ಬೆಂಗಳೂರು: ಬೈಕ್ ಟ್ಯಾಕ್ಸಿ ಸಾರಿಗೆ ವಾಹನ; ರಾಪಿಡೋ ಮನವಿಯ ತೀರ್ಪು ಕಾದಿರಿಸಿದ ಕರ್ನಾಟಕ ಹೈಕೋರ್ಟ್
ಬೆಂಗಳೂರಿನಲ್ಲಿ ರಾಪಿಡೋ ಬೈಕ್ ಟ್ಯಾಕ್ಸಿಗಳು ಸರಿಯಾದ ನಿಯಮ ಪಾಲಿಸುತ್ತಿಲ್ಲ ಎಂದು ಅವುಗಳನ್ನು ನಿಷೇಧಿಸ ಹೊರಟ ಸರಕಾರದ ಕ್ರಮಕ್ಕೆ ನ್ಯಾಯಾಲಯ ತಡೆಯೊಡ್ಡಿದೆ. ರಾಪಿಡೋ ಸಂಸ್ಥೆ ಬೈಕ್ ಟ್ಯಾಕ್ಸಿಗಳನ್ನು ಸಾರಿಗೆ ವಾಹನವೆಂದೇ ಘೋಷಿಸಬೇಕು ಎಂಬ ಮನವಿಯ ತೀರ್ಪನ್ನುಕರ್ನಾಟಕ ಹೈಕೋರ್ಟ್ ಕಾಯ್ದಿರಿಸಿದೆ. (ವರದಿ - ಹರೀಶ್ ಮಾಂಬಾಡಿ)
ಬೆಂಗಳೂರು: ಕರ್ನಾಟಕದ ರಾಜಧಾನಿಯಲ್ಲಿ ಜನಪ್ರಿಯವಾಗಿರುವ ರಾಪಿಡೋ ಬೈಕ್ ಟ್ಯಾಕ್ಸಿಗಳು ಸರಿಯಾದ ನಿಯಮ ಪಾಲಿಸುತ್ತಿಲ್ಲ ಎಂದು ಅವುಗಳನ್ನು ನಿಷೇಧಿಸ ಹೊರಟ ಸರಕಾರದ ಕ್ರಮಕ್ಕೆ ನ್ಯಾಯಾಲಯ ತಡೆಯೊಡ್ಡಿದ ವಿಚಾರದ ನಂತರ, ಇದೀಗ ರಾಪಿಡೋ ಸಂಸ್ಥೆ ಬೈಕ್ ಟ್ಯಾಕ್ಸಿಗಳನ್ನು ಸಾರಿಗೆ ವಾಹನವೆಂದೇ ಘೋಷಿಸಬೇಕು ಎಂಬ ಮನವಿಗೆ ಸಂಬಂಧಿಸಿ ವಿಚಾರಣೆ ಆಲಿಸಿದ ಬಳಿಕ ಸೋಮವಾರ ಹೈಕೋರ್ಟ್ ಏಕಸದಸ್ಯ ಪೀಠ ತೀರ್ಪು ಕಾದಿರಿಸಿದೆ. ಡಿಸೆಂಬರ್ ಮೊದಲ, ದ್ವಿತೀಯ ವಾರದಲ್ಲಿ ಈ ಕುರಿತು ತೀರ್ಪು ಹೊರಬರುವ ಸಾಧ್ಯತೆ ಇದೆ.
ಪ್ರತಿ ವಾರ ರಾಪಿಡೋ ಬೈಕ್ ಟ್ಯಾಕ್ಸಿ ಮೂಲಕ ಸುಮಾರು 20 ಲಕ್ಷ ಸವಾರಿಗಳು ಆಗುತ್ತಿವೆ. ಇದು ಸಾರಿಗೆ ದಟ್ಟಣೆಯನ್ನು ನಿಯಂತ್ರಿಸುತ್ತದೆ, ಜನರಿಗೆ ಅನುಕೂಲವಾಗುತ್ತದೆ ಹಾಗೂ ಒಟ್ಟು ವ್ಯವಸ್ಥೆಯಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ, ಹೀಗಾಗಿ ರಾಪಿಡೊ ಬೈಕ್ ಟ್ಯಾಕ್ಸಿಗಳನ್ನು ಮುಂದುವರಿಸಲು ಅನುಮತಿ ನೀಡಬೇಕು ಎಂದು ಸರಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು ಎಂದು ಸಂಸ್ಥೆ ಒತ್ತಾಯಿಸಿ, ವಾದಿಸಿತ್ತು.
ದ್ವಿಚಕ್ರ ವಾಹನಗಳಿಗೆ ಕಾಂಟ್ರಾಕ್ಟ್ ಕ್ಯಾರೇಜ್ ಅನುಮತಿ ಮಂಜೂರಿಗೆ ಸಂಬಂಧಿಸಿದಂತೆ ಸಾರಿಗೆ ಇಲಾಖೆ ರಾಪಿಡೋಗೆ ಅನುಮತಿ ನೀಡುವ ವಿಚಾರದಲ್ಲಿ ಸಮಗ್ರ, ಸ್ಪಷ್ಟ ವಿಧಾನವನ್ನು ಅನುಸರಿಸಬೇಕು ಎಂದು ಸಂಸ್ಥೆ ಪ್ರಮುಖರು ಒತ್ತಾಯಿಸಿದ್ದರು.
ರಾಜ್ಯ ಸರಕಾರದ ವಾದವೇನು?
ಬಿಳಿ ನಂಬರ್ ಪ್ಲೇಟ್ ಹೊಂದಿರುವ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆ ಕರ್ನಾಟಕ ಮೋಟಾರು ವಾಹನ ನಿಯಮ ಉಲ್ಲಂಘಿಸುತ್ತದೆ ಎಂದು ರಾಜ್ಯ ಸರಕಾರದ ವಾದವಾಗಿದೆ. ಅಂಥ ದ್ವಿಚಕ್ರ ವಾಹನಗಳು ಕಾನೂನು ಪ್ರಕಾರ, ವಾಣಿಜ್ಯ ಕಾರ್ಯಾಚರಣೆಗಳನ್ನು ನಡೆಸುವಂತಿಲ್ಲ ಎಂದು ರಾಜ್ಯ ಸರಕಾರದ ವಾದ. ಬೈಕ್ ಟ್ಯಾಕ್ಸಿಗಳಲ್ಲಿ ಪ್ರಯಾಣಿಕರ ಸುರಕ್ಷತಾ ಕ್ರಮಗಳ ಕೊರತೆಯೂ ಇದ್ದು, ಇದರಿಂದ ಸಮಸ್ಯೆಗಳು ಉಂಟಾಗುತ್ತದೆ ಹೀಗಾಗಿ ಬೈಕ್ ಟ್ಯಾಕ್ಸಿಗಳ ಕಾರ್ಯಾಚರಣೆಯು ಕಾನೂನು ನಿಯಮ ಉಲ್ಲಂಘಿಸುವ ಕಾರಣ ಕಾನೂನುಬಾಹಿರವೂ ಆಗಿದೆ ಎಂದು ರಾಜ್ಯ ಸರಕಾರವು ವಾದಿಸಿದೆ.
ಆಟೊ ಚಾಲಕರು – ಬೈಕ್ ಟ್ಯಾಕ್ಸಿಗಳ ಸಂಘರ್ಷ
ಬೆಂಗಳೂರಿನಲ್ಲಿ ಬೈಕ್ ಟ್ಯಾಕ್ಸಿಗಳು ಕಾರ್ಯಾಚರಣೆ ನಡೆಸುತ್ತಿರುವ ಕಾರಣ, ಹಾಗೂ ಕಡಿಮೆ ವೆಚ್ಚದಲ್ಲಿ ಅವುಗಳು ಸಾಗುವ ಹಿನ್ನೆಲೆಯಲ್ಲಿ ಆಟೊ ಚಾಲಕರ ಜೀವನೋಪಾಯಕ್ಕೆ ಹಾನಿಯಾಗಿದೆ ಎಂದು ಆಟೊರಿಕ್ಷಾ ಚಾಲಕರು ವಾದಿಸುತ್ತಿದ್ದಾರೆ. ಬೈಕ್ ಟ್ಯಾಕ್ಸಿಗಳ ವಿರುದ್ಧ ಆಟೊ ಒಕ್ಕೂಟಗಳು ಹಲವು ಪ್ರತಿಭಟನೆ ನಡೆಸಿವೆ. ಕೆಲವೊಂದು ಸಂದರ್ಭ ದೈಹಿಕ ಘರ್ಷಣೆವರೆಗೂ ಸಾಗಿತ್ತು. ಹೀಗಾಗಿ ರಾಪಿಡೊ ಬೈಕ್ ಸವಾರರ ಮೇಲೆ ದಾಳಿ ಮಾಡುವ, ಬೆದರಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ. ಈ ಕುರಿತು ದಿ ಬೈಕ್ ಟ್ಯಾಕ್ಸಿ ವೆಲ್ಫೇರ್ ಅಸೋಸಿಯೇಶನ್ ಮನವಿ ನೀಡಿತ್ತು.
ತೀರ್ಪು ಕಾದಿರಿಸಿದ ನ್ಯಾಯಾಲಯ
ರಾಪಿಡೋ ಪ್ರಕರಣದಲ್ಲಿ ಹೈಕೋರ್ಟ್ ನ ಏಕಸದಸ್ಯ ಪೀಠ ಸೋಮವಾರ ತೀರ್ಪು ಕಾಯ್ದಿರಿಸಿದೆ. ದ್ವಿಚಕ್ರವಾಹನವನ್ನೂ ಸಾರಿಗೆ ವಾಹನಗಳಾಗಿ ನೋಂದಾಯಿಸಿ ರಾಜ್ಯ ಸರಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ರಾಪಿಡೋ ಬೈಕ್ ಟ್ಯಾಕ್ಸಿಯ ಮಾತೃಸಂಸ್ಥೆ ಕೇಳಿತ್ತು. ಕರ್ನಾಟಕ ಮೋಟಾರು ವಾಹನಗಳ ಕಾಯಿದೆಯಡಿ ನೀಡಲಾದ ಸೂಕ್ತ ಅನುಮತಿಗಳೊಂದಿಗೆ ದ್ವಿಚಕ್ರ ವಾಹನಗಳನ್ನು ಸಾರಿಗೆ ವಾಹನಗಳನ್ನಾಗಿ ನೋಂದಾಯಿಸಿಕೊಳ್ಳಬಹುದು ಎಂದು ರಾಪಿಡೋ ಸಂಸ್ಥೆ ಕೋರಿತ್ತು. ಕಳೆದ ಮೂರು ವರ್ಷಗಳಿಂದ ಈ ಪ್ರಕರಣದ ವಿಚಾರಣೆ ನಡೆಸುತ್ತಿರುವ ಜಸ್ಟೀಸ್ ಬಿ.ಎಂ.ಶ್ಯಾಮಪ್ರಸಾದ್ ಅವರ ಕರ್ನಾಟಕ ಹೈಕೋರ್ಟ್ ಏಕಸದಸ್ಯ ಪೀಠ ಡಿಸೆಂಬರ್ ಮೊದಲ ಅಥವಾ ಎರಡನೇ ವಾರ ತೀರ್ಪು ಪ್ರಕಟಿಸುವ ಸಾಧ್ಯತೆಗಳಿವೆ.
ಬೈಕ್ ಟ್ಯಾಕ್ಸಿ ಕಾರ್ಯಾಚರಣೆಗಳ ವಿರುದ್ಧ ಸರಕಾರಿ ಆದೇಶವನ್ನು ರದ್ದುಗೊಳಿಸಬೇಕು ಎಂದು ರಾಪಿಡೋ ಬಯಸಿದೆ. 2021ರ ಜುಲೈ 19ರಂದು ನೀಡಲಾಗಿದ್ದ ಬೈಕ್ ಟ್ಯಾಕ್ಸಿ ಕಾರ್ಯಾಚರಣೆಯನ್ನು ವಿರೋಧಿಸುವ ಸರಕಾರಿ ಆದೇಶವನ್ನು ರದ್ದುಗೊಳಿಸಬೇಕು ಎಂದು ಸಂಸ್ಥೆ ಮನವಿ ಮಾಡಿದೆ. 2021ರಲ್ಲಿ ರಾಪಿಡೋ ಬೈಕ್ ಟ್ಯಾಕ್ಸಿಗಳ ವಿರುದ್ಧ ಯಾವುದೇ ಬಲವಂತದ ಕ್ರಮಗಳನ್ನು ತೆಗೆದುಕೊಳ್ಳದಿರುವಂತೆ ನ್ಯಾಯಾಲಯ ಮಧ್ಯಂತರ ಆದೇಶ ನೀಡಿತ್ತು.
(ವರದಿ - ಹರೀಶ್ ಮಾಂಬಾಡಿ)