ಕನ್ನಡ ಸುದ್ದಿ / ಕರ್ನಾಟಕ /
Budget 2025: ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ಯೋಜನೆಗಳ ಬೇಡಿಕೆಗಳೇನು, ಈ ಬಾರಿ ಪ್ರಮುಖ 10 ನಿರೀಕ್ಷೆಗಳು
ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ಕರ್ನಾಟಕದ ರೈಲ್ವೆ ವಲಯಕ್ಕೂ ಕಲಬುರಗಿ ಹೊಸ ವಿಭಾಗ, ಹೊಸ ವಂದೇ ಭಾರತ್ ರೈಲುಗಳ ಸೇರಿ ಹಲವು ನಿರೀಕ್ಷೆಗಳಿವೆ.

ಕೇಂದ್ರ ಬಜೆಟ್‌ನಲ್ಲಿ ಈ ಬಾರಿ ಕರ್ನಾಟಕದ ರೈಲ್ವೆ ಯೋಜನೆಗಳಿಗೆ ಹೆಚ್ಚಿನ ಅನುದಾನ ಸಿಗುವ ನಿರೀಕ್ಷೆಯಿದೆ.
ಕೇಂದ್ರ ಬಜೆಟ್ 2025ರ ಮಂಡನೆಗೆ ಇನ್ನೇನೂ ಕೆಲವೇ ದಿನಗಳು ಬಾಕಿ ಇದೆ. ಕೇಂದ್ರ ಬಜೆಟ್‌ನೊಂದಿಗೆ ರೈಲ್ವೆ ಇಲಾಖೆಯೂ ಸೇರಿರುವುದರಿಂದ ಮೊದಲಿನಂತೆ ಪ್ರತ್ಯೇಕ ಬಜೆಟ್ ಮಂಡನೆ ಇರುವುದಿಲ್ಲ. ಆದರೂ ರೈಲ್ವೆ ಇಲಾಖೆಗಳ ನಿರೀಕ್ಷೆಗಳು ಹೆಚ್ಚು ಇದ್ದೇ ಇರುತ್ತವೆ. ಅದರಲ್ಲೂ ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ರೈಲ್ವೆ ಸಂಪರ್ಕ ಜಾಲ, ಮೂಲಸೌಕರ್ಯಗಳ ಅಭಿವೃದ್ದಿ, ಹೊಸ ಮಾದರಿಯ ರೈಲುಗಳ ಸೇವೆ, ರೈಲ್ವೆ ಸೇವೆಗೆ ತಂತ್ರಜ್ಞಾನದ ಮಿಳಿತ ಹೆಚ್ಚಾಗುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವೂ ಕೂಡ ಹಿಂದಿನಿಂದಲೂ ರೈಲ್ವೆ ವಲಯಕ್ಕೆ ನಿರೀಕ್ಷೆಯಷ್ಟು ಬಜೆಟ್‌ನಲ್ಲಿ ಬೆಂಬಲ ಸಿಗದೇ ಇದ್ದರೂ ಪ್ರಮುಖ ಯೋಜನೆಗಳ ಅನುಷ್ಠಾನ, ಬೆಂಗಳೂರು ಸಹಿತ ಪ್ರಮುಖ ನಗರಗಳಲ್ಲಿ ರೈಲ್ವೆ ಸೇವೆ ಉನ್ನತೀಕರಣ,ನಿಲ್ದಾಣಗಳ ಅಭಿವೃದ್ದಿ, ಪ್ರಮುಖ ಮಾರ್ಗಗಳ ಜಾರಿಗೆ ಒತ್ತು ಸಿಕ್ಕಿದೆ. ಈ ಬಾರಿಯೂ ಬಜೆಟ್‌ನಲ್ಲಿ ಹೆಚ್ಚಿನ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.
- ಕರ್ನಾಟಕದವರೇ ಆದ ವಿ.ಸೋಮಣ್ಣ ಅವರು ರೈಲ್ವೆ ಖಾತೆ ರಾಜ್ಯ ಸಚಿವರು. ಕರ್ನಾಟಕ ಸಹಿತ ದಕ್ಷಿಣ ಭಾರತದ ರೈಲ್ವೆ ಇಲಾಖೆಯ ಮೇಲುಸ್ತುವಾರಿ ಅವರದ್ದೆ. ಕಳೆದ ಬಾರಿ ರೈಲ್ವೆ ಸಚಿವರಾಗಿ ಕೆಲವೇ ದಿನಗಳಾಗಿದ್ದಾಗ ಬಜೆಟ್ ಮಂಡನೆಯಾಗಿತ್ತು. ಇಲಾಖೆಯ ಬಗ್ಗೆಯೂ ಹೆಚ್ಚು ತಿಳಿದುಕೊಳ್ಳಲು ಆಗಿರಲಿಲ್ಲ. ಈಗ ಬಹುತೇಕ ಏಳೆಂಟು ತಿಂಗಳು ಸಚಿವರಾಗಿ ಕರ್ನಾಟಕ ರೈಲ್ವೆ ಸ್ಥಿತಿಗತಿಯನ್ನು ಅರಿಯುವ ಪ್ರಯತ್ನ ಮಾಡಿದ್ದಾರೆ. ಇದರಿಂದ ಉಳಿದುಕೊಂಡಿರುವ ಯೋಜನೆಗಳನ್ನು ಪೂರ್ಣಗೊಳಿಸುವ ಜತೆಗೆ ಸಮಗ್ರ ರೈಲ್ವೆ ಅಭಿವೃದ್ದಿಗೆ ಗಮನ ನೀಡುತ್ತಿದ್ದಾರೆ. ಬಜೆಟ್‌ನಲ್ಲಿ ಈ ಬಾರಿ ಸೋಮಣ್ಣ ಅವರ ವಿಶೇಷ ಪ್ರಯತ್ನಗಳೂ ಇವೆ
- ಮುಖ್ಯವಾಗಿ ತುಮಕೂರಿನ ಸಂಸದರೂ ಆಗಿರುವ ಸೋಮಣ್ಣ ಅವರು ಆ ಭಾಗದ ರೈಲ್ವೆ ಯೋಜನೆಗಳ ಜಾರಿಗೆ ಗಮನ ನೀಡಿದ್ಧಾರೆ. ತುಮಕೂರನ್ನು ಜಂಕ್ಷನ್ ಆಗಿ ರೂಪಿಸಿ ಈಗಿರುವ ಮಾರ್ಗದ ಜತೆಗೆ ಆಂಧ್ರಕ್ಕೆ ಸಂಪರ್ಕ ಕಲ್ಪಿಸುವ ರಾಯದುರ್ಗ ಮಾರ್ಗ ಜಾರಿ ಪ್ರಯತ್ನಕ್ಕೆ ಮುತುವರ್ಜಿ ವಹಿಸಿದ್ದಾರೆ.
- ತುಮಕೂರು- ಚಿತ್ರದುರ್ಗ- ದಾವಣಗೆರೆ ರೈಲ್ವೆ ಮಾರ್ಗದ ಬೇಡಿಕೆ ಹಳೆಯದ್ದು. ಈಗಾಗಲೇ ರೈಲ್ವೆ ಮಾರ್ಗದ ಕಾಮಗಾರಿಯೂ ಶುರುವಾಗಿದೆ. 2027ರ ಒಳಗೆ ಮುಗಿಸಬೇಕು ಎನ್ನುವುದು ಸಚಿವ ಸೋಮಣ್ಣ ಅವರ ಗುರಿ. ಈ ಬಾರಿ ಆಯವ್ಯಯದಲ್ಲಿ ರೈಲ್ವೆ ಮೂಲಸೌಕರ್ಯ ವೃದ್ದಿ ಅನುದಾನದಲ್ಲಿ ಈ ಯೋಜನೆಗೆ ಹೆಚ್ಚಿನ ನೆರವು ಸಿಗುವ ನಿರೀಕ್ಷೆಯಿದೆ
- ಧಾರವಾಡ ಹಾಗೂ ಬೆಳಗಾವಿ ನೇರ ಮಾರ್ಗದ ಯೋಜನೆಯೂ ಶುರುವಾಗಿ ಕಿತ್ತೂರಿನವರೆಗೆ ಎರಡು ವರ್ಷದಲ್ಲಿ ಮುಗಿಸುವ ಉದ್ದೇಶ ಹೊಂದಲಾಗಿದೆ. ಭೂಸ್ವಾಧೀನದ ವಿಳಂಬದಿಂದ ಯೋಜನೆಯೂ ವಿಳಂಬವಾಗಿದೆ. ಈ ಮಾರ್ಗದ ಯೋಜನೆಗೂ ಇನ್ನಷ್ಟು ಅನುದಾನ ಲಭಿಸುವ ಲೆಕ್ಕಾಚಾರಗಳಿವೆ
- ಉತ್ತರ ಕರ್ನಾಟಕದ ಪ್ರಮುಖ ಬೇಡಿಕೆಯಾದ ವಿಜಯಪುರದ ಆಲಮಟ್ಟಿಯಿಂದ ಯಾದಗಿರಿ ಭಾಗಕ್ಕೆ ಸಂಪರ್ಕ ಕಲ್ಪಿಸಿ ಅಲ್ಲಿಂದ ಹೈದ್ರಾಬಾದ್ ಮಾರ್ಗ ಸಮೀಪಗೊಳಿಸುವ ಯೋಜನೆಯೂ ಬಾಕಿ ಉಳಿದಿದೆ. ವಿಜಯಪುರ ಶೇಡಬಾಳ, ಬಾಗಲಕೋಟೆ ಜಿಲ್ಲೆ ಲೋಕಾಪುರದಿಂದ ಬೆಳಗಾವಿ ಜಿಲ್ಲೆಯ ಕುಡಚಿವರೆಗೂ ನಡೆಯುತ್ತಿರುವ ರೈಲ್ವೆ ಮಾರ್ಗದ ತ್ವರಿತಗೊಳಿಸಲು ಆರ್ಥಿಕ ನೆರವು ಸಿಗುವ ನಿರೀಕ್ಷೆಗಳಿವೆ.
- ಚಿಕ್ಕಮಗಳೂರಿನಿಂದ ಬೇಲೂರು ಮಾರ್ಗವಾಗಿ ಸಕಲೇಶಪುರ ಮಾರ್ಗಕ್ಕೆ ಸಂಪರ್ಕ ಕಲ್ಪಿಸಿ ಅಲ್ಲಿಂದ ಮಂಗಳೂರು ಭಾಗಕ್ಕೆ ಕೊಂಡಿಯಾಗುವ ರೈಲ್ವೆಮಾರ್ಗದ ಕುರಿತಾದ ಯೋಜನೆ ಇನ್ನೂ ಜಾರಿಯಾಗಿಲ್ಲ. ಇದಕ್ಕೂ ವಿಶೇಷ ಗಮನ ನೀಡಲಾಗುತ್ತಿದೆ.
- ಕರ್ನಾಟಕದಲ್ಲಿ ಹಲವು ಕಡೆ ರೈಲ್ವೆ ಮಾರ್ಗಗಳಲ್ಲಿ ಮೇಲ್ಸೇತುವೆ ಹಾಗೂ ಕೆಳ ಸೇತುವೆಗಳ ಅಗತ್ಯವಿದೆ. ಕರ್ನಾಟಕದಲ್ಲಿ ತುರ್ತು ಆಗಲೇಬೇಕಾಗಿರುವ ರೈಲ್ವೆ ಮೇಲ್ಸೇತುವೆ ಹಾಗೂ ಕೆಳಸೇತುವೆಗಳ ನಿರ್ಮಾಣಕ್ಕೆ ಆರ್ಥಿಕ ಬೆಂಬಲ ನೀಡಿ ಇದನ್ನು ಬಲಗೊಳಿಸುವ ಉದ್ದೇಶ ಹೊಂದಲಾಗಿದೆ. ಒಂದು ಸೇತುವೆ ನಿರ್ಮಾಣಕ್ಕೆ ಕನಿಷ್ಠ 40 ಕೋಟಿ ರೂ. ಬೇಕಾಗಿರುವುದರಿಂದ ಹೆಚ್ಚಿನ ಅನುದಾನ ಕೊಡಿಸುವ ಪ್ರಯತ್ನ ನಡೆದಿದೆ.
- ಕಲಬುರಗಿ ಭಾಗವು ಈಗಲೂ ಹೈದ್ರಾಬಾದ್ ಕೇಂದ್ರಿತ ರೈಲ್ವೆ ವಲಯದಲ್ಲಿದೆ. ಕಲಬುರಗಿಯನ್ನು ಬೆಂಗಳೂರು, ಹುಬ್ಬಳ್ಳಿ ಹಾಗೂ ಮೈಸೂರು ರೀತಿಯಲ್ಲಿಯೇ ಪ್ರತ್ಯೇಕ ವಿಭಾಗ ಮಾಡಿ ಅದನ್ನು ನೈರುತ್ಯ ರೈಲ್ವೆಗೆ ಸೇರಿಸುವ ಬೇಡಿಕೆಯಿದೆ. ಇದು ಕೂಡ ಈ ಬಜೆಟ್‌ನಲ್ಲಿ ಆಗಬಹುದಾ ಎನ್ನುವ ನಿರೀಕ್ಷೆಗಳನ್ನು ಇಟ್ಟುಕೊಳ್ಳಲಾಗಿದೆ.
- ಕರ್ನಾಟಕದ ಬೆಂಗಳೂರಿನಿಂದ ಮಂಗಳೂರು, ಶಿವಮೊಗ್ಗ, ಹುಬ್ಬಳ್ಳಿಯಿಂದ ಗುಂತಕಲ್ ಸಹಿತ ಹಲವು ಮಾರ್ಗಗಳಲ್ಲಿ ವಂದೇ ಭಾರತ್ ರೈಲು ಬೇಕು ಎನ್ನುವ ಬೇಡಿಕೆಯಿದೆ. ಈ ಬಾರಿ ಹೊಸ ವಂದೇ ಭಾರತ್ ರೈಲುಗಳ ಸೇರ್ಪಡೆಯಾದರೆ ಕರ್ನಾಟಕಕ್ಕೂ ಒತ್ತು ಸಿಗಬಹುದು ಎನ್ನುವ ಅಭಿಪ್ರಾಯಗಳಿವೆ.
- ಬೆಂಗಳೂರಿನಲ್ಲಿ ರೈಲ್ವೆ ಮೂಲಸೌಕರ್ಯಗಳ ಉನ್ನತೀಕರಣಕ್ಕೂ ಒತ್ತು ಸಿಗುತ್ತಿದೆ. ಬೈಪಾಸ್ ಮಾರ್ಗ ನಿರ್ಮಾಣವೂ ಸೇರಿದಂತೆ ಹಲವಾರು ಯೋಜನೆಗಳಿದ್ದು. ಅವುಗಳಿಗೂ ಒತ್ತು ಸಿಗಬಹುದು. ಅಲ್ಲದೇ ಅಮೃತ್ ಭಾರತ್ ಯೋಜನೆಯಡಿ ರೈಲ್ವೆ ನಿಲ್ದಾಣಗಳ ಅಭಿವೃದ್ದಿಗೆ ಚಾಲನೆ ದೊರೆತಿದ್ದು, ಇನ್ನಷ್ಟು ನಿಲ್ದಾಣಗಳ ಸೇರ್ಪಡೆ ಹಾಗೂ ಅನುದಾನ ಲಭ್ಯತೆಯ ನಿರೀಕ್ಷೆಗಳು ಗರಿಗೆದರಿವೆ.
