ಹಾಲು ಖರೀದಿ ದರ ಲೀಟರಿಗೆ 5 ರೂ ಹೆಚ್ಚಳವಾಗಲಿದೆ; ರೈತರಿಗೆ ಖುಷಿ ಸುದ್ದಿ ಹೇಳಿದ ಪಶುಸಂಗೋಪನಾ ಸಚಿವ ಕೆ ವೆಂಕಟೇಶ್
ಹಾಲು ಉತ್ಪಾದಕರಿಗೆ ಖುಷಿ ಸುದ್ದಿ. ಹಾಲು ಖರೀದಿ ದರ ಲೀಟರಿಗೆ 5 ರೂಪಾಯಿ ಹೆಚ್ಚಳವಾಗಲಿದೆ ಎಂದು ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ಹೇಳಿದ್ದಾರೆ. ರೈತರಿಗೆ ಖುಷಿ ಸುದ್ದಿ ಜೊತೆಗೆ ಹಾಲು ಒಕ್ಕೂಟಗಳಿಗೆ ಕಿವಿಮಾತನ್ನೂ ಅವರು ಹೇಳಿದ್ದಾರೆ. ಅದರ ವಿವರ ಇಲ್ಲಿದೆ.

ಮೈಸೂರು: ಹಾಲು ಉತ್ಪಾದಕರಿಗೆ ಒಂದು ಖುಷಿ ಸುದ್ದಿ. ಹಾಲು ಖರೀದಿ ದರ 5 ರೂಪಾಯಿ ಹೆಚ್ಚಾಗಲಿದೆ ಎಂದು ಪಶುಸಂಗೋಪನಾ ಸಚಿವ ಕೆ ವೆಂಕಟೇಶ್ ಖಚಿತಪಡಿಸಿದ್ದಾರೆ. ಮೈಸೂರು ಜಿಲ್ಲೆ ತಿ.ನರಸೀಪುರದ ಎಪಿಎಂಸಿ ಪ್ರಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈ ವಿಷಯವನ್ನು ಅವರು ಖಚಿತಪಡಿಸಿದರು. ಹಾಲು ಒಕ್ಕೂಟಗಳು ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ 5 ರೂಪಾಯಿ ಹೆಚ್ಚಿಸಲು ಚಿಂತನೆ ನಡೆದಿದೆ ಎಂದು ಸಚಿವ ಕೆ ವೆಂಟಕೇಶ್ ಹೇಳಿದರು. ಅವರು ಮೈಮೂಲ್ ಒಕ್ಕೂಟ ಒಂದೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಒಕ್ಕೂಟದ ಉಪಕಚೇರಿಯನ್ನು ಉದ್ಘಾಟಿಸಿದ ಸಂದರ್ಭದಲ್ಲಿ ಈ ವಿಚಾರ ತಿಳಿಸಿದರು.
ಹಾಲು ಖರೀದಿ ದರ 5 ರೂ ಹೆಚ್ಚಿಸಲು ತಾತ್ತ್ವಿಕ ಒಪ್ಪಿಗೆ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ
ಹಾಲು ಉತ್ಪಾದಕರಿಂದ ಖರೀದಿಸುವ ಹಾಲಿನ ದರವನ್ನು ಲೀಟರಿಗೆ 5 ರೂಪಾಯಿ ಹೆಚ್ಚಿಸುವುದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಾತ್ತ್ವಿಕ ಒಪ್ಪಿಗೆ ನೀಡಿದ್ದಾರೆ. ಹಿಂದೆ ಲೀಟರಿಗೆ 35 ರೂಪಾಯಿ ಕೊಡಲಾಗುತ್ತಿತ್ತು. ಬಳಿಕ ಅದನ್ನು 33 ರೂಪಾಯಿಗೆ ಇಳಿಸಲಾಗಿತ್ತು. ಈಗ ಮತ್ತೆ 5 ರೂಪಾಯಿ ಹೆಚ್ಚಿಸುವುದಕ್ಕೆ ಅನುಮತಿ ಸಿಕ್ಕಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸೂಚನೆ ಪ್ರಕಾರವೇ ಹೊಸ ವರ್ಷದ ಕೊಡುಗೆಯಾಗಿ ಹಾಲು ಉತ್ಪಾದಕರಿಗೆ ಇದು ಸಿಗಲಿದೆ. ಹೆಚ್ಚಳವಾದ 5 ರೂಪಾಯಿ ಪೂರ್ತಿಯಾಗಿ ಹಾಲು ಉತ್ಪಾದಕರಿಗೇ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಪಶುಸಂಗೋಪನಾ ಸಚಿವ ಕೆ ವೆಂಟಕೇಶ್ ಇದೇ ವೇಳೆ ಸ್ಪಷ್ಟಪಡಿಸಿದರು.
ಒಕ್ಕೂಟಗಳ ನಷ್ಟ ಭರ್ತಿಗೆ ಹಾಲು ಉತ್ಪಾದಕರಿಗೇಕೆ ಅನ್ಯಾಯ
ಹಾಲು ಉತ್ಪಾದಕರು ಪಶು ಆಹಾರಕ್ಕೆ ಸಹಾಯಧನ ನೀಡುವಂತೆ ಕೋರಿಕೆ ಸಲ್ಲಿಸುತ್ತಲೇ ಇದ್ದಾರೆ. ಹಾಲು ಉತ್ಪಾದಕರ ಅಗತ್ಯಗಳ ಕಡೆಗೂ ಹಾಲು ಒಕ್ಕೂಟಗಳು ಗಮನಹರಿಸಬೇಕು. ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟಗಳು ಸ್ವಲ್ಪ ಅನಗತ್ಯ ಖರ್ಚುಗಳನ್ನು ನಿಲ್ಲಿಸಿದರೆ, ಹಾಲು ಉತ್ಪಾದಕರಿಗೆ ಮತ್ತಷ್ಟು ಸೌಲಭ್ಯಗಳನ್ನು ಕಲ್ಪಿಸಬಹುದು. ಒಕ್ಕೂಟಗಳು ಅನುಭವಿಸುತ್ತಿರುವ ನಷ್ಟ ಭರಿಸಿಕೊಳ್ಳಲು ಹಾಲು ಉತ್ಪಾದಕರಿಗೆ ಅನ್ಯಾಯ ಮಾಡಬಾರದು. ಹಾಲು ಒಕ್ಕೂಟಗಳು ಶೇ 1 ರಿಂದ 2 ರಷ್ಟು ಲಾಭ ಪಡೆದರೆ ಸಾಕು. ಹಾಲು ಒಕ್ಕೂಟಗಳು ವ್ಯಾಪಾರಿ ಸಂಸ್ಥೆಗಳಂತೆ ಲಾಭೋದ್ಧೇಶದ ಸಂಸ್ಥೆಗಳಾಗಬಾರದು. ಹಾಲು ಉತ್ಪಾದಕರಿಗೂ ನೆರವಾಗುವ ಉದ್ದೇಶವೇ ಹಾಲು ಒಕ್ಕೂಟಗಳಿಗೆ ಮುಖ್ಯವಾಗಬೇಕು ಎಂದು ಸಚಿವ ಕೆ ವೆಂಕಟೇಶ್ ಪ್ರತಿಪಾದಿಸಿದರು ಎಂದು ಪ್ರಜಾವಾಣಿ ವರದಿ ತಿಳಿಸಿದೆ.
ಸರ್ಕಾರವೂ ಕಷ್ಟದಲ್ಲಿದೆ, ಹೊಸ ಕಟ್ಟಡ ನಿರ್ಮಾಣಕ್ಕೆ ಹಣ ಸಿಗಲ್ಲ
ರಾಜ್ಯ ಸರ್ಕಾರವೂ ಸಂಕಷ್ಟದಲ್ಲಿದೆ. ಹೊಸ ಕಟ್ಟಡ ನಿರ್ಮಾಣಕ್ಕೆ ಹಣ ಹೊಂದಿಸಲಾಗದು. ಇದನ್ನು ಒಕ್ಕೂಟಗಳೂ ಗಮನಿಸಬೇಕು. ಹಾಲು ಉತ್ಪಾದಕರಿಗೆ ನೀಡುವ ಪ್ರೋತ್ಸಾಹ ಧನಕ್ಕಾಗಿ ಈ ಸಲದ ಬಜೆಟ್‌ನಲ್ಲಿ 1,300 ಕೋಟಿ ರೂಪಾಯಿ ಇರಿಸಲಾಗಿದೆ. ಅದರಲ್ಲಿ ಈಗಾಗಲೇ 800 ಕೋಟಿ ರೂಪಾಯಿ ಬಿಡುಗಡೆಯಾಗಿದೆ. ಕಳೆದ ವರ್ಷ 1200 ಕೋಟಿ ರೂಪಾಯಿ ಇಟ್ಟು, ಅಷ್ಟನ್ನೂ ಬಿಡುಗಡೆ ಮಾಡಲಾಗಿತ್ತು. ಹಿಂದಿನ ಬಿಜೆಪಿ ಸರ್ಕಾರ 700 ಕೋಟಿ ರೂಪಾಯಿ ಪ್ರೋತ್ಸಾಹ ಧನ ಉಳಿಸಿದ್ದರಿಂದ ಹೊರೆಯಾಗಿದೆ. ಅದರಲ್ಲಿ 300 ಕೋಟಿ ರೂಪಾಯಿ ಪಾವತಿಯಾಗಿದೆ. ಇನ್ನೂ 400 ಕೋಟಿ ರೂಪಾಯಿ ಪಾವತಿಯಾಗಬೇಕಿದೆ. ಮಾರ್ಚ್ ಅಂತ್ಯದೊಳಗೆ ಎಲ್ಲ ಬಾಕಿ ಬಿಡುಗಡೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದು ಸಚಿವ ಕೆ ವೆಂಕಟೇಶ್ ವಿವರಿಸಿದರು.