ಅಮೆಜಾನ್ ಕಂಪನಿಯ 1 ಕೋಟಿ ರೂ ಉದ್ಯೋಗ ಬಿಟ್ಟು ಸ್ವಂತ ಸ್ಟಾರ್ಟಪ್ ಆರಂಭಿಸಿದ ಬೆಂಗಳೂರು ಟೆಕ್ಕಿಯ ಸೋಲಿನ ಕಥೆ ವೈರಲ್
ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಒಂದು ಕೋಟಿ ರೂಪಾಯಿ ಪ್ಯಾಕೇಜ್‌ನ ಅಮೆಜಾನ್ ಉದ್ಯೋಗ ಬಿಟ್ಟು ಸ್ವಂತ ಉದ್ಯಮ ಸ್ಥಾಪಿಸಿ ಸೋಲು ಅನುಭವಿಸಿದ ಕಥೆಯನ್ನು ಹಂಚಿಕೊಂಡಿದ್ದಾರೆ. 2025ರ ಹೊಸ ವರ್ಷದಲ್ಲಿಯಾದರೂ ಯಶಸ್ಸು ದೊರಕಲಿ ಎಂದು ಆಶಿಸಿದ್ದಾರೆ. ಅವರ ಸೋಲಿನ ಕಥೆ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಸಾಕಷ್ಟು ಜನರು ಯಶಸ್ಸಿನ ಕನಸು ಕಾಣುತ್ತಾರೆ. ಆದರೆ, ಯಶಸ್ಸು ಎಲ್ಲರಿಗೂ ಒಂದೇ ಗುಕ್ಕಿಗೆ ದೊರಕುವುದಿಲ್ಲ. ಬೆಂಗಳೂರು ಮೂಲದ ಟೆಕ್ಕಿಯೊಬ್ಬರು ಒಂದು ಕೋಟಿ ರೂಪಾಯಿ ಪ್ಯಾಕೇಜ್‌ನ ಅಮೆಜಾನ್ ಉದ್ಯೋಗ ಬಿಟ್ಟು ಸ್ವಂತ ಉದ್ಯಮ ಸ್ಥಾಪಿಸಿ ಸೋಲು ಅನುಭವಿಸಿದ ಕಥೆಯನ್ನು ಹಂಚಿಕೊಂಡಿದ್ದಾರೆ. ಶಕ್ತಿಮಣಿ ತ್ರಿಪಾಠಿ ಎಂಬವರು ರೆಫ್ಲೆಕ್ ಎಂಬ ಕಂಪನಿಯ ಸಹ ಸ್ಥಾಪಕರಾಗಿ ಮತ್ತು ಸಿಟಿಒ ಆಗಿ ಈಗ ಕಾರ್ಯನಿರ್ವಹಿಸುತ್ತಿದ್ದಾರೆ. ವ್ಯವಹಾರಗಳನ್ನು ಸ್ವಯಂಚಾಲಿತಗೊಳಿಸಲು ಇರುವ ಎಐ ಏಜೆಂಟ್ ಕಂಪನಿ ಇದಾಗಿದೆ. ಸ್ವಂತ ಕಂಪನಿ ಆರಂಭಕ್ಕಾಗಿ ಇವರು ಕೋಟಿ ವೇತನ ನೀಡುವ ಅಮೆಜಾನ್ ಕಂಪನಿಯನ್ನು ಬಿಟ್ಟುಬಂದಿದ್ದರು. ಆದರೆ, ಉದ್ಯಮಿಯಾಗಿ ನನಗೆ 2024 ವರ್ಷ ಯಶಸ್ಸು ನೀಡಲಿಲ್ಲ ಎಂದು ತನ್ನ ಸೋಲಿನ ಕಥೆಯನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಪೋಸ್ಟ್ ಈಗ ವೈರಲ್ ಆಗಿದೆ.
ಸ್ಟಾರ್ಟಪ್ ಆರಂಭಿಸಲು ಕೆಲಸ ಬಿಟ್ಟೆ
ತನ್ನ ಸ್ವಂತ ಸ್ಟಾರ್ಟಪ್ ಆರಂಭಿಸುವ ಸಲುವಾಗಿ 1 ಕೋಟಿ ರೂಪಾಯಿ ಪ್ಯಾಕೇಜ್‌ನ ಅಮೆಜಾನ್ ಉದ್ಯೋಗವನ್ನು ಬಿಟ್ಟು ಬಂದೆ ಎಂದು ಎಕ್ಸ್‌ನಲ್ಲಿ ಅವರು ಬರೆದಿದ್ದಾರೆ. ನನ್ನ ಪಾಲಿಗೆ 2024 ಕೆಟ್ಟ ವರ್ಷವಾಗಿತ್ತು ಎಂದು ಅವರು ಹೇಳಿದ್ದಾರೆ. ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ ಅವರು ಅಮೆಜಾನ್ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಮೆಜಾನ್ ಪೇ ಲೇಟರ್ ಅಪ್ಲಿಕೇಷನ್ ಅಭಿವೃದ್ಧಿಪಡಿಸಲು ಇವರು ನೆರವಾಗಿದ್ದರು.
"2024 ನನ್ನ ಪಾಲಿಗೆ ಕಠಿಣ ವರ್ಷವಾಗಿತ್ತು. ಯಾವುದೇ ಬ್ಯಾಕಪ್ ಇಲ್ಲದೆ ಅಮೆಜಾನ್ ಕಂಪನಿ ನೀಡುತ್ತಿದ್ದ 1 ಕೋಟಿ ರೂಪಾಯಿ ಉದ್ಯೋಗ ಬಿಟ್ಟೆ. ಸ್ಟಾರ್ಟಪ್ ಆರಂಭಿಸುವ ಸಲುವಾಗಿ ನಾನು ಉದ್ಯೋಗ ಬಿಟ್ಟೆ" ಎಂದು ಅವರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಉದ್ಯೋಗ ಬಿಟ್ಟ ಬಳಿಕ ತನ್ನ ಮೊದಲ ಸ್ಟಾರ್ಟಪ್ Hoobahoo AI ಅನ್ನು 2024ರಲ್ಲಿ ಆರಂಭಿಸಿದ್ರು. ಇವರ ಸ್ಟಾರ್ಟಪ್ ಐಡಿಯಾವನ್ನು ವೈ ಕಾಂಬಿನೇಟರ್ ರಿಜೆಕ್ಟ್ ಮಾಡಿತ್ತು. ವೈ ಕಾಂಬಿನೇಟರ್ ಎನ್ನುವುದು ಸ್ಟಾರ್ಟಪ್‌ಗಳಿಗೆ ಫಂಡ್ ಸಹಾಯ ಮಾಡುವಂತಹ ಸಂಸ್ಥೆ. ಬಂಡವಾಳ ಸಂಗ್ರಹಿಸಲು ಇವರು ಸುಮಾರು 30 ವೆಂಚರ್ ಕ್ಯಾಪಿಟಲಿಸ್ಟ್‌ಗಳನ್ನು ಸಂಪರ್ಕಿಸಿದ್ದರಂತೆ. ಆದರೆ, ನಿಧಿ ಸಂಗ್ರಹಿಸಲು ಇವರಿಗೆ ಸಾಧ್ಯವಾಗಲಿಲ್ಲ. ಕೊನೆಗೆ ಅತ್ಯಧಿಕ ನಷ್ಟದೊಂದಿಗೆ ತನ್ನ ಹೂಬಾಹೂ ಎಐ ಕಂಪನಿಯನ್ನು ಮುಚ್ಚಬೇಕಾಯಿತು ಎಂದು ಎಕ್ಸ್‌ನಲ್ಲಿ ಬರೆದಿದ್ದಾರೆ.
ಹಲವು ಸೋಲುಗಳು
ಇದಾದ ಬಳಿಕ ತ್ರಿಪಾಠಿ ಮತ್ತು ಸಹ ಸ್ಥಾಪಕ ಕುನಾಲ್ ರಂಜನ್ ಜತೆಯಾಗಿ ಬಿ2bi ಸಾಸ್ ಫಾರ್ ಎಂಜಿನಿಯರಿಂಗ್ ಟೀಮ್ಸ್..." ಗಾಗಿ ಕೆಲಸ ಮಾಡಿದ್ದಾರೆ. ಆದರೆ, ಈ ಐಡಿಯಾ ಯಾಕೋ ಸಾಧ್ಯವಿಲ್ಲ ಎಂದೆನಿಸಿ ಅದನ್ನೂ ಬಿಟ್ಟರು. ಇದಾದ ಬಳಿಕ ತ್ರಿಪಾಠಿ ಕೋಡರ್ಮನ್ ಎಐನಲ್ಲಿ ಕೆಲಸ ಮಾಡಿದ್ದಾರೆ. ಅಲ್ಲೂ ಯಶಸ್ಸು ಸಾಧ್ಯವಾಗಲಿಲ್ಲ.
ಹೀಗೆ ಹಲವು ಹಿನ್ನಡೆಗಳ ಬಳಿಕ ತ್ರಿಪಾಠಿ ಮತ್ತು ಅವರ ಸಹ ಸ್ಥಾಪಕ "ಪ್ರೊಕ್ಯೂರ್‌ಮೆಂಟ್‌ಗಾಗಿ ಎಐ ಏಜೆಂಟ್" ಅಭಿವೃದ್ಧಿಪಡಿಸಲು ನಿರ್ಧರಿಸಿದರು. ಆದರೆ, ಈ ಡೊಮೇನ್‌ನಲ್ಲಿ ಇವರಿಗೆ ಅನುಭವದ ಕೊರತೆ ಇರುವುದು ಕಂಡುಬಂತು. ಹೀಗಾಗಿ, ಈ ಪ್ರಯತ್ನವನ್ನೂ ಕೈಬಿಡಬೇಕಾಯಿತು.
ಇದಾದ ಬಳಿಕ ರಿಫ್ಲೆಕ್ ಎಐನಲ್ಲಿ ಕೆಲಸ ಮಾಡಲು ಆರಂಭಿಸಿದರು. ಕೇವಲ ಏಳು ದಿನಗಳಲ್ಲಿ ಮಿನಿಮಮ್ ವಿಯಬಲ್ ಪ್ರಾಡಕ್ಟ್ (ಎಂವಿಪಿ) ಅಭಿವೃದ್ಧಿಪಡಿಸಿದರು. ಈ ಕಲ್ಪನೆಯನ್ನು ಮೌಲ್ಯೀಕರಿಸಲು ಸುಮಾರು 50ಕ್ಕೂ ಹೆಚ್ಚು ಉದ್ಯಮ ನಾಯಕರ ಜತೆ ಸಂದರ್ಶನಗಳನ್ನು ನಡೆಸಿದರು.
ಅವರ ಪ್ರಯತ್ನಗಳು ಸ್ವಲ್ಪ ಮಟ್ಟಿಗೆ ಫಲ ನೀಡಿದವು. ತ್ರಿ ಲೆಟರ್ಸ್ ಆಫ್ ಇಂಟೆಂಟ್(ಎಲ್‌ಒಐ)ಗಾಗಿ ಇದನ್ನು ಮಾಡಿದ್ದರು. ಇದರಿಂದ ಇವರಿಗೆ ಗ್ರಾಹಕರು ದೊರಕುವ ಸಾಧ್ಯತೆ ಇತ್ತು. ಇದರಿಂದ ವೈ ಕಾಂಬಿನೇಟರ್‌ಗೆ ಅರ್ಜಿ ಸಲ್ಲಿಸುವವರಲ್ಲಿ ಟಾಪ್ 10 ಅರ್ಜಿದಾರರಲ್ಲಿ ಒಬ್ಬರಾದರು. ಆದರೆ, ಅಂತಿಮವಾಗಿ ಇವರ ಅರ್ಜಿ ರಿಜೆಕ್ಟ್ ಆಯಿತು.
ರಿಫ್ಲೆಕ್ ಎಐಯು ಹಲವು ಸಮಸ್ಯೆಗಳನ್ನು ಏಕಕಾಲದಲ್ಲಿ ಪರಿಹರಿಸಲು ಪ್ರಯತ್ನಿಸುವುದನ್ನು ಇವರು ಕಂಡುಕೊಂಡಿದ್ದಾರೆ. ಸದ್ಯ ಎಐ ಡಿಜಿಟಲ್ ಮಾರ್ಕೆಟರ್ ಅನ್ನು ನಿರ್ಮಿಸುತ್ತಿದ್ದಾರೆ.
ಹಿನ್ನಡೆಗಳಿಂದ ಕಲಿತಿದ್ದೇನೆ
ಬೆಂಗಳೂರು ಮೂಲದ ಈ ಟೆಕ್ಕಿಯು "ನಾನು ಬಹಳಷ್ಟು ಬಾರಿ ವಿಫಲವಾಗಿದ್ದೇನೆ. ಈ ಹಿನ್ನಡೆಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ" ಎಂದು ಹೇಳಿದ್ದಾರೆ. "2025ನೇ ವರ್ಷವು ನನ್ನ ಉದ್ಯಮಶೀಲತೆಯ ಪ್ರಯತ್ನವನ್ನು ತ್ಯಜಿಸಲು ಮತ್ತು ಉದ್ಯೋಗಿಯಾಗಿ ಮತ್ತೆ ಬೇರೆ ಕಂಪನಿಗೆ ಕೆಲಸಕ್ಕೆ ತೆರಳಲು ಒತ್ತಾಯಿಸುವುದಿಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಅವರು ಪೋಸ್ಟ್ ಮಾಡಿದ್ದಾರೆ.
ಈ ಪೋಸ್ಟ್ ಎಕ್ಸ್‌ನಲ್ಲಿ ವೈರಲ್ ಆಗಿದೆ. ಸಾಕಷ್ಟು ಜನರು ಕಾಮೆಂಟ್ ಮಾಡಿ ತಮ್ಮ ಅನುಭವಗಳನ್ನೂ ಹಂಚಿಕೊಂಡಿದ್ದಾರೆ. 2025 ನಿಮಗೆ ಖಂಡಿತಾ ಯಶಸ್ಸು ತರಲಿದೆ ಎಂದು ಸಾಕಷ್ಟು ಜನರು ಶುಭ ಹಾರೈಸಿದ್ದಾರೆ. 2024ರಲ್ಲಿ ಸೋಲಿನ ಕಥೆಯಾದರೂ ಭವಿಷ್ಯದಲ್ಲಿ ಸಕ್ಸಸ್ ಸ್ಟೋರಿಯಾಗಬಹುದು ಎಂದು ಕೆಲವರು ಆತನಿಗೆ ಧೈರ್ಯ ತುಂಬಿದ್ದಾರೆ.