Stock market fraud: ನಕಲಿ ಷೇರು ಆ್ಯಪ್ ಮೂಲಕ 91 ಲಕ್ಷ ರೂ ಕಳೆದುಕೊಂಡ ಬೆಂಗಳೂರು ವ್ಯಕ್ತಿ, ಝೆರೋಧಾದ ನಿತಿನ್ ಕಾಮತ್ ಹೀಗಂದ್ರು
Stock market fraud: ಇತ್ತೀಚೆಗೆ ಬೆಂಗಳೂರಿನ ವ್ಯಕ್ತಿಯೊಬ್ಬರು ನಕಲಿ ಷೇರು ಆ್ಯಪ್ ಮೂಲಕ 91 ಲಕ್ಷ ರೂ ಕಳೆದುಕೊಂಡಿದ್ದಾರೆ. ಕಳೆದ ಒಂಬತ್ತು ತಿಂಗಳಲ್ಲಿ ಷೇರು ಪೇಟೆ ಹೆಸರಲ್ಲಿ 1,100 ಕೋಟಿ ರೂಪಾಯಿ ವಂಚಿಸಲಾಗಿದೆ ಎಂದು ಝೆರೋಧಾದ ನಿತಿನ್ ಕಾಮತ್ ಹೇಳಿದ್ದಾರೆ.
ಬೆಂಗಳೂರು: ನಕಲಿ ಟ್ರೇಡಿಂಗ್ ಅಪ್ಲಿಕೇಶನ್‌ಗಳ ಮೂಲಕ ಹೂಡಿಕೆದಾರರನ್ನು ಗುರಿಯಾಗಿಸಿಕೊಂಡು ಸೈಬರ್ ವಂಚನೆಗಳು ಹೆಚ್ಚಾಗುತ್ತಿರುವ ಬಗ್ಗೆ ಝೆರೋಧಾದ ಸಹ-ಸಂಸ್ಥಾಪಕ ಮತ್ತು ಸಿಇಒ ನಿತಿನ್ ಕಾಮತ್ ಕಳವಳ ವ್ಯಕ್ತಪಡಿಸಿದ್ದಾರೆ. ಇತ್ತೀಚಿಗೆ ಬೆಂಗಳೂರಿನ ಐಟಿ ಉದ್ಯೋಗಿಯೊಬ್ಬರು ನಕಲಿ ಷೇರು ಆ್ಯಪ್ ಮೂಲಕ ಸುಮಾರು 91 ಲಕ್ಷ ರೂಪಾಯಿ ಕಳೆದುಕೊಂಡ ನಂತರ ನಿತಿನ್ ಕಾಮತ್ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.
ಈ ರೀತಿ ಆನ್‌ಲೈನ್ ವಂಚನೆ ಹೆಚ್ಚುತ್ತಿರುವುದನ್ನು ಉದ್ದೇಶಿಸಿ ಝೆರೋದಾದ ಸಿಇಒ ನಿತಿನ್ ಕಾಮತ್ ಸೋಷಿಯಲ್ ಮೀಡಿಯಾದಲ್ಲಿ ಜನರನ್ನ ಎಚ್ಚರಿಸಿದ್ದಾರೆ. " ಕಳೆದ ಒಂಬತ್ತು ತಿಂಗಳಲ್ಲಿ 1,100 ಕೋಟಿ ರೂ.ನಷ್ಟು ವಂಚನೆ ನಡೆದಿದೆ. ನಕಲಿ ಟ್ರೇಡಿಂಗ್ ಅಪ್ಲಿಕೇಶನ್‌ಗಳು ಹೆಚ್ಚಾಗಿವೆ. ಈ ರೀತಿಯ ವಂಚನೆಗಳು ಹಲವು ರೀತಿಯಲ್ಲಿ ನಡೆಯುತ್ತವೆ. ನೀವು ಷೇರು ವ್ಯವಹಾರ ಮಾಡುವಂತೆ ಉತ್ತೇಜಿಸುವ ಇಂತಹ ಆ್ಯಪ್‌ಗಳು ಹಣ ಮಾಡುವುದು ಸುಲಭ ಎಂದು ನೀವು ಆಲೋಚಿಸುವಂತೆ ಮಾಡುತ್ತವೆ" ಎಂದು ಎಕ್ಸ್‌ನಲ್ಲಿ (ಹಳೆಯ ಟ್ವಿಟ್ಟರ್) ಪೋಸ್ಟ್ ಮಾಡಿದ್ದಾರೆ.
ಷೇರುಪೇಟೆ ವಂಚನೆ ಹೇಗೆ ನಡೆಯುತ್ತದೆ?
ಸ್ಕ್ಯಾಮರ್‌ಗಳು ಸಾಮಾನ್ಯವಾಗಿ ವಾಟ್ಸಪ್ ಗ್ರೂಪ್‌ಗಳಿಗೆ ಬಲಿಪಶುಗಳನ್ನು ಸೇರಿಸುವ ಮೂಲಕ ವಂಚನೆಗೆ ಮುನ್ನುಡಿ ಹಾಡುತ್ತಾರೆ. ಯಾವುದಾದರೂ ಜನಪ್ರಿಯ ಟ್ರೇಡಿಂಗ್ ಅಪ್ಲಿಕೇಷನ್‌ಗಳನ್ನು ಹೋಲುವಂತಹ ನಕಲಿ ಆ್ಯಪ್‌ಗಳಿಗೆ ನೀವು ಸೇರುವಂತೆ ಮಾಡುತ್ತಾರೆ. ಆರಂಭದಲ್ಲಿ ಬಳಕೆದಾರರಿಗೆ ನಂಬಿಕೆ ಬರಿಸುವ ಸಲುವಾಗಿ ಕೊಂಚ ಲಾಭವನ್ನೂ ನೀಡುತ್ತಾರೆ. ಈ ಮೂಲಕ ದೊಡ್ಡ ಮೊತ್ತ ಹೂಡಿಕೆ ಮಾಡುವಂತೆ ಪ್ರೋತ್ಸಾಹ ನೀಡಲಾಗುತ್ತದೆ. ಆರಂಭದಲ್ಲಿ ಸ್ವಲ್ಪ ಲಾಭ ಬಂದಾಗ ಜನರು ಇದನ್ನು ನಂಬಬಹುದು ಎಂದುಕೊಳ್ಳುತ್ತಾರೆ. ಆಮೇಲೆ ದೊಡ್ಡ ಮೊತ್ತ ಹಾಕುತ್ತಾರೆ. ಇದೇ ರೀತಿ ಸಾಕಷ್ಟು ಜನರು ಲಾಭದ ಆಸೆಯಿಂದ ಲಕ್ಷಾಂತರ ಹಣ ಹಾಕುತ್ತಾರೆ. ದೊಡ್ಡ ಮೊತ್ತದ ಹಣ ಬಂದಾಗ ಆ ಕಡೆಯವರು ಸಂಪರ್ಕಕ್ಕೆ ಸಿಗುವುದಿಲ್ಲ. ಈ ಕಡೆ ಹಣ ಹೂಡಿಕೆ ಮಾಡಿದವರು ಹಣ ಕಳೆದುಕೊಳ್ಳುತ್ತಾರೆ.
ಪ್ರತಿದಿನ ಹಲವು ಜನರು ಈ ಜಾಲಕ್ಕೆ ಬಲಿ
ಈ ರೀತಿ ಆನ್‌ಲೈನ್ ವಂಚನೆಯಿಂದ ಪ್ರತಿದಿನ ಲಕ್ಷಾಂತರ ಜನರು ಹಣ ಕಳೆದುಕೊಳ್ಳುತ್ತಾರೆ. ತಾವು ಕಷ್ಟಪಟ್ಟು ಕೂಡಿಟ್ಟ ಹಲವು ಲಕ್ಷ ರೂಪಾಯಿ ಕಳೆದುಕೊಳ್ಳುತ್ತಾರೆ. ದೆಹಲಿ ನಿವಾಸಿಯೊಬ್ಬರು ಇತ್ತೀಚೆಗೆ ಇದೇ ಯೋಜನೆಯಲ್ಲಿ 1.15 ಕೋಟಿ ರೂಪಾಯಿ ಕಳೆದುಕೊಡಿದ್ದರು. ಏಪ್ರಿಲ್ ತಿಂಗಳಿನಲ್ಲಿ ಬೆಂಗಳೂರಿನ ಜಯನಗರದಲ್ಲಿ ಉದ್ಯಮಿಯೊಬ್ಬರು ಇಂತಹ ನಕಲಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ 5.2 ಕೋಟಿ ರೂಪಾಯಿ ಕಳೆದುಕೊಡಿದ್ದರು. ಮಾರ್ಚ್ ತಿಂಗಳಲ್ಲಿ ನಡೆದ ಮತ್ತೊಂದು ಘಟನೆಯಲ್ಲಿ ಪುಣೆ ಮಹಿಳೆಯೊಬ್ಬರು ತನ್ನ ಆಭರಣಗಳನ್ನು ಮಾರಾಟ ಮಾಡಿ ಈ ರೀತಿ ಹೂಡಿಕೆ ಮಾಡಿದ್ದಾರೆ. ಇದರಿಂದರ 24.12 ಲಕ್ಷ ರೂಪಾಯಿಗಳನ್ನು ಕಳೆದುಕೊಂಡರು. ಬೇಗ ಶ್ರೀಮಂತರಾಗುವ ಬಯಕೆಯಿಂದ ಸಾಕಷ್ಟು ಜನರು ಹಣ ಕಳೆದುಕೊಳ್ಳುತ್ತಿದ್ದಾರೆ.
ಝೆರೋಧಾದ ನಿತಿನ್ ಕಾಮತ್ ಸಲಹೆ
ಆನ್‌ಲೈನ್ ಷೇರು ವಹಿವಾಟು ಹೆಸರಲ್ಲಿ ಪ್ರತಿನಿತ್ಯ ಇಂತಹ ವಂಚನೆಗಳು ಹೆಚ್ಚಾಗುತ್ತಿವೆ. ಇಂತಹ ವಂಚನೆಯಿಂದ ಪಾರಾಗಲು "ಜಾಗೃತಿ" ಅಗತ್ಯ ಎಂದು ಅವರು ಹೇಳಿದ್ದಾರೆ. ಹಣ ಹೂಡಿಕೆ ಮಾಡುವ ಮೊದಲು ಟ್ರೇಡಿಂಗ್ ಪ್ಲಾಟ್‌ಫಾರ್ಮ್‌ಗಳು ಅಸಲಿಯೋ, ನಕಲಿಯೋ ಎಂದು ತಿಳಿದುಕೊಳ್ಳಲು ಹೂಡಿಕೆದಾರರನ್ನು ಒತ್ತಾಯಿಸಿದ್ದಾರೆ. ಈ ರೀತಿಯ ಹಣಕಾಸು ವಂಚನೆ ಕುರಿತು ಜನರನ್ನು ಎಚ್ಚರಿಸುವ ಕೆಲಸ ಹೆಚ್ಚಬೇಕು" ಎಂದು ಅವರು ಹೇಳಿದ್ದಾರೆ.