ಇಂದಿರಾನಗರದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಇನ್ನು ಒಂದೂವರೆ ಗಂಟೆ ಬೇಡ, ಕೇವಲ 5 ನಿಮಿಷ ಸಾಕು: ಹೇಗಂತೀರಾ..
ಬೆಂಗಳೂರು ನಗರ ಸಂಚಾರದಲ್ಲಿ ಶೀಘ್ರವೇ ಕ್ರಾಂತಿಕಾರಿ ಬದಲಾವಣೆಯಾಗುವ ಸೂಚನೆ ಇದೆ. “ಇಂದಿರಾನಗರದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಇನ್ನು ಒಂದೂವರೆ ಗಂಟೆ ಬೇಡ, ಕೇವಲ 5 ನಿಮಿಷ ಸಾಕು” ಎಂದು ಸರಳಾ ಏವಿಯೇಷನ್ ಸಿಇಒ ಆಂಡ್ರಿಯನ್ ಶಿಮಟ್ ಹೇಳಿರುವುದು ಗಮನಸೆಳೆದಿದೆ. ಕ್ರಾಂತಿಕಾರಿ ಬದಲಾವಣೆ ಯಾವ ರೀತಿ ಎಂಬುದರ ವಿವರ ಇಲ್ಲಿದೆ.

ಬೆಂಗಳೂರು: ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇದ್ದರೂ, ಅದು ನಗರದಿಂದ ಹೊರವಲಯದಲ್ಲಿದೆ. ನಗರದೊಳಗಿಂದ ಅಲ್ಲಿಗೆ ಪ್ರಯಾಣಿಸುವುದೇ ದೊಡ್ಡ ಸಾಹಸ, ಗಂಟೆಗಟ್ಟಲೆ ಪ್ರಯಾಣ. ಇನ್ನು ಈ ಚಿಂತೆ ಬೇಡ. “ಇಂದಿರಾನಗರದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಇನ್ನು ಒಂದೂವರೆ ಗಂಟೆ ಬೇಡ, ಕೇವಲ 5 ನಿಮಿಷ ಸಾಕು” ಎಂದು ಸರಳಾ ಏವಿಯೇಷನ್ ಸಿಇಒ ಆಂಡ್ರಿಯನ್ ಶಿಮಟ್ ಹೇಳಿಕೊಂಡಿದ್ದಾರೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಬಿಐಎಎಲ್) ಜತೆಗೆ ಒಪ್ಪಂದಕ್ಕೆ ಸಹಿ ಹಾಕಿರುವ ಸರಳಾ ಏವಿಯೇಷನ್, ನಗರದಿಂದ ವಿಮಾನ ನಿಲ್ದಾಣಕ್ಕೆ ಇ-ಟ್ಯಾಕ್ಸಿ ಸೇವೆ ಒದಗಿಸಲು ಸಜ್ಜಾಗಿದೆ. ಬಿಐಎಎಲ್ ಮತ್ತು ಸರಳಾ ಏವಿಯೇಷನ್ ಸಹಯೋಗದಲ್ಲಿ ಭಾರತದ ಮೊದಲ ಇವಿಟೋಲ್ (eVTOL) ಸ್ನೇಹಿ ವಿಮಾನ ನಿಲ್ದಾಣವನ್ನಾಗಿ ಬೆಂಗಳೂರು ಏರ್‌ಪೋರ್ಟ್ ಅನ್ನು ರೂಪಿಸುವ ಉದ್ದೇಶ ಇದೆ. ಇದು ಸುಸ್ಥಿರ ವಿಮಾನಯಾನಕ್ಕೆ ಹೊಸ ಮಾನದಂಡವಾಗಿ ರೂಪುಗೊಳ್ಳಲಿದೆ ಎಂದು ಸಂಸ್ಥೆ ಪ್ರಕಟಿಸಿದೆ.
ಇಂದಿರಾನಗರದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಇನ್ನು ಒಂದೂವರೆ ಗಂಟೆ ಬೇಡ: ಆಂಡ್ರಿಯನ್ ಶಿಮಟ್
ಇಂದಿರಾನಗರದಿಂದ ಬೆಂಗಳೂರು ಏರ್‌ಪೋರ್ಟ್‌ಗೆ ಇನ್ನು ಒಂದೂವರೆ ಗಂಟೆ ಬೇಡ, ಕೇವಲ 5 ನಿಮಿಷ ಸಾಕು ಎಂದು ಸರಳಾ ಏವಿಯೇಷನ್ ಸಿಇಒ ಆಂಡ್ರಿಯನ್ ಶಿಮಟ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. “ಬೆಂಗಳೂರಿನ ಸಂಚಾರ ದಟ್ಟಣೆಯ ಸವಾಲುಗಳನ್ನು ಎದುರಿಸುವಲ್ಲಿ ಮಹತ್ವದ ಹೆಜ್ಜೆ ಇದು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಜತೆಗೆ ಪಾಲುದಾರಿಕೆ ಮಾಡಿಕೊಳ್ಳಲು ಸಾಧ್ಯವಾಗಿರುವುದಕ್ಕೆ ಹೆಮ್ಮೆಪಡುತ್ತೇನೆ. ಪ್ರಸ್ತುತ, ಇಂದಿರಾನಗರದಿಂದ ವಿಮಾನನಿಲ್ದಾಣಕ್ಕೆ ಪ್ರಯಾಣವು 1.5 ಗಂಟೆಗಳನ್ನು ತೆಗೆದುಕೊಳ್ಳಬಹುದು. ಆದರೆ, ಅತಿ ಶೀಘ್ರದಲ್ಲೇ, ಸರಳಾ ಏವಿಯೇಷನ್‌ನ ವಿದ್ಯುತ್ ಚಾಲಿತ ಹಾರುವ ಟ್ಯಾಕ್ಸಿ ಈ ಅವಧಿಯನ್ನು 5 ನಿಮಿಷಗಳಿಗೆ ಇಳಿಸಲಿದೆ. ನಾಯಕತ್ವದ ದೃಷ್ಟಿಯಿಂದ ಬೆಂಗಳೂರು ವಿಮಾನ ನಿಲ್ದಾಣದಿಂದ ಪ್ರೇರಣೆ ಪಡೆದಿದ್ದೇನೆ. ನಾವು ಒಟ್ಟಾಗಿ ಕರ್ನಾಟಕ, ಭಾರತ ಮತ್ತು ಜಗತ್ತಿಗೆ ಭವಿಷ್ಯದ ಉತ್ತಮ ಸಂಚಾರ ವ್ಯವಸ್ಥೆಯನ್ನು ಒದಗಿಸಲು ನಾವು ಬದ್ಧರಾಗಿದ್ದೇವೆ” ಎಂದು ಶಿಮಟ್ ಹೇಳಿದ್ದಾರೆ.
ಬಿಐಎಎಲ್ ವಿಶ್ವಾಸ
ಹೊಸ ಕಂಪನಿ ಜತೆಗೆ ಇ ಟ್ಯಾಕ್ಸಿ ಸೇವೆ ಪಡೆಯುವ ನಿಟ್ಟಿನಲ್ಲಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವೂ ವಿಶ್ವಾಸದಲ್ಲಿದ್ದು, ಒಪ್ಪಂದದ ಕುರಿತು ಟ್ವೀಟ್ ಮಾಡಿದೆ. "ನಾವು ಒಟ್ಟಿಗೆ ಏಳು-ಆಸನಗಳ eVTOL (ಎಲೆಕ್ಟ್ರಿಕ್ ವರ್ಟಿಕಲ್ ಟೇಕ್-ಆಫ್ ಆಂಡ್ ಲ್ಯಾಂಡಿಂಗ್) ವಿಮಾನಗಳಿಗಾಗಿ ಹೊಸ ಕಾರ್ಯಾಚರಣೆಯ ಮಾದರಿಗಳ ಅಭಿವೃದ್ಧಿಗೆ ಪ್ರವರ್ತಕರಾಗಿ ಕೆಲಸ ಮಾಡುತ್ತೇವೆ. ಇದು ವಿಮಾನ ಪ್ರಯಾಣದ ವ್ಯಾಪ್ತಿಯು ಮತ್ತು ಸೇವೆ ಲಭ್ಯವಾಗುವುದನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ. ಈ ಉಪಕ್ರಮವು ಕೇವಲ ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದಕ್ಕಿಂತಲೂ ಇದು ಶುದ್ಧ, ವೇಗದ ಚಲನೆಯನ್ನು ಒದಗಿಸುವ ಉದ್ದೇಶವನ್ನು ಹೊಂದಿದೆ: ಎಂದು ಹೇಳಿದೆ.
ನಗರ ಸಂಚಾರಕ್ಕೆ ಹೊಸ ರೂಪ; ವಿಮಾನ ಯಾನಕ್ಕೆ ಪೂರಕ ಯಾನ
ಸರಳಾ ಏವಿಯೇಷನ್ ತನ್ನ ವೆಬ್‌ಸೈಟ್‌ನಲ್ಲಿ, ವಿಶ್ವದ ನಾಲ್ಕು ಅತ್ಯಂತ ಜನದಟ್ಟಣೆಯ ನಗರಗಳಾದ ಮುಂಬೈ, ಬೆಂಗಳೂರು, ದೆಹಲಿ ಮತ್ತು ಪುಣೆಯನ್ನು ಗುರಿಯಾಗಿಸಿಕೊಂಡು ನಗರ ಸಂಚಾರಕ್ಕೆ ಹೊಸ ರೂಪ ಕೊಡುವ ತನ್ನ ಗುರಿಯನ್ನು ವಿವರಿಸಿದೆ. "ಪ್ರಸ್ತುತ ಉಬರ್ ಅಥವಾ ಓಲಾ ರೈಡ್‌ಗಳಂತೆ ವಿಮಾನ ಸವಾರಿ-ಹಂಚಿಕೆಯನ್ನು ಕೈಗೆಟುಕುವಂತೆ ಮಾಡಲು ನಾವು ಬದ್ಧರಾಗಿದ್ದೇವೆ, ವೈವಿಧ್ಯಮಯ ಶ್ರೇಣಿಯ ಗ್ರಾಹಕರಿಗೆ ಲಭ್ಯವಾಗಬಹುದಾದ ಮತ್ತು ಪರಿಣಾಮಕಾರಿ ಸಾರಿಗೆಯ ಹೊಸ ಕ್ಷೇತ್ರವನ್ನು ತೆರೆಯುತ್ತದೆ" ಎಂದು ಸರಳಾ ಏವಿಯೇಷನ್ ಹೇಳಿದೆ.
ಇ-ಫ್ಲೈಯಿಂಗ್ ಟ್ಯಾಕ್ಸಿ ದರ ಎಲೆಕ್ಟ್ರಾನಿಕ್ ಸಿಟಿ - ಬೆಂಗಳೂರು ವಿಮಾನ ನಿಲ್ದಾಣ ನಡುವೆ 1,700 ರೂಪಾಯಿ ಇರಲಿದೆ. ಪ್ರಯಾಣದ ಅವಧಿ 19 ನಿಮಿಷ ಎಂದು ಸರಳಾ ಏವಿಯೇಷನ್ ವೆಬ್‌ಸೈಟ್ ಹೇಳಿಕೊಂಡಿದೆ. ಈ ದಾರಿಯಲ್ಲಿ ಪ್ರೀಮಿಯಂ ಕ್ಯಾಬ್‌ಗಳ ಸಂಚಾರಕ್ಕೆ 2 ಗಂಟೆಗೂ ಹೆಚ್ಚು ಸಮಯ ಬೇಕು. 37.5 ಕಿ.ಮೀ. ದೂರದ ಪ್ರಯಾಣಕ್ಕೆ 2,500 ರೂಪಾಯಿ ಪಾವತಿಸಬೇಕು. ಈ ನಿಟ್ಟಿನಲ್ಲಿ ಇ-ಫ್ಲೈಯಿಂಗ್ ಟ್ಯಾಕ್ಸಿ ನಗರ ಸಂಚಾರದಲ್ಲಿ ಕ್ರಾಂತಿ ಉಂಟುಮಾಡುವ ನಿರೀಕ್ಷೆ ಇದೆ ಎಂದು ಪರಿಣತರು ಅಂದಾಜಿಸಿದ್ದಾರೆ.