ಹಬ್ಬದ ಸೀಸನ್ ವ್ಯಾಪಾರ ಬಲು ಜೋರು; ಬೆಂಗಳೂರಲ್ಲಿ ಕನಕಾಂಬರ ಕಿಲೋಗೆ 4000 ರೂಪಾಯಿ, ಮಲ್ಲಿಗೆ 1600 ರೂ, ಹಣ್ಣುಗಳೂ ದುಬಾರಿ
Varamahalakshmi Habba; ಬೆಂಗಳೂರು ನಗರದ ಮಾರುಕಟ್ಟೆಗಳೂ ಹಬ್ಬದ ಖರೀದಿಗೆ ಸ್ಪಂದಿಸತೊಡಗಿವೆ. ಹಬ್ಬದ ಸೀಸನ್ ವ್ಯಾಪಾರ ಬಲು ಜೋರು ಎಂಬ ಮಾತು ಕೇಳತೊಡಗಿದೆ. ಪೂರಕವಾಗಿ ಬೆಂಗಳೂರಲ್ಲಿ ಕನಕಾಂಬರ ಕಿಲೋಗೆ 4000 ರೂಪಾಯಿ, ಮಲ್ಲಿಗೆ 1600 ರೂ, ಹಣ್ಣುಗಳೂ ದುಬಾರಿಯಾಗಿರುವುದು ಗಮನಸೆಳೆದಿದೆ.
ಬೆಂಗಳೂರು: ವರಮಹಾಲಕ್ಷ್ಮಿ ಹಬ್ಬದ ಆಚರಣೆಗೆ ನಾಡು ಸಜ್ಜಾಗತೊಡಗಿದೆ. ಇದಕ್ಕೆ ತಕ್ಕಂತೆ ಬೆಂಗಳೂರು ನಗರದ ಮಾರುಕಟ್ಟೆಗಳೂ ಸ್ಪಂದಿಸಿದ್ದು, ಹೂವು ಹಣ್ಣುಗಳ ಬೇಡಿಕೆ ಹೆಚ್ಚಾಗುತ್ತಿದ್ದಂತೆ ದರವೂ ಗಗನಮುಖಿಯಾಗಿದೆ. ಕೆಆರ್ ಮಾರುಕಟ್ಟೆಯಲ್ಲಿ ಹೂವು ಹಣ್ಣು ಖರೀದಿ ಭರಾಟೆ ಜೋರಾಗಿದೆ. ಶುಕ್ರವಾರದ ವೇಳೆಗೆ ದರ ಇನ್ನಷ್ಟು ಹೆಚ್ಚಾಗಬಹುದು ಎಂಬ ಕಾರಣಕ್ಕೆ ಅನೇಕರು ಬುಧವಾರವೇ ಖರೀದಿ ನಡೆಸಿದ್ದು ಗಮನಸೆಳೆಯಿತು.
ಕೆಆರ್ ಮಾರುಕಟ್ಟೆ, ಮಲ್ಲೇಶ್ವರಂ,ಗಾಂಧೀ ಬಜಾರ್, ಜಯನಗರ 4ನೇ ಬ್ಲಾಕ್ ಸೇರಿ ವಿವಿಧ ಪ್ರಮುಖ ಮಾರುಕಟ್ಟೆಗಳಲ್ಲಿ ಅನೇಕ ಗೃಹಿಣಿಯರು ವರಮಹಾಲಕ್ಷ್ಮಿ ಮೂರ್ತಿ ಮತ್ತು ಅಲಂಕಾರ ವಸ್ತುಗಳ ಖರೀದಿ ನಡೆಸುತ್ತಿದ್ದಾರೆ. ಸಂಪತ್ತಿನ ಅಧಿದೇವತೆ ಲಕ್ಷ್ಮಿಯನ್ನು ಮನೆಮನೆಗಳಲ್ಲಿ ಪ್ರತಿಷ್ಠಾಪಿಸಿ ಪೂಜಿಸುವ ಸಿದ್ಧತೆಗಳು ಜೋರಾಗಿವೆ.
ಹಬ್ಬಕ್ಕೆ ಎರಡು ದಿನ ಮುಂಚಿತವಾಗಿಯೇ ಮಧುರೈ ಮೀನಾಕ್ಷಿ, ಕಂಚಿ ಕಾಮಾಕ್ಷಿ, ದಾವಣಿ -ಲಂಗ ಧರಿಸಿದ ಕನ್ಯಾ ಕುಮಾರಿಯಂತೆ ಕಾಣುವ ವರಮಹಾಲಕ್ಷ್ಮಿ ಕಮಲದ ಹೂವಿನೊಳಗೆ ಕುಳಿತ ಲಕ್ಷ್ಮಿ, ಆದಿ ಶಕ್ತಿಯಂತೆ ಕಾಣಿಸುವ ನಿಂತ ವರಮಹಾ ಲಕ್ಷ್ಮಿ ಸೇರಿ ನಾನಾ ಬಗೆಯ ಅಲಂಕೃತಗೊಂಡ ವರ ಮಹಾಲಕ್ಷ್ಮಿ ಉತ್ಸವ ಮೂರ್ತಿಗಳು ಗಮನಸೆಳೆದಿವೆ. ಈ ಮೂರ್ತಿಗಳು ಕನಿಷ್ಠ 750 ರೂಪಾಯಿಯಿಂದ 8,000 ರೂಪಾಯಿ ಆಸುಪಾಸಿನ ದರದಲ್ಲಿ ಮಾರಾಟವಾಗುತ್ತಿವೆ.
ಹೂವು-ಹಣ್ಣುಗಳ ದರ ಗಗನ ಮುಖಿ
ವರಮಹಾಲಕ್ಷ್ಮೀ ಹಬ್ಬಕ್ಕಾಗಿ ತರಹೇವಾರಿ ಹೂವುಗಳನ್ನು ಅಲಂಕಾರಕ್ಕೆ ಬಳಸುತ್ತಾರೆ. ಹಣ್ಣುಗಳು ನೈವೇದ್ಯಕ್ಕೂ, ಪೂಜೆಗೂ, ಅಲಂಕಾರಕ್ಕೂ ಬಳಕೆಯಾಗುವ ಕಾರಣ ಬೇಡಿಕೆ ಹೆಚ್ಚಾಗಿದೆ. ಆದರೆ ಬೇಡಿಕೆಗೆ ತಕ್ಕಂತೆ ಪೂರೈಕೆ ಇಲ್ಲದ ಕಾರಣ ಬೆಂಗಳೂರು ನಗರದ ವಿವಿಧ ಮಾರುಕಟ್ಟೆಗಳಲ್ಲಿ ಇವುಗಳ ದರ ಏರಿಕೆಯಾಗತೊಡಗಿದೆ.
ಮಲ್ಲಿಗೆ ಹೂವು ಕಿಲೋಗೆ 71,600 ರೂಪಾಯಿ, ಕನಕಾಂಬರ ಕಿಲೋಗೆ 34,000 ರೂಪಾಯಿ, ಸೇವಂತಿಗೆ 1300, ಗುಲಾಬಿ 350 ರೂಪಾಯಿ, ಸುಗಂಧ ರಾಜ 400 ರೂಪಾಯಿ, ಚೆಂಡು ಹೂವು 780 ರೂಪಾಯಿಗೆ ಬುಧವಾರ ಮಾರಾಟವಾಗಿದೆ ಎಂದು ಹೂವಿನ ವ್ಯಾಪಾರಿಗಳನ್ನು ಉಲ್ಲೇಖಿಸಿ ಪ್ರಜಾವಾಣಿ ವರದಿ ಮಾಡಿದೆ. ಇಂದು (ಆಗಸ್ಟ್ 15) ಇವುಗಳ ದರ ಇನ್ನೂ ಹೆಚ್ಚಾಗಿದೆ.
ಹೂವು - ಹಣ್ಣು ದರ ಹೋಲಿಕೆ
ಹೂವು/ಹಣ್ಣು | ಕಳೆದ ವಾರದ ದರ 1 ಕಿಲೋಗೆ (ರೂಪಾಯಿ) | ಈ ವಾರದ ದರ 1 ಕಿಲೋಗೆ (ರೂಪಾಯಿ) |
ಕನಕಾಂಬರ | 600 | 4000 |
ಮಲ್ಲಿಗೆ | 400 | 1600 |
ಗುಲಾಬಿ | 150 | 300 |
ಸೇವಂತಿಗೆ | 100 | 250 |
ಸೇಬು ಹಣ್ಣು | 150 | 200 |
ದಾಳಿಂಬೆ | 80 | 100 |
ಏಲಕ್ಕಿ ಬಾಳೆ | 70 | 120 |
ಸೀತಾಫಲ | 80 | 100 |
ಸಪೋಟ | 80 | 100 |
ಅನಾನಸ್ | 80 ರೂಪಾಯಿಗೆ ಎರಡು | 80 ರೂಪಾಯಿಗೆ ಎರಡು |
ಬೆಂಗಳೂರು ನಗರದ ವಿವಿಧ ಮಾರುಕಟ್ಟೆಗಳಿಗೆ ಹೂವು, ಹಣ್ಣುಗಳನ್ನು ಬೆಂಗಳೂರು ಗ್ರಾಮಾಂತರ, ತುಮಕೂರು, ಕುಣಿಗಲ್, ಗೌರಿಬಿದನೂರು, ಶಿವಮೊಗ್ಗ, ಮೈಸೂರು ಮೊದಲಾದ ಕಡೆಗಳಿಂದ ಪೂರೈಸಲಾಗುತ್ತಿದೆ. ತಮಿಳುನಾಡಿನಿಂದಲೂ ಹೂವು, ಹಣ್ಣು ಪೂರೈಕೆಯಾಗುತ್ತದೆ. ಸದ್ಯ ಮಳೆ ಕಡಿಮೆಯಾಗಿರುವ ಕಾರಣ ವಿವಿಧೆಡೆ ಉಳಿದ ಹೂವು, ಹಣ್ಣು ಪೂರೈಕೆಯಾಗುತ್ತದೆ ಎಂದು ವರದಿ ಹೇಳಿದೆ.
ತರಕಾರಿ ದರ ಬಹುತೇಕ ಸ್ಥಿರ
ಹಬ್ಬ ಹರಿದಿನಗಳ ಕಾರಣಕ್ಕೆ ತರಕಾರಿ ದರ ಗಗನಮುಖಿ ಎನ್ನುವಷ್ಟು ಏರಿಕೆ ಕಂಡಿಲ್ಲ. ಬಹುತೇಕ ಸ್ಥಿರವಾಗಿದ್ದು, ಮಾರುಕಟ್ಟೆಗೆ ಸೊಪ್ಪು ತರಕಾರಿಗಳ ಪೂರೈಕೆ ಸರಾಗವಾಗಿದೆ.
ತರಕಾರಿ ದರ
ತರಕಾರಿ | ಕಳೆದ ವಾರದ ದರ 1 ಕಿಲೋಗೆ (ರೂಪಾಯಿ) | ಈ ವಾರದ ದರ 1 ಕಿಲೋಗೆ (ರೂಪಾಯಿ) |
ಟೊಮ್ಯಾಟೊ | 40 | 20 |
ಕ್ಯಾರೆಟ್ | 60 | 50 |
ಈರುಳ್ಳಿ | 40 | 50 |
ಬೀನ್ಸ್ | 50 | 60 |
ಆಲೂಗಡ್ಡೆ | 25 | 30 |
ಚವಳಿಕಾಯಿ | 40 | 50 |
ಹೀರೇಕಾಯಿ | 50 | 60 |
ಹಸಿಮೆಣಸಿನಕಾಯಿ | 100 | 80 |
ಬಾಳೆ ಕಂಬ | -- | ಜೋಡಿಗೆ 80 |
ಮಾವಿನ ತೋರಣ | -- | 20 ರೂಪಾಯಿ |
ವೀಳ್ಯದೆಲೆ | 100 ಎಲೆಗೆ 100 ರೂಪಾಯಿ | |
ತೆಂಗಿನ ಕಾಯಿ | 5ಕ್ಕೆ 100 ರೂಪಾಯಿ |
ಬೀನ್ಸ್ , ಆಲೂಗಡ್ಡೆ, ಹೀರೇಕಾಯಿ ಸೇರಿ ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದ್ದು ಬಿಟ್ಟರೆ ಉಳಿದವುಗಳ ಬೆಲೆ ಸ್ಥಿರವಾಗಿದೆ. ಇದಲ್ಲದೆ, ಇನ್ನೂ ಕೆಲವು ತರಕಾರಿಗಳ ಬೆಲೆ ಏರಿಕೆಯಾಗಿದೆ. ಒಟ್ಟಾರೆ ಹೇಳಬೇಕು ಎಂದರೆ ಹಬ್ಬ ಹರಿದಿನಗಳ ಸಂದರ್ಭಗಳಲ್ಲಿ ವಾಡಿಕೆಯಂತೆ ಗ್ರಾಹಕರಿಗೆ ಬೆಲೆ ಏರಿಕೆಯ ಬಿಸಿ ತಟ್ಟತೊಡಗಿದೆ.