಸೃಜನಶೀಲ ಸೀಮೋಲ್ಲಂಘನೆ ಕನ್ನಡ ಸಾಹಿತ್ಯಕ್ಕೆ ಸಾಂಸ್ಕೃತಿಕವಾಗಿ ಬಹುತ್ವವನ್ನು ಒದಗಿಸಿದೆ.
ಈ ಸೀಮೋಲ್ಲಂಘನ ತತ್ವವು ಬರೆಹಕ್ಕೆ ಮಾತ್ರವಲ್ಲ, ಭಾರತ ಶತಮಾನಗಳಿಂದ ಸೃಷ್ಟಿಸಿರುವ ಸಂಗೀತ, ಸಿನಿಮಾ, ಕುಶಲಕಲೆ ವ್ಯಾಪಾರಗಳಲ್ಲೂ ಹಲವು ವಿನ್ಯಾಸದಲ್ಲಿ ನೆಲೆಸಿದೆ. ಈ ಸರಳ ಮತ್ತು ಮೂಲಭೂತ ತಿಳಿವಿನ ಕೊರತೆಯೇ ಅಥವಾ ನಿರಾಕರಣೆಯೇ, ಜನರನ್ನು ಧರ್ಮ-ಜಾತಿ-ಪ್ರದೇಶ-ಭಾಷೆಯ ಆತ್ಯಂತಕ ವಿಭಜಕ ಚೌಕಟ್ಟುಗಳಲ್ಲಿ ಇಟ್ಟುನೋಡುವ ರಾಜಕೀಯ ಸಿದ್ಧಾಂತಗಳ ಸಮಸ್ಯೆ. ಎಂತಲೇ ಎಲ್ಲ ಬಗೆಯ ಮೂಲಭೂತವಾದಗಳು ಕಲೆಯನ್ನು ನಿರಾಕರಿಸುತ್ತವೆ ಇಲ್ಲವೇ ಅವನ್ನು ಉಪಕರಣವಾಗಿ ಪಳಗಿಸಲು ಯತ್ನಿಸುತ್ತವೆ
ರಹಮತ್ ತರೀಕೆರೆ, ಸಾಹಿತಿ,ಮೈಸೂರು
-----
ಮುಷ್ತಾಕರೂ ಅಭಿನಂದನಾರ್ಹರು
ಯಶಸ್ವಿ ಪುರುಷನ ಹಿಂದೆ ಒಬ್ಬರು ಮಹಿಳೆ ಇರುತ್ತಾರೆ ಎನ್ನುವುದು ಎಷ್ಟು ನಿಜವೋ, ಹಾಗೆಯೇ (ಎಲ್ಲ ಅಲ್ಲದೆ ಇದ್ದರೂ) ಕೆಲವು ಯಶಸ್ವಿ ಮಹಿಳೆಯರ ಹಿಂದೆ ಒಬ್ಬ ಪುರುಷ ಇರುತ್ತಾರೆ.
ಪತ್ರಕರ್ತರಾಗಿ, ವಕೀಲರಾಗಿ, ಸಾಹಿತಿಯಾಗಿ ಬಾನು ಅವರು ಮಾಡಿರುವ ಸಾಹಸ-ದುಸ್ಸಾಹಸಗಳು ಒಂದೆರಡಲ್ಲ. ಆ ಎಲ್ಲ ಸಂದರ್ಭಗಳಲ್ಲಿ ಒಡನಾಡಿಯಾಗಿ ಜೊತೆಯಲ್ಲಿ ನಿಂತವರು ಮುಷ್ತಾಕ್ ಅಹ್ಮದ್ ಅವರು.
ಮುಸ್ಲಿಮ್ ಸಮುದಾಯದಲ್ಲಿ ಬಾನು ಮುಷ್ತಾಕ್ ಅವರಂತಹ ಪ್ರಗತಿಪರ ಆಲೋಚನೆಯ ಹೆಣ್ಣುಮಗಳನ್ನು ಪತ್ನಿಯಾಗಿ ಮನೆಯಲ್ಲಿರಿಸಿಕೊಂಡು ಸಮಾಜವನ್ನು ಎದುರಿಸುವುದು ಎಷ್ಟು ಸಾಹಸದ ಕೆಲಸ ಎನ್ನುವುದನ್ನು ಅರ್ಥಮಾಡಿಕೊಂಡರೆ ಬಾನು ಅವರ ಬದುಕಿನಲ್ಲಿ ಮುಷ್ತಾಕ್ ಅಹ್ಮದ್ ಅವರ ಪಾತ್ರ ಏನೆನ್ನುವುದು ಅರಿವಾಗಬಹುದು.
ಕಳೆದ ಮಾರ್ಚ್ ನಲ್ಲಿ ಬಾನು ಮುಷ್ತಾಕ್ ಮತ್ತು ನಾನು ಹಾಸನದಲ್ಲಿ ಲಂಕೇಶ್ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆವು. ಕಾರ್ಯಕ್ರಮ ಮುಗಿದಾಗ ಕತ್ತಲಾಗಿತ್ತು. 'ಮನೆಗೆ ಬಿಡ್ಲಾ, ಕತ್ತಲೆಯಾಗಿದೆ' ಎಂದೆ.
'ಬೇಡ ನನ್ನ ಬಾಡಿಗಾರ್ಡ್ ಬಂದಿದ್ದಾರೆ' ಎಂದು ಕೆಳಗೆ ಕೂತಿದ್ದ ಮುಷ್ತಾಕ್ ಅಹ್ಮದ್ ಅವರನ್ನು ತೋರಿಸಿದ್ದರು.ಮುಷ್ತಾಕ್ ಅಹ್ಮದ್ ಅವರಿಗೂ ಅಭಿನಂದನೆಗಳು 😊
-ದಿನೇಶ್ ಆಮಿನಮಟ್ಟು, ಹಿರಿಯ ಪತ್ರಕರ್ತ,ಬೆಂಗಳೂರು
----
ಎಲ್ಲೆ ಇಲ್ಲದ ಬಾನು ಎಲ್ಲೆಲ್ಲೂ ಕನ್ನಡದ ದೀಪ
ಬೂಕರ್‌ಪ್ರಶಸ್ತಿಯನ್ನು ಕನ್ನಡಕ್ಕೆ ತಂದು ಕೊಟ್ಟು ಅಪ್ರತಿಮ ಸಾಧನೆ ಮಾಡಿದ ನಮ್ಮ ಪ್ರೀತಿಯ ಬಾನು ಮುಷ್ತಾಕ್ ಹಾಗೂ ಅನುವಾದಕಿ ದೀಪಾ ಭಾಸ್ತಿ ಅವರಿಗೆ ಅಭಿನಂದನೆಗಳು
-ವಸುಧೇಂದ್ರ, ಕಾದಂಬರಿಕಾರ,ಬೆಂಗಳೂರು
--------
ಕನ್ನಡಕ್ಕೆ ಬೂಕರ್ ಪ್ರಶಸ್ತಿ.
ಮಂಗಳೂರು ವಿಶ್ವವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗಕ್ಕೂ ಸಂಭ್ರಮದ ಕ್ಷಣ.ಶ್ರೀಮತಿ ಬಾನು ಮುಷ್ತಾಕರ ಕಥೆಗಳ ಸಂಕಲನಕ್ಕೆ ಬೂಕರ್ ಪ್ರಶಸ್ತಿ ಲಭಿಸಿರುವುದು ಕನ್ನಡಿಗರಿಗೆ ಹೆಮ್ಮೆಯ ಕ್ಷಣ. ಈ ಕಥೆಗಳನ್ನು ಇಂಗ್ಲಿಷಿಗೆ ಅನುವಾದಿಸಿ ಅಂತಾರಾಷ್ಟ್ರೀಯ ಮಟ್ಟಕ್ಕೆ ಒಯ್ದವರು ದೀಪಾ ಭಾಸ್ತಿ.
ದೀಪಾ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಎಂ.ಎ. ಓದಿದವರು (2004-06). ನಮಗಿಂತ ಒಂದು ವರ್ಷ ಜೂನಿಯರ್.
ಕಾಫಿ ನಾಡು ಮಡಿಕೇರಿಯವರಾದ ದೀಪಾಗೆ ಕಾಫಿ ಎಂದರೆ ತುಂಬ ಇಷ್ಟ. ಬರೀ ಕಾಫಿ ಅಲ್ಲ, ಡಬಲ್ ಸ್ಟ್ರಾಂಗ್ ಕಾಫಿ. ಮಂಗಳಗಂಗೋತ್ರಿ ಕ್ಯಾಂಟೀನಿಗೆ ಹೋದಾಗಲೆಲ್ಲ ಅವರು ಕಾಫಿಯನ್ನು ಹಾಗೆಯೇ ಕೇಳುತ್ತಿದ್ದುದು.
ಅಭಿನಂದನೆಗಳು ಇಬ್ಬರಿಗೂ. ದೀಪಾಗೆ ವಿಶೇಷ ಅಭಿನಂದನೆಗಳು!
-ಡಾ.ಸಿಬಂತಿ ಪದ್ಮನಾಭ, ಪತ್ರಿಕೋದ್ಯಮ ಅಧ್ಯಾಪಕರು ತುಮಕೂರು
-----------------
ಸಂಭ್ರಮದಲ್ಲೊಂದು ಹಳೆಯ ನೆನಪು...
ಅದು 64 ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ. 1995ರಲ್ಲಿ ಬಾಗಲಕೋಟ ಜಿಲ್ಲೆಯ ಮುಧೋಳದಲ್ಲಿ ನಡೆದಿತ್ತು. ಉದ್ಘಾಟನೆಯ ದಿನ ಹಿರಿಯ ಸಾಹಿತಿ ಮಹಾದೇವ ಬಣಕಾರ ಅವರು ವೇದಿಕೆಯ ಮೇಲೆ "ಹೆಣ್ಣು ಚಂಚಲೆ; ಚಂಚಲತೆಯ ಇನ್ನೊಂದು ಹೆಸರೇ ಹೆಣ್ಣು" ಎಂಬ ಅರ್ಥದಲ್ಲಿ ಮಾತನಾಡಿದರು.
ಮಾರನೆಯ ದಿನ ಗೋಷ್ಠಿಯೊಂದರಲ್ಲಿ ಯುವ ಮಹಿಳಾ ಸಾಹಿತಿಯೊಬ್ಬರು ಯಾವುದೋ ವಿಷಯದ ಮೇಲೆ ಉಪನ್ಯಾಸ ಮಂಡಿಸುತ್ತಿದ್ದರು. ವಿಷಯ ನೆನಪಿಲ್ಲ. ಆದರೆ ಆ ಉಪನ್ಯಾಸಕಿಯ ವಿಷಯ ಮಂಡನೆಗೆ ಅಂದು ಸಭಾಂಗಣದಲ್ಲಿ ಹಾಜರಿದ್ದ ಯು. ಆರ್. ಅನಂತಮೂರ್ತಿ ಅವರಂಥ ಹಿರಿಯರಿಂದ ಹಿಡಿದು ನನ್ನಂಥ ಕಿರಿಯರವರೆಗೂ ಬೆರಗಾಗಿದ್ದೆವು. ಆ ಉಪನ್ಯಾಸಕಿ ಕೊನೆಯಲ್ಲಿ ಬಣಕಾರ ಅವರ ಹೇಳಿಕೆಗೆ ನಯವಾಗಿಯೇ ತಿರುಗೇಟು ಕೊಟ್ಟರು. "ಹೆಣ್ಣನ್ನು ಚಂಚಲತೆಗೆ ಹೋಲಿಸುವ ಮಾತನ್ನು ಬಣಕಾರರಂಥ ಹಿರಿಯರಿಂದ ನಿರೀಕ್ಷಿಸಿರಲಿಲ್ಲ. ಇದನ್ನು ನಾನು ಖಂಡಿಸು ತ್ತೇನೆ" ಎಂದಾಗ ಸಭಿಕರಿಂದ ಅಪಾರ ಕರತಾಡನ ವ್ಯಕ್ತವಾಗಿತ್ತು.
ಮುಂದೆ ನಾನು #ವಿಜಯಕರ್ನಾಟಕ ದಲ್ಲಿ ಇದ್ದಾಗ ಅವರಿಗೆ ಕೆಲವು ಲೇಖನ ಬರೆಯಲು ವಿನಂತಿಸಿದ್ದೆ. ಬರೆದಿದ್ದರು.
ಕೆಲ ವರ್ಷಗಳ ಹಿಂದೆ ಆ ಲೇಖಕಿ, ನಾನೂ ಇದ್ದ ಒಂದು ವಾಟ್ಸ್ಯಾಪ್ ಗ್ರೂಪ್ನನಲ್ಲಿ ಸೇರಿದರು. ಅವರಿಗೆ ಮೇಲಿನ ಘಟನೆಯನ್ನು ನೆನಪಿಸಿಯೇ ಗ್ರೂಪ್ ಗೆ ಸ್ವಾಗತಿಸಿದ್ದೆ. "ಓಹ್ ಆ ಘಟನೆಯನ್ನು ಇನ್ನೂ ನೆನಪಿಟ್ಟಿದ್ದಕ್ಕೆ ಧನ್ಯವಾದಗಳು" ಎಂದಿದ್ದರು.
ಆ ಲೇಖಕಿ Banu Mushtaq . ಅವರ ಮೂಲಕ ಕನ್ನಡಕ್ಕೇ ಈಗ #ಬೂಕರ್ ಎಂಬ ಅಂತಾರಾಷ್ಟ್ರೀಯ ಮನ್ನಣೆ. ಶುಭಾಶಯಗಳು ಮೇಡಂ.
-ಸಂಗಮೇಶ ಮೆಣಸಿನಕಾಯಿ, ಹಿರಿಯ ಪತ್ರಕರ್ತ, ಹುಬ್ಬಳ್ಳಿ.
---
ಬಾನು ಬದುಕೇ ನಿಜವಾದ ಸ್ಪೂರ್ತಿ
ಕನ್ನಡದ ಲೇಖಕಿ ಬಾನು ಮುಷ್ತಾಕ್ ಅವರ 'ಹಾರ್ಟ್ ಲ್ಯಾಂಪ್' ಕೃತಿಗೆ ಅಂತರಾಷ್ಟ್ರೀಯ ಬೂಕರ್ ಪ್ರಶಸ್ತಿ ಲಭಿಸಿದೆ. ಕನ್ನಡದ ಕೃತಿಯೊಂದಕ್ಕೆ ಪ್ರತಿಷ್ಠಿತ ಬೂಕರ್ ಪ್ರಶಸ್ತಿ ಸಿಕ್ಕಿದ್ದು ಇದೇ ಮೊದಲು. ಈ ಪ್ರಶಸ್ತಿಯಿಂದಾಗಿ ಕನ್ನಡಕ್ಕೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನಷ್ಟು ಮನ್ನಣೆ ಸಿಗಲಿದೆ ಎನ್ನಲಾಗುತ್ತಿದೆ. ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ನಮ್ಮ ಭಾಷೆಯು ಜಗತ್ತಿನ ಮೂಲೆ ಮೂಲೆಯನ್ನು ತಲುಪಿದರೆ ಇನ್ನಷ್ಟು ಹೆಮ್ಮೆ.
ಅರವತ್ತು ಲಕ್ಷ ರೂಪಾಯಿಗಳ ಮೊತ್ತದ ಈ ಬೂಕರ್ ಪ್ರಶಸ್ತಿಗಳ ನಡುವೆ ಲೇಖಕಿಯ ಪಯಣವನ್ನು ಒಮ್ಮೆ ಅವಲೋಕಿಸಬೇಕು. ಅಂತರಾಷ್ಟ್ರೀಯ ಪತ್ರಿಕೆಯೊಂದರಲ್ಲಿ ಪ್ರಕಟವಾದ ಈ ಸುದ್ದಿಯ ಲೇಖನದಲ್ಲಿ ಈ ಕೆಳಗಿನ ಸಾಲುಗಳನ್ನು ಓದಿದೆ:
-----------
Then, a shocking act of defiance set her free.
"Once, in a fit of despair, I poured white petrol on myself, intending to set myself on fire. Thankfully, he [the husband] sensed it in time, hugged me, and took away the matchbox. He pleaded with me, placing our baby at my feet saying, 'Don't abandon us'," she told the magazine.
------------
ಕುರಾನ್ ಹಾಗೂ ಉರ್ದುವನ್ನೇ ಕಲಿಯಬೇಕು ಎನ್ನುವ ಅವರ ಸಮಾಜದ ಲಕ್ಷ್ಮಣ ರೇಖೆಯನ್ನು ಮೀರಿ ಇಂಗ್ಲಿಷ್ ಹಾಗೂ ಕನ್ನಡವನ್ನು ಕಲಿತು; 'ಮದುವೆಯಾಗು, ಮಕ್ಕಳನ್ನು ಹೆರು' ಎನ್ನುವ ಒತ್ತಡದ ಸಂಕೋಲೆಯನ್ನು ಕಡಿದು; ಬುರ್ಕಾ ಧರಿಸಿ, ನಾಲ್ಕು ಗೋಡೆಗಳೊಳಗೇ ಬದುಕು ಎನ್ನುವವರ ನಡುವೆ ಹೊರಗಡೆ ಬಂದು ಸಾಹಿತ್ಯ ಲೋಕದಲ್ಲಿ ಹಾರುವ ಛಲವನ್ನು ತಳೆದು, ಬೇಸರದ ಬೇಗೆಯಲ್ಲಿ ಪೆಟ್ರೋಲ್ ಸುರಿದು ತನ್ನನ್ನೇ ತಾನು ಸುಟ್ಟಿಕೊಂಡು ಬೂದಿಯಾಗಬೇಕು ಎಂದಿದ್ದ ಆ ತಾಯಿ ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ತನ್ನ ಅಕ್ಷರಗಳ ಮೂಲಕ ತನ್ನಂತಹ ಲಕ್ಷಾಂತರ ಜನರಿಗೆ ದನಿಯಾಗಿದ್ದಾರಲ್ಲ ಇದು ಸ್ಪೂರ್ತಿ.
ವಾದಿರಾಜ ಸಾಮರಸ್ಯ, ಬೆಂಗಳೂರು
---
ಬುಧವಾರವೇ ಬಾನುವಾರ
ಈ ಬುಧವಾರ `ಬಾನು’ವಾರವೇ ಆಯಿತು. ಅಭಿನಂದನೆ ಬಾನು ಅಕ್ಕ, 💐
ನೀವು ಸದಾ ನಮ್ಮ ಶೀರೋ. 🥰👏🫰
ಅಭಿನಂದನೆಗಳು ಮುಷ್ತಾಕ್ ಭಾವಯ್ಯ.🌹🌹
ಅಭಿನಂದನೆ ಮತ್ತು ಧನ್ಯವಾದ ದೀಪಾ.. 🙏🌱💐🌹💐
ನಮ್ಮ ಬಾನು ನಮ್ಮ ಹೆಮ್ಮೆ
-ಅನುಪಮಾ ಕವಲಕ್ಕಿ, ಲೇಖಕಿ, ಹೊನ್ನಾವರ
----
ಕನ್ನಡದ ಬಾನು ಬೆಳಗಿತು. ಭಾರತದ ಬಾನು ಬೆಳಗಿತು
ರವಿಕುಮಾರ್‌ಟೆಲೆಕ್ಸ್, ಹಿರಿಯ ಪತ್ರಕರ್ತ, ಶಿವಮೊಗ್ಗ
---
ಹೆಮ್ಮೆಯ ಹೆಣ್ಣು ಮಗಳು
ಕನ್ನಡದ ಕೃತಿಯೊಂದಕ್ಕೆ ಪ್ರತಿಷ್ಟಿತ ಬೂಕರ್ ಪ್ರಶಸ್ತಿ ಇದೇ ಮೊದಲು. ಅಷ್ಟಕ್ಕೂ ದೇಶದಲ್ಲೇ ಈ ಪ್ರಶಸ್ತಿ ಪಡೆದವರು ಬಾನು ಮೇಡಮ್ ಅವರನ್ನೂ ಸೇರಿಸಿ ಕೇವಲ 6 ಮಂದಿ! ಅದರಲ್ಲೂ ನಮ್ಮ ಹೆಮ್ಮಯ ಹೆಣ್ಣುಮಗಳು. ಕಥೆಗಳೂ ಮಾತಾಡುವುದು ಹೆಣ್ಣುಮಕ್ಕಳ ಬದುಕಿನ ಬಗ್ಗೆ. ಇಂತದ್ದೊಂದು ಕೃತಿಗೆ, ಕತೆಗಾರ್ತಿಗೆ ಪ್ರಶಸ್ತಿ ಬಂದಿದ್ದು ನಮ್ಮೆಲ್ಲರಿಗೆ ಹೆಮ್ಮೆ ಮತ್ತು ಗೌರವ.
ಅಭಿನಂದನೆಗಳು ಬಾನು ಮುಶ್ತಾಕ್ ಮೇಡಮ್ ❤️
ಪಲ್ಲವಿ ಇಡೂರ್, ಬೆಂಗಳೂರು
-----
ಕನ್ನಡಕ್ಕೆ ಸಂತೋಷ-ಸಂಭ್ರಮ....
ಬಾನು ಮುಷ್ತಾಕ್ ಮತ್ತು ದೀಪಾ ಭಾಸ್ತಿ ಅವರಿಗೆ ಅಭಿನಂದನೆಗಳು
-ಸೂರ್ಯ ಪ್ರಕಾಶ ಪಂಡಿತ್, ಹಿರಿಯ ಪತ್ರಕರ್ತ,ಬೆಂಗಳೂರು
---------------
ಕನ್ನಡದಂತಹ ದೇಶಿ ಭಾಷೆಗಳಿಗೆ ಪ್ರತಿಷ್ಠಿತ ಬೂಕರ್‌ಪ್ರಶಸ್ತಿ ಸಿಗುವುದು ಈ ಕಾಲದ ಮಹತ್ವದ ಬೆಳವಣಿಗೆ ಹಾಗೂ ಭಾಷಾ ವೈವಿಧ್ಯತೆಯನ್ನು ಜಗತ್ತು ಸಂಭ್ರಮಿಸಲಿ
-ಕಾಂತರಾಜು ಗೊಲ್ಲರಹಟ್ಟಿ, ಬೆಂಗಳೂರು
----
ಕನ್ನಡ ಸಾಹಿತ್ಯದ ಹಿರಿಮೆ, ಗರಿಮೆಯನ್ನು ಬಾನೆತ್ತರಕ್ಕೆ ವಿಸ್ತರಿಸಿದ ಕನ್ನಡದ ಹಿರಿಯ ಸಾಹಿತಿ ಬಾನು ಮುಷ್ತಾಕ್ ಅವರ ‘ಹಸೀನಾ ಮತ್ತು ಇತರ ಕತೆಗಳು’ ಕೃತಿಯನ್ನು ಲೇಖಕಿ ದೀಪಾ ಭಸ್ತಿ ಇಂಗ್ಲಿಷ್‌ಗೆ "ಹಾರ್ಟ್ ಲ್ಯಾಂಪ್"ಸಣ್ಣ ಕಥೆಗಳ ಸಂಕಲನವಾಗಿ ಅನುವಾದಿಸಿದ ಕೃತಿಯು ಅಂತರರಾಷ್ಟ್ರೀಯ ಬೂಕರ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿರುವುದು ಹೆಮ್ಮೆಯ ಸಂಗತಿ. ಇದೇ ಮೊದಲ ಬಾರಿಗೆ ಕನ್ನಡದ ಕೃತಿಯೊಂದಕ್ಕೆ ಈ ಪ್ರತಿಷ್ಠಿತ ಪ್ರಶಸ್ತಿ ದೊರಕಿದೆ. ಕನ್ನಡದ ಕೃತಿಯೊಂದು ಈ ಮಟ್ಟಿಗೆ ಹೆಸರು ಮಾಡುವುದೆಂದರೆ ಇದ್ಕಕಿಂತ ಮಿಗಿಲಾದ ಖುಷಿ ಏನಿದೆ.
-ಸಣ್ಣಳ್ಳಿ ಹನುಮಂತ, ರಾಯಚೂರು.
---
ಹಾಸನದ ವರದಿಗಾರ್ತಿಯ ಆ ದಿನಗಳು
ಪ್ರತಿಷ್ಟಿತ ಅಂತಾರಾಷ್ಟ್ರೀಯ ಬೂಕರ್ ಪ್ರಶಸ್ತಿಗೆ ಭಾನವಾಗಿರುವ ಖ್ಯಾತ ಸಾಹಿತಿ ಮತ್ತು ಪತ್ರಕರ್ತೆ ಬಾನುಮುಷ್ತಾಕ್ ಮತ್ತು ಅನುವಾದಕಿ ದೀಪಾ ಭಸ್ತಿ ಅವರನ್ನು ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ (ಕೆಯುಡಬ್ಲೂಜೆ) ಅಭಿನಂದಿಸಿದೆ.
ಸಣ್ಣ ಕಥೆಗಳ ಅನುವಾದಿತ ಸಂಕಲನ ‘ಹಾರ್ಟ್ ಲ್ಯಾಂಪ್’ (ಹೃದಯ ದೀಪ)ಕೃತಿ ಅಂತಿಮ ಸುತ್ತಿಗೆ ಆಯ್ಕೆಯಾದ ಸಂದರ್ಭದಲ್ಲಿಯೇ
ಹಾಸನದಲ್ಲಿ ಬಾನು ಮುಷ್ತಾಕ್ ಅವರನ್ನು ಅಭಿನಂದಿಸಿ ಶುಭ ಕೋರಿದ್ದನ್ನು ನೆನಪಿಸಿರುವ ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಅವರು, ಲಂಡನ್ ನಲ್ಲಿ ಬುಕರ್ ಪ್ರಶಸ್ತಿ ಘೋಷಣೆ ಮಾಡಿದ ಕ್ಷಣ, ಕನ್ನಡಿಗರ ಪಾಲಿಗೆ ಹೆಮ್ಮೆಯ ಅಮೃತ ಘಳಿಗೆಯಾಗಿದೆ ಎಂದು ಶ್ಲಾಘಿಸಿದ್ದಾರೆ.
ಹಾಸನದಿಂದ ಪಿ.ಲಂಕೇಶ್ ಪತ್ರಿಕೆಗೆ ವರದಿಗಾರರಾಗಿದ್ದ ಭಾನುಮುಷ್ತಾಕ್ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದರು. ವಕೀಲರಾಗಿ, ನಗರಸಭೆ ಸದಸ್ಯರಾಗಿ ಹಾಗೂ ಪ್ರಗತಿಪರ ಸಾಹಿತಿಯಾಗಿ ಗುರುತಿಸಿಕೊಂಡವರು. ಅನ್ಯಾಯದ ವಿರುದ್ದ ಧ್ವನಿ ಎತ್ತಿದವರು. ಸಂಘ ಸಂಸ್ಥೆಗಳಲ್ಲಿ ಸಂಘಟಕಿಯಾಗಿಯೂ ಕೆಲಸ ಮಾಡಿದವರು. ಅವರ ಹೃದಯ ದೀಪ ಕೃತಿ ಬುಕರ್ ಪ್ರಶಸ್ತಿಯನ್ನು ಗೆದ್ದಿರುವುದು ಕನ್ನಡಿಗರ ಹೃದಯ ಗೆದ್ದಂತಾಗಿದೆ. ಹೃದಯ ದೀಪ, ಕನ್ನಡದ ದೀಪವಾಗಿ ಜಗದೆಲ್ಲೆಡೆ ಪ್ರಜ್ವಲಿಸಲಿ ಎಂದು ಅವರು ಶುಭ ಹಾರೈಸಿದ್ದಾರೆ.
ಗಿರೀಶ್ ಕಾಸರವಳ್ಳಿ ನಿರ್ದೇಶನ ಮಾಡಿದ ಹಸೀನಾ ಚಲನಚಿತ್ರ ಕಥೆ ಕೂಡ ಬಾನುಮುಷ್ತಾಕ್ ಅವರ ಹಸೀನಾ ಮತ್ತು ಇತರ ಕಥೆಗಳಿಂದಲೇ ಆಯ್ಕೆ ಮಾಡಿದ್ದು. ಹಸೀನಾ ಚಿತ್ರಕ್ಕೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಿದ ಸಂದರ್ಭದಲ್ಲಿ ಇಡೀ ತಂಡವನ್ನು ಹಾಸನಕ್ಕೆ ಆಹ್ವಾನಿಸಿದ್ದ, ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಕಲಾಭವನದಲ್ಲಿ ಏರ್ಪಡಿಸಿದ್ದ ಅದ್ದೂರಿ ಕಾರ್ಯಕ್ರಮದಲ್ಲಿ ಸನ್ಮಾನಿಸಿತ್ತು. ಕೆಲ ಘಟನೆಗಳ ಸಂಕಷ್ಟದ ಸಂದರ್ಭದಲ್ಲಿಯೂ ಬಾನುಮುಷ್ತಾಕ್ ಅವರ ಜೊತೆಗೆ ಬೆಂಬಲವಾಗಿ ನಿಂತಿದ್ದು ಮರೆಯಲಾಗದ ಕ್ಷಣ ಎನ್ನುವುದನ್ನು ಶಿವಾನಂದ ತಗಡೂರು ಅವರು ಸ್ಮರಿಸಿದ್ದಾರೆ.
ವಿಭಾಗ