ಕನ್ನಡ ಸುದ್ದಿ  /  Karnataka  /  Bs Yediyurappa: Will Tour Entire State To Ensure Bjp Win In Karnataka Said Bs Yediyurappa In Newdelhi

BS Yediyurappa: ರಾಜ್ಯ ಪ್ರವಾಸಗೈದು ಪಕ್ಷವನ್ನು ಅಧಿಕಾರಕ್ಕೆ ತರುವೆ; ದೆಹಲಿ ಭೇಟಿ ಬಳಿಕ BSY

Karnataka Assembly elections: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮುನ್ನ, ಮುಂಬರುವ ಮೂರು ತಿಂಗಳಲ್ಲಿ ರಾಜ್ಯದ ಎಲ್ಲಾ ಜಿಲ್ಲೆಗಳನ್ನು ಒಳಗೊಂಡ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ಮಾಜಿ ಮುಖ್ಯಮಂತ್ರಿ ಮತ್ತು ಸಂಸದೀಯ ಮಂಡಳಿಯ ನೂತನ ಸದಸ್ಯ ಬಿಎಸ್ ಯಡಿಯೂರಪ್ಪ ದೆಹಲಿ ಭೇಟಿಯ ನಂತರ ಹೇಳಿದ್ದಾರೆ.

ಕರ್ನಾಟಕದ ಮಾಜಿ ಸಿಎಂ, ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. (ANI Photo/ANI Pics Service)
ಕರ್ನಾಟಕದ ಮಾಜಿ ಸಿಎಂ, ಬಿಜೆಪಿಯ ಹಿರಿಯ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. (ANI Photo/ANI Pics Service) (ANI)

ನವದೆಹಲಿ: ಕರ್ನಾಟಕ ವಿಧಾನಸಭೆ ಚುನಾವಣೆಗೆ ಮುನ್ನ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದೀಯ ಮಂಡಳಿಗೆ ನೂತನವಾಗಿ ನೇಮಕಗೊಂಡಿರುವ ಬಿ.ಎಸ್.ಯಡಿಯೂರಪ್ಪ ಮುಂಬರುವ ಮೂರು ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳಲಿದ್ದಾರೆ.

"ನನ್ನ ಯಾತ್ರೆಯ ವಿವರಗಳನ್ನು ಅಂತಿಮಗೊಳಿಸಲಾಗುತ್ತಿದೆ. ಸೆಪ್ಟೆಂಬರ್ ಮೊದಲ ವಾರದಿಂದ ಮುಂದಿನ ಮೂರು ತಿಂಗಳು ನಾನು ಎಲ್ಲ ಜಿಲ್ಲೆಗಳ ಪ್ರವಾಸ ಮಾಡುತ್ತೇನೆ" ಎಂದು ಯಡಿಯೂರಪ್ಪ ಶುಕ್ರವಾರ ಎಎನ್‌ಐ ಸುದ್ದಿಸಂಸ್ಥೆಗೆ ತಿಳಿಸಿದರು.

ಸೆಪ್ಟೆಂಬರ್ ಮೊದಲ ವಾರದಲ್ಲಿ ಆರಂಭವಾಗುವ ಯಾತ್ರೆ ಮುಂದಿನ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಇದು ಎರಡು ಅಥವಾ ಮೂರು ಹಂತಗಳಲ್ಲಿ ನಡೆಯಲಿದೆ ಎಂದು ಅವರು ವಿವರಿಸಿದ್ದಾರೆ.

ಯಡಿಯೂರಪ್ಪ ಅವರು ದೆಹಲಿ ಪ್ರವಾಸದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು.

"ನಿಜವಾದ ಪ್ರತಿಕ್ರಿಯೆಯು ತಳಮಟ್ಟದಿಂದ ಬರುತ್ತದೆ. ಆದ್ದರಿಂದ ನನ್ನ ಯಾತ್ರೆಯಲ್ಲಿ ಪಕ್ಷದ ಕಾರ್ಯಕರ್ತರನ್ನು ಭೇಟಿ ಮಾಡುತ್ತೇನೆ. ಸಂಘಟನೆಯ ವಿವಿಧ ಸಭೆಗಳನ್ನು ನಡೆಸುತ್ತೇನೆ ಮತ್ತು ಸಾರ್ವಜನಿಕ ರ್ಯಾಲಿಗಳನ್ನು ನಡೆಸುತ್ತೇನೆ" ಎಂದು ಕರ್ನಾಟಕದ ಮಾಜಿ ಮುಖ್ಯಮಂತ್ರಿ ಹೇಳಿದರು.

ಕರ್ನಾಟಕ ವಿಧಾನಸಭೆ ಚುನಾವಣೆ 2023ರಲ್ಲಿ ನಡೆಯಲಿದ್ದು, ದಕ್ಷಿಣದಲ್ಲಿ ಬಲವಾಗಿ ನೆಲೆಯೂರಲು ಬಿಜೆಪಿಗೆ ಇದಕ್ಕಿಂತ ಗಟ್ಟಿ ನೆಲ ಬೇರೆ ಇಲ್ಲ. ಹೀಗಾಗಿ ಈ ಚುನಾವಣೆಯು ಬಿಜೆಪಿ ಪಾಲಿಗೆ ಅತ್ಯಂತ ಮಹತ್ವದ್ದಾಗಿದೆ.

ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಂತಹ ನಾಯಕರು ನೆಲದ ವಾಸ್ತವವನ್ನು ಅರ್ಥಮಾಡಿಕೊಳ್ಳುವುದಿಲ್ಲ. ಅವರು ಅತಿಯಾದ ಆತ್ಮವಿಶ್ವಾಸ ಹೊಂದಿದ್ದಾರೆ. ನಾನು ಒಮ್ಮೆ ನೆಲಕ್ಕೆ ಇಳಿದರೆ ಮುಂದಿನ ಮೂರು ತಿಂಗಳಲ್ಲಿ ಕರ್ನಾಟಕದ ಪರಿಸ್ಥಿತಿ ಬಿಜೆಪಿ ಪರವಾಗಿ ಬದಲಾಗುತ್ತದೆ ಎಂದು ನಾನು ನಿಮಗೆ ಹೇಳಬಲ್ಲೆ ಎಂದು ಯಡಿಯೂರಪ್ಪ ಹೇಳಿದರು.

ಯಡಿಯೂರಪ್ಪ ಅವರನ್ನು ಇತ್ತೀಚೆಗೆ ಬಿಜೆಪಿ ಸಂಸದೀಯ ಮಂಡಳಿಗೆ ಸೇರಿಸಲಾಗಿದೆ. ಇದು ಪಕ್ಷದ ಅತ್ಯುನ್ನತ ನಿರ್ಧಾರ ತೆಗೆದುಕೊಳ್ಳುವ ಸಮಿತಿ. ಇಡೀ ದಕ್ಷಿಣ ಭಾರತದಲ್ಲಿ ಅದರ ಪ್ರಭಾವದ ಅರಿವು ಆಗುವುದಕ್ಕೆ ಅವರ ಸೇರ್ಪಡೆ ಮಹತ್ವದ್ದು ಎಂದು ಹೇಳಲಾಗುತ್ತಿದೆ.

ಪಕ್ಷ ನೀಡಿದ ಜವಾಬ್ದಾರಿಯಿಂದ ನಾನು ಕರ್ನಾಟಕಕ್ಕೆ ಮಾತ್ರ ಸೀಮಿತವಾಗುವುದಿಲ್ಲ ಮತ್ತು ಶೀಘ್ರದಲ್ಲೇ ದಕ್ಷಿಣದ ಇತರ ರಾಜ್ಯಗಳಲ್ಲಿಯೂ ಪ್ರವಾಸ ಮಾಡಲಿದ್ದೇನೆ ಎಂದು ಯಡಿಯೂರಪ್ಪ ಅವರು ಸಂಘಟನೆಯನ್ನು ಬಲಪಡಿಸುವತ್ತ ತಮ್ಮ ಗಮನವನ್ನು ಒತ್ತಿ ಹೇಳಿದರು.

ಕರ್ನಾಟಕ ರಾಜ್ಯದ ಅತಿ ಪ್ರಭಾವಿ ಲಿಂಗಾಯತ ನಾಯಕ ಯಡಿಯೂರಪ್ಪ ಅವರು ರಾಜ್ಯ ರಾಜಕೀಯದಲ್ಲಿ ಬಹಳ ಪ್ರಮುಖ ಮತ್ತು ಪ್ರಾಬಲ್ಯ ಹೊಂದಿರುವುದು ನಿರ್ವಿವಾದ ಅಂಶ. ಅವರು ಮುಂದಿನ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಈಗಾಗಲೇ ಘೋಷಿಸಿದ್ದಾರೆ.

ಕಳೆದ ವರ್ಷ ಬಿಜೆಪಿಯ ಉನ್ನತ ನಾಯಕತ್ವವು ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸುವಂತೆ 75 ವರ್ಷ ವಯಸ್ಸಿನ ನಿಯಮವನ್ನು ಉಲ್ಲೇಖಿಸಿ ಮನವಿ ಮಾಡಿತು. ಅದನ್ನು ಅನುಸರಿಸಿ ಅವರ ಆಪ್ತರಲ್ಲಿ ಒಬ್ಬರಾದ ಬಸವರಾಜ ಬೊಮ್ಮಾಯಿ ಅವರನ್ನು ಸಿಎಂ ಮಾಡಲಾಯಿತು. ಬಿಜೆಪಿಯು ದಕ್ಷಿಣ ಭಾರತದಲ್ಲಿ ಆಳವಾದ ಒಳನುಸುಳಲು ನೋಡುತ್ತಿರುವಾಗ ಕರ್ನಾಟಕ ರಾಜ್ಯವು ಪಕ್ಷವು ಹೆಚ್ಚು ಕಾಲ ಅಧಿಕಾರದಲ್ಲಿರುಬೇಕು. ಅದಕ್ಕೆ ಬಿಎಸ್ ಯಡಿಯೂರಪ್ಪನವರ ಕೊಡುಗೆ ಅತ್ಯಂತ ನಿರ್ಣಾಯಕ ಎಂಬುದು ರಾಜಕೀಯ ಚಾವಡಿಯ ಚಿಂತಕರ ವಾದ.

ಇಂದು ಬೆಂಗಳೂರಿಗೆ ವಾಪಸ್‌: ಬಿ.ಎಸ್.ಯಡಿಯೂರಪ್ಪ ಅವರು ಇಂದು ನವದೆಹಲಿಯಿಂದ ಬೆಂಗಳೂರಿಗೆ ವಾಪಸಾಗುತ್ತಿದ್ದಾರೆ. ಮಧ್ಯಾಹ್ನ ಕೆ.ಆರ್‌.ಪುರಂನಲ್ಲಿ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

IPL_Entry_Point