Milk Price Hike: ಆಗಸ್ಟ್ 1ರಿಂದ ನಂದಿನಿ ಹಾಲಿನ ಬೆಲೆ ಹೆಚ್ಚಳ; ಸಚಿವ ಸಂಪುಟ ಸಭೆ ಅಸ್ತು, ಹಾಲಿನಪುಡಿ ಬೆಲೆ ಹೆಚ್ಚಳ ಸಾಧ್ಯತೆ
ಕನ್ನಡ ಸುದ್ದಿ  /  ಕರ್ನಾಟಕ  /  Milk Price Hike: ಆಗಸ್ಟ್ 1ರಿಂದ ನಂದಿನಿ ಹಾಲಿನ ಬೆಲೆ ಹೆಚ್ಚಳ; ಸಚಿವ ಸಂಪುಟ ಸಭೆ ಅಸ್ತು, ಹಾಲಿನಪುಡಿ ಬೆಲೆ ಹೆಚ್ಚಳ ಸಾಧ್ಯತೆ

Milk Price Hike: ಆಗಸ್ಟ್ 1ರಿಂದ ನಂದಿನಿ ಹಾಲಿನ ಬೆಲೆ ಹೆಚ್ಚಳ; ಸಚಿವ ಸಂಪುಟ ಸಭೆ ಅಸ್ತು, ಹಾಲಿನಪುಡಿ ಬೆಲೆ ಹೆಚ್ಚಳ ಸಾಧ್ಯತೆ

ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಯೋಜನೆಗಳ ಅನುಷ್ಠಾನದ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರಕ್ಕೆ ಹಾಲಿನಪುಡಿ ದರ ಹೆಚ್ಚಳ ಬೇಡಿಕೆಯು ನುಂಗಲಾರದ ತುಪ್ಪದಂತೆ ಆಗಿದೆ. ಬೆಲೆ ಹೆಚ್ಚಿಸಿದರೆ 'ಕ್ಷೀರ ಭಾಗ್ಯ' ಯೋಜನೆಯಡಿ ಮಕ್ಕಳಿಗೆ ಹಾಲು ಒದಗಿಸುವ ಯೋಜನೆಯ ಮೇಲಿನ ಖರ್ಚು ಹೆಚ್ಚಾಗುತ್ತದೆ.

ನಂದಿನಿ ಹಾಲಿನಪುಡಿ ಮತ್ತು ನಂದಿನಿ ಹಾಲು (ಸಂಗ್ರಹ ಚಿತ್ರ)
ನಂದಿನಿ ಹಾಲಿನಪುಡಿ ಮತ್ತು ನಂದಿನಿ ಹಾಲು (ಸಂಗ್ರಹ ಚಿತ್ರ)

ಬೆಂಗಳೂರು: ಕರ್ನಾಟಕ ಹಾಲು ಉತ್ಪಾದಕರ ಮಹಾಮಂಡಳದ (Karnataka Milk Federation - KMF) ಜನಪ್ರಿಯ ಬ್ರಾಂಡ್ 'ನಂದಿನಿ'ಯ ಹಾಲಿನ ದರ ಹೆಚ್ಚಳಕ್ಕೆ (Nandini Milk Price Hike) ಕರ್ನಾಟಕ ಸರ್ಕಾರದ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಕೆಎಂಎಫ್‌ನ ವಿವಿಧ ಹಾಲು ಒಕ್ಕೂಟಗಳು ಒಂದು ಲೀಟರ್ ಹಾಲಿಗೆ 5 ರೂಪಾಯಿ ಹೆಚ್ಚಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದ್ದವು. ಹಿಂದಿನ ಬಿಜೆಪಿ ಸರ್ಕಾರ ಆಡಳಿತ ನಡೆಸುತ್ತಿದ್ದಾಗಲೂ ಬೆಲೆಏರಿಕೆ ಪ್ರಸ್ತಾವ ಕೇಳಿ ಬಂದಿತ್ತು. ಸುದೀರ್ಘ ಸಮಾಲೋಚನೆಗಳ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲ ಬ್ರಾಂಡ್‌ಗಳ ಒಂದು ಲೀಟರ್‌ ಹಾಲಿಗೆ 3 ರೂಪಾಯಿ ಹೆಚ್ಚಿಸಲು ಸಮ್ಮತಿಸಿದ್ದರು. ಕಳೆದ ಜುಲೈ 21ರಂದು ಹಾಲಿನ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕೆಎಂಎಫ್ ಅಧ್ಯಕ್ಷ ಭೀಮಾ ನಾಯ್ಕ್ ಅವರು ಒಕ್ಕೂಟದ ಪ್ರತಿನಿಧಿಗಳೊಂದಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿದ್ದನ್ನು ಈ ಸಂದರ್ಭದಲ್ಲಿ ಸ್ಮರಿಸಬಹುದು. ಪರಿಷ್ಕೃತ ಹಾಲಿನ ದರಗಳು ಮಂಗಳವಾರದಿಂದ (ಆಗಸ್ಟ್ 1) ಜಾರಿಗೆ ಬರಲಿವೆ.

ಹಾಲಿನ ಪುಡಿ ವ್ಯಾಪಾರದಲ್ಲಿಯೂ ಕೆಎಂಎಫ್‌ಗೆ ನಷ್ಟವಾಗುತ್ತಿದ್ದು, ಇದನ್ನು ಸರಿದೂಗಿಸಲು ಹಾಲಿನ ಪುಡಿಯ ಬೆಲೆ ಹೆಚ್ಚಳದ ಸಾಧ್ಯತೆಯನ್ನೂ ಕೆಎಂಎಫ್ ಪರಿಶೀಲಿಸುತ್ತಿದೆ. ಪ್ರಸ್ತುತ ಕೆಎಂಎಫ್ ಒಂದು ಕೆಜಿ ಹಾಲಿನ ಪುಡಿಯನ್ನು 300 ರೂಪಾಯಿ ದರ ನಿಗದಿಪಡಿಸಿದೆ. ಇದಕ್ಕೆ ಜಿಎಸ್‌ಟಿ, ಇತರ ಶುಲ್ಕಗಳು ಸೇರಿ ಚಿಲ್ಲರೆ ಮಾರಾಟ ದರ 350 ರೂಪಾಯಿ ಇದೆ. ಒಂದು ಕೆಜಿ ಹಾಲಿನ ಪುಡಿಯಿಂದ 11 ಲೀಟರ್ ಹಾಲು ತಯಾರಿಸಬಹುದು.

ಹಾಲಿನ ಪುಡಿಯ ಮೂಲ ದರವನ್ನು 300 ರೂಪಾಯಿಯಿಂದ 375 ರೂಪಾಯಿಗೆ ಹೆಚ್ಚಿಸಬೇಕು ಎನ್ನುವ ಬಗ್ಗೆ ಕೆಎಂಎಫ್‌ನ ಆಂತರಿಕ ವಲಯದಲ್ಲಿ ಗಂಭೀರ ಚರ್ಚೆ ನಡೆದಿದೆ. ಆದರೆ ಕೇವಲ ಮೂರು ತಿಂಗಳ ಹಿಂದಷ್ಟೇ, ಅಂದರೆ ಕಳೆದ ಮಾರ್ಚ್ ತಿಂಗಳಲ್ಲಿ ಕೆಎಂಎಫ್‌ನ ಹಾಲಿನಪುಡಿ ದರ 25 ರೂಪಾಯಿಗಳಷ್ಟು ಹೆಚ್ಚಾಗಿತ್ತು. ಹೀಗಾಗಿ ಮತ್ತೊಮ್ಮೆ ಹಾಲಿನಪುಡಿ ದರ ಹೆಚ್ಚಳಕ್ಕೆ ಸರ್ಕಾರ ಒಪ್ಪುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ನಂದಿನ ಪಾರ್ಲರ್‌ಗಳಲ್ಲಿ ಹಾಲಿನಪುಡಿ ಗ್ರಾಹಕರಿಗೆ ಸಿಗುತ್ತಿಲ್ಲ. ಹಾಲಿನ ಪಾಕೆಟ್ ಸರಬರಾಜು ಸೇರಿದಂತೆ ಬಹುತೇಕ ಉತ್ಪನ್ನಗಳ ಪೂರೈಕೆಯಲ್ಲಿ ವ್ಯತ್ಯಯ ಕಂಡುಬರುತ್ತಿದೆ. ಹಲವು ಪಾರ್ಲರ್‌ ಮಾಲೀಕರು ಇತರ ವ್ಯಾಪಾರಗಳಿಗೆ ಹೊರಳಿಕೊಳ್ಳುತ್ತಿದ್ದಾರೆ. ಈ ಬೆಳವಣಿಗೆಯನ್ನು ಕೆಎಂಎಫ್ ಗಂಭೀರವಾಗಿ ಪರಿಗಣಿಸಿ ವ್ಯವಸ್ಥೆಯ ಲೋಪಗಳನ್ನು ಸರಿಪಡಿಸಬೇಕು ಎಂಬ ಒತ್ತಾಯ ವ್ಯಾಪಕವಾಗಿ ಕೇಳಿ ಬರುತ್ತಿದೆ.

ಹಾಲಿನಪುಡಿ ಬೆಲೆ ಹೆಚ್ಚಾದರೆ ಸರ್ಕಾರಕ್ಕೆ ಮತ್ತಷ್ಟು ಹೊರೆ

ಗೃಹಲಕ್ಷ್ಮಿ, ಶಕ್ತಿ, ಗೃಹಜ್ಯೋತಿ ಯೋಜನೆಗಳ ಅನುಷ್ಠಾನದ ಕಾರಣಕ್ಕೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ರಾಜ್ಯ ಸರ್ಕಾರಕ್ಕೆ ಹಾಲಿನಪುಡಿ ದರ ಹೆಚ್ಚಳ ಬೇಡಿಕೆಯು ನುಂಗಲಾರದ ತುಪ್ಪದಂತೆ ಆಗಿದೆ. ಬೆಲೆ ಹೆಚ್ಚಿಸಿದರೆ 'ಕ್ಷೀರ ಭಾಗ್ಯ' ಯೋಜನೆಯಡಿ ಮಕ್ಕಳಿಗೆ ಹಾಲು ಒದಗಿಸುವ ಯೋಜನೆಯ ಮೇಲಿನ ಖರ್ಚು ಹೆಚ್ಚಾಗುತ್ತದೆ. ಬೆಲೆ ಹೆಚ್ಚಿಸದಿದ್ದರೆ ಕೆಎಂಎಫ್‌ ನಷ್ಟದ ಸುಳಿಗೆ ಸಿಲುಕುತ್ತದೆ. ಹಾಲಿನಪುಡಿ ಬೆಲೆ ಹೆಚ್ಚಳ ವಿಚಾರವು ಈ ಮೊದಲೂ ಹಲವು ಬಾರಿ ಕೆಎಂಎಫ್ ಮತ್ತು ಶಿಕ್ಷಣ ಇಲಾಖೆ ನಡುವೆ ಹಗ್ಗಜಗ್ಗಾಟಕ್ಕೆ ಕಾರಣವಾಗಿದೆ.

ಕರ್ನಾಟಕ ಸರ್ಕಾರವು ಪ್ರಸ್ತುತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 1ರಿಂದ 10ನೇ ತರಗತಿ ಓದುತ್ತಿರುವ ಪ್ರತಿ ವಿದ್ಯಾರ್ಥಿಗೆ ವಾರದಲ್ಲಿ 5 ದಿನ 18 ಗ್ರಾಂ ಹಾಲಿನಪುಡಿ ಹಾಗೂ 10 ಗ್ರಾಂ ಸಕ್ಕರೆ ಬಳಸಿದ 150 ಮಿಲೀ ಹಾಲನ್ನು 'ಕ್ಷೀರಭಾಗ್ಯ' ಯೋಜನೆಯಡಿ ವಿತರಿಸುತ್ತಿದೆ. ಈ ಯೋಜನೆಯ ಕಾರಣಕ್ಕೆ ನಂದಿನಿಗೆ ಕರ್ನಾಟಕ ಸರ್ಕಾರವೇ ಅತಿದೊಡ್ಡ ಖರೀದಿ ಸಂಸ್ಥೆಯೂ ಆಗಿದೆ. ಪ್ರತಿ ವರ್ಷ ಶಿಕ್ಷಣ ಇಲಾಖೆಯು ಕೆಎಂಎಫ್‌ನಿಂದ 250 ಟನ್ ಹಾಲಿಪುಡಿ ಖರೀದಿಸುತ್ತದೆ. ಹಾಲಿನಪುಡಿ ಮೇಲಿನ ದರ ಹೆಚ್ಚಳ ಪ್ರಸ್ತಾವವನ್ನು ಹಣಕಾಸು ಇಲಾಖೆ ಈಗಾಗಲೇ ತಿರಸ್ಕರಿಸಿದೆ. ಆದರೆ ಮತ್ತೊಂದು ಪ್ರಸ್ತಾವ ಸಲ್ಲಿಸಲು ಕೆಎಂಎಫ್ ಸಿದ್ದತೆ ನಡೆಸಿಕೊಂಡಿದೆ ಎಂದು ಮೂಲಗಳು ಹೇಳಿವೆ.

Whats_app_banner