Cabinet Decision: ಅನವಾಲ ಏತ ನೀರಾವರಿಗೆ ಸಚಿವ ಸಂಪುಟದ ಅನುಮೋದನೆ; ಪ್ರಸ್ತಾವನೆಯಲ್ಲೇನಿದೆ?
ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಬಾಗಲಕೋಟೆ ತಾಲ್ಲೂಕಿನ ಘಟಪ್ರಭಾ ಬಲದಂಡೆ ಕಾಲುವೆಯ 14,525.43 ಹೆಕ್ಟೇರ್ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಅನವಾಲ ಏತ ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.
ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ಬಾದಾಮಿ ಮತ್ತು ಬಾಗಲಕೋಟೆ ತಾಲ್ಲೂಕಿನ ಘಟಪ್ರಭಾ ಬಲದಂಡೆ ಕಾಲುವೆಯ 14,525.43 ಹೆಕ್ಟೇರ್ ನೀರಾವರಿ ವಂಚಿತ ಅಚ್ಚುಕಟ್ಟು ಪ್ರದೇಶಕ್ಕೆ ನೀರೊದಗಿಸುವ ಅನವಾಲ ಏತ ನೀರಾವರಿ ಯೋಜನೆಗೆ ರಾಜ್ಯ ಸಚಿವ ಸಂಪುಟ ಶುಕ್ರವಾರ ಅನುಮೋದನೆ ನೀಡಿದೆ.
ಇದು 411.10 ಕೋಟಿ ರೂಪಾಯಿ ಮೌಲ್ಯದ ಕಾಮಗಾರಿಯಾಗಿದ್ದು, ಎರಡು ಹಂತಗಳಲ್ಲಿ ಕೈಗೊಳ್ಳುವ ವಿಸ್ತೃತ ಯೋಜನಾ ವರದಿಗೆ ರಾಜ್ಯ ಸಚಿವ ಸಂಪುಟ ಆಡಳಿತಾತ್ಮಕ ಅನುಮೋದನೆ ಕೊಟ್ಟಿದೆ. ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರ ವರದಿಯನ್ನು ಆಧರಿಸಿ ಈ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಂಡಿದೆ.
ಘಟಪ್ರಭಾ ಯೋಜನೆಯಿ ಪ್ರಕಾರ ಬೆಳಗಾವಿ, ಬಾಗಲಕೋಟೆ ಜಿಲ್ಲೆಗಳ ಅಥಣಿ, ಚಿಕ್ಕೋಡಿ, ಗೋಕಾಕ, ಹುಕ್ಕೇರಿ, ರಾಯಭಾಗ, ರಾಮದುರ್ಗ, ಸವದತ್ತಿ, ಬದಾಮಿ, ಬಾಗಲಕೋಟೆ, ಬೀಳಗಿ, ಹುನಗುಂದ, ಜಮಖಂಡಿ, ಮುಧೋಳ ತಾಲ್ಲೂಕುಗಳ ಒಟ್ಟಾರೆ 3,10,823 ಹೆಕ್ಟೇರ್ ಭೂಮಿಗೆ ನೀರಾವರಿ ಒದಗಿಸಲು ಯೋಜಿಸಲಾಗಿದೆ.
ಸದರಿ ಯೋಜನೆಯ ಪ್ರಕಾರ, ಬಲದಂಡೆ ಮುಖ್ಯ ಕಾಲುವೆಯ 199 ಕಿ.ಮೀ ಮತ್ತು ಎಡದಂಡೆ ಮುಖ್ಯ ಕಾಲುವೆಯ 109 ಕಿ.ಮೀ, ಬಲದಂಡೆ ಉಪ ಕಾಲುವೆ ಯ 88 ಕಿ.ಮೀ ಎಡದಂಡೆ ಉಪ ಕಾಲುವೆಯ 210 ಕಿ.ಮೀ ಮತ್ತು ಬಲದಂಡೆ ಹಂಚು ಕಾಲುವೆ 994 ಕಿ.ಮೀ ಹಾಗೂ ಎಡದಂಡೆ ಹಂಚು ಕಾಲುವೆ 494 ಕಿ.ಮೀ ವ್ಯಾಪ್ತಿಯನ್ನು ಒಳಗೊಂಡಿರುತ್ತದೆ.
ಬಲದಂಡೆ ಮುಖ್ಯ ಕಾಲುವೆಯು 199 ಕಿ.ಮೀ ಉದ್ದ ಇದ್ದು, ಡಿಸ್ಚಾರ್ಜ್ 66.56 ಕ್ಯೂಮೆಕ್ಸ್ ಮೂಲಕ 1,69,129 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶವನ್ನು ಹೊಂದಿದೆ. 2004ರಲ್ಲಿ ಫಟಪ್ರಭಾ ಬಲದಂಡೆ ಮುಖ್ಯ ಕಾಲುವೆಯ ನಿರ್ಮಾಣದ ನಂತರ 148 ಕಿ.ಮೀ ನಿಂದ 199 ಕಿ.ಮೀವರೆಗೆ ಸಮರ್ಪಕವಾಗಿ ನೀರು ತಲುಪಿಲ್ಲ. ಆದ್ದರಿಂದ 24,750 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಒಣ ಪ್ರದೇಶವಾಗಿ ನೀರಾವರಿ ವಂಚಿತವಾಗಿರುತ್ತದೆ.
ಘಟಪ್ರಭಾ ಬಲದಂಡೆ ಕಾಲುವೆಯು ಕೇವಲ ೨೦೦೦ ಕ್ಯೂಸೆಕ್ಸ್ ಹರಿವನ್ನು ಮಾತ್ರ ತೆಗೆದುಕೊಳ್ಳಬೇಕು. ಆದರೆ, ಇದರ ಬದಲು ೨೦೦೦ ಕ್ಯೂಸೆಕ್ಸ್ ನೀರು ಹೊರ ಬಿಡಲಾಗುತ್ತಿದೆ. ಕಾಲುವೆಯ ಮೇಲ್ಭಾಗದಲ್ಲಿ ವಿನ್ಯಾಸ ಮಾಡಿರುವಂತೆ ೨೧೦೦ ಕ್ಯೂಸೆಕ್ಸ್ ಬದಲು ೨೦೦೦ ಕ್ಯೂಸೆಕ್ಸ್ ಮಾತ್ರ ಬಿಡಲಾಗುತ್ತಿದೆ. ಕಾಲುವೆಯ ಮೇಲ್ಭಾಗದ ಪ್ರದೇಶದಲ್ಲಿ ವಾಣಿಜ್ಯ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದರಿಂದಾಗಿ ಯೋಜಿತ ಬಳಕೆಗಿಂತ ಹೆಚ್ಚಿನ ಪ್ರಮಾಣದ ನೀರನ್ನು ಕಾಲುವೆಯ ಮೇಲ್ಭಾಗದಲ್ಲಿ ಬಳಸಲಾಗುತ್ತಿದೆ. ಆದ್ದರಿಂದ ಘಟಬ್ರಭಾ ಬಲದಂಡೆ ಕಾಲುವೆ ನಿರ್ಮಾಣಗೊಂಡಾಗಿನಿಂದ 148 ಕಿ.ಮೀ ನಂತರದ ಪ್ರದೇಶಕ್ಕೆ ಸಾಕಷ್ಟು ಪ್ರಮಾಣದ ನೀರು ಹರಿಯುತ್ತಿಲ್ಲ.
ಹೀಗಾಗಿ, ಭಾದಿತ 24,750 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಗಳಿಗೆ ನೀರಾವರಿ ಸೌಲಭ್ಯ ಕಲ್ಪಿಸುವಂತೆ ಸ್ಥಳೀಯ ಜನಪ್ರತಿನಿಧಿಗಳು, ರೈತರು ಒತ್ತಾಯಿಸುತ್ತಿದ್ದಾರೆ. ಸದರಿ ಯೋಜನೆಗೆ ಅವಶ್ಯವಿರುವ 3.64 ಟಿಎಂಸಿ ನೀರಿನ ಹಂಚಿಕೆ ಅಗತ್ಯವಿದೆ ಎಂಬ ಅಂಶ ಕರ್ನಾಟಕ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕರು ಸಲ್ಲಿಸಿರುವ ವಿವರ ಯೋಜನಾ ವರದಿಯಲ್ಲಿದೆ.
ಫಟಪ್ರಭಾ ಬಲದಂಡೆ ಕಾಲುವೆಯ 148.70 ಕಿ.ಮೀ. ನಿಂದ ಆಲಮಟ್ಟಿ ಜಲಾಶಯದ ಹಿನ್ನೀರು ಇರುವ ತನಕ 199.093 ಕಿ.ಮೀ ಟೇಲ್ ಎಂಡ್ ವರೆಗಿನ ಕಾಲುವೆಯು ಫಟಪ್ರಭಾ ನದಿಗೆ ಸಮಾನಾಂತರವಾಗಿ ಹರಿಯುತ್ತಿದೆ. ಇದು ಟೋಪೋಶೀಟ್ ಮತ್ತು ಸ್ಥಳ ಪರಿಶೀಲನಾ ಅಧ್ಯಯನದಲ್ಲಿ ಕಂಡುಬರುತ್ತದೆ. ಘಟಪ್ರಭಾ ನದಿಯಿಂದ ಘಟಪ್ರಭಾ ಬಲದಂಡೆ ಕಾಲುವೆಯ 149.700 ಕಿ.ಮೀ ವರೆಗಿನ ಅಂತರವು 19 ಕಿ.ಮೀ ಇದ್ದು, ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಬರುತ್ತಿದೆ. ಈ ಸ್ಥಳದಿಂದ ನೀರನ್ನು ಎತ್ತಿ ಜಿಆರ್ಬಿಸಿಗೆ ಪೂರೈಸಲು ಉದ್ದೇಶಿಸಿದ್ದು, ಈ ರೀತಿ ಮೇಲೆತ್ತಿದ ನೀರಿನಿಂದ 14525.43 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲು ಅಂದರೆ ಕಲಾದಗಿ ವಿತರಣಾ ಕಾಲುವೆ (BI-29) ರಿಂದ ಮುಚಖಂಡಿ ವಿತರಣಾ ಕಾಲುವೆ (BI-33)ರವರೆಗೆ ನೀರಾವರಿ ಮಾಡಲು ಉದ್ದೇಶಿಸಲಾಗಿದೆ ಎಂದು ವರದಿ ಹೇಳಿದೆ.
ಬಾಗಲಕೋಟೆ ತಾಲ್ಲೂಕಿನ ದೇವನಾಳ ಗ್ರಾಮದ ಬಳಿ 25 ಕಿ.ಮೀ. ನಷ್ಟು ದೂರದ ಹೆರ್ಕಲ್ ಸೇತುವೆ ಕಮ್ ಬ್ಯಾರೇಜ್ನ ಮೇಲ್ಬಾಗದಲ್ಲಿ ಘಟಪ್ರಭಾ ನದಿಯಿಂದ ನೀರನ್ನು ಎತ್ತಿ ಜಿಆರ್ಬಿಸಿ ಸರಪಳಿ ೧೪೯+೭೦೦ರಲ್ಲಿ Discharge Point ನಲ್ಲಿ ನೀರನ್ನು ಹರಿಸಿ ICA ೧೪೫೨೫.೪೩ ಹೆ. ಪ್ರದೇಶಕ್ಕೆ ನೀರಾವರಿ ಒದಗಿಸುವುದಾಗಿದ್ದು ಅದರಂತೆ ಅನವಾಳ ಏತ ನೀರಾವರಿ ಯೋಜನೆಯ ವಿವರವಾದ ಯೋಜನಾ ವರದಿಯನ್ನು ಸಿದ್ದಪಡಿಸಲಾಗಿತ್ತು.
ಮೇಲಿನಂತೆ ವಿವರಿಸಿರುವ ಅಂಶಗಳ ಹಿನ್ನಲೆಯಲ್ಲಿ ರೈತರು, ಜನಪ್ರತಿನಿದಿಗಳ ಒತ್ತಾಯದ ಮೇರೆಗೆ ರೈತರ ಹಿತದೃಷ್ಟಿಯಿಂದ ಭಾದಿತ ೨೪೫೭೦ ಹೆ. ಅಚ್ಚುಕಟ್ಟಿನ ಪೈಕಿ ಸುಮಾರು ೧೪೫೨೫.೪೩ಹೆ ಭಾದಿತ ಅಚ್ಚುಕಟ್ಟು ಪ್ರದೇಶಕ್ಕೆ (ಕಲಾದಗಿ ವಿತರಣಾ ಕಾಲುವೆಯಿಂದ ಮಚಖಂಡಿ ವಿತರಣಾ ಕಾಲುವೆ ವರೆಗೆ) ನೀರಾವರಿ ಸೌಲಭ್ಯ ಕಲ್ಪಿಸಲು ಪರ್ಯಾಯ ವ್ಯವಸ್ಥೆಯಾಗಿ ಬಾಗಲಕೋಟೆ ಜಿಲ್ಲೆ ಬಾಗಲಕೋಟೆ ತಾಲ್ಲೂಕಿನಲ್ಲಿ ಬರುವ ದೇವನಾಳ ಗ್ರಾಮದ ಹತ್ತಿರ ಅನವಾಲ ಏತ ನೀರಾವರಿ ಯೋಜನೆಯ ರೂ.೪೧೧.೧೦ ಕೋಟಿ ಮೊತ್ತದ ವಿವರವಾದ ಯೋಜನಾ ವರದಿಯನ್ನು ತಯಾರಿಸಲಾಗಿತ್ತು. ಈ ಯೋಜನಾ ವರದಿಗೆ ಆಡಳಿತಾತ್ಮಕ ಮಂಜೂರಿ ನೀಡಲಾಗಿದೆ.