Cauvery issue:ವಾರದ ನಂತರ ಮತ್ತೆ ಹರಿದ ಕಾವೇರಿ ನೀರು, ಆದೇಶ ಸುಪ್ರೀಂನಲ್ಲಿ ಪ್ರಶ್ನಿಸುತ್ತೇವೆ ಎಂದ ಡಿಕೆಶಿ
ಕನ್ನಡ ಸುದ್ದಿ  /  ಕರ್ನಾಟಕ  /  Cauvery Issue:ವಾರದ ನಂತರ ಮತ್ತೆ ಹರಿದ ಕಾವೇರಿ ನೀರು, ಆದೇಶ ಸುಪ್ರೀಂನಲ್ಲಿ ಪ್ರಶ್ನಿಸುತ್ತೇವೆ ಎಂದ ಡಿಕೆಶಿ

Cauvery issue:ವಾರದ ನಂತರ ಮತ್ತೆ ಹರಿದ ಕಾವೇರಿ ನೀರು, ಆದೇಶ ಸುಪ್ರೀಂನಲ್ಲಿ ಪ್ರಶ್ನಿಸುತ್ತೇವೆ ಎಂದ ಡಿಕೆಶಿ

Cauvery water released to tamilnadu ಕರ್ನಾಟಕವು ಪ್ರತಿ ನಿತ್ಯ ಐದು ಸಾವಿರ ಕ್ಯೂಸೆಕ್‌ ನೀರು ಬಿಡುವಂತೆ ಕಾವೇರಿ ನದಿ ನಿರ್ವಹಣಾ ಪ್ರಾಧಿಕಾರ ಸೂಚಿಸಿದ ಬೆನ್ನಲ್ಲೇ ತಮಿಳುನಾಡಿಗೆ ಕೆಆರ್‌ಎಸ್‌ನಿಂದ ನೀರು ಹರಿಸಲಾಗುತ್ತಿದೆ. ಪ್ರಾಧಿಕಾರ ಆದೇಶ ಪ್ರಶ್ನಿಸಿ ಸುಪ್ರಿಂಕೋರ್ಟ್‌ ಮೆಟ್ಟಿಲೇರುವುದಾಗಿ ಕರ್ನಾಟಕ ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಡಿಕೆ ಶಿವಕುಮಾರ್‌ ಹೇಳಿದ್ದಾರೆ.
ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುವುದಾಗಿ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಬೆಂಗಳೂರು: ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (Cauvery Water Management Authority)ವು ಪ್ರತಿ ನಿತ್ಯ ನೀರು ಹರಿಸುವಂತೆ ಸೂಚಿಸಿದ ಬೆನ್ನಲ್ಲೇ ಕರ್ನಾಟಕದಿಂದ ತಮಿಳುನಾಡಿಗೆ ನೀರು ಹರಿಸಲಾಗುತ್ತಿದೆ.

ನೀರು ಹರಿಸಬೇಕು ಎಂಬ ಪ್ರಾಧಿಕಾರದ ಆದೇಶ ಪ್ರಶ್ನಿಸಿ ಕರ್ನಾಟಕವು ಸುಪ್ರೀಂಕೋರ್ಟ್‌ಗೆ ಮೊರೆ ಹೋಗಲಿದ್ದು,ಇದಕ್ಕಾಗಿ ಕಾನೂನು ತಜ್ಞರ ಸಲಹೆ ಪಡೆಯುತ್ತಿರುವಾಗಿ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಬಹುತೇಕ ಏಳು ದಿನದಿಂದ ತಮಿಳುನಾಡಿಗೆ ನೀರು ಹರಿಸುವ ಪ್ರಮಾಣವನ್ನು ತಗ್ಗಿಸಲಾಗಿತ್ತು. ಪ್ರಾಧಿಕಾರವು ಆದೇಶ ನೀಡಿದ ಮರು ದಿನದಿಂದಲೇ ನೀರಿನ ಹೊರಹರಿವು ಕೃಷ್ಣರಾಜಸಾಗರ ಜಲಾಶಯದಿಂದ ಕಾವೇರಿ ನದಿ ಮೂಲಕ ಹೆಚ್ಚಿಸಲಾಗಿದೆ.

ಮಂಗಳವಾರ ಬೆಳಿಗ್ಗೆ ಹೊರ ಹರಿವಿನ ಪ್ರಮಾಣ ನದಿಗೆ 2171 ಕ್ಯೂಸೆಕ್‌ ಇದ್ದರೆ, ನಾಲೆಗಳ ಮೂಲಕ 3564 ಕ್ಯೂಸೆಕ್‌ ಹರಿಬಿಡಲಾಗುತ್ತಿದೆ. 1669 ಕ್ಯೂಸೆಕ್‌ ನೀರನ್ನು ಸೋಮವಾರ ಹೊರ ಬಿಡಲಾಗಿತ್ತು. ಹಂತ ಹಂತವಾಗಿ ನೀರಿನ ಹೊರ ಹರಿವನ್ನು ಹೆಚ್ಚಿಸುವ ಸಾಧ್ಯತೆಯಿದೆ. ಆದರೆ ಕೊಡಗಿನಲ್ಲಿ ಮೂರ್ನಾಲ್ಕು ದಿನದಿಂದ ಮಳೆಯಾಗಿರುವ ಕಾರಣಕ್ಕೆ ಒಳ ಹರಿವಿನಲ್ಲೂ ಏರಿಕೆಯಾಗಿದೆ. ಮಂಗಳವಾರ ಬೆಳಿಗ್ಗೆ ಕೆಆರ್‌ಎಸ್‌ಗೆ 7007 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ.

ಡಿಕೆಶಿ ವಾದ

ತಮಿಳುನಾಡಿಗೆ ಪ್ರತಿನಿತ್ಯ ಐದು ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸುತ್ತೇವೆ ಎಂದು ಜಲಸಂಪನ್ಮೂಲ ಸಚಿವರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನೀರು ಹಂಚಿಕೆ ಆದೇಶದ ವಿಚಾರದಲ್ಲಿ ಕರ್ನಾಟಕ ಸರ್ಕಾರವು ಸುಪ್ರೀಂಕೋರ್ಟ್‌ ಮೊರೆ ಹೋಗಲಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮುಂದಿನ ಹದಿನೈದು ದಿನಗಳವರೆಗೆ ಪ್ರತಿ ದಿನ ಐದು ಸಾವಿರ ಕ್ಯೂಸೆಕ್‌ ನೀರು ಹರಿಸುವಂತೆ ಆದೇಶಿಸಿರುವುದನ್ನು ಪ್ರಶ್ನಿಸುತ್ತೇವೆ ಎಂದು ಹೇಳಿದರು.

ನಮ್ಮ ಮುಂದೆ ಕಾವೇರಿ ವಿಚಾರದಲ್ಲಿ ಯಾವುದೇ ಮಾರ್ಗಗಳಿಲ್ಲ. ಉಳಿದಿರುವುದು ಸುಪ್ರೀಂಕೋರ್ಟ್‌ ಮುಂದೆ ಹೋಗುವುದೊಂದೆ ಉಳಿದಿರುವ ದಾರಿ. ಸುಪ್ರೀಂಕೋರ್ಟ್‌ನ ಮುಂದೆ ಕರ್ನಾಟಕದ ಮಳೆ, ಜಲಾಶಯಗಳ ಸ್ಥಿತಿಗತಿ, ರೈತರು ಎದುರಿಸುತ್ತಿರುವ ತೊಂದರೆ, ಕುಡಿಯುವ ನೀರಿಗೆ ಆಗಬಹುದಾದ ಸಮಸ್ಯೆಗಳ ಕುರಿತು ಎಲ್ಲಾ ಅಂಶಗಳನ್ನು ಇಡುತ್ತೇವೆ. ನಮ್ಮ ಕಾನೂನು ಹೋರಾಟ ಮುಂದುವರಿಯಲಿದೆ ಎಂದು ಹೇಳಿದರು.

ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ಸುಪ್ರೀಂಕೋರ್ಟ್‌ಗೆ ಹೋಗುವುದು ಸೂಕ್ತ ಎನ್ನುವ ಬಗ್ಗೆ ಮಾಜಿ ಸಿಎಂ ಬಸವರಾಜಬೊಮ್ಮಾಯಿ ನೀಡಿರುವ ಸಲಹೆ ಸೂಕ್ತವಾಗಿದೆ. ಅದನ್ನೇ ನಾವು ಮಾಡುತ್ತೇವೆ. ಅವರು ಸರಿಯಾಗಿಯೇ ಹೇಳಿದ್ದಾರೆ ಎಂದು ಡಿಕೆಶಿ ಪ್ರತಿಕ್ರಿಯಿಸಿದರು.

ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ನೀಡಿರುವ ಆದೇಶವನ್ನು ಪಾಲನೆ ಮಾಡದೇ ಇದ್ದಾಗ ಸುಪ್ರೀಂಕೋರ್ಟ್‌ ನಮ್ಮ ಅರ್ಜಿಯನ್ನು ವಜಾಗೊಳಿಸುವ ಸಾಧ್ಯಾಸಾಧ್ಯತೆಗಳ ಕುರಿತು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಿದ್ದೇವೆ. ಸುಪ್ರೀಂಕೋರ್ಟ್ ಏನಾದರೂ ನಮ್ಮ ಅರ್ಜಿ ವಜಾಗೊಳಿಸಿದರೆ ನಮ್ಮ ಮುಂದೆ ಇರುವ ಒಂದು ಆಯ್ಕೆಯನ್ನೂ ಕಳೆದುಕೊಳ್ಳಬೇಕಾಗುತ್ತದೆ. ಸುಪ್ರೀಂಕೋರ್ಟ್‌ ಗೆ ಹೋಗುವ ಮುನ್ನಾ ಎಲ್ಲಾ ರೀತಿಯ ಕಾನೂನು ಮಾರ್ಗೋಪಾಯಗಳನ್ನು ಕಂಡುಕೊಳ್ಳಲು ಪ್ರಯತ್ನಿಸುತ್ತಿದೆ ಎಂದರು.

ನೀರು ಹರಿಸುವಂತೆ ಆದೇಶಿವು ಮುನ್ನ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಕೂಡಲೇ ಎರಡು ರಾಜ್ಯಗಳಿಗೆ ತಜ್ಞರ ತಂಡಗಳನ್ನು ಕಳುಹಿಸಬೇಕು. ತಜ್ಞರಿಂದಲೇ ವಸ್ತುಸ್ಥಿತಿಯ ವರದಿಯನ್ನು ಪಡೆದುಕೊಳ್ಳಬೇಕು. ಆನಂತರ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶಿಸಬೇಕು ಎಂದು ಡಿಕೆಶಿ ಒತ್ತಾಯಿಸಿದರು.

ಬೊಮ್ಮಾಯಿ ಸಲಹೆ

ಯಾವುದೇ ರಾಜ್ಯದ ಎಂಪಿಗಳು ಪ್ರಧಾನಿಯನ್ನು ಭೇಟಿ ಮಾಡಿದರೂ ಏನೂ ಪ್ರಯೋಜನ ಇಲ್ಲ. ಸುಪ್ರೀಂ ಕೋರ್ಟ್ ಮತ್ತು ತಮಿಳುನಾಡಿನ ಸಿಎಂ ಜೊತೆ ಮಾತುಕತೆ ಮಾಡುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಸಲಹೆ ನೀಡಿದ್ಧಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಬಿಜೆಪಿಯವರಿಗೆ ಪ್ರಧಾನಿ ಭೇಟಿ ಮಾಡಿ ಮಾತನಾಡುವ ಧಮ್ ಇಲ್ಲ ಎಂಬ ಡಿಸಿಎಂ ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಈ ಸರ್ಕಾರಕ್ಕೆ ನಿಜವಾದ ತಾಕತ್ತು ದಮ್ಮು ಇದ್ದರೆ ನೀರು ಬಿಡುತ್ತಿರಲಿಲ್ಲ. ತಮಿಳುನಾಡಿಗೆ ನೀರು ಬಿಡದೇ ಸುಪ್ರೀಂ ಕೋರ್ಟ್ ನಲ್ಲಿ ವಾದ ಮಾಡಿ ರಾಜ್ಯದ ಹಿತ ಕಾಪಾಡಿ ಎಂದು ಆಗ್ರಹಿಸಿದರು.

ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದ ಮೇಲೆ ತಮಿಳುನಾಡಿನ ಪ್ರಭಾವ ವಿಪರೀತ ಇದ್ದ ಹಾಗೆ ಇದೆ. ಸುಪ್ರೀಂ ಕೊರ್ಟ್ ಆದೇಶ ಆಗಿಲ್ಲ. ಆದರೂ ರಾಜ್ಯ ಸರ್ಕಾರ ತಮಿಳುನಾಡಿಗೆ ನೀರು ಬಿಡುವ ನಿರ್ಧಾರ ಮಾಡಿ ರಾಜ್ಯದ ಜನತೆಗೆ ಧೋಖಾ ಮಾಡಿದೆ. ಇದರ ವಿರುದ್ದ ನಮ್ಮ ಪಕ್ಷದ ವತಿಯಿಂದ ತೀವ್ರವಾದ ಪ್ರತಿಭಟನೆ ಹಮ್ಮಿಕೊಳ್ಳುತ್ತೇವೆ ಎಂದು ಹೇಳಿದರು.

ಆರಂಭದಲ್ಲಿ ತಮಿಳುನಾಡಿಗೆ ಯಾವುದೇ ಕಾರಣಕ್ಕೂ ನೀರು ಬಿಡುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದರು. ಅವರು ಹೇಳಿದ ಮಾರನೇ ದಿನವೇ ಡಿಸಿಎಂ ಡಿ.ಕೆ.ಶಿವಕುಮಾರ್ ನೀರು ಬಿಡುತ್ತಾರೆ. ಸರ್ಕಾರ ನೀರು ಬಿಡಲು ತೀರ್ಮಾನ ಮಾಡುವುದಾದರೆ ಸರ್ವ ಪಕ್ಷದ ಸಭೆ ಕರೆಯುವ ಅಗತ್ಯ ಏನಿತ್ತು ಎಂದು ವಾಗ್ದಾಳಿ ನಡೆಸಿದರು.

ಸಿಎಂ ಹೇಳಿಕೆ

ಕಾವೇರಿ ನೀರು ನಿಯಂತ್ರಣ ಸಮಿತಿ 5000 ಕ್ಯೂಸೆಕ್ಸ್ ನೀರು ಬಿಡಬೇಕು ಎಂದು ಸೂಚಿಸಿದೆ. ಅಷ್ಟು ನೀರು ಇಲ್ಲದಿರುವುದರಿಂದ ನಾವು ನೀರು ಬಿಟ್ಟಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಹೇಳಿದ್ದಾರೆ.

ನೀರು ಬಿಡಲು ನಮ್ಮ ಬಳಿ ನೀರಿಲ್ಲ, ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತಿದ್ದು, ನ್ಯಾಯಾಲಯ ಸಮಿತಿಯ ಆದೇಶ ಪಾಲನೆ ಮಾಡಿಲ್ಲ ಎಂದು ಪ್ರಶ್ನಿಸಿದೆ. ನೀರು ಬಿಡಬೇಕೆಂದಿದ್ದರೂ ನಮಗೆ 106 ಟಿ. ಎಂ. ಸಿ ನೀರಿನ ಅಗತ್ಯವಿದೆ. ನಮ್ಮ ಬಳಿ ಇರುವುದೇ 53 ಟಿಎಂಸಿ. ಕುಡಿಯುವ ನೀರಿಗೆ 30 ಟಿಎಂಸಿ, ಬೆಳೆ ಉಳಿಸಿಕೊಳ್ಳಲು 70 ಟಿಎಂಸಿ ನೀರು ಮತ್ತು ಕೈಗಾರಿಕೆಗಳಿಗೆ 3 ಟಿಎಂಸಿ ಅಗತ್ಯ. ಒಟ್ಟು 106 ಟಿಎಂಸಿ ನಮಗೆ ಅಗತ್ಯವಿದೆ. ನಮ್ಮ ಬಳಿ ಇರುವುದೇ 53 ಟಿಎಂಸಿ ನೀರು. ನೀರು ಕೊಡಲು ನಮ್ಮ ಬಳಿ ನೀರಿಲ್ಲ. ಕಾವೇರಿ ನೀರನ್ನು ತಮಿಳುನಾಡಿಗೆ ಯಡಿಯೂರಪ್ಪ ಅವರ ಕಾಲದಲ್ಲಿ ಹಾಗೂ ಎಲ್ಲರ ಕಾಲದಲ್ಲಿ ಬಿಡಲಾಗಿದೆ ಎಂದು ಹೇಳಿದರು.

ಸಾಮಾನ್ಯ ವರ್ಷದಲ್ಲಿ 177.25 ಟಿಎಂಸಿ ನೀರು ಬಿಡಲಾಗುತ್ತದೆ. ಈವರೆಗೆ 37.7 ಟಿಎಂಸಿ ಮಾತ್ರ ಬಿಟ್ಟಿದ್ದೇವೆ. ನಾವು ಬಿಡಬೇಕಿದ್ದುದ್ದು 99 ಟಿಎಂಸಿ ನೀರು. ಎಲ್ಲಿ ನೀರು ಬಿಟ್ಟಿದ್ದೇವೆ ಎಂದು ಮರು ಪ್ರಶ್ನಿಸಿದರು.

ಶೀಘ್ರ ಕೇಂದ್ರ ತಂಡ

ಲೋಕಸಭೆ ವಿಶೇಷ ಅಧಿವೇಶನದಲ್ಲಿ ಪಾಲ್ಗೊಳ್ಳುವ ಸಲುವಾಗಿ ನವದೆಹಲಿಗೆ ತೆರಳಿದ್ದ ಸಂದರ್ಭದಲ್ಲಿ, ಕೇಂದ್ರ ಜಲ ಶಕ್ತಿ ಸಚಿವರಾದ ಗಜೇಂದ್ರ ಸಿಂಗ್ ಶಿಖಾವತ್ ರವರನ್ನು ಭೇಟಿಯಾಗಿ ವಸ್ತುಸ್ಥಿತಿ ತಿಳಿಸಿದ್ಧೇವೆ ಎಂದು ಸಂಸದೆ ಸುಮಲತಾ ಅಂಬರೀಶ್‌ ಹೇಳಿದ್ಧಾರೆ.

ಕರ್ನಾಟಕ ರಾಜ್ಯದಲ್ಲಿ ಮತ್ತು ಮಂಡ್ಯ ಜಿಲ್ಲೆಯಲ್ಲಿ ಮಳೆಯ ತೀವ್ರ ಕೊರತೆಯಿಂದ, ಬರದ ಛಾಯೆ ಆವರಿಸಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿರುವ ಬಗ್ಗೆ ಹಾಗೂ ಕುಡಿಯುವ ನೀರಿಗೆ ತೊಂದರೆಯಾಗಿರುವ ಕುರಿತು ಮನವರಿಕೆ ಮಾಡಿಕೊಡಲಾಯಿತು. ಈ ಕುರಿತು ಸಕಾರಾತ್ಮಕವಾಗಿ ಸ್ಪಂದಿಸಿದ ಕೇಂದ್ರ ಜಲ ಶಕ್ತಿ ಖಾತೆ ಸಚಿವರು, ಮುಂದಿನ ಒಂದು ವಾರದೊಳಗಾಗಿ, ಬರ ಅಧ್ಯಯನ ನಡೆಸಲು, ಕೇಂದ್ರದಿಂದ ಹಾಗೂ ಸಂಬಂಧಿಸಿದ ರಾಜ್ಯ ಸರ್ಕಾರದ ಅಧಿಕಾರಿಗಳನ್ನು ಒಳಗೊಂಡ ತಂಡವನ್ನು ರಚಿಸಿ, ಬರಪೀಡಿತ ಪ್ರದೇಶಗಳಿಗೆ ಕಳುಹಿಸಿ ಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿರಿ

Whats_app_banner