BBMP Budget 2025: ಬಿಬಿಎಂಪಿ ಬಜೆಟ್ ಮಂಡನೆ ದಿಢೀರ್ ಶನಿವಾರಕ್ಕೆ ಮುಂದೂಡಿಕೆ; 18 ಸಾವಿರ ಕೋಟಿ ರೂ. ಆಯವ್ಯಯ ನಿರೀಕ್ಷೆ
BBMP Budget 2025: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬಜೆಟ್ ಅನ್ನು ಮಾರ್ಚ್ 29ರ ಶನಿವಾರ ಮಂಡಿಸಲು ಸಿದ್ದತೆ ಮಾಡಿಕೊಳ್ಳಲಾಗಿದೆ.ವರದಿ:ಎಚ್.ಮಾರುತಿ. ಬೆಂಗಳೂರು

BBMP Budget 2025:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 2025-26ನೇ ಸಾಲಿನ ಬಜೆಟ್ ಮಂಡನೆ ಮತ್ತೆ ಮುಂದೂಡಲ್ಪಟ್ಟಿದೆ. ಮಾರ್ಚ್ 27ರ ಗುರುವಾರ ಬೆಳಿಗ್ಗೆ 11ಕ್ಕೆ ಬಜೆಟ್ ಮಂಡನೆಯಾಗಲಿದೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದ್ದರು. ನಂತರ ಬಜೆಟ್ ಅನ್ನು ಮಾರ್ಚ್ 28ರಂದು ಮಂಡಿಸುವುದಾಗಿ ತಿಳಿಸಲಾಗಿತ್ತು. ಆದರೆ ದಿಢೀರನೆ ಮತ್ತೆ ಬಜೆಟ್ ದಿನವನ್ನು ಮುಂದೂಡಲಾಗಿದ್ದು, ಮಾರ್ಚ್ 29ರ ಶನಿವಾರ ಬೆಳಿಗ್ಗೆ 11ಕ್ಕೆ ಮಂಡನೆಯಾಗುತ್ತದೆ ಎಂದು ತಿಳಿಸಲಾಗಿದೆ. ಪಾಲಿಕೆ ಸದಸ್ಯರಿಲ್ಲದೆ ಸತತ ಐದನೇ ಬಾರಿಗೆ ಅಧಿಕಾರಿಗಳೇ 2025-26ನೇ ಸಾಲಿನ ಪಾಲಿಕೆ ಬಜೆಟ್ ಮಂಡಿಸಲು ಸಿದ್ಧತೆ ನಡೆಸುತ್ತಿದ್ದಾರೆ.
ಪ್ರತಿ ಬಾರಿ ಸರಾಸರಿ ಶೇ.5 ರಿಂದ 8ರಷ್ಟು ಏರಿಕೆಯಾಗುತ್ತಿದ್ದ ಪಾಲಿಕೆ ಬಜೆಟ್ ಗಾತ್ರ ಈ ಬಾರಿ ಶೇ.40 ರಷ್ಟು ಏರಿಕೆ ಕಾಣಲಿದೆ ಎಂದು ಪಾಲಿಕೆ ಮೂಲಗಳು ತಿಳಿಸಿವೆ.
2024-25ರಲ್ಲಿ ಬಿಬಿಎಂಪಿ 12,371.63 ಕೋಟಿ ರೂಪಾಯಿಗಳ ಬಜೆಟ್ ಮಂಡಿಸಿತ್ತು. ರಾಜ್ಯ ಸರ್ಕಾರ 7,000 ಕೋಟಿ ರೂ. ಅನುದಾನ ಒದಗಿಸಿದ್ದು, ಪ್ರಸಕ್ತ ಸಾಲಿನಲ್ಲಿ ಬಜೆಟ್ ಗಾತ್ರ 18 ಸಾವಿರ ಕೋಟಿ ರೂ. ದಾಟಲಿದೆ. 2024-25ನೇ ಸಾಲಿನ ಆರ್ಥಿಕ ವರ್ಷ ಮಾ.31 ರಂದು ಮುಗಿಯಲಿದ್ದು, ಆ ಅವಧಿಯೊಳಗೆ ಬಜೆಟ್‌ಗೆ ರಾಜ್ಯ ಸರ್ಕಾರದಿಂದ ಅನುಮೋದನೆ ಪಡೆಯಬೇಕಿದೆ.
ಈ ವರ್ಷದ ಬಜೆಟ್ ನಲ್ಲಿ ರಸ್ತೆ ಗುಂಡಿಗಳಿಗೆ ಮುಕ್ತಿ, ನಗರ ಸ್ವಚ್ಛತೆ, ಸುಗಮ ಸಂಚಾರ, ಹಸಿರೀಕರಣ, ಆರೋಗ್ಯ ಮತ್ತು ಶಿಕ್ಷಣಕ್ಕೆ ಒತ್ತು ಸಿಗಲಿದೆ. ಈ ಮೂಲಕ ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಲು ಉದ್ದೇಶಿಸಿದೆ. ಪ್ರಮುಖ ರಸ್ತೆಗಳನ್ನು ಸಿಗ್ನಲ್ ಮುಕ್ತಗೊಳಿಸುವ ಹಾಗೂ ತೀವ್ರವಾಗಿ ಕಾಡುತ್ತಿರುವ ಘನತ್ಯಾಜ್ಯ ನಿರ್ವಹಣೆ ಸಮಸ್ಯೆಯನ್ನುಪರಿಹರಿಸಲು ಯೋಜನೆಗಳನ್ನು ರೂಪಿಸುವ ಸಾಧ್ಯತೆಗಳಿವೆ ಎಂದು ಪಾಲಿಕೆ ಮೂಲಗಳು ಹೇಳಿವೆ.
ನಗರದ ನಾಗರೀಕರಿಗೆ ಯಾವುದೇ ಹೊಸ ತೆರಿಗೆಯನ್ನು ವಿಧಿಸದೆ ವರಮಾನವನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ. ಜಾಹೀರಾತು ವಿಭಾಗದಿಂದ ಈ ವರ್ಷ 750 ಕೋಟಿ ರೂ. ಆದಾಯ ನಿರೀಕ್ಷಿಸಲಾಗಿದೆ. ಹಾಗೆಯೇ ದೊಡ್ಡ ದೊಡ್ಡ ಬಿಲ್ಡರ್ ಗಳಿಗೆ ಬಹು ಮಹಡಿ ಕಟ್ಟಡ ಕಟ್ಟಲು ಅನುಕೂಲವಾಗುವಂತಹ ಪ್ರೀಮಿಯಮ್ ಫ್ಲೋರ್ ಏರಿಯಾ ರೇಶಿಯೊ (FAR) ಯೋಜನೆ ಪ್ರಕಟಿಸಿ ಆ ಮೂಲಕ ಸಂಪನ್ಮೂಲ ಕ್ರೋಢೀಕರಣಕ್ಕೆ ಪಾಲಿಕೆ ಮುಂದಾಗಿದೆ.
ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಕನಸಿನ ಯೋಜನೆ ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡುವ 40,000 ಕೋಟಿ ರೂ.ಗಳ ಮಹತ್ವಾಕಾಂಕ್ಷೆಯ ಪೂರ್ವ-ಪಶ್ಚಿಮ ಮತ್ತು ಉತ್ತರ-ದಕ್ಷಿಣ ಸುರಂಗ ಮಾರ್ಗದ ನಿರ್ಮಾಣ ಕುರಿತು ಪ್ರಸ್ತಾಪವಾಗಲಿದೆ.
ರಸ್ತೆಗಳಲ್ಲಿ ನೀರು ನಿಲ್ಲುವ ಸಮಸ್ಯೆ, ಕೆರೆ ಪುನರುಜ್ಜೀವನ ಮತ್ತು ಪ್ರವಾಹ ನಿಯಂತ್ರಣ, ರಸ್ತೆ ಕಾಮಗಾರಿ, ಅಪಾರ್ಟ್ ಮೆಂಟ್ ಖರೀದಿಗೆ ಸಹಾಯ ಧನ ನೀಡುವುದು, ಪಾಲಿಕೆಯ 20 ಆಸ್ಪತ್ರೆಗಳನ್ನು ಮೇಲ್ದರ್ಜೆಗೆ ಏರಿಸುವುದು, ರೋಗಪತ್ತೆಗಾಗಿ ಡಯಾಗ್ನಾಸ್ಟಿಕ್ ಕೇಂದ್ರಗಳ ಸ್ಥಾಪನೆ ಮಾಡಲಾಗುತ್ತದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ಹೇಳುತ್ತಾರೆ.
ಪಾಲಿಕೆ ವ್ಯಾಪ್ತಿಯಲ್ಲಿ ಸದ್ಯ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಹೊಸದಾಗಿ ಎರಡು ಸಂತಾನ ನಿಯಂತ್ರಣ ಕೇಂದ್ರಗಳನ್ನು (ಎಬಿಸಿ) ತೆರೆಯಲು ಉದ್ದೇಶಿಸಲಾಗಿದೆ. ಪಾಲಿಕೆ ವ್ಯಾಪ್ತಿಯ 181 ಕೆರೆಗಳ ವಾರ್ಷಿಕ ನಿರ್ವಹಣೆಗಾಗಿ 250 ಕೋಟಿ ರೂ. ಮತ್ತು ಶಿಕ್ಷಣಕ್ಕೆ 133.35 ಕೋಟಿ ರೂ. ಅನುದಾನಕ್ಕೆ ಬೇಡಿಕೆ ಇರಿಸಲಾಗಿದೆ.
ಆದರೂ ಅನುದಾನವನ್ನು ಪಾಲಿಕೆ ಹೇಗೆ ಖರ್ಚು ಮಾಡುತ್ತದೆ ಎನ್ನುವುದು ನಿಗೂಢವಾಗಿದೆ. ಪ್ರತಿ ವಾರ್ಡ್ ಗೆ ಎಷ್ಟು ಹಂಚಿಕೆ ಮಾಡಲಿದೆ, ಇಡೀ ನಗರಕ್ಕೆ ಯಾವ ಯಾವ ಯೋಜನೆಗಳನ್ನು ರೂಪಿಸುತ್ತದೆ, ಯಾವ ಆಧಾರದ ಮೇಲೆ ಅನುದಾನ ನಿಗದಿಪಡಿಸುತ್ತದೆ ಎಂಬ ಪ್ರಶ್ನೆಗಳಿಗೆ ಉತ್ತರ ರಹಸ್ಯವಾಗಿದೆ. ಪಾರದರ್ಶಕತೆ ಕೊರತೆ, ಅನುದಾನದ ಕೆಟ್ಟ ನಿರ್ವಹಣೆ ಮತ್ತು ನಿರಂತರ ಭ್ರಷ್ಟಾಚಾರದಿಂದ ಅನುದಾನ ಸೋರಿಕೆಯಾಗುತ್ತಿದೆ ಎಂದು ಸಾರ್ವಜನಿಕರು ಆರೋಪಿಸುತ್ತಲೇ ಬಂದಿದ್ದಾರೆ.
ವರದಿ: ಎಚ್. ಮಾರುತಿ, ಬೆಂಗಳೂರು
