Kannada News  /  Karnataka  /  Cabinet Expansion Two Dozen Ministers Will Be Inducted Into The Karnataka Cabinet On Saturday Cm Siddaramaiah Uks
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (ಸಾಂದರ್ಭಿಕ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (ಸಾಂದರ್ಭಿಕ ಚಿತ್ರ)

Cabinet Expansion: ಸಿದ್ದರಾಮಯ್ಯ ಸಂಪುಟಕ್ಕೆ ಇನ್ನೂ 24 ಸಚಿವರ ಸೇರ್ಪಡೆ; ನಾಳೆ ಸಚಿವ ಸಂಪುಟ ವಿಸ್ತರಣೆಗೆ ಟೈಮ್‌ ಫಿಕ್ಸ್‌

26 May 2023, 21:12 ISTHT Kannada Desk
26 May 2023, 21:12 IST

Cabinet Expansion: ರಾಜ್ಯದಲ್ಲಿ ಎರಡನೆ ಹಂತದ ಸಚಿವ ಸಂಪುಟ ವಿಸ್ತರಣೆಗೆ ವೇದಿಕೆ ಸಿದ್ಧವಾಗಿದೆ. ಶನಿವಾರವೇ (ಮೇ 27) ಎರಡು ಡಜನ್‌ ಸಚಿವರು ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ ಸೇರ್ಪಡೆ ಆಗುವ ನಿರೀಕ್ಷೆ ಇದೆ.

ಕಾಂಗ್ರೆಸ್‌ ನಾಯಕತ್ವವು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ನಡುವಿನ ಭಿನ್ನಾಭಿಪ್ರಾಯವನ್ನು ಶಮನಗೊಳಿಸಿದೆ. ಇದರ ಬೆನ್ನಿಗೆ ಎರಡನೆ ಹಂತದ ಸಚಿವ ಸಂಪುಟ ವಿಸ್ತರಣೆಗೆ ವೇದಿಕೆ ಸಿದ್ಧವಾಗಿದೆ. ಶನಿವಾರವೇ (ಮೇ 27) ಎರಡು ಡಜನ್‌ ಸಚಿವರು ಸಿದ್ದರಾಮಯ್ಯ ಸಚಿವ ಸಂಪುಟಕ್ಕೆ ಸೇರ್ಪಡೆ ಆಗುವ ನಿರೀಕ್ಷೆ ಇದೆ.

ಮೂರು ದಿನಗಳ ಕಾಲ ನಡೆದ ಚರ್ಚೆಯಲ್ಲಿ ಭಾಗಿಯಾಗಿರುವ ಹಿರಿಯ ನಾಯಕರೊಬ್ಬರು ತಿಳಿಸಿರುವ ಪ್ರಕಾರ, ಉಳಿದ ಎಲ್ಲ 24 ಸಚಿವ ಸ್ಥಾನಗಳು ಭರ್ತಿಯಾಗಬಹುದು. ಕರ್ನಾಟಕದಲ್ಲಿ ಮುಖ್ಯಮಂತ್ರಿ ಸೇರಿ ಗರಿಷ್ಠ 34 ಸಚಿವರಿಗೆ ಸಂಪುಟದಲ್ಲಿ ಸೇರುವುದಕ್ಕೆ ಅವಕಾಶವಿದೆ. ನಾಳೆ ಯಾರೆಲ್ಲ ಸಚಿವರಾಗುತ್ತಾರೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಡೆಕ್ಕನ್‌ ಹೆರಾಲ್ಡ್‌ ವರದಿ ಮಾಡಿದೆ.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಜತೆಗೆ ಮಾತುಕತೆ ನಡೆಸಿದ್ದರ ಹೊರತಾಗಿಯೂ, ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಅವರು ಪ್ರತ್ಯೇಕವಾಗಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ಇದೇ ವೇಳೆ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಕೆಸಿ ವೇಣುಗೋಪಾಲ್ (ಸಂಘಟನೆ) ಮತ್ತು ರಣದೀಪ್ ಸುರ್ಜೇವಾಲಾ (ಕರ್ನಾಟಕ ಉಸ್ತುವಾರಿ) ಅವರೊಂದಿಗೆ ನಿರಂತರ ಚರ್ಚೆ ನಡೆಸಿದ ಬಳಿಕ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಆ ಹಿರಿಯ ನಾಯಕರು ತಿಳಿಸಿದರು.

ಸಚಿವ ಸಂಪುಟಕ್ಕೆ ಯಾರನ್ನು ಸೇರಿಸಿಕೊಳ್ಳಬೇಕು ಎಂಬುದು ಮುಖ್ಯಮಂತ್ರಿಯ ನಿರ್ಧಾರ. ಸಿದ್ದರಾಮಯ್ಯ ಅವರು ಪಕ್ಷದ ವರಿಷ್ಠರ ಜತೆಗೆ ವಿವಿಧ ಹೆಸರುಗಳನ್ನು ಪ್ರಸ್ತಾಪಿಸಿದ್ದರು. ಇಷ್ಟಾದ ಬಳಿಕ ಅಂತಿಮ ತೀರ್ಮಾನವನ್ನು ಅವರಿಗೆ ಬಿಡಲಾಗಿದೆ ಎಂದು ಸುರ್ಜೇವಾಲಾ ಸುದ್ದಿಗಾರರಿಗೆ ತಿಳಿಸಿದರು.

ಶನಿವಾರ ಪೂರ್ವಾಹ್ನ 11.45ಕ್ಕೆ ನೂತನ ಸಚಿವರ ಪ್ರಮಾಣದ ನಿರೀಕ್ಷೆ

ಬೆಂಗಳೂರಿನಲ್ಲಿ ಶನಿವಾರ ಬೆಳಗ್ಗೆ 11:45ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಕೆ.ಪಾಟೀಲ್, ಆರ್.ಬಿ.ತಿಮ್ಮಾಪುರ್, ಬಿ.ನಾಗೇಂದ್ರ, ಎನ್.ಎಸ್.ಬೋಸರಾಜು, ಮಧು ಬಂಗಾರಪ್ಪ, ಲಕ್ಷ್ಮಿ ಹೆಬ್ಬಾಳ್ಕರ್, ಡಿ.ಸುಧಾಕರ್, ಕೆ.ಎನ್.ರಾಜಣ್ಣ, ಶಿವರಾಜ್ ತಂಗಡಗಿ ಅವರ ಹೆಸರುಗಳು ಚರ್ಚೆಯ ನಂತರ ಸಚಿವ ಸಂಪುಟ ಸಂಭಾವ್ಯರ ಪಟ್ಟಿಗೆ ಸೇರ್ಪಡೆಯಾಗಿದೆ.

ಸಿದ್ದರಾಮಯ್ಯ ಮತ್ತು ಶಿವಕುಮಾರ್ ತಮ್ಮ ನಿಷ್ಠಾವಂತರ ಪರ ಬ್ಯಾಟಿಂಗ್ ನಡೆಸಿದ್ದು, ಕೆಲವರ ವಿಚಾರದಲ್ಲಿ ಇಬ್ಬರೂ ಪರಸ್ಪರ ತಡೆ ಒಡ್ಡಿದ ಘಟನೆಯೂ ಆಗಿದೆ ಎಂದು ಮೂಲಗಳು ತಿಳಿಸಿವೆ.

ಕೃಷ್ಣ ಬೈರೇಗೌಡ, ಹೆಚ್.ಸಿ.ಮಹದೇವಪ್ಪ, ಸಂತೋಷ್ ಲಾಡ್, ಬೈರತಿ ಸುರೇಶ್, ಪುಟ್ಟರಂಗ ಸೆಟ್ಟಿ, ಈಶ್ವರ್ ಖಂಡ್ರೆ, ರಹೀಮ್ ಖಾನ್, ಪಿರಿಯಾಪಟ್ಟಣ ವೆಂಕಟೇಶ್, ಮಾಂಕಾಳ್ ವೈದ್ಯ, ಶರಣಪ್ರಕಾಶ್ ಪಾಟೀಲ್, ಶಿವಾನಂದ ಪಾಟೀಲ್, ಎಸ್.ಎಸ್.ಮಲ್ಲಿಕಾರ್ಜುನ್, ಶರಣ ಪ್ರಕಾಶ್ ಪಾಟೀಲ್ ಕೂಡ ಸೇರ್ಪಡೆಯಾಗುವ ಸಾಧ್ಯತೆ ಇದೆ.

ಬಿ.ಕೆ.ಹರಿಪ್ರಸಾದ್‌ ಸೇರ್ಪಡೆಗೆ ಸಿದ್ದರಾಮಯ್ಯ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಡಿಕೆ ಶಿವಕುಮಾರ್‌ ಬೆಂಬಲದೊಂದಿಗೆ ಬಿಕೆ ಹರಿಪ್ರಸಾದ್‌ ವಿಧಾನಪರಿಷತ್‌ ಸದಸ್ಯರಾಗಿರುವಂಥದ್ದು ಎಂಬುದು ಇಲ್ಲಿ ಗಮನಾರ್ಹ.

ಗಾಂಧಿ ಕುಟುಂಬದ ನಿಷ್ಠಾವಂತ ಮತ್ತು ಹಿರಿಯ ನಾಯಕ ಹರಿಪ್ರಸಾದ್ ಅವರನ್ನು ಈಡಿಗ ಸಮುದಾಯದ ಪ್ರತಿನಿಧಿ ಎಂದು ಪರಿಗಣಿಸಬಹುದು. ಈ ಹಿಂದೆ ಹೈಕಮಾಂಡ್‌ ಬಂಗಾರಪ್ಪ ಅವಧಿಯಲ್ಲಿ ಹರಿಪ್ರಸಾದ್‌ ಅವರಿಗೆ ಅವಕಾಶ ಮಾಡಿಕೊಟ್ಟಿರಲಿಲ್ಲ. ಈಗ ಮಾಡಿಕೊಡಬೇಕು ಎಂದು ಶಿವಕುಮಾರ್ ವಾದಿಸಿದರು.

ಸಾಮಾಜಿಕ ನ್ಯಾಯ ಕಾಪಾಡುವ ಸಲುವಾಗಿ ಕಾಂಗ್ರೆಸ್‌ ವರಿಷ್ಠರು ಸಮಾಲೋಚನೆ ನಡೆಸಿದ್ದು, ಒಂದು ತೀರ್ಮಾನಕ್ಕೆ ಬಂದಿದ್ದಾರೆ. ಇದು ಕಾರ್ಯಸಾಧುವಾದರೆ, ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಸೇರಿದ ಹೆಬ್ಬಾಳ್ಕರ್ ಅವರು ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಮುಖವಾಗುವ ಸಾಧ್ಯತೆ ಇದೆ. ಇವರು ಶಿವಕುಮಾರ್ ಅವರ ಆಪ್ತರಲ್ಲಿಒಬ್ಬರು. ಸುಧಾಕರ್ ಜೈನರನ್ನು ಪ್ರತಿನಿಧಿಸಿದರೆ, ದಲಿತರಾದ ತಂಗಡಗಿ ಬೋವಿ ಸಮುದಾಯವನ್ನು ಮತ್ತು ರಾಜಣ್ಣ ವಾಲ್ಮೀಕಿ ಸಮುದಾಯವನ್ನು ಪ್ರತಿನಿಧಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.