ಬೆಂಗಳೂರು ವರ್ಲ್ಡ್‌ ಟ್ರೇಡ್ ಸೆಂಟರ್‌ನಿಂದ ಅಮೆಜಾನ್ ಇಂಡಿಯಾ ಕೇಂದ್ರ ಕಚೇರಿ ಸ್ಥಳಾಂತರ; ಉದ್ಯೋಗಿಗಳಲ್ಲಿ ಅಸಮಾಧಾನ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ವರ್ಲ್ಡ್‌ ಟ್ರೇಡ್ ಸೆಂಟರ್‌ನಿಂದ ಅಮೆಜಾನ್ ಇಂಡಿಯಾ ಕೇಂದ್ರ ಕಚೇರಿ ಸ್ಥಳಾಂತರ; ಉದ್ಯೋಗಿಗಳಲ್ಲಿ ಅಸಮಾಧಾನ

ಬೆಂಗಳೂರು ವರ್ಲ್ಡ್‌ ಟ್ರೇಡ್ ಸೆಂಟರ್‌ನಿಂದ ಅಮೆಜಾನ್ ಇಂಡಿಯಾ ಕೇಂದ್ರ ಕಚೇರಿ ಸ್ಥಳಾಂತರ; ಉದ್ಯೋಗಿಗಳಲ್ಲಿ ಅಸಮಾಧಾನ

ಬೆಂಗಳೂರು ವರ್ಲ್ಡ್‌ ಟ್ರೇಡ್ ಸೆಂಟರ್‌ನಿಂದ ಅಮೆಜಾನ್ ಇಂಡಿಯಾ ಕೇಂದ್ರ ಕಚೇರಿ ಸ್ಥಳಾಂತರವಾಗಲಿದೆ. ಈ ಸ್ಥಳಾಂತರ ಪ್ರಕ್ರಿಯೆ ಮುಂದಿನ ವರ್ಷ ನಡೆಯಲಿದ್ದು, 5000ಕ್ಕೂ ಹೆಚ್ಚು ಉದ್ಯೋಗಿಗಳಲ್ಲಿ ಈ ಬೆಳವಣಿಗೆ ಅಸಮಾಧಾನ ಉಂಟುಮಾಡಿದೆ. ಇದರ ವಿವರ ಇಲ್ಲಿದೆ.

ಬೆಂಗಳೂರು ವರ್ಲ್ಡ್‌ ಟ್ರೇಡ್ ಸೆಂಟರ್‌ನಿಂದ ಅಮೆಜಾನ್ ಇಂಡಿಯಾ ಕೇಂದ್ರ ಕಚೇರಿ ಸ್ಥಳಾಂತರವಾಗಲಿದೆ. ಇದು ಉದ್ಯೋಗಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ವರ್ಲ್ಡ್‌ ಟ್ರೇಡ್ ಸೆಂಟರ್‌ನಿಂದ ಅಮೆಜಾನ್ ಇಂಡಿಯಾ ಕೇಂದ್ರ ಕಚೇರಿ ಸ್ಥಳಾಂತರವಾಗಲಿದೆ. ಇದು ಉದ್ಯೋಗಿಗಳಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ. (ಸಾಂಕೇತಿಕ ಚಿತ್ರ) (Dado Ruvic/Reuters)

ಬೆಂಗಳೂರು: ಅಮೆಜಾನ್ ಇಂಡಿಯಾ ತನ್ನ ಕಾರ್ಪೊರೇಟ್ ಪ್ರಧಾನ ಕಚೇರಿಯನ್ನು ಬೆಂಗಳೂರಿನಲ್ಲಿರುವ ವಿಶ್ವ ವ್ಯಾಪಾರ ಕೇಂದ್ರದಿಂದ ನಗರದ ಹೊರವಲಯಕ್ಕೆ ಸ್ಥಳಾಂತರಿಸುತ್ತಿದೆ. ಇದು ವೆಚ್ಚ ಕಡಿತದ ಭಾಗವಾಗಿ ವಿಮಾನ ನಿಲ್ದಾಣದಿಂದ 15 ನಿಮಿಷಗಳ ಪ್ರಯಾಣದ ಅಂತರದಲ್ಲಿ ಹೊಸ ಕಚೇರಿ ಇರಲಿದೆ ಎಂದು ಮಿಂಟ್ ವರದಿ ಮಾಡಿದೆ. ಹೊಸ ಸ್ಥಳದಲ್ಲಿ ಅಮೆಜಾನ್ ಇಂಡಿಯಾ ತನ್ನ ಕಚೇರಿ ಸ್ಥಳಕ್ಕೆ ಪಾವತಿಸುವ ಬಾಡಿಗೆಯು ಈಗ ಪಾವತಿಸುವ ಬಾಡಿಗೆಯ ಮೂರನೇ ಒಂದು ಅಂಶ ಮಾತ್ರ ಇದೆ. ಹೊಸ ಸ್ಥಳದಲ್ಲಿ 50,000 ಚದರ ಅಡಿ ಕಚೇರಿಗೆ ಅಮೆಜಾನ್ ಇಂಡಿಯಾ, ಪ್ರತಿ ಚದರ ಅಡಿಗೆ ಈಗ ಪಾವತಿಸುತ್ತಿರುವ 250 ರೂಪಾಯಿಯ ಮೂರನೇ ಒಂದು ಅಂಶ ಬಾಡಿಗೆ ಮಾತ್ರ ಪಾವತಿಸಿದರೆ ಸಾಕು. ಕೋವಿಡ್‌ ಲಾಕ್‌ಡೌನ್‌ ನಂತರ ಟೆಕ್ ಉತ್ಪನ್ನಗಳ ಬಳಕೆ ಕಡಿಮೆಯಾಗಿದೆ. ಹೀಗಾಗಿ ಅಮೆಜಾನ್‌ನಂತಹ ಕಂಪನಿಗಳು ಈಗ ವೆಚ್ಚವನ್ನು ಕಡಿತಗೊಳಿಸುವತ್ತ ಗಮನಹರಿಸುತ್ತಿವೆ. ಕೋವಿಡ್‌ಗೆ ಮೊದಲು ಬಡ್ಡಿದರಗಳು ಕಡಿಮೆಯಾಗಿದ್ದವು. ಅದೇ ರೀತಿ, ಜಾಗತಿಕ ಆರ್ಥಿಕತೆಯು ಪ್ರವರ್ಧಮಾನಕ್ಕೆ ಬರುತ್ತಿತ್ತು. ಈಗ ಪರಿಸ್ಥಿತಿ ಬದಲಾಗಿರುವುದು ಇದಕ್ಕೆ ಕಾರಣ ಎಂದು ವರದಿ ಹೇಳಿದೆ.

ಅಮೆಜಾನ್ ಇಂಡಿಯಾ ಕಚೇರಿ ಸ್ಥಳಾಂತರ ಪ್ರಕ್ರಿಯೆ ಏಪ್ರಿಲ್‌ನಲ್ಲಿ ಶುರು

ಅಮೆಜಾನ್ ಇಂಡಿಯಾ ಕಚೇರಿ ಸ್ಥಳಾಂತರವು ಏಪ್ರಿಲ್ 2025 ರಲ್ಲಿ ಪ್ರಾರಂಭವಾಗುತ್ತದೆ ಮತ್ತು ಏಪ್ರಿಲ್ 2026 ರ ವೇಳೆಗೆ ಪೂರ್ಣಗೊಳ್ಳುತ್ತದೆ. ಯೋಜಿತ ಸ್ಥಳಾಂತರಕ್ಕೆ ನಿಗದಿಯಾದ ಕಟ್ಟಡವು ಕೋಲ್ಕತ್ತಾ ಮೂಲದ ಖಾಸಗಿ ಸ್ವಾಮ್ಯದ ರಿಯಲ್ ಎಸ್ಟೇಟ್ ಡೆವಲಪರ್ ಸಲಾರ್‌ಪುರಿಯಾ ಗುಂಪಿನ ಭಾಗವಾದ ಸತ್ವಾ ಒಡೆತನದ್ದಾಗಿದೆ. ಅಮೆಜಾನ್‌ನ ಪ್ರಸ್ತುತ ಕಚೇರಿಯು 1,200 ಕ್ಕೂ ಹೆಚ್ಚು ವಸತಿ ಫ್ಲಾಟ್‌ಗಳು, ಶಾಪಿಂಗ್ ಕಾಂಪ್ಲೆಕ್ಸ್, ಪಂಚತಾರಾ ಹೋಟೆಲ್, ಆಸ್ಪತ್ರೆ ಮತ್ತು ಶಾಲೆಯೊಂದಿಗೆ 40 ಎಕರೆ ಸಂಕೀರ್ಣದಲ್ಲಿ ಕ್ಲಬ್ ಮತ್ತು ಜಾಗಿಂಗ್ ಟ್ರ್ಯಾಕ್‌ನಂತಹ ಇತರ ಸೌಲಭ್ಯಗಳನ್ನು ಹೊಂದಿದೆ. ಸ್ಥಳಾಂತರದ ಕಾರಣ 5000 ದಷ್ಟು ಉದ್ಯೋಗಿಗಳು ತಮ್ಮ ವಾಸ ಸ್ಥಳವನ್ನು ಬದಲಾಯಿಸಬೇಕಾಗುತ್ತದೆ. ಬಹುತೇಕರು ಫ್ಲ್ಯಾಟ್‌ಗಳಲ್ಲಿದ್ದಾರೆ. 20 ಕಿ.ಮೀ. ದೂರದ ಕಚೇರಿಗೆ ನಿತ್ಯವೂ ಪ್ರಯಾಣಿಸಬೇಕು ಎಂದರೆ ಒಂದು ಬದಿಗೆ ಒಂದೂವರೆ ಗಂಟೆ ಪ್ರಯಾಣಿಸಬೇಕಾಗುತ್ತದೆ ಎಂಬುದು ಅವರ ಅಸಮಾಧಾನಕ್ಕೆ ಕಾರಣ.

"ಇದು ವಾಸಸ್ಥಾನವಾಗಿತ್ತು. ಸುರಕ್ಷಿತ ಮತ್ತು ಶಾಂತ ನೆರೆಹೊರೆ, ನಮ್ಮ ಮಕ್ಕಳಿಗಾಗಿ ಶಾಲೆಗಳು, ಮಾಲ್ ಮತ್ತು ಊಟದ ಸ್ಥಳಗಳು ಎಲ್ಲವೂ ಆಸುಪಾಸಿನಲ್ಲೇ ಇದೆ. ಈಗ ನಾವು ಕಚೇರಿಗೆ ಹತ್ತಿರವಿರುವ ಇನ್ನೊಂದು ಮನೆಯನ್ನು ನೋಡಬೇಕಾಗಿದೆ, ಏಕೆಂದರೆ ಇಲ್ಲಿಂದ ಅಲ್ಲಿಗೆ ವಾಹನ ಚಲಾಯಿಸಿಕೊಂಡು ಹೋಗುವುದು ಪ್ರಾಕ್ಟಿಕಲ್ ಅಲ್ಲ" ಎಂದು ಆರು ವರ್ಷಗಳಿಂದ ಅಮೆಜಾನ್‌ನಲ್ಲಿ ಕಾರ್ಯನಿರ್ವಾಹಕರು ಹೇಳಿದ್ದಾಗಿ ವರದಿ ವಿವರಿಸಿದೆ.

ಬೋಯಿಂಗ್, ಇನ್ಫೋಸಿಸ್‌, ಫಾಕ್ಸ್‌ಕಾನ್‌ ಕೂಡ ಸ್ಥಳಾಂತರ ಸಾಧ್ಯತೆ

ಅಮೆಜಾನ್ ಮಾತ್ರ ಅಲ್ಲ. ಬೋಯಿಂಗ್, ಇನ್ಫೋಸಿಸ್ ಮತ್ತು ಫಾಕ್ಸ್‌ಕಾನ್ ಕೂಡ ಬೆಂಗಳೂರಿನ ವಿಮಾನ ನಿಲ್ದಾಣದ ಕಾರಿಡಾರ್‌ನಲ್ಲಿ ಭೂಮಿ ಖರೀದಿಸಲು ಪ್ರಾರಂಭಿಸಿವೆ. ಈ ಪ್ರದೇಶ ಇನ್ನೂ ನಮ್ಮ ಮೆಟ್ರೋ ರೈಲಿನ ಮೂಲಕ ಸಂಪರ್ಕ ಹೊಂದಿಲ್ಲ, ಆದರೆ ಇದು ಶೀಘ್ರದಲ್ಲೇ ಮೆಟ್ರೋ ಸಂಪರ್ಕವೂ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಕಂಪನಿಗಳಿವೆ ಎಂದು ವರದಿ ವಿವರಿಸಿದೆ. ಮೂವತ್ತು ಅಂತಸ್ತಿನ ಕಟ್ಟಡವನ್ನು ಹೊಂದಿರುವ ಲಿಸ್ಟೆಡ್ ರಿಯಲ್ ಎಸ್ಟೇಟ್ ಡೆವಲಪರ್ ಬ್ರಿಗೇಡ್ ಎಂಟರ್‌ಪ್ರೈಸಸ್ ಲಿಮಿಟೆಡ್ ಕಂಪನಿಯು ಈಗ ಅಮೆಜಾನ್‌ ಇಂಡಿಯಾ ಬಿಡುವ 18 ಮಹಡಿಯ ಜಾಗಕ್ಕೆ ಬಾಡಿಗೆದಾರರನ್ನು ಹೇಗೆ ಹುಡುಕುತ್ತದೆ ಎಂಬ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಲೈವ್ ಮಿಂಟ್‌ ವರದಿ ಹೇಳಿದೆ.

Whats_app_banner