ಕನ್ನಡ ಸುದ್ದಿ  /  ಕರ್ನಾಟಕ  /  Nutmeg Price: ಜಾಯಿಕಾಯಿ-ಜಾಯಿಪತ್ರಿ ದರ ಕುಸಿತ, ಕರ್ನಾಟಕದ ಬೆಳೆಗಾರರಿಗೆ ಆತಂಕ

Nutmeg price: ಜಾಯಿಕಾಯಿ-ಜಾಯಿಪತ್ರಿ ದರ ಕುಸಿತ, ಕರ್ನಾಟಕದ ಬೆಳೆಗಾರರಿಗೆ ಆತಂಕ

ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಸರಕು ಬರುತ್ತಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದ ಜಾಯಿಕಾಯಿಗೆ ಹಿಂದೆ ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಇತ್ತು. ಆದರೆ ಈಗ ಕಡಿಮೆ ಆಗಿದೆ.

ಜಾಯಿಕಾಯಿ-ಜಾಯಿಪತ್ರಿ ದರ ಕುಸಿತ, ಕರ್ನಾಟಕದ ಬೆಳೆಗಾರರಿಗೆ ಆತಂಕ
ಜಾಯಿಕಾಯಿ-ಜಾಯಿಪತ್ರಿ ದರ ಕುಸಿತ, ಕರ್ನಾಟಕದ ಬೆಳೆಗಾರರಿಗೆ ಆತಂಕ

ಮಂಗಳೂರು: ಕಳೆದ ವರ್ಷಕ್ಕೆ ಹೋಲಿಸಿದರೆ, ಜಾಯಿಕಾಯಿ ದರವು ಒಂದು ಕೆಜಿಗೆ 100 ರೂಪಾಯಿ ಹಾಗೂ ಜಾಯಿಪತ್ರಿ ದರ ಸುಮಾರು 300 ರೂಪಾಯಿ ವರೆಗೆ ಕುಸಿತ ಕಂಡಿದೆ. ಸಾಮಾನ್ಯವಾಗಿ ಏರುಗತಿಯಲ್ಲಿರುವ ಜಾಯಿಕಾಯಿ ಬೆಳೆಯ ಧಾರಣೆ ಕುಸಿತ ಕಂಡಿರುವುದು ಬೆಳೆಗಾರರಲ್ಲಿ ಆತಂಕ ಕಾಡಿದೆ. ಜಾಯಿಕಾಯಿ ಪ್ರಮುಖ ಸಂಬಾರ ಪದಾರ್ಥ. ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನ ಕೆಲವೆಡೆ ಅಡಕೆ ತೋಟದಲ್ಲಿ ಗಿಡಗಳ ಮಧ್ಯೆ ಇದನ್ನು ಬೆಳೆಯುತ್ತಾರೆ. ಆರೋಗ್ಯ, ಸೌಂದರ್ಯವರ್ಧಕವಾಗಿಯೂ ಉಪಯೋಗವಾಗುವ ಜಾಯಿಕಾಯಿ ಕೃಷಿ ಸುಲಭವಾದದ್ದು. ಆದರೂ ಇದರ ಆಕರ್ಷಣೆ ಕರ್ನಾಟಕಕ್ಕಿಂತ ಜಾಸ್ತಿ ಕೇರಳದಲ್ಲಿದೆ. ಹೀಗಾಗಿ ಕೇರಳ ದೇಶದಲ್ಲಿ ಅತಿ ಹೆಚ್ಚು ಜಾಯಿಕಾಯಿ ಬೆಳೆಯುವ ರಾಜ್ಯವಾಗಿ ಗುರುತಿಸಲ್ಪಡುತ್ತಿದೆ.

ಟ್ರೆಂಡಿಂಗ್​ ಸುದ್ದಿ

ಸಾಮಾನ್ಯವಾಗಿ ಮೇ ತಿಂಗಳಿಂದ ಜುಲೈವರೆಗೆ ಜಾಯಿಕಾಯಿ ಕೊಯಿಲು ನಡೆಯುತ್ತದೆ. ಕೇರಳದಲ್ಲಿ ಹೆಚ್ಚಿನ ಸಂಖ್ಯೆ ರೈತರು ಇದನ್ನು ಬೆಳೆಯುತ್ತಾರೆ. ಕಳೆದ ವರ್ಷ ಜಾಯಿಪತ್ರಿ ಕೆಜಿಯೊಂದಕ್ಕೆ 1500ರಿಂದ 2 ಸಾವಿರ ರೂವರೆಗೆ ಇತ್ತು. ಈಗ 1300ರಿಂದ 1700ವರೆಗೆ ಮಾರಾಟವಾಗುತ್ತಿದೆ. ಹಿಂದಿನ ವರ್ಷಗಳಲ್ಲಿ ಜಾಯಿಕಾಯಿಗೆ 360 ರೂ ಬೆಲೆ ಇದ್ದರೆ, ಈಗ 250 ರೂಗೆ ಮಾರಾಟವಾಗುತ್ತಿದೆ. ಇದಕ್ಕೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಸರಕು ಬರುತ್ತಿರುವುದು ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಭಾರತದ ಜಾಯಿಕಾಯಿಗೆ ಹಿಂದೆ ವಿದೇಶಗಳಲ್ಲಿ ಉತ್ತಮ ಮಾರುಕಟ್ಟೆ ಇತ್ತು. ಆದರೆ ಈಗ ಕಡಿಮೆ ಆಗಿದೆ.

ಕೇರಳದ ಕೊಡುಗೆ ಜಾಸ್ತಿ, ದೇಶದ ಶೇ.90ರಷ್ಟು ಬೆಳೆ ಕೇರಳದಲ್ಲಿ

ಜಾಯಿಕಾಯಿ ಬೆಳೆಯಲ್ಲಿ ಕೇರಳದ ಕೊಡುಗೆ ಜಾಸ್ತಿ. ದೇಶದ ಜಾಯಿಕಾಯಿ ಉತ್ಪಾದನೆಯ ಶೇ 90ರಷ್ಟು ಉತ್ಪಾದನೆ ಕೇರಳದಲ್ಲಿಯೇ ಆಗುತ್ತದೆ. ಕರ್ನಾಟಕ ಮತ್ತು ತಮಿಳುನಾಡು ನಂತರದ ಸ್ಥಾನದಲ್ಲಿವೆ. ಕೇರಳದಲ್ಲಿ ಪ್ರತಿ ವರ್ಷ ಸುಮಾರು 15 ಸಾವಿರ ಟನ್ ಉತ್ಪಾದನೆ ಆಗುತ್ತಿದೆ. ಇಡುಕ್ಕಿ, ಕೊಟ್ಟಾಯಂ, ಎರ್ನಾಕುಲಂ ಜಿಲ್ಲೆಗಳಲ್ಲಿ ಜಾಯಿಕಾಯಿ ಬೆಳೆಯಲಾಗುತ್ತದೆ. ಜಾಯಿಕಾಯಿಯನ್ನು ಔಷಧೀಯವಾಗಿ, ಸೌಂದರ್ಯವರ್ಧಕವಾಗಿಯೂ ಬೆಳೆಸಲು ಸಾಧ್ಯವಿದೆ.

ತೆಂಗು, ಅಡಕೆ ತೋಟದಲ್ಲೂ ಬೆಳೆಸಬಹುದು

ಜಾಯಿಕಾಯಿಗೆ ಕೀಟಬಾಧೆ ಕಡಿಮೆ. ರೋಗಬಾಧೆಯೂ ಹೆಚ್ಚಾಗಿ ಕಾಣಿಸುವುದಿಲ್ಲ. ಹೀಗಾಗಿ ತೆಂಗು, ಅಡಕೆ ತೋಟದಲ್ಲಿ ಇವನ್ನು ಎಡೆಬೆಳೆಯಾಗಿ (ಮಿಶ್ರ ಬೆಳೆ) ಬೆಳೆಸುತ್ತಾರೆ. ಅರೆಕಾಲಿಕ ರೈತರಿಗೆ ಇದು ಒಳ್ಳೆಯದು. ಒಂದು ಮರವಿದ್ದರೂ ಸಾಕು, ಆದಾಯ, ಕೊಯ್ಲು ಸುಲಭ. ಕೂಲಿ ಕಾರ್ಮಿಕರ ಅಗತ್ಯ ಬರುವುದಿಲ್ಲ. ಜಾಯಿಕಾಯಿ ರಬ್ಬರ್ ನಂತೆ ಜಾಗತಿಕ ಮೌಲ್ಯ ಇರುವ ಕೃಷಿ ಉತ್ಪನ್ನ. ಕೇರಳದಲ್ಲಿ ಕೃಷಿ ವಿಸ್ತೀರ್ಣ ಹಾಗೂ ಬೆಳೆಗಳ ಉತ್ಪಾದನೆ ಕಡಿಮೆ ಆದರೂ ಕಳೆದ ಹತ್ತು ವರ್ಷಗಳಲ್ಲಿ ಜಾಯಿಕಾಯಿ ಕೃಷಿ ಶೇ 206ರಷ್ಟು ಅಭಿವೃದ್ಧಿಯಾಗಿದೆ ಎಂದು ಸ್ಥಳೀಯ ಅಂಕಿ, ಅಂಶಗಳು ತಿಳಿಸುತ್ತವೆ. 2020-21ರ ಲೆಕ್ಕಾಚಾರದ ಪ್ರಕಾರ ಕೇರಳದಲ್ಲಿ 23,509 ಹೆಕ್ಟೇರ್ ಜಾಗದಲ್ಲಿ ಜಾಯಿಕಾಯಿ ಬೆಳೆಯಲಾಗಿದೆ. ಕೇರಳವು ಗಲ್ಫ್, ಅಮೆರಿಕಾ, ನೈಜೀರಿಯಾ, ಇಸ್ರೇಲ್ ಗೆ ಜಾಯಿಕಾಯಿ ರಫ್ತು ಮಾಡುತ್ತಿದೆ.

IPL_Entry_Point