BPL ration card: ಕೇಂದ್ರದ ಮಾನದಂಡದಂತೆ ಅನರ್ಹರ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸಿ; ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ 4 ಅಂಶಗಳ ಸೂಚನೆ
BPL ration card: ಕೇಂದ್ರ ಸರ್ಕಾರದ ಮಾನದಂಡ ಪ್ರಕಾರವೇ ಅನರ್ಹರ ಬಿಪಿಎಲ್ ಪಡಿತರ ಚೀಟಿ ರದ್ದುಗೊಳಿಸುವ ಕೆಲಸ ಮಾಡಬೇಕು. ಅದನ್ನು ಹಂತ ಹಂತವಾಗಿ ನೆರವೇರಿಸಬೇಕು ಎಂದು ಅಧಿಕಾರಿಗಳಿಗೆ ಸಿಎಂ ಸಿದ್ದರಾಮಯ್ಯ 4 ಅಂಶಗಳ ಸೂಚನೆ ನೀಡಿದರು. ಅದರ ವಿವರ ಇಲ್ಲಿದೆ.
BPL ration card: ಬಡತನ ರೇಖೆಗೆ ಸಂಬಂಧಿಸಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮಾನದಂಡದ ಪ್ರಕಾರವೇ ಕರ್ನಾಟಕದಲ್ಲಿ ಅನರ್ಹರ ಬಳಿ ಇರುವಂತಹ ಬಿಪಿಎಲ್ ಕಾರ್ಡ್ (ಬಿಪಿಎಲ್ ಪಡಿತರ ಚೀಟಿ) ರದ್ದುಗೊಳಿಸುವುದಕ್ಕೆ ಕ್ರಮ ತೆಗೆದುಕೊಳ್ಳಬೇಕು. ಈ ಕಾರ್ಯ ಹಂತ ಹಂತವಾಗಿ ನಡೆಯಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಸಚಿವರು ಹಾಗೂ ಅಧಿಕಾರಿಗಳಿಗೆ ಸ್ಪಷ್ಟ ನಿರ್ದೇಶನ ನೀಡಿದರು.
ಬೆಂಗಳೂರಿನಲ್ಲಿರುವ ಗೃಹಕಚೇರಿ ಕೃಷ್ಣಾದಲ್ಲಿ ಗುರುವಾರ (ಜನವರಿ 9) ಆಹಾರ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರಇಲಾಖಾ ಪ್ರಗತಿ ಪರಿಶೀಲನೆ ನಡೆಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಅರ್ಹರ ಪಡಿತರ ಚೀಟಿ ರದ್ದುಗೊಳ್ಳದಂತೆ ವಿಶೇಷ ಕಾಳಜಿವಹಿಸಬೇಕು ಎಂದು ಅಧಿಕಾರಿಗಳನ್ನು ಎಚ್ಚರಿಸಿದ್ದಾರೆ.
ಅನರ್ಹರ ಬಿಪಿಎಲ್ ಕಾರ್ಡ್ ರದ್ದು; ಮುಖ್ಯಮಂತ್ರಿ ಸಿದ್ದರಾಮಯ್ಯ 4 ಅಂಶಗಳ ಸೂಚನೆ
1) ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಬಡತನ ರೇಖೆಗೆ ಸಂಬಂಧಿಸಿದ ಮಾನದಂಡಗಳನ್ನು ಅನುಸರಿಸಿ ಕರ್ನಾಟಕದಲ್ಲಿ ಅನರ್ಹರ ಬಳಿ ಇರುವಂತಹ ಪಡಿತರ ಚೀಟಿಗಳನ್ನು ಗುರುತಿಸಬೇಕು. ಹಂತ ಹಂತವಾಗಿ ಅವುಗಳನ್ನು ರದ್ದುಗೊಳಿಸಬೇಕು.
2) ಕೇಂದ್ರ ಸರ್ಕಾರದ ಮಾನದಂಡ ಉಲ್ಲಂಘಿಸಿ ಲಕ್ಷಾಂತರ ಕುಟುಂಬಗಳು ಬಿಪಿಎಲ್ ಕಾರ್ಡ್ ಪಡೆದುಕೊಂಡಿರುವುದು ಇಲಾಖಾ ಪರಿಶೀಲನೆಯಲ್ಲಿ ಕಂಡುಬಂದಿದೆ. ಅನರ್ಹರ ಬಿಪಿಎಲ್ ಕಾರ್ಡುಗಳನ್ನು ರದ್ದು ಮಾಡುವ ಮೊದಲು ಅವರಿಗೆ ತಾವಾಗಿಯೇ ತಮ್ಮ ಬಿಪಿಎಲ್ ಕಾರ್ಡುಗಳನ್ನು ಹಿಂತಿರುಗಿಸಲು ಕಾಲಾವಕಾಶ ನೀಡಬೇಕು.
3) ಸಮಯಾವಕಾಶ ನೀಡಿದ ಬಳಿಕವೂ ಅನರ್ಹರಾದವರು ಕಾರ್ಡುಗಳನ್ನು ವಾಪಸ್ ನೀಡುವುದಿಲ್ಲವೋ ಅಂಥವರಿಗೆ ನೋಟಿಸ್ ನೀಡಬೇಕು. ಬಳಿಕ ಕಾರ್ಡುಗಳನ್ನು ರದ್ದುಗೊಳಿಸಲು ಕ್ರಮ ಕೈಗೊಳ್ಳಬೇಕು.
4) ಒಟ್ಟಿನಲ್ಲಿ ಕೇಂದ್ರ ಸರ್ಕಾರದ ಮಾನದಂಡಗಳ ಅನುಸಾರ ಯಾರು ಅರ್ಹತೆ ಹೊಂದಿದ್ದಾರೆ ಅಂತಹವರಿಗೆ ಮಾತ್ರ ಬಿಪಿಎಲ್ ಕಾರ್ಡು ಇರಬೇಕು. ಅನರ್ಹರು ಕಾರ್ಡು ಪಡೆದಿದ್ದರೆ ರದ್ದುಪಡಿಸಲು ಹಂತ ಹಂತವಾಗಿ ಕ್ರಮ ಕೈಗೊಳ್ಳಬೇಕು.
ಆಹಾರ ಸಚಿವ ಕೆಎಚ್ ಮುನಿಯಪ್ಪ ಹೇಳಿದ್ದಿಷ್ಟು
ಕರ್ನಾಟಕದಲ್ಲಿ ಈಗಾಗಲೇ 4000 ಸರ್ಕಾರಿ ನೌಕರರನ್ನು ಬಿಪಿಎಲ್ ಕಾರ್ಡುದಾರರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಸರ್ಕಾರಿ ನೌಕರರಲ್ಲದೆ ಆದಾಯ ತೆರಿಗೆ ವ್ಯಾಪ್ತಿಗೆ ಬರುವವರು ಸೇರಿ ಕೇಂದ್ರ ಸರ್ಕಾರದ ಮಾನದಂಡಗಳನ್ನು ಹೊಂದಿಲ್ಲದ ಲಕ್ಷಾಂತರ ಕುಟುಂಬಗಳು ಬಿಪಿಎಲ್ ಕಾರ್ಡುಗಳನ್ನು ಹೊಂದಿರುವುದು ಇಲಾಖಾ ಪರಿಶೀಲನೆಯಲ್ಲಿ ಕಂಡುಬಂದಿದೆ. ಆದರೆ, ಅವುಗಳನ್ನು ರದ್ದುಪಡಿಸಲು ಮುಂದಾದಾಗ ಪ್ರತಿಪಕ್ಷದವರು ರಾಜಕೀಯವಾಗಿ ಅದನ್ನು ಬಳಸಲಾರಂಭಿಸಿದರು. ಹೀಗಾಗಿ ತಾತ್ಕಾಲಿಕವಾಗಿ ಅದನ್ನು ನಿಲ್ಲಿಸಲಾಗಿದೆ. ಮುಖ್ಯಮಂತ್ರಿಗಳು ಅನುಮತಿ ನೀಡಿದರೆ ಅನರ್ಹರ ಬಿಪಿಎಲ್ ಕಾರ್ಡ್ ರದ್ದುಗೊಳಿಸುವ ಕೆಲಸ ಮುಂದುವರಿಸುವುದಾಗಿ ಸಚಿವ ಕೆಎಚ್ ಮುನಿಯಪ್ಪ ಹೇಳಿದರು. ಇದಕ್ಕೆ ಪ್ರತಿಕ್ರಿಯೆಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ 4 ಅಂಶಗಳ ಸ್ಪಷ್ಟ ಸೂಚನೆ ನೀಡಿದರು.
ಕನಿಷ್ಠ ಬೆಂಬಲ ಬೆಲೆಗೆ ಆಹಾರ ಧಾನ್ಯ ಖರೀದಿಗೆ ಸೂಚನೆ
ಕರ್ನಾಟಕದಲ್ಲಿ ಕನಿಷ್ಠ ಬೆಂಬಲ ಬೆಲೆಯಲ್ಲಿ ಆಹಾರ ಧಾನ್ಯಗಳನ್ನು ಖರೀದಿಸಲು ವ್ಯವಸ್ಥೆ ಮಾಡಬೇಕು. ಈ ವಿಚಾರದಲ್ಲಿ ರೈತರಿಗೆ ಯಾವುದೇ ತೊಂದರೆಯಾಗಬಾರದು. ಇದಕ್ಕಾಗಿ ಎಲ್ಲ ಅಗತ್ಯ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದರು.
ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ ಪ್ರಕಾರ, ಕರ್ನಾಟಕದಲ್ಲಿ ಇತರೆ ರಾಜ್ಯಗಳ 13,383 ಫಲಾನುಭವಿಗಳು ಪಡಿತರ ಸೌಲಭ್ಯ ಪಡೆಯುತ್ತಿದ್ದಾರೆ. ಅನ್ನ-ಸುವಿಧಾ ಯೋಜನೆಯಡಿ 80 ವರ್ಷ ಮೇಲ್ಪಟ್ಟ ಒಂಟಿ ವ್ಯಕ್ತಿಗಳ ಮನೆ ಬಾಗಿಲಿಗೆ ಆಹಾರ ಧಾನ್ಯಗಳನ್ನು ಒದಗಿಸಲಾಗುತ್ತಿದ್ದು, 8,500 ಪಡಿತರ ಚೀಟಿದಾರರು ಪ್ರಯೋಜನ ಪಡೆಯುತ್ತಿದ್ದಾರೆ. ಕರ್ನಾಟಕದಲ್ಲಿ ಒಟ್ಟು 1,53,69,945 ಪಡಿತರ ಚೀಟಿಗಳಿದ್ದು, 5,30,88,636 ಸದಸ್ಯ ಫಲಾನುಭವಿಗಳಿದ್ದಾರೆ. ಈ ಪೈಕಿ ಬಿಪಿಎಲ್ ಕಾರ್ಡುದಾರರಿಗೆ ಅನ್ನಭಾಗ್ಯ ಯೋಜನೆಯ ನೇರ ನಗದು ವರ್ಗಾವಣೆಯಡಿ 4,692 ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಅಕ್ಟೋಬರ್ ಅಂತ್ಯದವರೆಗೆ 3,253 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ. 4,44,48,294 ಫಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ ಎಂದು ಆಹಾರ ಸಚಿವ ಮುನಿಯಪ್ಪ ಹೇಳಿದರು.