ರೆಪೊ ದರ ಕಡಿತದಿಂದ ಗೃಹಸಾಲ, ವಾಹನ ಸಾಲದ ತಿಂಗಳ ಇಎಂಐ ಕಡಿಮೆಯಾಗುತ್ತ? ಸಾಲಗಾರರಿಗೆ ಬಡ್ಡಿದರ ಇಳಿಕೆಯ ಖುಷಿ
ಕನ್ನಡ ಸುದ್ದಿ  /  ಕರ್ನಾಟಕ  /  ರೆಪೊ ದರ ಕಡಿತದಿಂದ ಗೃಹಸಾಲ, ವಾಹನ ಸಾಲದ ತಿಂಗಳ ಇಎಂಐ ಕಡಿಮೆಯಾಗುತ್ತ? ಸಾಲಗಾರರಿಗೆ ಬಡ್ಡಿದರ ಇಳಿಕೆಯ ಖುಷಿ

ರೆಪೊ ದರ ಕಡಿತದಿಂದ ಗೃಹಸಾಲ, ವಾಹನ ಸಾಲದ ತಿಂಗಳ ಇಎಂಐ ಕಡಿಮೆಯಾಗುತ್ತ? ಸಾಲಗಾರರಿಗೆ ಬಡ್ಡಿದರ ಇಳಿಕೆಯ ಖುಷಿ

RBI Repo rate Cut: ಆರ್‌ಬಿಐ ರೆಪೊ ದರ ಕಡಿತ ಮಾಡಿರುವುದರಿಂದ ಬ್ಯಾಂಕ್‌ಗಳ ಎಕ್ಸಟರ್ನಲ್‌ ಬೆಂಚ್‌ಮಾರ್ಕ್‌ ಲೆಂಡಿಂಗ್‌ ರೇಟ್‌ (ಇಬಿಎಲ್‌ಆರ್‌) ಬಡ್ಡಿದರಗಳು ಕಡಿಮೆಯಾಗಲಿವೆ. ಮನೆ ಖರೀದಿ ಅಥವಾ ಇತರೆ ಸಾಲ ಪಡೆದವರಿಗೆ ಇದರಿಂದ ಅನುಕೂಲವಾಗಲಿದೆ. ಇವರ ತಿಂಗಳ ಇಎಂಐ ಇಳಿಕೆ ಕಾಣಲಿದೆ. ಎಂಸಿಎಲ್‌ಆರ್‌ ಸಾಲದ ಬಡ್ಡಿದರ ಕಡಿಮೆಯಾಗಲಿದೆ.

ರೆಪೊ ದರ ಕಡಿತದಿಂದ ಗೃಹಸಾಲ, ವಾಹನ ಸಾಲದ ತಿಂಗಳ ಇಎಂಐ ಇಳಿಕೆಯಾಗಲಿದೆ.
ರೆಪೊ ದರ ಕಡಿತದಿಂದ ಗೃಹಸಾಲ, ವಾಹನ ಸಾಲದ ತಿಂಗಳ ಇಎಂಐ ಇಳಿಕೆಯಾಗಲಿದೆ.

ಬೆಂಗಳೂರು: ಕಳೆದ ಎರಡು ವರ್ಷಗಳಲ್ಲಿ ರೆಪೊ ದರ ಶೇಕಡ 6.50 ಇತ್ತು. ರಿಸರ್ವ್‌ ಬ್ಯಾಂಕ್‌ ಆಫ್‌ಇಂಡಿಯಾದ ಆರು ಸದಸ್ಯರ ಹಣಕಾಸು ನೀತಿ ಸಮಿತಿ (ಎಂಪಿಸಿ)ಯು ಶುಕ್ರವಾರ ರೆಪೊ ದರವನ್ನು 25 ಮೂಲಾಂಶದಷ್ಟು ಕಡಿಮೆ ಮಾಡಿದೆ. ಅಂದರೆ, ರೆಪೊ ದರ ಶೇಕಡ 6.50ರಿಂದ ಶೇಕಡ 6.25ಕ್ಕೆ ಇಳಿದಿದೆ. ಸುಮಾರು ಐದು ವರ್ಷಗಳ ಬಳಿಕ ಮೊದಲ ಬಾರಿಗೆ ರೆಪೊ ದರ ಇಳಿಕೆ ಮಾಡಲಾಗಿದೆ. ಈ ರೀತಿ ರೆಪೊ ದರ ಇಳಿಕೆ ಮಾಡಿರುವುದು ಗೃಹ ಮತ್ತು ವೈಯಕ್ತಿ ಸಾಲ ಹೊಂದಿರುವ ವ್ಯಕ್ತಿಗಳಿಗೆ ಖುಷಿ ತರಬಹುದು. ಬಡ್ಡಿದರ ಇಳಿಕೆ ಕಾಣುವುದರಿಂದ ತಿಂಗಳ ಇಎಂಐ ಕಡಿಮೆಯಾಗಲಿದೆ.

ಕಡಿಮೆ ಬಡ್ಡಿದರದಲ್ಲಿ ಸಾಲ ನೀಡಿ ಆರ್ಥಿಕ ಚಟುವಟಿಕೆಗಳನ್ನು ಉತ್ತೇಜಿಸುವ ಪ್ರಯತ್ನ ಇದಾಗಿದೆ. ಹಣಕಾಸು ನೀತಿ ಸಮಿತಿಯ ಸದಸ್ಯರು ಸರ್ವಾನುಮತದ ನಿರ್ಧಾರ ಕೈಗೊಂಡಿದ್ದಾರೆ. ಇದರಿಂದ ಖರ್ಚು ಮತ್ತು ಹೂಡಿಕೆಗೆ ಉತ್ತೇಜನ ದೊರಕಲಿದೆ. ಹಣದುಬ್ಬರ ನಿರ್ವಹಣೆ ಸಮಯದಲ್ಲಿ ಆರ್ಥಿಕ ಬೆಳವಣಿಗೆಗೆ ಉತ್ತೇಜನ ನೀಡುವ ಬದ್ಧತೆಯೂ ಇಲ್ಲಿ ಕಾಣಿಸುತ್ತದೆ ಎಂದು ತಜ್ಞರು ಹೇಳಿದ್ದಾರೆ. ಆರ್ಥಿಕ ನೀತಿ ಸಮಿತಿಯು ಜಿಡಿಪಿ ಬೆಳವಣಿಗೆ ದರ ಶೇಕಡ 6.7 ಎಂದು ಅಂದಾಜಿಸಿದೆ. ಇದೇ ರೀತಿ, 2025-26ರ ಹಣಕಾಸು ವರ್ಷದಲ್ಲಿ ಚಿಲ್ಲರೆ ಹಣದುಬ್ಬರವನ್ನು ಶೇಕಡಾ 4.2 ಎಂದು ಅಂದಾಜಿಸಿದೆ.

ಗೃಹಸಾಲ, ವೈಯಕ್ತಿಕ ಸಾಲದ ಬಡ್ಡಿದರ ಇಳಿಕೆ

ಬ್ಯಾಂಕ್‌ಗಳು ಎಕ್ಸಟರ್ನಲ್‌ ಬೆಂಚ್‌ಮಾರ್ಕ್‌ ಲೆಂಡಿಂಗ್‌ ರೇಟ್‌ (ಇಬಿಎಲ್‌ಆರ್‌) ಬಡ್ಡಿದರಗಳು ಇದರಿಂದ ಕಡಿಮೆಯಾಗಲಿವೆ. ಮನೆ ಖರೀದಿ ಅಥವಾ ಇತರೆ ಸಾಲ ಪಡೆದವರಿಗೆ ಇದರಿಂದ ಅನುಕೂಲವಾಗಲಿದೆ. ಇವರ ತಿಂಗಳ ಇಎಂಐ ಇಳಿಕೆ ಕಾಣಲಿದೆ. ಎಂಸಿಎಲ್‌ಆರ್‌ ಸಾಲದ ಬಡ್ಡಿದರ ಕಡಿಮೆಯಾಗಲಿದೆ.

ಗೃಹ, ವಾಹನ ಸಾಲಗಳ ಇಎಂಐಗಳು ಕಡಿಮೆಯಾಗಲಿವೆ. ಇದರಿಂದ ಸಾಲ ಪಡೆದವರಿಗೆ ತಮ್ಮ ಸಾಲವನ್ನು ತೀರಿಸುವುದು ಸುಲಭವಾಗಲಿದೆ. ರೆಪೊ ದರ ಕಡಿಮೆಯಾದರೆ ಜನರಿಗೆ ಮತ್ತು ಬಿಸ್ನೆಸ್‌ಗಳಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ದೊರಕುತ್ತದೆ. ಇದರಿಂದ ಖರ್ಚು ಮಾಡುವುದು ಮತ್ತು ಹೂಡಿಕೆ ಮಾಡುವುದು ಹೆಚ್ಚುತ್ತದೆ. ಇದು ದೇಶದ ಆರ್ಥಿಕ ಪ್ರಗತಿಗೆ ಕೊಡುಗೆ ನೀಡುತ್ತದೆ. ಬ್ಯಾಂಕ್‌ಗಳಿಗೆ ಸಾಲ ನೀಡಲು ಹೆಚ್ಚು ಹಣ ಇರುತ್ತದೆ. ಇದು ಗ್ರಾಹಕರಿಗೆ ಮತ್ತು ವ್ಯವಹಾರಗಳಿಗೆ ಉಪಕಾರಿಯಾಗಿದೆ.

ಗೃಹಸಾಲ ಇಎಂಐ ಎಷ್ಟು ಕಡಿಮೆಯಾಗಲಿದೆ ಎಂಬ ಪ್ರಶ್ನೆ ನಿಮ್ಮಲ್ಲಿ ಇರಬಹುದು. "ಶೇಕಡ 8.75 ಬಡ್ಡಿದರ ನಿಮ್ಮಲ್ಲಿ 20 ವರ್ಷದ ಗೃಹ ಸಾಲ ಇದ್ದರೆ ಮಾರ್ಚ್‌ ವೇಳೆಗೆ 12 ಇಎಂಐಗಳನ್ನು ಕಟ್ಟಿದ್ದರೆ, ಏಪ್ರಿಲ್‌ ತಿಂಗಳ ಬಳಿಕ ಒಂದು ಲಕ್ಷ ರೂಪಾಯಿಗೆ ನಿಮ್ಮ ಬಡ್ಡಿದರ ಶೇಕಡ 8,417ಕ್ಕೆ ತಲುಪಲಿದೆ. 50 ಲಕ್ಷ ರೂಪಾಯಿ ಸಾಲ ಇದ್ದರೆ ಸಾಲದ ಅವಧಿ ಮುಗಿಯುವ ವೇಳೆಗೆ ನಿಮಗೆ 4.20 ಲಕ್ಷ ರೂಪಾಯಿ ಉಳಿತಾಯವಾಗುತ್ತದೆ" ಎಂದು ಸಿಎನ್‌ಬಿಸಿಟಿವಿ18ನಲ್ಲಿ ತಜ್ಞರೊಬ್ಬರು ಅಂದಾಜಿಸಿದ್ದಾರೆ.

ಆದರೆ, ರೆಪೊ ದರ ಕಡಿಮೆ ಮಾಡಿದರೆ ಹಣದುಬ್ಬರ ಪ್ರಮಾಣ ಹೆಚ್ಚಬಹುದು. ಹಣದ ಪೂರೈಕೆ ಹೆಚ್ಚಾಗಿ, ಕಡಿಮೆ ಬಡ್ಡಿದರದಲ್ಲಿ ಸಾಲಗಳು ದೊರಕಿದಾಗ ವಸ್ತುಗಳ ಬೆಲೆ ಹೆಚ್ಚಬಹುದು. ಹೀಗಾಗಿ, ಬಡ್ಡಿದರದಲ್ಲಿ ಉಳಿತಾಯ ಮಾಡಿದ ಹಣವು ಬೇರೆ ರೀತಿಯಲ್ಲಿ ದಿನ ಬಳಕೆಯ ವಸ್ತುಗಳ ದುಬಾರಿ ದರದ ರೂಪದಲ್ಲಿ ಖರ್ಚಾಗಬಹುದು ಎಂದು ತಜ್ಞರು ಹೇಳಿದ್ದಾರೆ. ಹಣದುಬ್ಬರ, ಆರ್ಥಿಕ ಪ್ರಗತಿ ಮತ್ತು ಜಾಗತಿಕ ಆರ್ಥಿಕ ಟ್ರೆಂಡ್‌ಗಳನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಬ್ಯಾಂಕ್‌ ರೆಪೊ ದರ ಇಳಿಕೆ ಮಾಡುತ್ತದೆ.

Whats_app_banner