ಮುಡಾ ಸೈಟ್ ಹಗರಣ: ನಿವಾಸ, ಕಚೇರಿ ಮೇಲಿನ ಇಡಿ ನಡೆಸಿದ ದಾಳಿ ಬಳಿಕ ಬಿಲ್ಡರ್​ ಜಯರಾಮ್ ವಿಚಾರಣೆಯೂ ಮುಕ್ತಾಯ
ಕನ್ನಡ ಸುದ್ದಿ  /  ಕರ್ನಾಟಕ  /  ಮುಡಾ ಸೈಟ್ ಹಗರಣ: ನಿವಾಸ, ಕಚೇರಿ ಮೇಲಿನ ಇಡಿ ನಡೆಸಿದ ದಾಳಿ ಬಳಿಕ ಬಿಲ್ಡರ್​ ಜಯರಾಮ್ ವಿಚಾರಣೆಯೂ ಮುಕ್ತಾಯ

ಮುಡಾ ಸೈಟ್ ಹಗರಣ: ನಿವಾಸ, ಕಚೇರಿ ಮೇಲಿನ ಇಡಿ ನಡೆಸಿದ ದಾಳಿ ಬಳಿಕ ಬಿಲ್ಡರ್​ ಜಯರಾಮ್ ವಿಚಾರಣೆಯೂ ಮುಕ್ತಾಯ

MUDA Site Scam: ಮುಡಾ ಸೈಟ್ ಹಗರಣಕ್ಕೆ ಸಂಬಂಧಿಸಿ ಬಿಲ್ಡರ್ ಜಯರಾಮ್ ಅವರ ನಿವಾಸ, ಕಚೇರಿ ಮೇಲೆ ಜಾರಿ ನಿರ್ದೇಶನಾಲಯ ದಾಳಿ ನಡೆಸಿತ್ತು. ಬಳಿಕ ಜಯರಾಮ್ ವಿಚಾರಣೆಗೆ ಒಳಪಟ್ಟಿದ್ದರು. ಇದೀಗ ವಿಚಾರಣೆ ಪೂರ್ಣಗೊಂಡಿದೆ.

ಬಿಲ್ಡರ್​ ಜಯರಾಮ್
ಬಿಲ್ಡರ್​ ಜಯರಾಮ್

ಮೈಸೂರು: ತೀವ್ರ ಸಂಚಲನ ಸೃಷ್ಟಿಸಿರುವ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ಹಗರಣದ (MUDA Site Scam) ತನಿಖಾ ಅಖಾಡಕ್ಕೆ ಇಳಿದಿರುವ ಜಾರಿ ನಿರ್ದೇಶನಾಲಯ (ಇ.ಡಿ.) ನಡೆಸಿದ್ದ ಎಂಎಂಜಿ ಕನ್ಸ್‌ಸ್ಟ್ರಕ್ಷನ್ ಮಾಲೀಕ ಜಯರಾಮ್ (Jayaram) ತನಿಖೆ ಪೂರ್ಣಗೊಂಡಿದೆ. ಜಯರಾಮ್ ನಿವಾಸ, ಕಚೇರಿ ಮೇಲೆ ನಡೆದಿದ್ದ ತನಿಖೆ ಮುಕ್ತಾಯಗೊಂಡಿದೆ. ಸತತ 52 ಗಂಟೆಗಳ ಕಾಲ ಕಚೇರಿ, ಮನೆ, ಸೇರಿ ಹಲವೆಡೆಗಳಲ್ಲಿ ಇಡಿ ತಪಾಸಣೆ ಮಾಡಲಾಗಿತ್ತು. ಇದೀಗ ಇ.ಡಿ (ED) ವಿಚಾರಣೆ ಬಳಿಕ ಬಿಲ್ಡರ್ ಜಯರಾಮ್ ಹೇಳಿಕೆ ನೀಡಿದ್ದು, ಅಧಿಕಾರಿಗಳು ಕೇಳಿದ ಎಲ್ಲಾ ಮಾಹಿತಿ ಮತ್ತು ದಾಖಲೆಗಳನ್ನು ನೀಡಿದ್ದೇನೆ ಎಂದು ತಿಳಿಸಿದ್ದಾರೆ.

ಕಳೆದ ಹಲವು ವರ್ಷಗಳಿಂದ ಸಾವಿರಾರು ಮನೆ ಕಟ್ಟಿದ್ದೇನೆ. ಸಾವಿರಾರು ನಿವೇಶನ ಹಂಚಿದ್ದೇನೆ. ಕ್ಯಾಥೊಲಿಕ್ ಸೊಸೈಟಿಯಿಂದ 50:50 ಅನುಪಾತದಡಿಯಲ್ಲಿ 5 ನಿವೇಶನ ಪಡೆದಿದ್ದೇನೆ. ಇದರ ಬಗ್ಗೆಯೂ ಮಾಹಿತಿ ಕೊಟ್ಟಿದ್ದೇನೆ. ವಕ್ರತುಂಡ ಸಹಕಾರ ಸಂಘ ಸಾರ್ವಜನಿಕರ ಸೊಸೈಟಿಯಾಗಿದ್ದು, ಈ ಸೊಸೈಟಿಗೆ ನಾನು ಸಹ ನಿರ್ದೇಶಕನಾಗಿದ್ದೇನೆ. ಇದು ನಮಗೆ ಸೇರಿದ ಸೊಸೈಟಿಯಲ್ಲ. ನಾನು 9 ರೂಪಾಯಿ ಕೂಲಿಯಿಂದ ಕೆಸಲ ಆರಂಭ ಮಾಡಿದವನು. ಗಾರೆ ಕೆಲಸಕ್ಕಾಗಿ ಮೈಸೂರಿಗೆ ಬಂದು ಈ ಮಟ್ಟಕ್ಕೆ ಬೆಳೆದಿದ್ದೇನೆ. ಮುಡಾ ಮಾಜಿ ಆಯುಕ್ತ ದಿನೇಶ್‌ ಅವರಿಗೂ, ಅವರ ಭಾಮೈದ ತೇಜಸ್ ಗೌಡಾ ಅವರಿಗೂ ನನಗೂ ಯಾವುದೇ ಸಂಬಂಧ ಇಲ್ಲ ಎಂದು ಹೇಳಿದ್ದಾರೆ.

ಮತ್ತೆ ಕರೆದರೆ ವಿಚಾರಣೆಗೆ ಹೋಗುವೆ ಎಂದ ಜಯರಾಮ್

ದಿನೇಶ್‌ ಅವರು ಮುಡಾ ಕಮಿಷನರ್ ಆಗಿದ್ದಾಗ ಲೇಔಟ್ ಕೆಲಸಕ್ಕೆ ಭೇಟಿ ಮಾಡಿದೆ ಅಷ್ಟೇ. ದಿನೇಶ್ ಭಾಮೈದಾ ತೇಜಸ್ ಗೌಡ ನಮ್ಮ ಜೊತೆ ಯಾವುದೇ ವ್ಯವಹಾರ ಮಾಡಿಲ್ಲ. ಅವರ ಬಗ್ಗೆ ನನಗೆ ಹೆಚ್ಚು ಮಾಹಿತಿ ಇಲ್ಲ. ಮುಂದಿನ ದಿನಗಳಲ್ಲಿ ಇಡಿ ಮತ್ತೆ ಕರೆದರೆ ವಿಚಾರಣೆಗೆ ಹೋಗುತ್ತೇನೆ ಎಂದು ಇ.ಡಿ ದಾಳಿ ಅಂತ್ಯದ ಬಳಿಕ ಎಂಎಂಜಿ ಕನ್ಸ್ ಸ್ಟ್ರಕ್ಷನ್ ಮಾಲೀಕ ಜಯರಾಮ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಇ.ಡಿ ಅಧಿಕಾರಿಗಳು ಬೆಂಗಳೂರು, ಮಂಡ್ಯ ಸೇರಿ ಏಕಕಾಲಕ್ಕೆ ದಾಳಿ ನಡೆಸಿ ಪ್ರಕರಣಕ್ಕೆ ಸಂಬಂಧಿಸಿ ಹಲವು ದಾಖಲೆಗಳನ್ನು ವಶಪಡಿಸಿಕೊಂಡಿದ್ದರು.

ಸಿಎಂ ಪತ್ನಿ ವಿಚಾರಣೆ

ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ (CM Siddaramaiah Wife Parvathi) ವಿರುದ್ಧದ ವಿಚಾರಣೆಯೂ ತೀವ್ರಗೊಂಡದೆ. ಮೈಸೂರು ಲೋಕಾಯುಕ್ತ (Mysore Lokayukta) ಕಚೇರಿಗೆ ಆಗಮಿಸಿದ್ದ ಪಾರ್ವತಿ, ಸತತ ಮೂರು ಗಂಟೆಗಳ ಕಾಲ ವಿಚಾರಣೆಗೆ ಒಳಪಟ್ಟಿದ್ದರು. ಅವರಿಗೂ ಮೊದಲು ಅವರ ಸಹೋದರ ಮಲ್ಲಿಕಾರ್ಜುನ್ ಮತ್ತು ನಾಲ್ಕನೇ ಆರೋಪಿ ದೇವರಾಜು ಅವರನ್ನೂ ವಿಚಾರಣೆಗೆ ಒಳಪಡಿಸಿದ್ದರು. ಪ್ರಕರಣ ದಾಖಲಾದ ಹಲವು ದಿನಗಳ ನಂತರ ಸಿಎಂ ಪತ್ನಿ 14 ಸೈಟ್​​ಗಳನ್ನು ಮುಡಾಗೆ ವಾಪಸ್ (MUDA Site Return) ನೀಡಿದ್ದರು. ನಿವೇಶನ ವಾಪಸ್ ಕೊಟ್ಟಿದ್ದರೂ ತನಿಖೆ ಮುಂದುವರೆಯಲಿದೆ.