ಕನ್ನಡ ಸುದ್ದಿ  /  Karnataka  /  Business News Pink Onion Price Doubled In 15 Days A Smile On The Face Of Onion Growers Of Kolar Chikkaballapur News Uks

ಗುಲಾಬಿ ಈರುಳ್ಳಿ ಬೆಲೆ ದುಪ್ಪಟ್ಟು; ಕೋಲಾರ ಚಿಕ್ಕಬಳ್ಳಾಪುರ ಈರುಳ್ಳಿ ಬೆಳೆಗಾರರ ಮುಖದಲಿ ಹೂನಗು, ದರ ಎಷ್ಟಾಗಿರಬಹುದು ಗೆಸ್ ಮಾಡ್ತೀರಾ

ಭಾರತ ಸರ್ಕಾರ ಈರುಳ್ಳಿ ರಫ್ತು ನಿಷೇಧ ಕೊಂಚ ಸಡಿಲಿಸಿದ ಬಳಿಕ ಕೋಲಾರ, ಚಿಕ್ಕಬಳ್ಳಾಪುರ ಈರುಳ್ಳಿ ಬೆಳೆಗಾರರ ಮುಖದಲ್ಲಿ ಹೂನಗು ಕಾಣತೊಡಗಿದೆ. ಕಾರಣ ಗುಲಾಬಿ ಈರುಳ್ಳಿ ಬೆಲೆ ದುಪ್ಪಟ್ಟು ಆಗಿರುವುದು. ಅಂದ ಹಾಗೆ ದರ ಎಷ್ಟಾಗಿರಬಹುದು ಗೆಸ್ ಮಾಡ್ತೀರಾ..

ಗುಲಾಬಿ ಈರುಳ್ಳಿ (ಸಾಂಕೇತಿಕ ಚಿತ್ರ)
ಗುಲಾಬಿ ಈರುಳ್ಳಿ (ಸಾಂಕೇತಿಕ ಚಿತ್ರ) (Pixabay)

ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರವು ಈರುಳ್ಳಿ ಮೇಲಿನ ರಫ್ತು ನಿಷೇಧದ ಆದೇಶವನ್ನು ಭಾಗಶಃ ಹಿಂಪಡೆದ ಬಳಿಕ ಜಿಲ್ಲೆಯ ಈರುಳ್ಳಿ ಬೆಳೆಗಾರರಲ್ಲಿ ವಿಶೇಷವಾಗಿ ಗುಲಾಬಿ ಈರುಳ್ಳಿ ಬೆಳೆಯುವವರ ಮುಖದಲ್ಲಿ ಹೂನಗು ಮೂಡಿದೆ. ಕಾರಣ ಗುಲಾಬಿ ಈರುಳ್ಳಿ ಬೆಲೆ ದುಪ್ಪಟ್ಟು.

ದೇಶದ ಉದ್ದಗಲಕ್ಕೂ ಇತ್ತೀಚೆಗೆ ಅಡುಗೆಗೆ ಬಳಕೆ ಮಾಡುವ ಈರುಳ್ಳಿಯ ಬೆಲೆ ಕಿಲೋಗೆ 100 ರೂಪಾಯಿಗೆ ಏರಿತ್ತು. ಈರುಳ್ಳಿ ಬೆಲೆ ನಿಯಂತ್ರಿಸುವ ಸಲುವಾಗಿ ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ಹೇರಿತು. ರಫ್ತು ಸುಂಕವನ್ನೂ ಹೆಚ್ಚಿಸಿತ್ತು. ಆದರೆ ಈಗ ಪರಿಸ್ಥಿತಿ ಸುಧಾರಿಸಿದ ಕಾರಣ, ಈರುಳ್ಳಿ ರಫ್ತುನಿಷೇಧವನ್ನು ಕೇಂದ್ರ ಸರ್ಕಾರ ಹಿಂಪಡೆದಿದೆ. ಹೀಗಾಗಿ ಗುಲಾಬಿ ಈರುಳ್ಳಿ ಬೆಲೆ 1,400 ರೂಪಾಯಿಯಿಂದ 1,500 ರೂಪಾಯಿವರೆಗೂ ಮಾರಾಟವಾಗುತ್ತಿದೆ. ಇದು ಈರುಳ್ಳಿ ಬೆಳೆಗಾರರ ಜೇಬು ತುಂಬುವಂತೆ ಮಾಡಿದೆ.

ಗುಲಾಬಿ ಈರುಳ್ಳಿ ಬೆಳೆ ಕೋಲಾರ, ಚಿಕ್ಕಬಳ್ಳಾಪುರದಲ್ಲೇ ಹೆಚ್ಚು

ಕರ್ನಾಟಕದಲ್ಲಿ ಗುಲಾಬಿ ಈರುಳ್ಳಿ ಬೆಳೆ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೇ ಹೆಚ್ಚು. ಅದರಲ್ಲೂ ಚಿಕ್ಕ ಬಳ್ಳಾಪುರ ಜಿಲ್ಲೆಯ ರೈತರು ಹೆಚ್ಚಿನ ಪ್ರಮಾಣದಲ್ಲಿ ಗುಲಾಬಿ ಈರುಳ್ಳಿಯನ್ನು ವಾಣಿಜ್ಯ ಬೆಳೆಯಾಗಿ ಬೆಳೆಯುತ್ತಾರೆ. ಜಿಲ್ಲೆಯಲ್ಲಿ ಬೆಳೆಯುವ ಗುಲಾಬಿ ಈರುಳ್ಳಿಯಲ್ಲಿ ಬಹುಪಾಲು ನೇಪಾಳ, ಬಾಂಗ್ಲಾ ಶ್ರೀಲಂಕಾ ಸೇರಿ ವಿದೇಶಗಳಿಗೆ ರಫ್ತಾಗುತ್ತದೆ. ಆದ್ದರಿಂದ ಜಿಲ್ಲೆಯಲ್ಲಿ ರೈತರು ಪ್ರತಿ ವರ್ಷ ಸಾವಿರಾರು ಹೆಕ್ಟೇರ್  ಪ್ರದೇಶದಲ್ಲಿ ಗುಲಾಬಿ ಈರುಳ್ಳಿ ಬೆಳೆಯುತ್ತಾರೆ.

ವಿದೇಶಗಳಲ್ಲಿ ಗುಲಾಬಿ ಈರುಳ್ಳಿಗೆ ಹೆಚ್ಚು ಬೇಡಿಕೆಯ ಇರುವ ಕಾರಣ, ಜಿಲ್ಲೆಯ ಬೆಳೆಗಾರರಿಗೆ ಹೆಚ್ಚಿನ ಆದಾಯ ಸಿಗುತ್ತಿದೆ. ರಫ್ತು ನಿಷೇಧ ಜಾರಿಯಾದರೆ ಮಾತ್ರ ಸಂಕಷ್ಟ ಎದುರಾಗಿ ಬಿಡುತ್ತದೆ ಎಂದು ಸ್ಥಳೀಯ ಈರುಳ್ಳಿ ಬೆಳೆಗಾರರು ಹೇಳುತ್ತಿರುವುದಾಗಿ ಉದಯವಾಣಿ ವರದಿ ಹೇಳಿದೆ.

ಗುಲಾಬಿ ಈರುಳ್ಳಿ ಬೆಲೆ ಹೇಗಿದೆ

ಕೋಲಾರ, ಚಿಕ್ಕಬಳ್ಳಾಪುರ ಭಾಗದಲ್ಲಿ ಗುಲಾಬಿ ಈರುಳ್ಳಿ ಈಗ ಕೊಯ್ಲಿಗೆ ಬಂದಿದೆ. ಈ ವರ್ಷ ಇಳುವರಿ ಚೆನ್ನಾಗಿದೆ ಎಂದು ಬೆಳೆಗಾರರು ಹೇಳುತ್ತಿದ್ದು, ಕೇಂದ್ರ ಸರ್ಕಾರ ಈರುಳ್ಳಿ ರಫ್ತು ನಿಷೇಧ ತೆರವುಗೊಳಿಸಿದ ವಾರದ ಅವಧಿಯಲ್ಲೇ ಬೆಲೆ ದುಪ್ಪಟ್ಟಾಗಿದೆ ಎಂಬ ಖುಷಿ ಅವರದ್ದು.

ಗುಲಾಬಿ ಈರುಳ್ಳಿಗೆ ಸದ್ಯ ಮಾರುಕಟ್ಟೆಯಲ್ಲಿ 56 ಕಿಲೋ ಚೀಲ ಈರುಳ್ಳಿಗೆ 1,400 ರೂಪಾಯಿಯಿಂದ 1500 ರೂಪಾಯಿವರೆಗೂ ಮಾರಾಟವಾಗುತ್ತಿದೆ. 15 ದಿನಗಳ ಹಿಂದೆ 56 ಕೆ.ಜಿ. ಚೀಲದ ಈರುಳ್ಳಿಗೆ ಕೇವಲ 650 ರೂಪಾಯಿಯಿಂದ 700 ರೂಪಾಯಿ ಸಿಗುತ್ತಿತ್ತು. ಆದರೆ, ಕೇವಲ 15-20 ದಿನಗಳ ಅಂತರದಲ್ಲಿ ಗುಲಾಬಿ ಈರುಳ್ಳಿ ಬೆಲೆ ದುಪ್ಪಟ್ಟಾಗಿದೆ.

ಕೋಲಾರ ಚಿಕ್ಕಬಳ್ಳಾಪುರಗಳಲ್ಲಿ ಬಳ್ಳಾರಿ ಈರುಳ್ಳಿ ಬೆಳೆಯುವವರು ಕಡಿಮೆ

ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಲ್ಲಿ ಅಡುಗೆ ಹಾಗೂ ಸಾಂಬಾರಿಗೆ ಬಳಸುವ ಬಳ್ಳಾರಿ ಈರುಳ್ಳಿ ಬೆಳೆಯುವುದು ವಿರಳ. ವಾಣಿಜ್ಯ ಬೆಳೆಯಾಗಿ ಈರುಳ್ಳಿ ಬೆಳೆಯನ್ನು ಪರಿಗಣಿಸುವ ಕಾರಣ ಈ ಎರಡೂ ಜಿಲ್ಲೆಯವರು ವಿದೇಶಗಳಿಗೆ ರಫ್ತು ಆಗಬಲ್ಲ ಗುಲಾಬಿ ಈರುಳ್ಳಿಯನ್ನೇ ಬೆಳೆಯುತ್ತಾರೆ. ಇದು ದಶಕಗಳಿಂದ ಈರುಳ್ಳಿ ಬೆಳೆಗಾರರು ರೂಢಿಸಿಕೊಂಡು ಬಂದಿರುವ ಪದ್ಧತಿ.

ಕಳೆದ ಆರೇಳು ವರ್ಷಗಳಿಗೆ ಹೋಲಿಸಿಕೊಂಡರೆ ಗುಲಾಬಿ ಈರುಳ್ಳಿ ಬೆಳೆಯುವ ರೈತರು ಸಂಖ್ಯೆ ಹಾಗೂ ವಿಸ್ತೀರ್ಣ ಕೂಡ ಹೆಚ್ಚಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಬೆಳೆಯುವ ಗುಲಾಬಿ ಈರುಳ್ಳಿಯನ್ನು ಸ್ಥಳೀಯವಾಗಿ ಅಡುಗೆಗೆ ಬಳಸುವುದಿಲ್ಲ, ಕೇವಲ ರಫ್ತು ಮಾಡುವುದುಕ್ಕಾಗಿಯೇ ಹೆಚ್ಚು ರೈತರು ಈರುಳ್ಳಿ ಬೆಳೆಯುತ್ತಾರೆ. ಈರುಳ್ಳಿ ಬೆಳೆಗೆ ಖರ್ಚು ಕಡಿಮೆ. ಇದೇ ಪ್ರಮಾಣದಲ್ಲಿ ಟೊಮ್ಯಾಟೋವನ್ನೂ ಜಿಲ್ಲೆಯಲ್ಲಿ ಬೆಳೆಯತ್ತಾರೆ ಎಂದು ತೋಟಗಾರಿಕೆ ಇಲಾಖೆ ಮೂಲಗಳು ತಿಳಿಸಿರುವುದಾಗಿ ವರದಿ ಹೇಳಿದೆ.

(This copy first appeared in Hindustan Times Kannada website. To read more like this please logon to kannada.hindustantimes.com)

IPL_Entry_Point