ಕನ್ನಡ ಸುದ್ದಿ  /  Karnataka  /  Bs Yediyurappa Hints His Son By Vijayendra May Contest Against Siddaramaiah In Varuna Constituency

BS Yediyurappa: ರಾಜ್ಯ ರಾಜಕೀಯದ ಬಿಗ್‌ ಬ್ರೇಕಿಂಗ್:‌ ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧೆಯ ಸುಳಿವು ನೀಡಿದ ಬಿಎಸ್‌ವೈ!

ಮಾಜಿ ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ವಿರುದ್ಧ, ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಖುದ್ದು ಬಿಎಸ್‌ ಯಡಿಯೂರಪ್ಪ ಅವರೇ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ವಿರುದ್ಧ ವಿಜಯೇಂದ್ರ ಸ್ಪರ್ಧಿಸುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ ಎಂದು ಹೇಳಿದರು.

ಬಿಎಸ್‌ ಯಡಿಯೂರಪ್ಪ
ಬಿಎಸ್‌ ಯಡಿಯೂರಪ್ಪ (ANI)

ಬೆಂಗಳೂರು: ಇದು ನಿಜಕ್ಕೂ ರಾಜ್ಯ ರಾಜಕಾರಣದ ಬಿಗ್‌ ಬ್ರೇಕಿಂಗ್‌. ಮಾಜಿ ಮುಖ್ಯಮಂತ್ರಿ ಹಾಗೂ ಸಿದ್ದರಾಮಯ್ಯ ವಿರುದ್ಧ ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ಪುತ್ರ ಬಿವೈ ವಿಜಯೇಂದ್ರ ಸ್ಪರ್ಧಿಸುವ ಸಾಧ್ಯತೆ ದಟ್ಟವಾಗಿದೆ. ಈ ಕುರಿತು ಖುದ್ದು ಬಿಎಸ್‌ ಯಡಿಯೂರಪ್ಪ ಅವರೇ ಸುಳಿವು ನೀಡಿರುವುದು, ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿದೆ.

ಕರ್ನಾಟಕದಲ್ಲಿ ಬಿಜೆಪಿಯ ಚುನಾವಣಾ ಪ್ರಚಾರದ ನೇತೃತ್ವ ವಹಿಸಿರುವ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ, ಬೆಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ವರುಣಾ ಕ್ಷೇತ್ರದಲ್ಲಿ ತಮ್ಮ ಪುತ್ರ ಬಿವೈ ವಿಜಯೇಂದ್ರ ಅವರ ಸ್ಪರ್ಧೆಯ ಸುಳಿವು ನೀಡಿದರು.

ವರುಣಾ ಕ್ಷೇತ್ರದಿಂದ ಬಿವೈ ವಿಜಯೇಂದ್ರ ಅವರ ಉಮೇದುವಾರಿಕೆ ಕುರಿತು ಉನ್ನತ ಮಟ್ಟದ ಚರ್ಚೆಗಳು ನಡೆಯುತ್ತಿವೆ. ಈ ಕುರಿತು ಹೈಕಮಾಂಡ್‌ ಶೀಘ್ರದಲ್ಲೇ ಸೂಕ್ತ ತೀರ್ಮಾನ ಕೈಗೊಳ್ಳಿದೆ ಎಂದು ಬಿಎಸ್‌ವೈ ತಿಳಿಸಿದ್ದಾರೆ.

ನಮ್ಮ ಗುರಿ ಸಿದ್ದರಾಮಯ್ಯ ಅವರನ್ನು ಸೋಲಿಸುವುದಾಗಿದೆ. ಇದಕ್ಕಾಗಿ ಹೈಕಮಾಂಡ್‌ ಬಿವೈ ವಿಜಯೇಂದ್ರ ಅವರೇ ಸೂಕ್ತ ಅಭ್ಯರ್ಥಿ ಎಂದು ಪರಿಗಣಿಸಿದರೆ, ಅದಕ್ಕೆ ಪೂರಕ ಸಿದ್ಧತೆಗಳನ್ನು ಮಾಡಿಕೊಳ್ಳಲು ನಾವು ಸಿದ್ಧ ಎಂದು ಬಿಎಸ್‌ ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಸಿದ್ದರಾಮಯ್ಯ ಅವರು ರಾಜ್ಯವೆಲ್ಲ ಸುತ್ತಾಡಿ ಈಗ ವರುಣಾ ಕ್ಷೇತ್ರಕ್ಕೆ ಬಂದಿದ್ದಾರೆ. ಇದು ನನ್ನ ಕೊನೆಯ ಚುನಾವಣೆ ಎಂದು ಹೇಳುತ್ತಿರುವ ಸಿದ್ದರಾಮಯ್ಯ, ಕೋಲಾರ ಕ್ಷೇತ್ರದ ಮೇಲೂ ಕಣ್ಣಿಟ್ಟಿದ್ದಾರೆ. ಆದರೆ ಅವರು ಯಾವುದೇ ಕ್ಷೇತ್ರದಿಂದ ನಿಂತರೂ, ಈ ಬಾರಿ ಅವರ ಸೋಲು ಖಚಿತ ಎಂದು ಬಿಎಸ್‌ ಯಡಿಯೂರಪ್ಪ ಭವಿಷ್ಯ ನುಡಿದರು.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಸೋಲು ಖಚಿತ ಎಂಬುದು ಕಾಂಗ್ರೆಸ್‌ ಅರವಿಗೆ ಬಂದಿದೆ. ಇದೇ ಕಾರಣಕ್ಕೆ ರಾಜ್ಯ ಬಿಜೆಪಿ ಸರ್ಕಾರದ ವಿರುದ್ಧ ಇಲ್ಲಸಲ್ಲದ ಭ್ರಷ್ಟಾಚಾರ ಆರೋಪಗಳನ್ನು ಮಾಡುತ್ತಿದೆ. ಕಾಂಗ್ರೆಸ್‌ ಮಾಡುತ್ತಿರುವ 40 ಪರ್ಸೆಂಟ್‌ ಕಮಿಷನ್‌ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಗುಡುಗಿದರು.

ಕರ್ನಾಟಕದಲ್ಲಿ ನಾವು ಸಂಪೂರ್ಣ ಬಹುಮತ ಪಡೆಯಲಿದ್ದೇವೆ. ಪ್ರಧಾನಿ ಮೋದಿಯವರ ನೇತೃತ್ವದಲ್ಲಿ ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಕಾಂಗ್ರೆಸ್ ತನ್ನ ಆಡಳಿತಾವಧಿಯ ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳಲು, ರಾಜ್ಯ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಿದೆ. ಆದರೆ ಈ ವಿಷಯಗಳನ್ನು ಮತದಾರರು ದೂರವಿಟ್ಟಿದ್ದಾರೆ ಎಂದು ಬಿಎಸ್‌ ಯಡಿಯೂರಪ್ಪ ಅಭಿಪ್ರಾಯಪಟ್ಟರು.

ನಾನು ಈಗಾಗಲೇ 80 ವರ್ಷ ದಾಟಿರುವ ಕಾರಣ, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸದಿರಲು ನಿರ್ಧರಿಸಿದ್ದೇನೆ. ಆದರೆ ರಾಜ್ಯಾದ್ಯಂತ ಸುತ್ತಾಡಿ ಪಕ್ಷದ ಪರ ಪ್ರಚಾರ ಮಾಡುತ್ತೇನೆ. ಕೇವಲ ಈ ಬಾರಿಯ ವಿಧಾನಸಭೆ ಚುನಾವಣೆ ಮಾತ್ರವಲ್ಲ. ಮುಂದಿನ ವಿಧಾನಸಭೆ ಚುನಾವಣೆಯಲ್ಲೂ ನಾನು ಪಕ್ಷದ ಪರ ಪ್ರಚಾರ ನಡೆಸಲಿದ್ದೇನೆ ಎಂದು ಬಿಎಸ್‌ವೈ ಹೇಳಿದರು.

224 ಸ್ಥಾನಗಳ ವಿಧಾನಸಭೆಯಲ್ಲಿ ಕಾಂಗ್ರೆಸ್ 70ಕ್ಕಿಂತ ಹೆಚ್ಚು ಸ್ಥಾನಗಳನ್ನು ದಾಟುವುದಿಲ್ಲ. ಆದರೆ ರಾಜ್ಯದ ಜನರ ಆಶೀರ್ವಾದ ಪಡೆದು ಬಿಜೆಪಿ ಪೂರ್ಣ ಬಹುಮತದ ಸರ್ಕಾರ ರಚನೆ ಮಾಡಲಿದೆ ಎಂದು ಬಿಎಸ್‌ ಯಡಿಯೂರಪ್ಪ ಇದೇ ವೇಳೆ ಪ್ರತಿಪಾದಿಸಿದರು.

ಇನ್ನು ಮೀಸಲಾತಿ ವಿವಾದದ ಕುರಿತು ಪ್ರತಿಕ್ರಿಎಯೆ ನೀಡಿದ ಬಿಎಸ್‌ವೈ, "ಲಿಂಗಾಯತರು ಮತ್ತು ಇತರ ಸಮುದಾಯಗಳಿಗೆ ನೀಡಿದ ಮೀಸಲಾತಿ ಕೋಟಾವನ್ನು ಸಮರ್ಥಿಸಿಕೊಂಡರು.

ಮೀಸಲಾತಿ ವಿಚಾರದಲ್ಲಿ ಮುಸ್ಲಿಮರಿಗೆ ಅನ್ಯಾಯ ಮಾಡಲಾಗಿದೆ ಎಂಬ ಕಾಂಗ್ರೆಸ್‌ ಆರೋಪದಲ್ಲಿ ಯಾವುದೇ ಹುರುಳಿಲ್ಲ. ಮುಸ್ಲಿಮರು ಈಗ ಆರ್ಥಿಕವಾಗಿ ದುರ್ಬಲ ವರ್ಗಗಳಲ್ಲಿ ಮೀಸಲಾತಿ ಪಡೆಯುತ್ತಾರೆ. ರಾಜ್ಯದ ಮುಸ್ಲಿಂ ಸಮಾಜ ಕಾಂಗ್ರೆಸ್‌ನ ಸುಳ್ಳು ಆರೋಪಗಳ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂಬ ವಿಶ್ವಾಸವಿದೆ ಎಂದು ಬಿಎಸ್‌ ಯಡಿಯೂರಪ್ಪ ನುಡಿದರು.

ಸಿದ್ದರಾಮಯ್ಯ ಪ್ರತಿಕ್ರಿಯೆ:

ಇನ್ನು ವುರಣಾ ಕ್ಷೇತ್ರದಲ್ಲಿ ತಮ್ಮ ವಿರುದ್ಧ ಬಿವೈ ವಿಜಯೇಂದ್ರ ಸ್ಪರ್ಧೆ ಮಾಡಲಿದ್ದಾರೆ ಎಂಬ ಊಹಾಪೋಹಗಳಿಗೆ ಪ್ರತಿಕ್ರಿಯೆ ನೀಡಿರುವ ಸಿದ್ದರಾಮಯ್ಯ, ನಾನು ನನ್ನ ಎದುರಾಳಿ ಯಾರು ಎಂಬುದರ ಬಗ್ಗೆ ಯಾವತ್ತೂ ತಲೆಕೆಡಿಸಿಕೊಂಡಿಲ್ಲ ಎಂದು ಹೇಳಿದ್ದಾರೆ.

IPL_Entry_Point