ಹೆಚ್ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಮುರುಗೇಶ್ ನಿರಾಣಿ ವಿರುದ್ಧ ಕೇಸ್ ದಾಖಲಿಸಲು ಸಂಪುಟ ಸಭೆ ತೀರ್ಮಾನ
Cabinet Meeting: ಹೆಚ್ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ, ಮುರುಗೇಶ್ ನಿರಾಣಿ ವಿರುದ್ಧ ಪ್ರಾಸಿಕ್ಯೂಶನ್ಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ರಾಜ್ಯಪಾಲರನ್ನು ಅಗ್ರಹಪಡಿಸಿದೆ. (ವರದಿ- ಎಚ್. ಮಾರುತಿ)
ಬೆಂಗಳೂರು: ಮಾಜಿ ಮುಖ್ಯಮಂತ್ರಿ ಹೆಚ್ಡಿ ಕುಮಾರಸ್ವಾಮಿ, ಶಶಿಕಲಾ ಜೊಲ್ಲೆ, ಜನಾರ್ಧನ ರೆಡ್ಡಿ ಮತ್ತು ಮುರುಗೇಶ ನಿರಾಣಿ ಅವರ ವಿರುದ್ಧ ತನಿಖೆ ನಡೆಸಲು ಪ್ರಾಸಿಕ್ಯೂಶನ್ಗೆ ಅನುಮತಿ ನೀಡುವಂತೆ ರಾಜ್ಯ ಸರ್ಕಾರ ರಾಜ್ಯಪಾಲರನ್ನು ಅಗ್ರಹಪಡಿಸಿದೆ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ಪ್ರಾಸಿಕ್ಯೂಶನ್ಗೆ ಅನುಮತಿ ನೀಡಿದ ಕೆಲವೇ ದಿನಗಳಲ್ಲಿ ರಾಜ್ಯ ಸಚಿವ ಸಂಪುಟ ಈ ತೀರ್ಮಾನ ತೆಗೆದುಕೊಂಡಿದೆ. ಈ ಮೂಲಕ ರಾಜ್ಯಪಾಲರು ಮತ್ತು ಮುಖ್ಯಮಂತ್ರಿಗಳ ನಡುವಿನ ಸಮರ ತಾರಕಕ್ಕೇರಿದಂತಾಗಿದೆ. ಸಚಿವ ಸಂಪುಟ ಸಭೆ ನಂತರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಹೆಚ್ಕೆ ಪಾಟೀಲ್ ಸಂಪುಟದ ವಿವರ ನೀಡಿದರು.
ರಾಜಭವನದಲ್ಲಿ ಅನುಮೋದನೆಗಾಗಿ ಬಾಕಿಯಿರುವ ವಿಷಯಗಳಲ್ಲಿ ಶೀಘ್ರ ತೀರ್ಮಾನ ಕೈಗೊಳ್ಳಲು ಹಾಗೂ ನ್ಯಾಯದ ಪ್ರಕ್ರಿಯೆಯನ್ನು ಸುಗಮಗೊಳಿಸಲು ರಾಜ್ಯಪಾಲರಿಗೆ ಸಂವಿಧಾನದ 163 ನೇ ವಿಧಿಯನ್ವಯ ನೆರವು ಮತ್ತು ಸಲಹೆ ನೀಡಲು ಸಚಿವ ಸಂಪುಟ ತನ್ನ ಅನುಮೋದನೆ ನೀಡಿದೆ ಎಂದು ಸಚಿವ ಹೆಚ್ಕೆ ಪಾಟೀಲ್ ತಿಳಿಸಿದರು. ಸಂವಿಧಾನದ 163 ವಿಧಿ ಅನ್ವಯ ವಿಧಿ, ರಾಜ್ಯಪಾಲರಿಗೆ ನೆರವು ಮತ್ತು ಸಲಹೆ ನೀಡಲು ಸಚಿವ ಸಂಪುಟಕ್ಕೆ ಅವಕಾಶ ಇದೆ. ಅದರಂತೆ ಈ 4 ಪ್ರಕರಣಗಳಿಗೆ ಸಂಬಂಧಿಸಿದಂತೆ ಸಲಹೆಗಳನ್ನು ರಾಜ್ಯಪಾಲರಿಗೆ ಸಲ್ಲಿಸಲಾಗುವುದು.
ಭ್ರಷ್ಟಾಚಾರ ತಡೆ ಕಾಯ್ದೆ 1988ರ ಅಡಿಯಲ್ಲಿ ತನಿಖಾ ಸಂಸ್ಥೆಗಳು ಸಲ್ಲಿಸಿರುವ ಹಲವು ಅನುಮೋದನಾ ಅರ್ಜಿಗಳು ರಾಜ್ಯಪಾಲರ ಬಳಿ ಬಾಕಿ ಉಳಿದಿದೆ. ಈ ಅರ್ಜಿಗಳ ತನಿಖೆ ಬಳಿಕ ಕೆಲವು ಪ್ರಕರಣಗಳಲ್ಲಿ ಆರೋಪ ಪಟ್ಟಿಗಳನ್ನು ಸಲ್ಲಿಸಲಾಗಿದ್ದು, ಭ್ರಷ್ಟಾಚಾರ ತಡೆ ಕಾಯ್ದೆ ಪಿಸಿ ಆಕ್ಟ್ ಸೆಕ್ಷನ್ ಹಾಗೂ ವಿವಿಧ ಕಾಯ್ದೆಗಳ ಅಡಿಯಲ್ಲಿ ಅನುಮೋದನೆಗಾಗಿ ಕೋರಲಾಗಿದೆ. ಕೆಲವು ಅರ್ಜಿಗಳು ಪಿಸಿ ಆಕ್ಟ್ ಸೆಕ್ಷನ್ 17ಎ ಅಡಿಯಲ್ಲಿ ಪೂರ್ವಾನುಮೋದನೆಗೆ ರಾಜ್ಯಪಾಲರ ಬಳಿ ಬಾಕಿ ಉಳಿದುಕೊಂಡಿವೆ.
ಶಶಿಕಲಾ ಜೊಲ್ಲೆ ಅವರ ಪ್ರಕರಣದಲ್ಲಿ 2021ರ ಡಿಸೆಂಬರ್ 9ರಂದು ಲೋಕಾಯುಕ್ತ ಪೊಲೀಸರು ಪಿಸಿ ಆಕ್ಟ್ 17ಎ ಅಡಿಯಲ್ಲಿ ಪೂರ್ವಾನುಮೋದನೆಯನ್ನು ಕೋರಿದ್ದರು. ಮುರುಗೇಶ್ ನಿರಾಣಿ ಪ್ರಕರಣದಲ್ಲಿ ಸಹ ಇದೇ ಕಾಯ್ದೆಯಡಿಯಲ್ಲಿ ದಿನಾಂಕ 2024ರ ಫೆಬ್ರವರಿ 26ರಂದು ಪೂರ್ವಾನುಮೋದನೆ ಕೋರಲಾಗಿದೆ. ಕುಮಾರಸ್ವಾಮಿ ಅವರ ಪ್ರಕರಣದಲ್ಲಿ 2023ರ ನವೆಂಬರ್ 21ರಂದು ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 19 ಮತ್ತು ಸಿಆರ್‌ಪಿಸಿ 197 ಅಡಿಯಲ್ಲಿ ಅನುಮೋದನೆ ಕೋರಲಾಗಿತ್ತು. ಪ್ರಕರಣದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ ಸಲ್ಲಿಸಿದ ಆರೋಪ ಪಟ್ಟಿ ಕುರಿತು ರಾಜ್ಯಪಾಲರು 2024ರ ಜುಲೈ 29 ರಂದು ಸ್ಪಷ್ಟೀಕರಣ ಕೇಳಿದ್ದರು.
ಇದಕ್ಕೆ ಎಸ್‌ಐಟಿ 2024ರ ಆಗಸ್ಟ್ 16ರಂದು ರಾಜ್ಯಪಾಲರಿಗೆ ಅಗತ್ಯ ಸ್ಪಷ್ಟೀಕರಣ ನೀಡಿದೆ. ಜನಾರ್ಧನ ರೆಡ್ಡಿ ಪ್ರಕರಣದಲ್ಲಿ ಇದೇ ಮೇ 13ರಂದು ಅನುಮೋದನೆಗಾಗಿ ಸಲ್ಲಿಸಲಾಗಿದೆ. ಕುಮಾರಸ್ವಾಮಿ ಮತ್ತು ಜನಾರ್ಧನ ರೆಡ್ಡಿ ಪ್ರಕರಣಗಳಲ್ಲಿ ಆರೋಪ ಪಟ್ಟಿಯನ್ನು ಸಹ ಸಲ್ಲಿಸಲಾಗಿದೆ ಎಂದು ವಿವರಿಸಿದರು. ರಾಜ್ಯಪಾಲರು ಸಚಿವ ಸಂಪುಟದ ಸಲಹೆಯನ್ನು ಸ್ವೀಕರಿಸಲು ಬಾಧ್ಯಸ್ಥರಾಗಿದ್ದು, ಈ ವಿಷಯದಲ್ಲಿ ರಾಜ್ಯಪಾಲರು ತಮ್ಮ ವಿವೇಚನೆಯನ್ನು ನ್ಯಾಯಯುತವಾಗಿ ಬಳಸಿಕೊಳ್ಳುವ ವಿಶ್ವಾಸವಿದೆ ಎಂದು ತಿಳಿಸಿದರು.
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಖಾಸಗಿ ವ್ಯಕ್ತಿ ರಾಜ್ಯಪಾಲರಿಗೆ ದೂರು ನೀಡಿದ್ದು, ತರಾತುರಿಯಲ್ಲಿ ಸಂಜೆಯೊಳಗಾಗಿ ಶೋಕಾಸು ನೋಟೀಸು ನೀಡಲಾಗಿದೆ. ಆದರೆ ಈ 4 ಪ್ರಕರಣಗಳು ಭಿನ್ನವಾಗಿದ್ದು, ಎಲ್ಲಾ ಪ್ರಕ್ರಿಯೆಗಳು ಮುಗಿದರೂ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಆದ್ದರಿಂದ ಸಾರ್ವಜನಿಕರ ದೃಷ್ಟಿಯಲ್ಲಿ ರಾಜ್ಯಪಾಲರ ಕಚೇರಿ ಬಗ್ಗೆ ತಪ್ಪು ಭಾವನೆ ಬರಬಾರದು ಮತ್ತು ಯಾವುದೇ ಗೊಂದಲ ಆಗಬಾರದೆಂದು ಸಚಿವ ಸಂಪುಟ ನೆರವು ಮತ್ತು ಸಲಹೆ ನೀಡಲು ನಿರ್ಧರಿಸಿದೆ ಎಂದು ಸಂಪುಟದ ನಿರ್ಣಯವನ್ನು ಸಮರ್ಥಿಸಿಕೊಂಡರು.
ರಾಜ್ಯಪಾಲರಿಗೆ z+ ಭದ್ರತೆ; ಕಾರ್ಯಕ್ರಮ ರದ್ದುಗೊಳಿಸಿದ ಗೆಹ್ಲೋಟ್
ರಾಜ್ಯಪಾಲರ ಕಚೇರಿ ಮತ್ತು ಆಡಳಿತಾರೂಢ ಕಾಂಗ್ರೆಸ್ ನಡುವೆ ಉದ್ವಿಗ್ನ ಪರಿಸ್ಥಿತಿ ಹೆಚ್ಚಿದ್ದು ರಾಜ್ಯಪಾಲರಿಗೆ ಹೆಚ್ಚು ಹಿನ ಭದ್ರತೆಯನ್ನು ಒದಗಿಸಲಾಗಿದೆ. ಅವರು ಬುಧವಾರ ಬುಲೆಟ್ ಪ್ರೂಫ್ ಕಾರಿನಲ್ಲಿ ಸಂಚರಿಸುತ್ತಿದ್ದಾರೆ. ಅವರಿಗೆ z+ ಭದ್ರತೆ ಒದಗಿಸಲಾಗಿದೆ. ಈ ಮಧ್ಯೆ ಆಗಸ್ಟ್ 29 ರವರೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನದ ಹೊರಗೆ ನಡೆಯುವ ತಮ್ಮ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದಾರೆ. ಗುಪ್ತಚರ ಇಲಾಖೆಯ ವರದಿಗಳ ಹಿನ್ನೆಲೆಯಲ್ಲಿ ರಾಜ್ಯಪಾಲರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವರು, ಶಾಸಕರ ಆದಿಯಾಗಿ ಎಲ್ಲರೂ ಪ್ರತಿಭಟನೆಯಲ್ಲಿ ತೊಡಗಿದ್ದು ಈ ನಿರ್ಧಾರ ತೆಗೆದುಕೊಂಡಿದ್ದಾರೆ. ರಾಜ್ಯಪಾಲರು ಬೆಂಗಳೂರಿನ ನೃಪತುಂಗ ವಿಶ್ವವಿದ್ಯಾಲಯದ ಸಮಾರಂಭದಲ್ಲಿ ಭಾಗಿಯಾಗಿಲ್ಲ. ಗುಪ್ತಚರ ಮೂಲಗಳ ಪ್ರಕಾರ ವಿದ್ಯಾರ್ಥಿಗಳ ಒಂದು ಗುಂಪು ರಾಜ್ಯಪಾಲರ ವಿರುದ್ಧ ಪ್ರತಿಭಟನೆಗೆ ಸಜ್ಜಾಗಿತ್ತು. ಆದ್ದರಿಂದ ಅವರು ಹಿಂದೆ ಸರಿದಿದ್ದಾರೆ.