Vijay Mallya: ಮಿತಿಮೀರಿ ಸಾಲ ವಸೂಲಿ ಪ್ರಶ್ನಿಸಿ ಬ್ಯಾಂಕುಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ ವಿಜಯ್ ಮಲ್ಯ
Vijay Mallya: ಮಿತಿಮೀರಿ ಸಾಲ ವಸೂಲಿ ಪ್ರಶ್ನಿಸಿ ಬ್ಯಾಂಕುಗಳ ವಿರುದ್ಧ ವಿಜಯ್ ಮಲ್ಯ ಕರ್ನಾಟಕ ಹೈಕೋರ್ಟ್‌ನಲ್ಲಿ ದಾವೆ ಹೂಡಿದ್ದಾರೆ. ಮಲ್ಯ ಪರವಾಗಿ ಹಿರಿಯ ನ್ಯಾಯವಾದಿ ಸಜನ್ ಪೂವಯ್ಯ ಅವರು ಈ ದಾವೆಯಲ್ಲಿ ವಾದ ಮಂಡಿಸುತ್ತಿದ್ದು, ಸಾಲದ ಮೊತ್ತ ಮತ್ತು ವಸೂಲಿ ಮೊತ್ತಗಳ ಒಟ್ಟು ವಿವರಣೆ ನೀಡುವುದಕ್ಕೆ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Vijay Mallya: ತಲೆಮರೆಸಿಕೊಂಡ ಉದ್ಯಮಿ ವಿಜಯ್ ಮಲ್ಯ, ಮಿತಿಮೀರಿ ಸಾಲ ವಸೂಲಿ ಪ್ರಶ್ನಿಸಿ ಬ್ಯಾಂಕುಗಳ ವಿರುದ್ಧ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ವಿಜಯ್ ಮಲ್ಯ ಪರವಾಗಿ ಹಿರಿಯ ನ್ಯಾಯವಾದಿ ಸಜನ್ ಪೂವಯ್ಯ ಅವರು ಈ ದಾವೆಯಲ್ಲಿ ವಾದ ಮಂಡಿಸುತ್ತಿದ್ದಾರೆ. ಸಾಲದ ಮೊತ್ತ ಮತ್ತು ವಸೂಲಿ ಮೊತ್ತಗಳ ಒಟ್ಟು ವಿವರಣೆ ನೀಡುವುದಕ್ಕೆ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು ಎಂದು ಅವರು ಹೈಕೋರ್ಟ್ ನ್ಯಾಯಪೀಠಕ್ಕೆ ಮನವಿ ಮಾಡಿದರು. ಇದರೊಂದಿಗೆ ವಿಜಯ್ ಮಲ್ಯ ಅವರು ತಮ್ಮನ್ನು ಆರ್ಥಿಕ ಅಪರಾಧಿ ಎಂದು ಘೋಷಿಸಿರುವುದನ್ನೂ ಪ್ರಶ್ನಿಸಿದ್ದಾರೆ.
ಮಿತಿಮೀರಿ ಸಾಲ ವಸೂಲಿ ಪ್ರಶ್ನಿಸಿ ಬ್ಯಾಂಕುಗಳ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದ ವಿಜಯ್ ಮಲ್ಯ
ಬ್ಯಾಂಕುಗಳಲ್ಲಿ ವಿಜಯ್ ಮಲ್ಯ ಅವರು ಮಾಡಿದ್ದ ಸಾಲ ಬಾಕಿ 6,200 ಕೋಟಿ ರೂಪಾಯಿ ಇತ್ತು. ಆದರೆ, ಬ್ಯಾಂಕುಗಳು 14,000 ಕೋಟಿ ರೂಪಾಯಿ ಸಾಲ ವಸೂಲಿ ಮಾಡಿವೆ. ಲೋಕಸಭೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ನೀಡಿದ ಹೇಳಿಕೆಯನ್ನು ಉಲ್ಲೇಖಿಸಿದ ವಿಜಯ್ ಮಲ್ಯ ಪರ ನ್ಯಾಯವಾದಿಗಳು, ಸಾಲ ಪೂರ್ತಿಯಾಗಿ ವಸೂಲಿಯಾಗಿದೆ. ಆದಾಗ್ಯೂ, ಸಾಲ ವಸೂಲಿ ಇನ್ನೂ ಮುಂದುವರಿದಿದೆ. ಹೀಗಾಗಿ, ಸಾಲದ ಮೊತ್ತ ಮತ್ತು ವಸೂಲಿಗೆ ಸಂಬಂಧಿಸಿ ಒಟ್ಟು ಮೊತ್ತದ ವಿವರಣೆ ನೀಡುವಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡಬೇಕು ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ಮಾಡಿದ್ದಾರೆ.
ಮಲ್ಯ ಅವರ ದಾವೆ ವಿಚಾರಣೆಗೆತ್ತಿಕೊಂಡ ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಆರ್ ದೇವದಾಸ್ ಅವರಿದ್ದ ನ್ಯಾಯಪೀಠವು ಬ್ಯಾಂಕುಗಳಿಗೆ ಮತ್ತು ಸಾಲ ವಸೂಲಿ ಅಧಿಕಾರಿಗಳಿಗೆ ನೋಟಿಸ್ ಜಾರಿಗೊಳಿಸಿತು.
ಲಂಡನ್‌ನಲ್ಲಿರುವ ವಿಜಯ್ ಮಲ್ಯ ಗಡಿಪಾರು ಪ್ರಯತ್ನದಲ್ಲಿದೆ ಸರ್ಕಾರ
ಪ್ರಸ್ತುತ ಲಂಡನ್‌ನಲ್ಲಿರುವ ವಿಜಯ್ ಮಲ್ಯ ಬ್ಯಾಂಕುಗಳಿಂದ ಪಡೆದ ಸಾಲ ಮರುಪಾವತಿ ಮಾಡದೇ ತಲೆಮರೆಸಿಕೊಂಡಿರುವ ಆರ್ಥಿಕ ಅಪರಾಧಿ ಎಂದು ಕೇಂದ್ರ ಸರ್ಕಾರ ಘೋಷಿಸಿದೆ. ಹೀಗಾಗಿ, ಅವರನ್ನು ಭಾರತಕ್ಕೆ ಗಡಿಪಾರು ಮಾಡಿಸಿಕೊಳ್ಳುವ ಪ್ರಯತ್ನದಲ್ಲಿ ಕೇಂದ್ರ ಸರ್ಕಾರವಿದೆ. 2024ರ ಡಿಸೆಂಬರ್ 18ರ ಮಾಹಿತಿ ಪ್ರಕಾರ, ಬ್ಯಾಂಕುಗಳು ವಿಜಯ್ ಮಲ್ಯ ಅವರಿಂದ 14,131.60 ಕೋಟಿ ರೂಪಾಯಿ ಸಾಲ ವಸೂಲಿ ಮಾಡಿವೆ. ಸಾಲದ ಬಾಕಿ ಇದ್ದದ್ದು 6,203 ಕೋಟಿ ರೂಪಾಯಿ ಮಾತ್ರ. ಬಾಕಿ ಸಾಲದ ಮೊತ್ತಕ್ಕಿಂತ ದುಪ್ಪಟ್ಟು ಮೊತ್ತವನ್ನು ವಸೂಲಿ ಮಾಡಲಾಗಿದ್ದು, ಪರಿಹಾರ ಪಡೆಯುವ ತನ್ನ ಹಕ್ಕುಗಳನ್ನು ಪ್ರತಿಪಾದಿಸುವ ಸಲುವಾಗಿ ವಿಜಯ್ ಮಲ್ಯ ಅವರು ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಅನುದಾನಕ್ಕಾಗಿ ಪೂರಕ ಬೇಡಿಕೆಗಳ ಕುರಿತು ಇತ್ತೀಚಿನ ಸಂಸದೀಯ ಚರ್ಚೆಯ ಸಂದರ್ಭದಲ್ಲಿ ಹಣಕಾಸು ಸಚಿವರು, ಜಾರಿ ನಿರ್ದೇಶನಾಲಯವು ಸ್ವತ್ತುಗಳನ್ನು ಲಗತ್ತಿಸಿರುವ ಪ್ರಮುಖ ಆರ್ಥಿಕ ಅಪರಾಧ ಪ್ರಕರಣಗಳ ವಿವರ ನೀಡಿದ್ದರು. ಜಾರಿ ನಿರ್ದೇಶನಾಲಯವು ಒಟ್ಟು 22,280 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ಪುನಃಸ್ಥಾಪಿಸಿದೆ ಎಂದು ಅವರು ವಿವರಿಸಿದ್ದರು. ವಿಜಯ್ ಮಲ್ಯ ಅವರಿಂದ ಸಾಲ ಬಾಕಿ ವಸೂಲಿಗಾಗಿ 14,131.60 ಕೋಟಿ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಸಾರ್ವಜನಿಕ ವಲಯದ ಬ್ಯಾಂಕುಗಳಿಗೆ ಹಸ್ತಾಂತರಿಸಲಾಗಿದೆ ಎಂಬುದನ್ನು ಅವರು ವಿವರಿಸಿದ್ದರು.
ಇದರ ಹೊರತಾಗಿಯೂ, ಸಾಲ ವಸೂಲಿ ಪ್ರಕ್ರಿಯೆಯನ್ನು ಬ್ಯಾಂಕುಗಳು ಮುಂದುವರಿಸಿವೆ. ಇದರಲ್ಲಿ ಸಾಲ ವಸೂಲಿ ನ್ಯಾಯಮಂಡಳಿ ಮನ್ನಾ ಮಾಡಿದ 1200 ಕೋಟಿ ರೂಪಾಯಿ ಬಡ್ಡಿಯೂ ಒಳಗೊಂಡಿದೆ. ಹೀಗಾಗಿ ಕಾನೂನು ಪರಿಹಾರಕ್ಕಾಗಿ ಹೋರಾಟ ನಡೆಸುವುದಾಗಿ ವಿಜಯ್ ಮಲ್ಯ ವಿವರಿಸಿದ್ದಾರೆ ಎಂದು ಸುದ್ದಿ ಏಜೆನ್ಸಿಗಳು ವರದಿ ಮಾಡಿವೆ.
ಕರ್ನಾಟಕ ಹೈಕೋರ್ಟ್‌ನಲ್ಲಿ ದಾಖಲಾಗಿರುವ ಈ ಹೊಸ ಕೇಸ್, ವಿಜಯ ಮಲ್ಯ ಮತ್ತು ಭಾರತೀಯ ಹಣಕಾಸು ಸಂಸ್ಥೆಗಳ ನಡುವಿನ ದೀರ್ಘಕಾಲದ ಕಾನೂನು ಸಮರಕ್ಕೆ ಹೊಸ ಆಯಾಮವನ್ನು ಒದಗಿಸಿದಂತೆ ಇದೆ.
