ಬೆಂಗಳೂರು: ತಣಿದಿದೆ ಬೆಲೆ ಏರಿಕೆ ಬಿಸಿ, ಗ್ರಾಹಕರ ಜೇಬಿನ ಹೊರೆ ಕಡಿಮೆ ಮಾಡಿದ ಈರುಳ್ಳಿ, ಬೆಳ್ಳುಳ್ಳಿ ದರ ಇಳಿಕೆ
ಬೆಂಗಳೂರು: ಗ್ರಾಹಕರಿಗೆ ಒಂದು ಖುಷಿ ಸುದ್ದಿ. ಈರುಳ್ಳಿ, ಬೆಳ್ಳುಳ್ಳಿ ದರ ಇಳಿಕೆಯಾಗಿದ್ದು, ಅನೇಕರ ಜೇಬಿನ ಹೊರೆ ಕಡಿಮೆ ಮಾಡಿದೆ. ಇದರಿಂದಾಗಿ, ಹೋಟೆಲ್, ಆಹಾರೋದ್ಯಮ ಹಾಗೂ ಜನಸಾಮಾನ್ಯರಿಗೆ ಕೊಂಚ ನಿರಾಳ ಭಾವ ಮೂಡುವಂತಾಗಿದೆ.

ಬೆಂಗಳೂರು: ಕರ್ನಾಟಕದಲ್ಲಿ ಕಳೆದ ವರ್ಷ ಜನರಿಗೆ ದುಬಾರಿಯಾಗಿದ್ದ ಈರುಳ್ಳಿ, ಬೆಳ್ಳುಳ್ಳಿ ಈಗ ಕೈಗೆಟಕುವ ಸ್ಥಿತಿಗೆ ತಲುಪಿದೆ. ನಿತ್ಯ ಬಳಕೆಯ ಈರುಳ್ಳಿ- ಬೆಳ್ಳುಳ್ಳಿ ದರ ಇಳಿಕೆಯಾಗಿದ್ದು, ಗ್ರಾಹಕರ ಜೇಬಿನ ಹೊರೆಯನ್ನು ಕೊಂಚ ಕಡಿಮೆ ಮಾಡಿದೆ. ಸಗಟು ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಕಿಲೋಗೆ 120 ರೂಪಾಯಿಯಿಂದ 150 ರೂಪಾಯಿ ಇದೆ. ಇದೇ ರೀತಿ ಈರುಳ್ಳಿ ದರ ಕಿಲೋಗೆ 15 ರೂಪಾಯಿಯಿಂದ 30 ರೂಪಾಯಿ ಇದೆ.
ಬೆಳ್ಳುಳ್ಳಿ ದರ 500- 600 ರೂನಿಂದ 120-150 ರೂಗೆ ಇಳಿಕೆ
ಕರ್ನಾಟಕದಲ್ಲಿ ಈ ಬಾರಿ ಈರುಳ್ಳಿ, ಬೆಳ್ಳುಳ್ಳಿ ಪೂರೈಕೆ ಚೆನ್ನಾಗಿದ್ದು, ದರ ಇಳಿಕೆಯಾಗಿರುವ ಕಾರಣ ಗ್ರಾಹಕರು ಸ್ವಲ್ಪ ಮಟ್ಟಿಗೆ ನಿರಾಳರಾಗಿದ್ದಾರೆ. ಕಳೆದ ವರ್ಷ ಬೆಳ್ಳುಳ್ಳಿ ದರ ಕಿಲೋಗೆ 500 ರೂಪಾಯಿಯಿಂದ 600 ರೂಪಾಯಿ ತನಕ ಏರಿಕೆಯಾಗಿತ್ತು. ಕಳೆದ ವರ್ಷ ಹವಾಮಾನ ವೈಪರೀತ್ಯಗಳ ಕಾರಣ ವಿಶೇಷವಾಗಿ ಅತಿವೃಷ್ಟಿ ಕಾರಣ ಬೆಳೆ ನಾಶವಾಗಿತ್ತು. ಇದೂ ಅಲ್ಲದೆ, ಅಕಾಲದ ಮಳೆಯೂ ಬೆಳೆ ನಾಶಕ್ಕೆ ಕಾರಣವಾಯಿತು. ಈ ರೀತಿ ಬೆಳೆ ಆವೃತ್ತಿ ವ್ಯತ್ಯಾಸವಾಗಿ ಇಳುವರಿ ಕಡಿಮೆಯಾಗಿದೆ. ಹೀಗಾಗಿ, ಬೆಲೆ ಏರಿಕೆಯಾಗಿತ್ತು. ಈ ಬಾರಿ ಉತ್ತಮ ಬೆಳೆ ಹಾಗೂ ಇಳುವರಿಯಾಗಿದ್ದು, ಮಾರುಕಟ್ಟೆ ಪೂರೈಕೆಯಾಗುತ್ತಿದೆ. ಹೀಗಾಗಿ, ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಇಳಿಕೆಯಾಗಿದೆ ಎಂದು ದ ಹಿಂದೂ ವರದಿ ಮಾಡಿದೆ.
"ಹೊಸ ಬೆಳೆಯ ಇಳುವರಿ ಈಗಷ್ಟೆ ಬರಲಾರಂಭಿಸಿದೆ. ಪೂರೈಕೆಯು ಬೇಡಿಕೆಯನ್ನು ಮೀರಿಸಿದೆ. ಆದ್ದರಿಂದ, ಮಾರುಕಟ್ಟೆಯಲ್ಲಿ ಬೆಳ್ಳುಳ್ಳಿ ದರ ಇಳಿಕೆಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ಬೆಳ್ಳುಳ್ಳಿಯ ಕನಿಷ್ಠ ದರ ಇದಾಗಿದೆ. ಪೂರೈಕೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು, ದರ ಇನ್ನಷ್ಟು ಇಳಿಕೆಯಾಗಬಹುದು ಎಂದು ಸ್ಥಳೀಯ ವ್ಯಾಪಾರಿ ಹೇಳಿದ್ದಾಗಿ ವರದಿ ವಿವರಿಸಿದೆ. ಚಿಲ್ಲರೆ ಮಾರುಕಟ್ಟೆಗಳಲ್ಲೂ ಬೆಳ್ಳುಳ್ಳಿ ಪ್ರತಿ ಕಿಲೋಗೆ 140 - 150 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ.
ಈರುಳ್ಳಿ ದರ 100 ರೂಪಾಯಿ ಇದ್ದದ್ದು 15-20 ರೂಪಾಯಿಗೆ ಇಳಿಕೆ
ಕಳೆದ ವರ್ಷ (2024) ಕೊನೆಯ ಕೆಲವು ತಿಂಗಳ ಅವಧಿಯಲ್ಲಿ ಈರುಳ್ಳಿ ದರ ಕಿಲೋಗೆ 100 ರೂಪಾಯಿ ಗಡಿ ದಾಟಿತ್ತು. ಈರುಳ್ಳಿ ಫಸಲು ಕಡಿಮೆಯಾಗಿದ್ದು, ಮಾರುಕಟ್ಟೆಯ ಬೇಡಿಕೆ ಪೂರೈಸಲಾಗದೇ ಇದ್ದ ಕಾರಣ ದರ ಏರಿಕೆಯಾಗಿತ್ತು. ವಿಶೇಷವಾಗಿ ಕರ್ನಾಟಕದಲ್ಲಿ ಈರುಳ್ಳಿ ಫಸಲು ಕಡಿಮೆ ಇತ್ತು. ಈಗ ಇದು ಕೂಡ ಸರಿಯಾಗಿದ್ದು, 100 ರೂಪಾಯಿ ಇದ್ದ ದರ ಈಗ ಕಿಲೋಗೆ 15- 20 ರೂಪಾಯಿಗೆ ಇಳಿಕೆಯಾಗಿದೆ.
"ಈರುಳ್ಳಿಯ ಹೊಸ ಬೆಳೆಯ ಸೀಸನ್ ಶುರುವಾಗಿದೆ. ಹೊಸ ಈರುಳ್ಳಿ ಮಾರುಕಟ್ಟೆಗೆ ಬಂದಿದೆ. 15 ದಿನಗಳ ಮಳೆ ಕಾರಣ ಈರುಳ್ಳಿ 15 ದಿನಗಳಷ್ಟು ತಡವಾಗಿ ಬಂದಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರದ ಈರುಳ್ಳಿಗಳು ಮಾರುಕಟ್ಟೆಯನ್ನು ಸ್ಥಿರಗೊಳಿಸುವ ನಿರೀಕ್ಷೆ ಇದೆ. ದೊಡ್ಡ ಪ್ರಮಾಣದ ಈರುಳ್ಳಿ ಫಸಲು ಮಾರುಕಟ್ಟೆಗೆ ಬರಲಿದ್ದು, ಉತ್ತಮ ಗುಣಮಟ್ಟದ ಈರುಳ್ಳಿ ಸದ್ಯ ಕಿಲೋಗೆ 20 ರೂಪಾಯಿಗೆ ಮಾರಾಟವಾಗಿದೆ. ಸದ್ಯ ಚಿಲ್ಲರೆ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಈರುಳ್ಳಿ ಕಿಲೋಗೆ 30 ರೂಪಾಯಿ ದರದಲ್ಲಿ ಮಾರಾಟವಾಗುತ್ತಿದೆ. ಮಧ್ಯಮ ಗುಣಮಟ್ಟದ ಈರುಳ್ಳಿ ದರ ಕೊಂಚ ಇಳಿಕೆಯಾಗಿದೆ ಎಂದು ಬೆಂಗಳೂರಿನ ಈರುಳ್ಳಿ ಮರ್ಚೆಂಟ್ಸ್ ಅಸೋಸಿಯೇಶನ್ ಪ್ರತಿನಿಧಿಗಳು ತಿಳಿಸಿದ್ದಾಗಿ ವರದಿ ಹೇಳಿದೆ.
ಈರುಳ್ಳಿ ಮತ್ತು ಬೆಳ್ಳುಳ್ಳಿ ಬೆಲೆ ಕಡಿಮೆಯಾಗಿರುವುದು ಬಹಳ ಒಳ್ಳೆಯದಾಯಿತು. ಇವೆರಡೂ ಇಲ್ಲದೇ ಇದ್ದರೆ ಅಡುಗೆ ಮನೆಯ ಕಡೆಗೆ ಹೋಗುವುದೇ ಬೇಡವೆನಿಸುತ್ತದೆ ಎಂದು ಬೆಂಗಳೂರು ಮುನೇಶ್ವರ ಬ್ಲಾಕ್‌ನಲ್ಲಿರುವ ಗೃಹಿಣಿ ಸರೋಜಮ್ಮ ಹೇಳಿದ್ದಾರೆ.
