ಬೆಂಗಳೂರಿನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಕುಸುಮಾಗೆ ಮೈಕ್ರೊಸಾಫ್ಟ್ ಸಿಇಒ ಬಿಲ್ ಗೇಟ್ಸ್ ತಾರೀಪು
Bill Gates: ಬೆಂಗಳೂರಿನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಕುಸುಮಾರನ್ನ ಬಿಲ್ ಗೇಟ್ಸ್ ಬಾಯ್ತುಂಬ ಹೊಗಳಿ ಲಿಂಕಡ್ಇನ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಕೆಯ ಜೊತೆ ನಗುನಗುತ್ತಾ ಮಾತನಾಡುತ್ತಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ.
ಬೆಂಗಳೂರು: ಮೈಕ್ರೊಸಾಫ್ಟ್ ಸಹಸ್ಥಾಪಕ-ಸಿಇಒ ಬಿಲ್ ಗೇಟ್ಸ್ ಜಗತ್ತಿನಾದ್ಯಂತ ಜನಪ್ರಿಯ. ಇವರ ಯಶಸ್ಸು ಕಂಡು ತಾವೂ ಹೀಗೆ ಆಗಬೇಕೆಂದು ಕನಸು ಕಂಡವರೆಷ್ಟೋ ಮಂದಿ ಇದ್ದಾರೆ. ಇಂತಹ ವ್ಯಕ್ತಿಯನ್ನು ಭೇಟಿ ಆಗುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕರೂ ಅವರನ್ನು ಇಂಪ್ರೆಸ್ ಮಾಡಲು ನಮಗೆ ಸಾಧ್ಯವಾಗದೆ ಇರಬಹುದು. ಆದರೆ ಬಿಲ್ ಗೇಟ್ಸ್ ಹೊಗಳಿಕೆಗೆ ನಮ್ಮ ಬೆಂಗಳೂರಿನ 22 ವರ್ಷದ ಯುವತಿ ಪಾತ್ರಳಾಗಿದ್ದಾರೆ.
ಹೌದು, ಬೆಂಗಳೂರಿನ ಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಕುಸುಮಾರನ್ನ ಬಿಲ್ ಗೇಟ್ಸ್ ಬಾಯ್ತುಂಬ ಹೊಗಳಿ ಲಿಂಕಡ್ಇನ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಆಕೆಯ ಜೊತೆ ನಗುನಗುತ್ತಾ ಮಾತನಾಡುತ್ತಿರುವ ಫೋಟೋವನ್ನೂ ಹಂಚಿಕೊಂಡಿದ್ದಾರೆ.
“ನನ್ನ ಭಾರತ ಪ್ರವಾಸದಲ್ಲಿ ನಾನು ನಂಬಲಾಗದ ಶಕ್ತಿಯೊಂದನ್ನು ಭೇಟಿಯಾದೆ, ಅದು ಕುಸುಮಾ, ತನ್ನ ಸ್ಥಳೀಯ ಅಂಚೆ ಇಲಾಖೆಯಲ್ಲಿ ಅದ್ಭುತಗಳನ್ನು ಮಾಡುತ್ತಿರುವ ಗಮನಾರ್ಹ ಯುವತಿ ಈಕೆ. ಅಂತರ್ಗತ ಹಣಕಾಸು ಅಭಿವೃದ್ಧಿಯನ್ನು ವೇಗಗೊಳಿಸಲು ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ಭಾರತವು ಮುಂಚೂಣಿಯಲ್ಲಿದೆ. ಕುಸುಮಾದಂತಹ ಅಂಚೆ ಕಚೇರಿ ಪೋಸ್ಟ್‌ಮಾಸ್ಟರ್‌ಗಳು ಭಾರತದಾದ್ಯಂತ ಗ್ರಾಹಕರಿಗೆ ಬ್ಯಾಂಕಿಂಗ್ ಸೇವೆಗಳನ್ನು ನೀಡಲು ಸ್ಮಾರ್ಟ್‌ಫೋನ್ ಸಾಧನಗಳು ಮತ್ತು ಬಯೋಮೆಟ್ರಿಕ್‌ಗಳನ್ನು ಬಳಸಲು ಅನುವು ಮಾಡಿಕೊಡುತ್ತದೆ. ಆಕೆ ಕೇವಲ ಸಮಗ್ರ ಹಣಕಾಸು ಸೇವೆಗಳನ್ನು ಒದಗಿಸುತ್ತಿಲ್ಲ, ತನ್ನ ಸಮುದಾಯಕ್ಕೆ ಭರವಸೆ ಮತ್ತು ಆರ್ಥಿಕ ಸಬಲೀಕರಣವನ್ನು ನೀಡುತ್ತಿದ್ದಾಳೆ” ಎಂದು ಬಿಲ್ ಗೇಟ್ಸ್ ಬರೆದುಕೊಂಡಿದ್ದಾರೆ.
ಕುಸುಮಾ ಮಾಡುವ ಕೆಲಸದ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಒಂದು ಲಿಂಕ್ ಅನ್ನು ಸಹ ನೀಡಿದ್ದಾರೆ. ಇದು ಅವರ ‘ಬಿಲ್ & ಮೆಲಿಂಡಾ ಗೇಟ್ಸ್ ಫೌಂಡೇಶನ್’ನ ವೆಬ್ಸೈಟ್ ಲಿಂಕ್ ಆಗಿದೆ. ಈ ವೆಬ್ಸೈಟ್ನಲ್ಲಿ ಭಾರತದಲ್ಲಿ ಡಿಜಿಟಲ್ ಬ್ಯಾಂಕಿಂಗ್ ಕಥೆ ಮತ್ತು ಯುವತಿಯ ಭರವಸೆಯ ವೃತ್ತಿಜೀವನದ ಹಾದಿ ಎಂಬ ಶೀರ್ಷಿಕೆಯಡಿ ಕುಸುಮಾ ಬಗ್ಗೆ ಮಾಹಿತಿ ಪ್ರಕಟಿಸಲಾಗಿದೆ. ಆಕೆಯ ಜೀವನದ ಬಗ್ಗೆ ವಿಡಿಯೋ ಕೂಡ ಪ್ರಕಟಿಸಲಾಗಿದೆ
ಭಾರತದಲ್ಲಿ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್‌ಗಳು 70 ಮಿಲಿಯನ್‌ಗಿಂತಲೂ ಹೆಚ್ಚು ಜನರಿಗೆ ನಗದು ಹಿಂಪಡೆಯುವಿಕೆ ಮತ್ತು ಠೇವಣಿಗಳು, ರವಾನೆಗಳು ಮತ್ತು ಪಾವತಿಗಳಂತಹ ಡಿಜಿಟಲ್ ಬ್ಯಾಂಕಿಂಗ್ ಸೇವೆಗಳನ್ನು ನೀಡುತ್ತಿದ್ದಾರೆ. ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸುವಲ್ಲಿ ದೇಶವು ಮುಂಚೂಣಿಯಲ್ಲಿದೆ ಆದ್ದರಿಂದ ಸಾರ್ವಜನಿಕ ವಲಯ ಮತ್ತು ವ್ಯವಹಾರಗಳು ಕಾಗದರಹಿತ ಮತ್ತು ನಗದು ರಹಿತ ಸೇವೆಗಳ ಶ್ರೇಣಿಯನ್ನು ನೀಡಬಹುದು.
ಈ ವಿಡಿಯೋದಲ್ಲಿ, ಬೆಂಗಳೂರಿನ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್ ಕುಸುಮಾ ಕೆ. ಅವರು ತಮ್ಮ ಸಮುದಾಯದಲ್ಲಿ ಡಿಜಿಟಲ್ ಬ್ಯಾಂಕಿಂಗ್‌ನ ಪ್ರಭಾವದ ಬಗ್ಗೆ ಮತ್ತು ಈ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಿರುವ ಬಗ್ಗೆ ಹೆಮ್ಮೆಯನ್ನು ವ್ಯಕ್ತಪಡಿಸಿದ್ದಾರೆ. ಬೆಂಗಳೂರಿನಲ್ಲಿಯೇ ಬಡ ಕುಟುಂಬದಲ್ಲಿ ಹುಟ್ಟಿ ಬೆಳೆದ ಕುಸುಮಾ ತನ್ನ ತಂದೆಯ ಕಷ್ಟದ ದಿನಗಳನ್ನು ನೆನೆದಿದ್ದಾರೆ. ಭಾರತೀಯ ಅಂಚೆ ಇಲಾಖೆಯಲ್ಲಿ ಮಗಳಿಗೆ ಕೆಲಸ ಸಿಕ್ಕಾಗ ತಂದೆಯ ಖುಷಿಗೆ ಪಾರವೇ ಇರಲಿಲ್ಲವಂತೆ. ಕುಸುಮಾ ಅವರು ಬೆಂಗಳೂರಿನ ಹುಸ್ಕೂರು ಪೋಸ್ಟ್ ಆಫೀಸ್ನಲ್ಲಿ ಬ್ರ್ಯಾಂಚ್ ಪೋಸ್ಟ್‌ಮಾಸ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
ಬಿಲ್ ಗೇಟ್ಸ್ ಅವರ ಪೋಸ್ಟ್ ಹಾಗೂ ಕುಸುಮಾರ ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ https://www.linkedin.com/posts/williamhgates_g20india-activity-7098734833002024960-UhlY?trk=public_profile_share_view