Budget 2025: ಕಲಬುರಗಿ ರೈಲ್ವೆ ವಿಭಾಗ ಜಾರಿಗೆ ಹೆಚ್ಚಿದ ಬೇಡಿಕೆ, ನಾಲ್ಕು ದಶಕವಾದರೂ ಯಾವ ವಲಯಕ್ಕೆ ಸೇರಿಸಬೇಕು ಎನ್ನುವುದೇ ಗೊಂದಲ
ಕನ್ನಡ ಸುದ್ದಿ  /  ಕರ್ನಾಟಕ  /  Budget 2025: ಕಲಬುರಗಿ ರೈಲ್ವೆ ವಿಭಾಗ ಜಾರಿಗೆ ಹೆಚ್ಚಿದ ಬೇಡಿಕೆ, ನಾಲ್ಕು ದಶಕವಾದರೂ ಯಾವ ವಲಯಕ್ಕೆ ಸೇರಿಸಬೇಕು ಎನ್ನುವುದೇ ಗೊಂದಲ

Budget 2025: ಕಲಬುರಗಿ ರೈಲ್ವೆ ವಿಭಾಗ ಜಾರಿಗೆ ಹೆಚ್ಚಿದ ಬೇಡಿಕೆ, ನಾಲ್ಕು ದಶಕವಾದರೂ ಯಾವ ವಲಯಕ್ಕೆ ಸೇರಿಸಬೇಕು ಎನ್ನುವುದೇ ಗೊಂದಲ

Budget 2025: ಕೇಂದ್ರ ಸರ್ಕಾರವೂ ರೈಲ್ವೆ ಇಲಾಖೆಯನ್ನು ಒಳಗೊಂಡ ಬಜೆಟ್‌ ಮಂಡನೆಗೆ ಅಣಿಯಾಗಿದೆ. ಇದರ ನಡುವೆ ರೈಲ್ವೆ ಬಜೆಟ್‌ನಲ್ಲಿ ಕಲಬುರಗಿ ವಿಭಾಗಕ್ಕೆ ಹೆಚ್ಚಿನ ಅನುದಾನ ನೀಡಿ ಅದನ್ನು ಸಶಕ್ತಗೊಳಿಸಬೇಕು ಎನ್ನುವ ಬೇಡಿಕೆ ಹೆಚ್ಚಿದೆ.

ಕಲಬುರಗಿಯಲ್ಲಿ ಪ್ರತ್ಯೇಕ ರೈಲ್ವೆ ವಿಭಾಗಕ್ಕೆ ವಿಶೇಷ ಅನುದಾನ ಒದಗಿಸುವ ಬೇಡಿಕೆ ಜೋರಿದೆ
ಕಲಬುರಗಿಯಲ್ಲಿ ಪ್ರತ್ಯೇಕ ರೈಲ್ವೆ ವಿಭಾಗಕ್ಕೆ ವಿಶೇಷ ಅನುದಾನ ಒದಗಿಸುವ ಬೇಡಿಕೆ ಜೋರಿದೆ

Kalaburgi Separate Railway Division: ಕಲ್ಯಾಣ ಕರ್ನಾಟಕದ ಕೇಂದ್ರ ಸ್ಥಾನವಾಗಿರುವ ಕಲಬುರಗಿಯಲ್ಲಿ ಪ್ರತ್ಯೇಕ ರೈಲ್ವೆ ವಿಭಾಗ ಬೇಕು ಎನ್ನುವುದು ನಾಲ್ಕು ದಶಕಗಳಿಗೂ ಮಿಗಿಲಾದ ಬೇಡಿಕೆ. ಈಗಾಗಲೇ ವಿಭಾಗ ಘೋಷಣೆಯಾದರೂ ಜಾರಿ ಮಾತ್ರ ಆಗಿಲ್ಲ. ಪ್ರತಿ ಬಜೆಟ್‌ನಲ್ಲೂ ಭಾರತದ ಬೇರೆ ಬೇರೆ ವಿಭಾಗಗಳಿಗೆ ಕೋಟ್ಯಂತರ ರೂ. ಅನುದಾನ ನೀಡಲಾಗುತ್ತಿದೆ. ಆದರೆ ಕಲುಬುರಗಿ ಭಾಗಕ್ಕೆ ಪ್ರತಿ ಬಜೆಟ್‌ನಲ್ಲಿ ಬರೀ ಒಂದು ಸಾವಿರ ರೂ. ಮಾತ್ರ ಒದಗಿಸಲಾಗುತ್ತಿದೆ. ಇದರಿಂದ ಈ ಭಾಗದ ಜನ ಕಲಬುರಗಿ ರೈಲ್ವೆ ವಿಭಾಗ ಚಾಲ್ತಿಯಾಗುವ ಅಧಿಕೃತ ಘೋಷಣೆ ಮಾಡಬೇಕು. ಈ ಬಜೆಟ್‌ ನಲ್ಲಿ ಹೆಚ್ಚಿನ ಅನುದಾನವನ್ನು ಕಲಬುರಗಿ ಭಾಗಕ್ಕೆ ಮೀಸಲಿಟ್ಟು ರೈಲ್ವೆ ಪ್ರಗತಿಗೆ ವಿಶೇಷ ಒತ್ತು ನೀಡಬೇಕು ಎನ್ನುವ ಬೇಡಿಕೆ ಕೇಳಿ ಬಂದಿದೆ.

ಹಂಚಿ ಹೋದ ಕಲ್ಯಾಣ ಕರ್ನಾಟಕ ರೈಲ್ವೆ

ಕಲಬುರಗಿ ಕೇಂದ್ರ ಕಲ್ಯಾಣ ಕರ್ನಾಟಕದ ಒಂದೊಂದು ಜಿಲ್ಲೆ ಒಂದು ವಲಯದಲ್ಲಿವೆ. ಕಲಬುರಗಿಯನ್ನು ದಕ್ಷಿಣ ಕೇಂದ್ರ ರೈಲ್ವೆಯ ಮುಂಬೈ ವಲಯಕ್ಕೆ ಸೇರಿಸಲಾಗಿದೆ. ಇದಕ್ಕೆ ಸೊಲ್ಲಾಪುರ ವಿಭಾಗ ಕೇಂದ್ರ, ಅದೇ ಯಾದಗಿರಿ, ರಾಯಚೂರು ಭಾಗವನ್ನು ಗುಂತಕಲ್‌ ವಿಭಾಗಕ್ಕೆ ಸೇರಿಸಲಾಗಿದೆ. ಬೀದರ್‌ ಅನ್ನು ಸಿಕಂದರಾಬಾದ್‌ ವಿಭಾಗಕ್ಕೆ ಸೇರಿಸಲಾಗಿದೆ. ಇದರ ವಲಯ ಕೇಂದ್ರ ಕಚೇರಿ ಹೈದ್ರಾಬಾದ್‌, ಹೊಸಪೇಟೆಯನ್ನು ನೈರುತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗಕ್ಕೆ ಸೇರಿಸಲಾಗಿದೆ. ಇದರಿಂದ ಕಲ್ಯಾಣ ಕರ್ನಾಟಕದ ಒಂದೊಂದು ಭಾಗವೂ ಪ್ರತ್ಯೇಕ ವಿಭಾಗದಲ್ಲಿ ಹಂಚಿಹೋಗಿದೆ. ಇದನ್ನು ತಪ್ಪಿಸಿ ಒಂದೇ ವಿಭಾಗ ರೂಪಿಸಿ ನೈರುತ್ಯ ರೈಲ್ವೆಗೆ ಸೇರಿಸಿ ಎನ್ನುವ ಬೇಡಿಕೆ ಹೆಚ್ಚಿದೆ.

ಖರ್ಗೆ ಅವರ ಒತ್ತಾಸೆ

ಕಲಬುರಗಿ ಪ್ರತ್ಯೇಕ ರೈಲ್ವೆ ವಿಭಾಗ ಆಗಬೇಕು ಎನ್ನುವ ಬೇಡಿಕೆ ಈಗಿನದ್ದಲ್ಲ. ಅದು ಎಂಬತ್ತರ ದಶಕದಿಂದಲೂ ಇದೆ. ಬೇಡಿಕೆ ತೀವ್ರಗೊಂಡಿದ್ದರಿಂದ 1985 ರಲ್ಲೇ ಪ್ರತ್ಯೇಕ ಸಮಿತಿ ರಚಿಸಲಾಗಿತ್ತು.ಜಸ್ಟೀಸ್‌ ಸರೀನ್‌ ಸಮಿತಿಯು ಈ ಭಾಗದ ಪ್ರಗತಿಗೆ ಪ್ರತ್ಯೇಕ ರೈಲ್ವೆ ವಲಯ ಬೇಕು. ಇದು ಹೈದ್ರಾಬಾದ್‌ ಹಾಗೂ ಮುಂಬೈ ಭಾಗದಲ್ಲಿ ಹಂಚಿ ಹೋಗಿರುವುದರಿಂದ ರೈಲ್ವೆ ವಿಭಾಗ ರಚಿಸಬೇಕು ಎಂದು ವರದಿಯಲ್ಲಿ ತಿಳಿಸಿದ್ದರು. ಆದರೂ ಅದು ಜಾರಿಯಾಗಲಿಲ್ಲ. ಮುಂದೆ ಕರ್ನಾಟಕದಲ್ಲಿ ಪ್ರತ್ಯೇಕ ರೈಲ್ವೆ ವಲಯವೇ ಹುಬ್ಬಳ್ಳಿಯಲ್ಲಿ ರಚನೆಯಾಯಿತು. ನೈರುತ್ಯ ರೈಲ್ವೆಗೆ ನಮ್ಮನ್ನು ಸೇರಿಸಿ ಪ್ರತ್ಯೇಕ ವಿಭಾಗ ಮಾಡಿ ಎಂದು ಆಗಲೂ ಕಲಬುರಗಿ ಭಾಗದ ಜನ ಕೋರಿಕೊಂಡರು. ಆದರೂ ಆಗಲಿಲ್ಲ. ಆದರೆ ಕಲಬುರಗಿಯ ಸಂಸದರಾಗಿದ್ದ ಹಾಗೂ ಅಲ್ಪ ಅವಧಿಗೆ ರೈಲ್ವೆ ಸಚಿವರಾಗಿಯೂ ಕೆಲಸ ಮಾಡಿದ ಮಲ್ಲಿಕಾರ್ಜುನ ಖರ್ಗೆ ಅವರು ತವರಿನ ಬಹುಕಾಲದ ಬೇಡಿಕೆಗೆ ಸ್ಪಂದಿಸಿದರು. ಇಲ್ಲಿಯೇ ಪ್ರತ್ಯೇಕ ವಿಭಾಗಕ್ಕೆ ಘೋಷಿಸಿದರು. ಇದಕ್ಕಾಗಿ 20 ಕೋಟಿ ರೂ. ಅನುದಾನವನ್ನೂ ಘೋಷಿಸಿದರು. ಕರ್ನಾಟಕ ಸರ್ಕಾರ ಕಟ್ಟಡ ನಿರ್ಮಾಣ, ವಸತಿಗೃಹ ನಿರ್ಮಾಣ ಸಹಿತ ಹಲವು ಉದ್ದೇಶಗಳಿಗೆ 20 ಎಕರೆ ಭೂಮಿಯನ್ನೂ ನೀಡಿತ್ತು. ಪ್ರತ್ಯೇಕ ವಿಭಾಗಕ್ಕೆ ಶಂಕುಸ್ಥಾಪನೆ ನೆರವೇರಿತು. ಆದರೆ ವಿಭಾಗ ಮಾತ್ರ ರಚನೆಯಾಗಲೇ ಇಲ್ಲ.

ರಾಜಕೀಯ ಕಾರಣ

ಕಲಬುರಗಿ ಭಾಗದಲ್ಲಿ ಪ್ರತ್ಯೇಕ ರೈಲ್ವೆ ವಿಭಾಗ ರೂಪುಗೊಳ್ಳಲು ರಾಜಕೀಯವೂ ಅಡ್ಡಿಯಾಗಿದೆ. ಕಾಂಗ್ರೆಸ್‌ ಕಾಲದಲ್ಲಿ ಘೋಷಣೆಯಾದ ವಿಭಾಗವಿದು. ಇದಕ್ಕೆ ನಾವೇಕೇ ಒತ್ತು ನೀಡಬೇಕು ಎಂದು ಬಿಜೆಪಿ ಆನಂತರದಿಂದ ಅಭಿವೃದ್ದಿ ಕಡೆಗೆ ಗಮನ ನೀಡಿಲ್ಲ. ಇದರಿಂದ ವಿಭಾಗ ಬರೀ ಶಂಕುಸ್ಥಾಪನೆಗೆ ಮಾತ್ರ ಸೀಮಿತವಾಗಿದೆ. ಜನ ಪ್ರತಿ ಬಾರೀ ಬಜೆಟ್‌ ಬಂದಾಗ ಅನುದಾನ ಕೊಡಿ ಎಂದು ಬೇಡಿಕೆ ಇಡುತ್ತಾರೆ, ಬರೀ ಒಂದು ಸಾವಿರ ರೂ. ಅನುದಾನವನ್ನು ಇಲ್ಲಿಗೆ ಒದಗಿಸಿದರೆ ಆಗದು. ಹೆಚ್ಚು ಹಣ ಕಲ್ಯಾಣ ಕರ್ನಾಟಕ ರೈಲ್ವೆ ಅಭಿವೃದ್ದಿ ನೀಡಿ ಎಂದು ಹಿರಿಯ ಪತ್ರಕರ್ತ ಬಾಬುರಾವ ಯಡ್ರಾಮಿ ಒತ್ತಾಯಿಸುತ್ತಾರೆ.

ಕಲಬುರಗಿ ಪ್ರತ್ಯೇಕ ವಿಭಾಗದ ಬೇಡಿಕೆ ಹಲವು ವರ್ಷಗಳದ್ದು. ಕಲಬುರಗಿ ವಿಭಾಗವನ್ನು ಯಾವ ವಲಯಕ್ಕೆ ಸೇರಿಸಬೇಕು ಎನ್ನುವ ವಿಚಾರಗಳು ಇವೆ. ಈಗಾಗಲೇ ಈ ಕುರಿತು ರೈಲ್ವೆ ಉನ್ನತ ಅಧಿಕಾರಿಗಳ ಹಂತದಲ್ಲಿ ಚರ್ಚೆಗಳಾಗಿವೆ. ಬಜೆಟ್‌ನಲ್ಲಿ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯೂ ಇದೆ ಎಂದು ರೈಲ್ವೆ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

Whats_app_banner