ಬೆಂಗಳೂರಲ್ಲಿ ಬೈಟು ಕಾಫಿ ಕೂಡ ದುಬಾರಿಯಾಗಲಿದೆ, ಮಾರ್ಚ್‌ನಲ್ಲಿ ಕಾಫಿ ದರ 3 - 5 ರೂಪಾಯಿ ಏರಿಸ್ತಾರಂತೆ ಹೋಟೆಲ್‌ನವರು
Coffee Price Hike: ಹಾಲಿನ ದರ ಏರಿಕೆ ಸಾಧ್ಯತೆ ಹಾಗೂ ಕಾಫಿ ಪುಡಿ ದರ ಏರಿಕೆಯಾಗಿರುವ ಕಾರಣ ಮಾರ್ಚ್ ತಿಂಗಳಲ್ಲಿ ಮತ್ತೊಂದು ಬೆಲೆ ಏರಿಕೆಗೆ ಬೆಂಗಳೂರಿಗರು ತಲೆಯೊಡ್ಡಬೇಕಾಗಿದೆ. ಬೆಂಗಳೂರಲ್ಲಿ ಬೈಟು ಕಾಫಿ ಕೂಡ ದುಬಾರಿಯಾಗಲಿದೆ. ಹೌದು, ಹೋಟೆಲ್‌ನವರು ಮಾರ್ಚ್‌ನಲ್ಲಿ ಕಾಫಿ ದರವನ್ನು 3 - 5 ರೂಪಾಯಿ ಏರಿಸುವುದಾಗಿ ಘೋಷಿಸಿದ್ದಾರೆ.

Coffee Price Hike: ಬೆಲೆ ಏರಿಕೆಯ ಬಿಸಿ ಒಂದೊಂದಾಗಿ ಬೆಂಗಳೂರಿಗರನ್ನು ತಟ್ಟತೊಡಗಿದೆ. ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಬೆಂಗಳೂರು ಮೆಟ್ರೋ ಬೆಲೆ ಏರಿಕೆಯಿಂದ ಹಣಕಾಸು ಸರಿದೂಗಿಸುವ ಕಸರತ್ತಿನಲ್ಲಿರುವ ಬೆಂಗಳೂರಿನ ಬಡ ಮಧ್ಯಮವರ್ಗಕ್ಕೆ ಮಾರ್ಚ್ ಮೊದಲ ವಾರದಿಂದ ಮತ್ತೊಂದು ಬೆಲೆ ಏರಿಕೆಯ ಬಿಸಿ ತಟ್ಟಲಿದೆ. ಹೋಟೆಲ್‌ಗೆ ಹೋಗಿ ಬೈಟು ಕಾಫಿ ಕುಡಿಯೋಣ ಅಂದ್ರೂ ಜೇಬು ಮುಟ್ಟಿ ನೋಡಿಕೊಳ್ಳುವ ಪರಿಸ್ಥಿತಿ ಎದುರಾಗಲಿದೆ.
ಮಾರ್ಚ್‌ನಲ್ಲಿ 3 - 5 ರೂಪಾಯಿ ಏರಿಸ್ತಾರಂತೆ ಹೋಟೆಲ್‌ನವರು
ಕರ್ನಾಟಕ ಬಜೆಟ್ ಮುಗಿದ ಕೂಡಲೇ ನಂದಿನಿ ಹಾಲಿನ ದರ 5 ರೂಪಾಯಿ ಹೆಚ್ಚಳವಾಗುವ ಸಾಧ್ಯತೆ ಇದೆ ಎಂದು ಕೆಎಂಎಫ್ ಹಾಗೂ ಸರ್ಕಾರದ ಮೂಲಗಳು ಹೇಳುತ್ತಿವೆ. ಇನ್ನೊಂದೆಡೆ, ಮಾರ್ಚ್ ಮೊದಲ ವಾರದಲ್ಲಿ ಬೆಂಗಳೂರಿನ ಎಲ್ಲ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಕಾಫಿ ದರ 3 ರಿಂದ 5 ರೂಪಾಯಿ ಏರಿಕೆಯಾಗುವ ಸಾಧ್ಯತೆ ಇದೆ.
ಕಾಫಿ ಪುಡಿಯ ದರ ದಿನೇದಿನೆ ಏರಿಕೆಯಾಗುತ್ತಿದ್ದು, ಹೋಟೆಲ್‌ಗಳಲ್ಲಿ ಕಾಫಿ ತಯಾರಿಕಾ ವೆಚ್ಚವೂ ಹೆಚ್ಚಾಗಿದೆ. ಹೀಗಾಗಿ ಮಾರ್ಚ್ ಮೊದಲ ವಾರದಲ್ಲಿ ಬೆಂಗಳೂರಿನ ಎಲ್ಲ ಹೋಟೆಲ್‌ಗಳಲ್ಲಿ ಕಾಫಿ ದರವನ್ನು ಶೇಕಡ 10 ರಿಂದ ಶೇಕಡ 15ರ ತನಕ ಹೆಚ್ಚು ಮಾಡಲಾಗುತ್ತದೆ ಎಂದು ಬೃಹತ್ ಬೆಂಗಳೂರು ಹೋಟೆಲಗಳ ಸಂಘದ ಗೌರವ ಅಧ್ಯಕ್ಷ ಪಿ.ಸಿ. ರಾವ್ ತಿಳಿಸಿದ್ದಾಗಿ ಪ್ರಜಾವಾಣಿ ವರದಿ ಮಾಡಿದೆ.
ಕಾಫಿ ಇಳುವರಿ ಕುಸಿತ; ಕಾಫಿ ಪುಡಿ ದರ ಕಿಲೋಗೆ 200 ರೂ ಏರಿಕೆ
ಕರ್ನಾಟಕದಲ್ಲಿ ಕಾಫಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ ಕಾಫಿ ಪುಡಿ ಕೊಂಚ ದುಬಾರಿಯಾಗಿದೆ. ಕಾಫಿ ಪುಡಿ ದರ ಕಿಲೋಗೆ 200 ರೂಪಾಯಿ ಏರಿಕೆಯಾಗಿದ್ದು 800- 850 ರೂಪಾಯಿ ಇದ್ದ ದರ ಈಗ 1,000 ರೂ- 1,100 ರೂಪಾಯಿ ಆಗಿದೆ. ಕಾಫಿ ಪುಡಿ ದರ ಹೆಚ್ಚಳವಾಗಿರುವ ಕಾರಣ ಹೋಟೆಲ್, ರೆಸ್ಟೋರೆಂಟ್‌ಗಳಲ್ಲಿ ಕಾಫಿ ದರವೂ ಏರಿಕೆ ಮಾಡಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ ಎನ್ನುತ್ತಾರೆ ಹೋಟೆಲ್ ಉದ್ಯಮಿಗಳು.
ಚಿಕ್ಕಮಗಳೂರು ಸೇರಿ ಕಾಫಿ ಬೆಳೆವ ಪ್ರದೇಶದಲ್ಲಿ ಬೆಳೆ ಅದರಲ್ಲೂ ಅರೇಬಿಕಾ ಕಾಫಿ ಫಸಲು ಗಣನೀಯವಾಗಿ ಕುಸಿದಿದೆ. ರೊಬಸ್ಟಾ ಇಳುವರಿಯೂ ಕಡಿಮೆಯಾಗಿದೆ. ಕಾಫಿ ಸಾರ್ವಕಾಲಿಕ ದರ ಏರಿಕೆ ಕಂಡಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು ಎರಡನೇ ಬಾರಿ ಕಾಫಿ ಬೆಲೆ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಏರಿಳಿತವೂ ಇದಕ್ಕೆ ಕಾರಣವಾಗಿದೆ ಎಂದು ಕಾಫಿ ಮಂಡಳಿಯ ಮೂಲಗಳು ತಿಳಿಸಿವೆ.
ರೋಸ್ಟರ್‌ಗಳು ಮಾರಾಟ ಮಾಡುವ ಹುರಿದ ಕಾಫಿ ಪುಡಿ ಬೆಲೆಯನ್ನು ಫೆಬ್ರವರಿ ಅಂತ್ಯದ ವೇಳೆಗೆ ಪ್ರತಿ ಕೇಜಿಗೆ 100 ಹಾಗೂ ಮಾರ್ಚ್ ಅಂತ್ಯದ ವೇಳೆಗೆ ಪುನಃ 100 ರೂಪಾಯಿ ಹೆಚ್ಚಳ ಮಾಡುವುದಾಗಿ ತಿಳಿಸಿದ್ದಾರೆ. ಹುರಿದ ಕಾಫಿ ಬೆಲೆ ಏರಿಕೆ ಅನಿವಾರ್ಯ ಎಂದು ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿ ಹೇಳುತ್ತಿದೆ.
