Bangalore Startup Park: ಬೆಂಗಳೂರಿಗೆ ಪ್ರತ್ಯೇಕ ಸ್ಟಾರ್ಟ್ಅಪ್ ಪಾರ್ಕ್, ಜಪಾನ್, ದಕ್ಷಿಣ ಕೋರಿಯಾ ಮಾದರಿ ಅಳವಡಿಕೆ
Bangalore News ಬೆಂಗಳೂರಿನಲ್ಲಿ ಉದ್ಯಮ ಉತ್ತೇಜಿಸಲು ಸ್ಟಾರ್ಟ್ ಅಪ್ ಪಾರ್ಕ್ ( Start up park) ಅನ್ನು ಪ್ರತ್ಯೇಕವಾಗಿ ರೂಪಿಸಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಬೆಂಗಳೂರು: ದೇಶದ ಸ್ಟಾರ್ಟ್ಅಪ್ಗಳ ರಾಜಧಾನಿ ಖ್ಯಾತಿಯ ಬೆಂಗಳೂರಿನಲ್ಲಿ ಪ್ರತ್ಯೇಕ ಸ್ಟಾರ್ಟ್ಅಪ್ ಪಾರ್ಕ್ ಸ್ಥಾಪಿಸಲಾಗುವುದು. ಜಪಾನ್, ದಕ್ಷಿಣ ಕೊರಿಯಾಗಳ ಮಾದರಿಯಲ್ಲಿ ಈ ಸ್ಟಾರ್ಟ್ಅಪ್ ಪಾರ್ಕ್ ಅಭಿವೃದ್ಧಿಪಡಿಸಲಾಗುವುದು. ಈ ಪಾರ್ಕ್ನಲ್ಲಿ ನವೋದ್ಯಮಗಳ ಅಗತ್ಯಗಳಿಗೆ ತಕ್ಕಂತೆ ಸ್ಥಳಾವಕಾಶ / ನಿವೇಶನ ಒದಗಿಸಲಾಗುವುದು. ಸಕಲ ಸೌಲಭ್ಯ ಸಜ್ಜಿತ, ಬಳಕೆಗೆ ಸಿದ್ಧ ಇರುವ ಕಚೇರಿಗಳು ಇಲ್ಲಿ ಇರಲಿವೆ. ಪ್ರತಿಭಾನ್ವಿತ ನವೋದ್ಯಮಿಗಳು ತಮ್ಮ ವಿನೂತನ ಆಲೋಚನೆಗಳನ್ನು ಸುಲಲಿತವಾಗಿ ಕಾರ್ಯಗತಗೊಳಿಸಲು ಪೂರಕವಾದ ಪರಿಸರವನ್ನು ಬೆಂಗಳೂರಿನಲ್ಲಿ ಕಲ್ಪಿಸಿಕೊಡಲು ಕರ್ನಾಟಕ ಸರ್ಕಾರ ಮುಂದಾಗಿದೆ.
ಬೆಂಗಳೂರಿನಲ್ಲಿ ನಡೆದಿರುವ ಜಾಗತಿಕ ನವೋದ್ಯಮಗಳ ಸವಾಲಿನ ಎರಡನೇ ಆವೃತ್ತಿ ʼವೆಂಚುರೈಸ್ 24ʼ ಅನಾವರಣಗೊಳಿಸಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಈ ವಿಷಯ ಪ್ರಕಟಿಸಿದರು.
ʼನವೋದ್ಯಮ ಸವಾಲುʼ- ಉಪಕ್ರಮವು ಕರ್ನಾಟಕವನ್ನು ಜಾಗತಿಕ ನಾವೀನ್ಯತೆ ಕೇಂದ್ರವಾಗಿ ಬೆಳೆಸುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ. ಹೂಡಿಕೆದಾರರು ಮತ್ತು ಉದ್ಯಮ ಪಾಲುದಾರರ ಮಧ್ಯೆ ಸಂವಹನ ಒದಗಿಸುವ ಮೂಲಕ ತಯಾರಿಕೆ ಮತ್ತು ಸಂಬಂಧಿತ ವಲಯಗಳಲ್ಲಿನ ನವೋದ್ಯಮಗಳಿಗೆ ಕರ್ನಾಟಕವನ್ನು ಆದ್ಯತೆಯ ತಾಣವನ್ನಾಗಿ ಮಾಡಲಿದೆ. ʼವೆಂಚುರೈಸ್-24ʼ ಕಾರ್ಯಕ್ರಮದ ಯಶಸ್ಸಿಗೆ ಟಿಐಇ ಗ್ಲೋಬಲ್ ಜೊತೆಗೆ ಕೈಜೋಡಿಸುವುದಕ್ಕೆ ನಮಗೆ ಸಂತಸವಾಗುತ್ತಿದೆ. ಹೊಸ ಉಪಕ್ರಮಗಳನ್ನು ಪರಿಚಯಿಸುವ, ಮಾರ್ಗದರ್ಶನ ಕಾರ್ಯಕ್ರಮಗಳನ್ನು ವಿಸ್ತರಿಸುವ ಮತ್ತು ಜಾಗತಿಕ ಹೂಡಿಕೆದಾರರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸುವ ಮೂಲಕ ಈ ವರ್ಷದ ಕಾರ್ಯಕ್ರಮವನ್ನು ಇನ್ನಷ್ಟು ದೊಡ್ಡದಾಗಿ ಮತ್ತು ಉತ್ತಮಗೊಳಿಸಲು ನಾವು ಬದ್ಧರಾಗಿದ್ದೇವೆʼ ಎನ್ನುವುದು ಸಚಿವರ ವಿವರಣೆ.
2.50 ಕೋಟಿ ರೂ. ಮೊತ್ತದ ಬಹುಮಾನ ಹಂಚಿಕೆ
ನವೋದ್ಯಮ ಸವಾಲು- 3 ಸುತ್ತುಗಳನ್ನು ಒಳಗೊಂಡಿರಲಿದ್ದು, ಈ ಸವಾಲು ಗೆಲ್ಲಲು ಮುಂಚೂಣಿಯಲ್ಲಿ ಇರುವ ನವೋದ್ಯಮಗಳಿಗೆ 2.50 ರೂ. ಕೋಟಿ ಮೊತ್ತದ ಬಹುಮಾನ ಹಂಚಲಾಗುವುದು ಎಂದರು ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ.
ಈ ಪ್ರಕ್ರಿಯೆಯು ಆನ್ಲೈನ್ ಅರ್ಜಿ ಸಲ್ಲಿಕೆ, ತೀರ್ಪುಗಾರರಿಗೆ ಆನ್ಲೈನ್ನಲ್ಲಿ ಮಾಹಿತಿ ನೀಡುವ ಮತ್ತು ಜಾಗತಿಕ ಹೂಡಿಕೆದಾರರ ಸಭೆಯಲ್ಲಿ ವಿವರಗಳನ್ನು ಪ್ರಸ್ತುತ ಪಡಿಸುವುದನ್ನು ಒಳಗೊಂಡಿರಲಿದ್ದು, ಇದನ್ನು 3 ರಿಂದ 4 ತಿಂಗಳ ಅವಧಿಯಲ್ಲಿ ಪೂರ್ಣಗೊಳಿಸಲಾಗುವುದು. ʼವೆಂಚುರೈಸ್ -24ʼ ವಿಶ್ವದಾದ್ಯಂತ 1,000 ಕ್ಕೂ ಹೆಚ್ಚು ಪ್ರವೇಶಗಳನ್ನು ಆಕರ್ಷಿಸುವ ಗುರಿ ಹೊಂದಿದೆ. ಉದ್ಯಮಗಳನ್ನು ಯಶಸ್ಸಿನ ಹಾದಿಯಲ್ಲಿ ಮುನ್ನಡೆಸುವ ವಿವಿಧ ಹೂಡಿಕೆದಾರರ ಜೊತೆ ಸಂವಹನಕ್ಕೂ ಇದು ಅವಕಾಶ ಒದಗಿಸಲಿದೆ ಎಂದು ಅವರು ವಿವರಿಸಿದರು.
ಸಮಾರಂಭದಲ್ಲಿ ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ, ಸ್ಟಾರ್ಟ್ಅಪ್ ವಿಷನ್ ಗ್ರೂಪ್ ಅಧ್ಯಕ್ಷ ಪ್ರಶಾಂತ ಪ್ರಕಾಶ ಅವರು ಉಪಸ್ಥಿತರಿದ್ದರು.
ಎರಡನೇ ಆವೃತ್ತಿಯ ವೆಂಚುರೈಸ್
ಹಿಂದಿನ ವರ್ಷದ ಯಶಸ್ಸಿನಿಂದ ಸ್ಫೂರ್ತಿ ಪಡೆದಿರುವ ಕರ್ನಾಟಕ ರಾಜ್ಯ ಸರ್ಕಾರವು, ಟಿಐಇ ಗ್ಲೋಬಲ್ ಮತ್ತು ಟಿಐಇ ಬೆಂಗಳೂರಿನ ಸಹಯೋಗದಲ್ಲಿ ಈ ಬಾರಿಯ ವೆಂಚುರೈಸ್ ಆಯೋಜಿಸುತ್ತಿದೆ. ಈ ವರ್ಷದ ಜಾಗತಿಕ ನವೋದ್ಯಮ ಸವಾಲನ್ನು - ವಿವಿಧ ಕ್ಷೇತ್ರಗಳಲ್ಲಿನ ಹೊಸ ಆವಿಷ್ಕಾರಗಳನ್ನು ಗುರುತಿಸಲು, ಪೋಷಿಸಲು ಮತ್ತು ಬೆಂಬಲಿಸುವ ಉದ್ದೇಶಕ್ಕೆ ಸಮರ್ಪಿಸಲಾಗಿದೆ.
ಮೂರು ಪ್ರಮುಖ ವಲಯಗಳಾದ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮತ್ತು ಮ್ಯಾನುಫ್ಯಾಕ್ಚರಿಂಗ್ (ಇಎಸ್ಡಿಎಂ), ಶುದ್ಧ ಇಂಧನ ವಾಹನ ಸಂಚಾರ, ವೈಮಾಂತರಿಕ್ಷ ಹಾಗೂ ರಕ್ಷಣಾ ಕ್ಷೇತ್ರಗಳಿಗೆ ʼವೆಂಚುರೈಸ್ 24ʼ ಗಮನ ಕೇಂದ್ರೀಕರಿಸಲಿದೆ. ಈ ವಲಯಗಳ ಉದ್ಯಮಿಗಳೇ ತಾವು ಎದುರಿಸುತ್ತಿರುವ ಸವಾಲುಗಳನ್ನು ಇಲ್ಲಿ ಪ್ರಸ್ತುತಪಡಿಸಲಿದ್ದಾರೆ. ನವೋದ್ಯಮಗಳು ವಾಸ್ತವ ಪ್ರಪಂಚದ ಸವಾಲುಗಳನ್ನು ಬಗೆಹರಿಸಲು ಇದರಿಂದ ನೆರವಾಗಲಿದೆ. ಉದ್ಯಮಗಳು ಎದುರಿಸುತ್ತಿರುವ ಸವಾಲುಗಳನ್ನು ಪರಿಹರಿಸಲು ಮುಂದೆ ಬರುವ ಪ್ರವರ್ಧಮಾನಕ್ಕೆ ಬರುತ್ತಿರುವ ನವೋದ್ಯಮಗಳಿಗೆ ತಮ್ಮ ಸಾಮರ್ಥ್ಯ ಪ್ರದರ್ಶಿಸಲು ಇದೊಂದು ಸಮರ್ಥ ವೇದಿಕೆಯಾಗಿರಲಿದೆ. ಜೊತೆಗೆ ಹೂಡಿಕೆದಾರರು ಮತ್ತು ಮಾರ್ಗದರ್ಶಕರ ನೆರವು ಪಡೆಯುವುದಕ್ಕೂ ಸಾಧ್ಯವಾಗಲಿದೆ.
ನವೋದ್ಯಮಗಳು ಮಾರ್ಗದರ್ಶನ ಪಡೆಯಲಿರುವ ಉದ್ಯಮ ಪ್ರಮುಖರ ವಿವರ ಹೀಗಿದೆ
• ಅಂಕಿತ್ ಫತೇಪುರಿಯಾ- ಜೆಟ್ವೆರ್ಕ್ನ ಸಹ-ಸಂಸ್ಥಾಪಕ
• ಅವೈಸ್ ಅಹ್ಮದ್ - ಪಿಕ್ಸೆಲ್ನ ಸ್ಥಾಪಕ ಮತ್ತು ಸಿಇಒ
• ಗಧಾಧರ್ ರೆಡ್ಡಿ - ನೊಪೊ ನ್ಯಾನೊಟೆಕ್ನಾಲಜೀಸ್ನ ಸಂಸ್ಥಾಪಕ ಮತ್ತು ಸಿಇಒ
• ಮಿನು ಮಾರ್ಗರೇಟ್ - ಬ್ಲಿಸ್ ಕ್ಲಬ್ನ ಸಂಸ್ಥಾಪಕಿ ಮತ್ತು ಸಿಇಒ
* ಕೌಶಿಕ್ ಮುಡ್ಡಾ- ಎಥೆರಿಯಲ್ ಮಷೀನ್ಸ್ನ ಸಹ-ಸಂಸ್ಥಾಪಕ ಮತ್ತು ಸಿಇಒ
• ರೋಹನ್ ಗಣಪತಿ - ಬೆಲಾಟ್ರಿಕ್ಸ್ ಏರೊಸ್ಪೇಸ್ನ ಸಿಇಒ ಮತ್ತು ಸಿಟಿಒ