ಮದ್ಯಪ್ರಿಯರಿಗೆ ಗುಡ್ ನ್ಯೂಸ್; ಇಂದಿನಿಂದ ದುಬಾರಿ ಮದ್ಯ ಅಗ್ಗ, ಯಾವ ಬ್ರ್ಯಾಂಡ್‌ಗೆ ಎಷ್ಟು ಬೆಲೆ?-branded and expensive liquor is cheap from august 27th alcohol price in bengaluru karnataka govt excise duty mrt ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  ಮದ್ಯಪ್ರಿಯರಿಗೆ ಗುಡ್ ನ್ಯೂಸ್; ಇಂದಿನಿಂದ ದುಬಾರಿ ಮದ್ಯ ಅಗ್ಗ, ಯಾವ ಬ್ರ್ಯಾಂಡ್‌ಗೆ ಎಷ್ಟು ಬೆಲೆ?

ಮದ್ಯಪ್ರಿಯರಿಗೆ ಗುಡ್ ನ್ಯೂಸ್; ಇಂದಿನಿಂದ ದುಬಾರಿ ಮದ್ಯ ಅಗ್ಗ, ಯಾವ ಬ್ರ್ಯಾಂಡ್‌ಗೆ ಎಷ್ಟು ಬೆಲೆ?

ಕರ್ನಾಟಕದಲ್ಲಿ ಬ್ರಾಂಡೆಡ್‌ ಮದ್ಯಗಳು ಇಂದಿನಿಂದ ಅಗ್ಗವಾಗಲಿದೆ. ಪ್ರೀಮಿಯಂ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಇಳಿಕೆ ಮಾಡಿರುವ ಸರ್ಕಾರ, ಮದ್ಯಪ್ರಿಯರಿಗೆ ಗುಡ್‌ ನ್ಯೂಸ್‌ ಕೊಟ್ಟಿದೆ. (ವರದಿ: ಎಚ್. ಮಾರುತಿ, ಬೆಂಗಳೂರು)

ಮದ್ಯಪ್ರಿಯರಿಗೆ ಗುಡ್ ನ್ಯೂಸ್; ಇಂದಿನಿಂದ ದುಬಾರಿ ಮದ್ಯ ಅಗ್ಗ
ಮದ್ಯಪ್ರಿಯರಿಗೆ ಗುಡ್ ನ್ಯೂಸ್; ಇಂದಿನಿಂದ ದುಬಾರಿ ಮದ್ಯ ಅಗ್ಗ (pixabay)

ಮದ್ಯಪ್ರಿಯರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಇಂದಿನಿಂದಲೇ (ಆಗಸ್ಟ್‌ 27) ಹೊಸ ದರದಲ್ಲಿ ಮದ್ಯ ಖರೀದಿಸಿ ಆನಂದಿಸಬಹುದು. ದುಬಾರಿ ದರದ (ಪ್ರೀಮಿಯಂ) ಬ್ರ್ಯಾಂಡ್‌ಗಳ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಇಳಿಕೆ ಮಾಡಿ ಅಬಕಾರಿ ಇಲಾಖೆ ಆದೇಶ ಹೊರಡಿಸಿದೆ. ಹೀಗಾಗಿ ಮಂಗಳವಾರದಿಂದಲೇ ಪ್ರೀಮಿಯಂ ಬ್ರ್ಯಾಂಡ್‌ಗಳ ಮದ್ಯದ ದರದಲ್ಲಿ ಶೇ.15ರಿಂದ ಶೇ.20ರಷ್ಟು ಇಳಿಕೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.

2024-25ರ ಬಜೆಟ್‌ ಮಂಡಿಸುವಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ದುಬಾರಿ ಬೆಲೆಯ ಮದ್ಯದ ದರಗಳನ್ನು ನೆರೆಯ ರಾಜ್ಯಗಳಿಗೆ ಸರಿಸಮನಾಗಿ ಪರಿಷ್ಕರಣೆ ಮಾಡುವುದಾಗಿ ಭರವಸೆ ನೀಡಿದ್ದರು.

ಅಬಕಾರಿ ಇಲಾಖೆಯು ಜೂನ್‌ ತಿಂಗಳಲ್ಲೇ ಕರಡು ಅಧಿಸೂಚನೆ ಹೊರಡಿಸಿ ಜುಲೈ 1ರಿಂದ ದರ ಇಳಿಕೆಗೆ ನಿರ್ಧಾರ ಮಾಡಿತ್ತು. ಆದರೆ ಆರ್ಥಿಕ ಇಲಾಖೆಯ ಸೂಚನೆಯಂತೆ ದರ ಪರಿಷ್ಕರಣೆಯನ್ನು ತಡೆಹಿಡಿಯಲಾಗಿತ್ತು. ಇದೀಗ ಆಕ್ಷೇಪಣೆ ಮತ್ತು ಸಲಹೆಗಳನ್ನು ಪರಿಶೀಲಿಸಿ ವಿಲೇವಾರಿ ಮಾಡಿರುವ ಅಬಕಾರಿ ಇಲಾಖೆ, ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಪರಿಷ್ಕರಿಸಿ ಆಗಸ್ಟ್ 23ರಂದು ಅಂತಿಮ ಅಧಿಸೂಚನೆ ಹೊರಡಿಸಿದೆ. ಆಗಸ್ಟ್ 27ರ ಮಂಗಳವಾರದಿಂದಲೇ ಪರಿಷ್ಕೃತ ದರಗಳು ರಾಜ್ಯಾದ್ಯಂತ ಜಾರಿಗೆ ಬರಲಿವೆ.

ಸ್ಲ್ಯಾಬ್‌ಗಳ ಸಂಖ್ಯೆ ಇಳಿಕೆ

ರಾಜ್ಯದಲ್ಲಿ ಇದುವರೆಗೆ 18 ಸ್ಲ್ಯಾಬ್‌ಗಳಲ್ಲಿ ಮದ್ಯದ ಮೇಲೆ ಅಬಕಾರಿ ತೆರಿಗೆ ವಿಧಿಸಲಾಗುತ್ತಿತ್ತು. ಇದೀಗ ಸ್ಲ್ಯಾಬ್‌ಗಳ ಸಂಖ್ಯೆಯನ್ನು 16ಕ್ಕೆ ಇಳಿಕೆ ಮಾಡಲಾಗಿದೆ. ಪ್ರತಿ ಬಲ್ಕ್ ಲೀಟರ್ ಮದ್ಯದ ಘೋಷಿತ ಉತ್ಪಾದನಾ ದರ ರೂ. 449 ಮೊದಲ ಸ್ಲ್ಯಾಬ್‌ನಲ್ಲಿದ್ದರೆ, 15,001ರಿಂದ ಮೇಲಿನ ಘೋಷಿತ ದರದ ಎಲ್ಲ ಮದ್ಯಗಳನ್ನು 18ನೇ ಸ್ಲ್ಯಾಬ್‌ ನಲ್ಲಿಡಲಾಗಿತ್ತು. ಪರಿಷ್ಕೃತ ಪಟ್ಟಿಯ ಪ್ರಕಾರ, ಪ್ರತಿ ಬಲ್ಕ್ ಲೀಟರ್‌ನ ಘೋಷಿತ ಉತ್ಪಾದನಾ ದರ ರೂ. 450 ಹೊಂದಿರುವ ಮದ್ಯ ಮೊದಲ ಸ್ಲ್ಯಾ ಬ್‌ನಲ್ಲಿದ್ದರೆ, ರೂಪಾಯಿ 20,001 ಮತ್ತು ಅದಕ್ಕಿಂತ ಹೆಚ್ಚಿನ ಘೋಷಿತ ಉತ್ಪಾದನಾ ದರ ಹೊಂದಿರುವ ಮದ್ಯವನ್ನು 16ನೇ ಸ್ಲ್ಯಾಬ್‌ಗೆ ಸೇರ್ಪಡೆ ಮಾಡಲಾಗಿದೆ.

5ರಿಂದ 16ನೇ ಸ್ಲ್ಯಾಬ್‌ವರೆಗಿನ ಮದ್ಯದ ದರಗಳಲ್ಲಿ ಇಳಿಕೆಯಾಗಲಿದೆ. ಬಲ್ಲ ಮೂಲಗಳ ಪ್ರಕಾರ, ಈವರೆಗಿನ ದರಕ್ಕೆ ಹೋಲಿಸಿದರೆ ಶೇ.15ರಿಂದ ಶೇ.20ರಷ್ಟು ದರ ಇಳಿಕೆ ಆಗಲಿದೆ ಎಂದು ಅಬಕಾರಿ ಇಲಾಖೆ ಮೂಲಗಳು ಮತ್ತು ಮದ್ಯ ವ್ಯಾಪಾರಿಗಳು ತಿಳಿಸಿದ್ದಾರೆ.

ತಡವಾಗಿದ್ದು ಏಕೆ?

ಉತ್ಪಾದನಾ ವೆಚ್ಚದ ಮಾಹಿತಿಯನ್ನು ಹಂಚಿಕೊಳ್ಳಲು ಮದ್ಯ ಉತ್ಪಾದಕ ಕಂಪನಿಗಳು ಆಕ್ಷೇಪ ಎತ್ತಿರುವುದರಿಂದ ಮದ್ಯದ ದರಗಳ ಇಳಿಕೆ ಮುಂದಕ್ಕೆ ಹೋಗಿತ್ತು. ಮದ್ಯ ಉತ್ಪಾದನಾ ಕಂಪನಿಗಳು ದರ ನಿಗದಿಯಲ್ಲಿ ತಾರತಮ್ಯ ಎಸಗುತ್ತಿವೆ. ಬೇರೆ ರಾಜ್ಯಗಳಿಗೆ ಕಡಿಮೆ ಮೊತ್ತದ ಘೋಷಿತ ದರ ನಿಗದಿಪಡಿಸಿದ್ದರೆ ಕರ್ನಾಟಕದಲ್ಲಿ ಹೆಚ್ಚಿನ ಮೊತ್ತದ ಘೋಷಿತ ದರ ನಿಗದಿಪಡಿಸುತ್ತಿವೆ. ಇದಕ್ಕೆ ನಿಯಂತ್ರಣ ಹಾಕಲು ಲೆಕ್ಕಪರಿಶೋಧಕರು ಮತ್ತು ವೆಚ್ಚ ಪರಿಶೋಧಕರ ಪ್ರಮಾಣ ಪತ್ರಗಳೊಂದಿಗೆ ಪ್ರತಿ ಬ್ರ್ಯಾಂಡ್ ಮದ್ಯದ ಉತ್ಪಾದನಾ ವೆಚ್ಚಕ್ಕೆ ಸಂಬಂಧಿಸಿದ ಮಾಹಿತಿಯನ್ನು ಹಂಚಿಕೊಳ್ಳುವುದನ್ನು ಕಡ್ಡಾಯಗೊಳಿಸಲು ಅಬಕಾರಿ ಇಲಾಖೆ ನಿರ್ಧರಿಸಿತ್ತು.

ಆದರೆ ಮದ್ಯ ಉತ್ಪಾದನಾ ಕಂಪನಿಗಳು ಹೆಚ್ಚುವರಿ ಅಬಕಾರಿ ತೆರಿಗೆ ಇಳಿಸುವುದು ಸರ್ಕಾರಕ್ಕೆ ಬಿಟ್ಟ ನಿರ್ಧಾರವಾಗಿದೆ. ಅದಕ್ಕಾಗಿ ಉತ್ಪಾದನಾ ವೆಚ್ಚದ ಮಾಹಿತಿ ಹಂಚಿಕೊಳ್ಳಲು ಸಾಧ್ಯವಾಗದು ಎಂದು ಹಲವು ಉತ್ಪಾದಕರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಇದರಿಂದ ಭವಿಷ್ಯದಲ್ಲಿ ಕಾನೂನು ತೊಡಕುಂಟಾಗುವ ಸಂಭವ ಎದುರಾಗಬಹುದು. ಆದ್ದರಿಂದ ಉತ್ಪಾದನಾ ಕಂಪನಿಗಳ ತಕರಾರು ಕುರಿತು ಬಗ್ಗೆ ಪರಿಶೀಲಿಸಲು ದರ ಇಳಿಕೆಯ ನಿರ್ಧಾರವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು.

ಕಾಂಗ್ರೆಸ್‌ ಸರ್ಕಾರ ಆದಾಯ ಸಂಗ್ರಹವನ್ನು ಹೆಚ್ಚಿಸಿಕೊಳ್ಳಲು ಮದ್ಯದ ಮೇಲಿನ ಅಬಕಾರಿ ತೆರಿಗೆಯನ್ನು ನಿರಂತರವಾಗಿ ಹೆಚ್ಚಿಸುತ್ತಾ ಬಂದಿತ್ತು. 2023ರ ಜುಲೈನಲ್ಲಿ ದೇಶೀಯ ಮದ್ಯದ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಹೆಚಿಸಿದ್ದರೆ 2024ರ ಜನವರಿಯಲ್ಲಿ ಬಿಯರ್‌ ಮೇಲಿನ ಹೆಚ್ಚುವರಿ ಅಬಕಾರಿ ತೆರಿಗೆಯನ್ನು ಹೆಚ್ಚಿಸಿತ್ತು. ಇದೇ ಮೊದಲ ಬಾರಿಗೆ ತೆರಿಗೆಯನ್ನು ಕಡಿಮೆ ಮಾಡುವ ನಿರ್ಧಾರವನ್ನು ಕೈಗೊಳ್ಳಲಾಗಿತ್ತು. ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಮದ್ಯದ ಬೆಲೆ ಹೆಚ್ಚು. ಗಡಿ ಭಾಗದ ಸಾರ್ವಜನಿಕರು ನೆರೆಯ ರಾಜ್ಯಗಳಿಗೆ ಹೋಗಿ ಮದ್ಯ ಖರೀದಿಸುತ್ತಿದ್ದು, ರಾಜ್ಯದ ವರಮಾನದಲ್ಲಿ ಖೋತಾ ಆಗಿತ್ತು. ಆದ್ದರಿಂದ ಮದ್ಯ ಮಾರಾಟವನ್ನು ಹೆಚ್ಚಳ ಮಾಡಿ ಅಬಕಾರಿ ತೆರಿಗೆ ಮೂಲದ ವರಮಾನವನ್ನು ಹೆಚ್ಚಿಸಿಕೊಳ್ಳುವ ಉದ್ದೇಶ ಹೊಂದಿದೆ.