ವಾಹನ ಸವಾರರ ಜೇಬಿಗೆ ಕರ್ನಾಟಕ ಸರ್ಕಾರ ಕತ್ತರಿ; ಲೀಟರ್ ಪೆಟ್ರೋಲ್‌ಗೆ 3 ರೂ, ಡೀಸಲ್‌ಗೆ 3.50 ರೂಪಾಯಿ ತೆರಿಗೆ ಹೆಚ್ಚಳ
ಕರ್ನಾಟಕದಲ್ಲಿ ಲೀಟರ್ ಪೆಟ್ರೋಲ್‌ಗೆ 3 ರೂ, ಲೀಟರ್ ಡೀಸಲ್‌ಗೆ 3.50 ರೂಪಾಯಿ ತೆರಿಗೆ ಹೆಚ್ಚಳ ಮಾಡಿ ಕಾಂಗ್ರೆಸ್ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಈ ನಿರ್ಧಾರಕ್ಕೆ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಬೆಂಗಳೂರು: ಲೋಕಸಭೆ ಚುನಾವಣೆ ಫಲಿತಾಂಶ (Lok Sabha Election Result 2024) ಪ್ರಕಟವಾದ 10 ದಿನಗಳ ಬಳಿಕ ಕರ್ನಾಟಕ ಸರ್ಕಾರ (Karnataka Government) ವಾಹನ ಸವಾರರ ಜೇಬಿಗೆ ಕತ್ತರಿ ಹಾಕಿದ್ದು, ತೈಲ ಬೆಲೆಯನ್ನು ಹೆಚ್ಚಿಸಿದೆ. ಪ್ರತಿ ಲೀಟರ್ ಪೆಟ್ರೋಲ್‌ಗೆ (Petrol Price Hike) 3 ರೂಪಾಯಿ ಹಾಗೂ ಪ್ರತಿ ಲೀಟರ್ ಡೀಸೆಲ್ ಬೆಲೆಯಲ್ಲಿ (Diesel Price Hike) 3.50 ರೂಪಾಯಿ ತೆರಿಗೆಯನ್ನು ಹೆಚ್ಚಿಸಿ ಆದೇಶ ಹೊರಡಿಸಲಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಲೀಟರ್ ಪೆಟ್ರೋಲ್ ಬೆಲೆ 99.84 ರೂಪಾಯಿ ಇದೆ. ಕರ್ನಾಟಕ ಸರ್ಕಾರದ 3 ರೂಪಾಯಿ ತೆರಿಗೆ ಹೆಚ್ಚಳದ ಬಳಿಕ 102.88 ರೂಪಾಯಿ ಆಗಲಿದೆ. ಇನ್ನ ಲೀಟರ್ ಡೀಸೆಲ್ ಬೆಲೆ 85.93 ರೂಪಾಯಿ ಇದ್ದು, 3.5 ರೂಪಾಯಿಗಳ ತೆರಿಗೆ ಹೆಚ್ಚಳ ಬಳಿಕ 89.43 ರೂಪಾಯಿ ತಲುಪಲಿದೆ.
ಕರ್ನಾಟಕ ಮಾರಾಟ ತೆರಿಗೆಯನ್ನು (ಕೆಎಸ್‌ಟಿ) ಪೆಟ್ರೋಲ್ ಮೇಲೆ ಶೇಕಡಾ 25.92 ರಿಂದ ಶೇಕಡಾ 29.84ಕ್ಕೆ ಹಾಗೂ ಲೀಟರ್ ಡೀಸೆಲ್ ಮೇಲಿನ ಕೆಎಸ್‌ಟಿಯನ್ನು ಶೇಕಡಾ 14.3 ರಿಂದ ಶೇಕಡಾ 18.4ಕಮಕೆ ಹೆಚ್ಚಿಸಲಾಗಿದೆ. ಈ ಬದಲಾವಣೆ ತಕ್ಷಣದಿಂದಲೇ ಜಾರಿಗೆ ಬಂದಿವೆ ಎಂದು ವರದಿಯಾಗಿದೆ. ರಾಜ್ಯ ಸರ್ಕಾರದ ಈ ದಿಢೀರ್ ನಿರ್ಧಾರಕ್ಕೆ ವಾಹನ ಸವಾರರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಶ್ರೀಮಂತರು ಪೆಟ್ರೋಲ್ ಪಡೆಯಬಹುದು, ನಾವು ಎಲ್ಲಿಗೆ ಹೋಗಬೇಕು? ನಾನು ಬಿಪಿಒನಲ್ಲಿ ಕೆಲಸ ಮಾಡುತ್ತೇನೆ. 15,000 ಸಂಬಳದಲ್ಲಿ ಪೆಟ್ರೋಲ್‌ಗೂ ಖರ್ಚು ಮಾಡಬೇಕು. ಲೀಟರ್ ಪೆಟ್ರೋಲ್ ಬೆಲೆ 3 ರೂಪಾಯಿ ಹೆಚ್ಚಿಸಿರುವುದು ನಮ್ಮ ಮೇಲೆ ಸಾಕಷ್ಟು ಪರಿಣಾಮ ಬೀರುತ್ತದೆ ಎಂದು ಚಂದನ್ ಎಂಬ ಬೈಕ್ ಸವಾರ ಅಸಮಾಧಾನ ವ್ಯಕ್ತಪಡಿಸಿರುವುದಾಗಿ ಎಎನ್‌ಐ ವರದಿ ಮಾಡಿದೆ.
ರಾಜ್ಯ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವುದು ಸಾರಿಗೆ ಮತ್ತು ಸರಕು ವಿತರಣೆ ಸೇರಿದಂತೆ ವಿವಿಧ ಕ್ಷೇತ್ರಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆಯಿದೆ. ಇದು ಗ್ರಾಹಕರಿಗೆ ವೆಚ್ಚವನ್ನು ಹೆಚ್ಚಿಸಲು ಕಾರಣವಾಗುತ್ತದೆ.
ದೇಶೀಯ ಕಚ್ಚಾ ತೈಲದ ಮೇಲಿನ ತೆರಿಗೆಯನ್ನು ಕಡಿತಗೊಳಿಸಿದ ಕೇಂದ್ರ
ಸರ್ಕಾರ ದೇಶೀಯವಾಗಿ ಉತ್ಪಾದಿಸುವ ಕಚ್ಚಾ ತೈಲದ ಮೇಲಿನ ಅನಿರೀಕ್ಷಿತ ತೆರಿಗೆಯನ್ನು ಪ್ರತಿ ಟನ್ ಗೆ 5,200 ರೂಪಾಯಿಗಳಿಂದ 3,250 ರೂಪಾಯಿಗಳಿಗೆ ಇಳಿಸಿದ ಕೆಲವೇ ಗಂಟೆಗಳ ನಂತರ ಕರ್ನಾಟಕ ಈ ನಿರ್ಧಾರ ಕೈಗೊಂಡಿದೆ. ತೆರಿಗೆಯನ್ನು ವಿಶೇಷ ಹೆಚ್ಚುವರಿ ಅಬಕಾರಿ ಸುಂಕ (ಎಸ್ಎಇಡಿ) ರೂಪದಲ್ಲಿ ವಿಧಿಸಲಾಗುತ್ತದೆ. ಡೀಸೆಲ್, ಪೆಟ್ರೋಲ್ ಮತ್ತು ಜೆಟ್ ಇಂಧನ ಅಥವಾ ಎಟಿಎಫ್ ರಫ್ತಿನ ಮೇಲಿನ ಎಸ್ಎಇಡಿಯನ್ನು 'ಶೂನ್ಯ'ದಲ್ಲಿ ಉಳಿಸಿಕೊಳ್ಳಲಾಗಿದೆ.
2022ರ ಜುಲೈ 1 ರಂದು ಕೇಂದ್ರ ಸರ್ಕಾರವು ಮೊದಲ ಬಾರಿಗೆ ಅನಿರೀಕ್ಷಿತ ಲಾಭ ತೆರಿಗೆಗಳನ್ನು ವಿಧಿಸಿತು, ಇಂಧನ ಕಂಪನಿಗಳ ಸೂಪರ್ ನಾರ್ಮಲ್ ಲಾಭಗಳಿಗೆ ತೆರಿಗೆ ವಿಧಿಸುವ ಹಲವಾರು ರಾಷ್ಟ್ರಗಳ ಪಟ್ಟಿಗೆ ಸೇರಿಕೊಂಡಿತ್ತು. ಹಿಂದಿನ ಎರಡು ವಾರಗಳ ಸರಾಸರಿ ತೈಲ ಬೆಲೆಗಳ ಆಧಾರದ ಮೇಲೆ ತೆರಿಗೆ ದರಗಳನ್ನು ಪ್ರತಿ ಹದಿನೈದು ದಿನಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ.
ಈ ವರ್ಷದ ಮಾರ್ಚ್‌ನಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಕಡಿತಗೊಳಿಸಿತ್ತು. ಇದು 2022 ರ ಮೇ ನಂತರ ರಾಷ್ಟ್ರವ್ಯಾಪಿ ಮೊದಲ ಇಂಧನ ಬೆಲೆ ಕಡಿತವಾಗಿದೆ. "ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಲೀಟರ್‌ಗೆ 2 ರೂಪಾಯಿಗಳಷ್ಟು ಕಡಿಮೆ ಮಾಡುವ ಮೂಲಕ, ಕೋಟ್ಯಂತರ ಭಾರತೀಯರ ಕುಟುಂಬಕ್ಕೆ ಕಲ್ಯಾಣ ಮತ್ತು ಅನುಕೂಲವನ್ನು ಒದಗಿಸುವುದು ಯಾವಾಗಲೂ ತನ್ನ ಗುರಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮತ್ತೊಮ್ಮೆ ತೋರಿಸಿದ್ದಾರೆ" ಎಂದು ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಸಾಮಾಜಿಕ ವೇದಿಕೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದರು.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)