Kannada News  /  Karnataka  /  Bs Yediyurappa Never Opposes Reservation For Panchamasali Community Says By Vijayendra

Panchamasali Reservation: ಪಂಚಮಸಾಲಿ ಮೀಸಲಾತಿಗೆ ಬಿಎಸ್‌ವೈ ವಿರೋಧ ಶುದ್ಧ ಸುಳ್ಳು: ಬಿವೈ ವಿಜಯೇಂದ್ರ!

ಸಂಗ್ರಹ ಚಿತ್ರ
ಸಂಗ್ರಹ ಚಿತ್ರ (Verified Twitter)

ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಆರಫ ಶುದ್ಧ ಸುಳ್ಳು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಪುತ್ರ ಬಿವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ನೀಡುವುದಕ್ಕೆ ಬಿಎಸ್ ಯಡಿಯೂರಪ್ಪ ವಿರೋಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಮೈಸೂರು: ಪಂಚಮಸಾಲಿ ಸಮುದಾಯಕ್ಕೆ ಮೀಸಲಾತಿ ಕಲ್ಪಿಸಲು ಮಾಜಿ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ವಿರೋಧ ವ್ಯಕ್ತಪಡಿಸುತ್ತಿದ್ದಾರೆ ಎಂಬ ಆರಫ ಶುದ್ಧ ಸುಳ್ಳು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಪುತ್ರ ಬಿವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಮೈಸೂರಿನಲ್ಲಿ ಮಾತನಾಡಿದ ಬಿವೈ ವಿಜಯೇಂದ್ರ, ಪಂಚಮಸಾಲಿ ಲಿಂಗಾಯತರಿಗೆ ಮೀಸಲಾತಿ ನೀಡುವುದಕ್ಕೆ ಬಿಎಸ್ ಯಡಿಯೂರಪ್ಪ ವಿರೋಧ ಮಾಡುತ್ತಿದ್ದಾರೆ ಎಂದು ಕೆಲವು ಸ್ವಾಮೀಜಿಗಳು ಆರೋಪಿಸುತ್ತಿದ್ದಾರೆ. ಆದರೆ‌ ಬಿಎಸ್‌ವೈ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿಲ್ಲ ಎಂದು ಹೇಳಿದರು.

ಪಂಚಮಸಾಲಿ ಮೀಸಲಾತಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಇದರಲ್ಲಿ ನಾನಾಗಲಿ, ಬಿಎಸ್‌ವೈ ಆಗಲಿ ಹಸ್ತಕ್ಷೇಪ ಮಾಡಲು ಬರುವುದಿಲ್ಲ. ಕೆಲವು ಸ್ವಾಮೀಜಿಗಳು ಹಾಗೂ ನಾಯಕರು ಸುಖಾಸುಮ್ಮನೆ ತಮ್ಮ ತಂದೆಯ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ಬಿವೈ ವಿಜಯೇಂದ್ರ ಕಿಡಿಕಾರಿದರು.

ಪಂಚಮಸಾಲಿ ಮೀಸಲಾತಿಗೆ ಸಂಬಂಧಿಸಿದಂತೆ ಬಿಎಸ್‌ ಯಡಿಯೂರಪ್ಪ ಅವರು ಸಿಎಂ ಬೊಮ್ಮಾಯಿ ಮೇಲೆ ಯಾವುದೇ ಒತ್ತಡ ಹೇರುತ್ತಿಲ್ಲ. ಸರ್ಕಾರ ತನ್ನ ಕೆಲಸವನ್ನು ಮಾಡಲಿದೆ. ಈ ವಿಷಯದಲ್ಲಿ ನನ್ನ ಹೆಸರೂ ಎಳೆದು ತರುತ್ತಿರುವುದು ಖಂಡನೀಯ ಎಂದು ಬಿವೈ ವಿಜಯೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಬಿಎಸ್‌ವೈ ಹಾಗೂ ನಾನು ಪಂಚಮಸಾಲಿ ಲಿಂಗಾಯತರ‌ ವಿರೋಧಿ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿವೆ. ಆದರೆ ನಾವು ಯಾವುದೇ ಸಮುದಾಯದ ವಿರುದ್ಧ ಇಲ್ಲ. ರಾಜಕೀಯ ಕಾರಣಕ್ಕೆ ಯಾರೋ ಸ್ವಾಮೀಜಿಗಳ‌ ಮನಸ್ಸು ಕೆಡಿಸಿದ್ದಾರೆ. ಸ್ವಾಮೀಜಿಗಳು ಮಾಡಿರುವ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ ಎಂದು ಬಿವೈ ವಿಜಯೇಂದ್ರ ಹೇಳಿದರು.

ಶಿವಮೊಗ್ಗದಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಬಿವೈ ವಿಜಯೇಂದ್ರ, ವಿದ್ಯಾವಂತರು ಐಸಿಸ್‌ನಂತಹ ಉಗ್ರ ಸಂಘಟನೆಗಳತ್ತ ಆಕರ್ಷಿತರಾಗುತ್ತಿರುವುದು ಆತಂಕಕಾರಿ ಸಂಗತಿ ಎಂದು ಹೇಳಿದರು. ಶಿವಮೊಗ್ಗ ಮಾತ್ರವಲ್ಲ, ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಯುವಕರು ಉಗ್ರ ಸಂಘಟನೆಗಳತ್ತ ಆಕರ್ಷಿತರಾಗುತ್ತಿದ್ದಾರೆ. ಇದನ್ನು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಲಿದೆ ಎಂದು ಬಿವೈ ವಿಜಯೇಂದ್ರ ಭರವಸೆ ನೀಡಿದರು.

ರಾಷ್ಟ್ರಕವಿ ಕುವೆಂಪು ಹೇಳಿದಂತೆ ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ. ರಾಜ್ಯದ ಶಾಂತಿ ವಾತಾವರಣ ಹಾಳು ಮಾಡಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯ ಸರ್ಕಾರಕ್ಕೆ ಭಯೋತ್ಪಾದನೆ ಚಟುವಟಿಕೆಗಳನ್ನು ಆರಂಭದಲ್ಲೇ ಚಿವುಟಿ ಹಾಕಲಿದೆ ಎಂದು ಬಿವೈ ವಿಜಯೇಂದ್ರ ನುಡಿದರು.

ಇದೇ ವೇಳೆ ಪ್ರತಿಪಕ್ಷ ಕಾಂಗ್ರೆಸ್‌ ವಿರುದ್ಧವೂ ತೀವ್ರ ವಾಗ್ದಾಳಿ ನಡೆಸಿದ ಬಿವೈ ವಿಜಯೇಂದ್ರ, ಕಾಂಗ್ರೆಸ್‌ನ ಓಲೈಕೆ ರಾಜಕಾರಣದಿಂದ ಕೋಮು ಸಾಮರಸ್ಯ ಹಾಳಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು. ಶಿವಮೊಗ್ಗದಲ್ಲಿ ನಡೆದ ಗಲಭೆಯ ಸಂದರ್ಭದಲ್ಲಿ ಕಾಂಗ್ರೆಸ್‌ನವರು ಮುಸ್ಲಿಂ ಪ್ರದೇಶದಲ್ಲಿ ಸಾವರ್ಕರ್‌ ಫೋಟೊ ಏಕೆ ಹಾಕಬೇಕಿತ್ತು ಎಂದು ಕೇಳಿದ್ದರು. ಕಾಂಗ್ರೆಸ್‌ ಸಮಾಜವನ್ನು ಹಿಂದೂ-ಮುಸ್ಲಿಂ ಎಂದು ಪ್ರತ್ಯೇಕವಾಗಿ ನೋಡುತ್ತದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆ ಬೇಕಿಲ್ಲ ಎಂದು ಬಿವೈ ವಿಜಯೇಂದ್ರ ಪರೋಕ್ಷವಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದರು.

ಇನ್ನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ತಾವು ರಾಜ್ಯದ ಯಾವುದೇ ಭಾಗದಿಂದ ಸ್ಪರ್ಧೆ ಮಾಡಿದರೂ ಹಳೆ ಮೈಸೂರು ಭಾಗವನ್ನು ಮಾತ್ರ ಮರೆಯುವುದಿಲ್ಲ ಎಂದು ಬಿವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.

ನನಗೆ ರಾಜಕೀಯ ಶಕ್ತಿ ಕೊಟ್ಟಿದ್ದು ಹಳೇ ಮೈಸೂರಿನ ವರುಣಾ ಕ್ಷೇತ್ರ. ಈ ಭಾಗದಲ್ಲಿ ನಿರಂತರವಾಗಿ ಪಕ್ಷ ಸಂಘಟನೆ ಮಾಡುತ್ತೇನೆ. ಈ ಭಾಗದಲ್ಲಿ ಬಿಜೆಪಿ ದಿನದಿಂದ ದಿನಕ್ಕೆ ಬಿಜೆಪಿ ಶಕ್ತಿಯುತವಾಗುತ್ತಿದೆ. ಮುಂದಿನ ದಿನಗಳಲ್ಲಿ ಹಳೆ ಮೈಸೂರು ಭಾಗದಲ್ಲಿ ಪಕ್ಷ ಮತ್ತಷ್ಟು ಸದೃಢವಾಗಿ ಬೆಳೆಯಲಿದೆ ಎಂದು ಬಿವೈ ವಿಜಯೇಂದ್ರ ಇದೇ ವೇಳೆ ಭರವಸೆ ವ್ಯಕ್ತಪಡಿಸಿದರು.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

ಸಂಬಂಧಿತ ಲೇಖನ