Cauvery issue: ಕರ್ನಾಟಕಕ್ಕೆ ತಪ್ಪದ ಕಾವೇರಿ ಸಂಕಟ: ವಿಚಾರಣೆ ಮುಂದೂಡಿದ ಸೆ. 21ಕ್ಕೆ ಸುಪ್ರೀಂ ಪೀಠ
ಕನ್ನಡ ಸುದ್ದಿ  /  ಕರ್ನಾಟಕ  /  Cauvery Issue: ಕರ್ನಾಟಕಕ್ಕೆ ತಪ್ಪದ ಕಾವೇರಿ ಸಂಕಟ: ವಿಚಾರಣೆ ಮುಂದೂಡಿದ ಸೆ. 21ಕ್ಕೆ ಸುಪ್ರೀಂ ಪೀಠ

Cauvery issue: ಕರ್ನಾಟಕಕ್ಕೆ ತಪ್ಪದ ಕಾವೇರಿ ಸಂಕಟ: ವಿಚಾರಣೆ ಮುಂದೂಡಿದ ಸೆ. 21ಕ್ಕೆ ಸುಪ್ರೀಂ ಪೀಠ

Cauvery water dispute ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ಸುಪ್ರೀಂಕೋರ್ಟ್‌ನ ತ್ರಿಸದಸ್ಯ ಪೀಠವು ವಿಚಾರಣೆಯನ್ನು ಮುಂದೂಡಿದೆ. ಇದರಿಂದ ಕರ್ನಾಟಕ ಇನ್ನೂ ಕೆಲ ದಿನ ನೀರು ಹರಿಸುವ ಸನ್ನಿವೇಶ ಎದುರಾಗಿದೆ.

ಕಾವೇರಿ ನದಿ ನೀರು ಹಂಚಿಕೆ ವಿವಾದದ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ ಪೀಠ ವಿಚಾರಣೆ ಮುಂದೂಡಿದೆ
ಕಾವೇರಿ ನದಿ ನೀರು ಹಂಚಿಕೆ ವಿವಾದದ ಅರ್ಜಿ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ ಪೀಠ ವಿಚಾರಣೆ ಮುಂದೂಡಿದೆ

ನವದೆಹಲಿ: ಮಳೆ ಕೊರತೆಯಿಂದ ಜಲಾಶಯ ಖಾಲಿಯಾಗುತ್ತಿರುವ ಸಮಯದಲ್ಲಿ ಕರ್ನಾಟಕಕ್ಕೆ ಕಾವೇರಿ ಸಂಕಟ ತಪ್ಪುವಂತೆ ಕಾಣುತ್ತಿಲ್ಲ. ಈಗಾಗಲೇ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರದ ಸೂಚನೆಯಂತೆ ನಿತ್ಯ ಏಳು ಸಾವಿರಕ್ಕೂ ಅಧಿಕ ನೀರು ಹರಿಸುತ್ತಿರುವ ಕರ್ನಾಟಕ ಇನ್ನೂ ಮುಂದುವರೆಸಬೇಕಾದ ಸನ್ನಿವೇಶ ಎದುರಾಗಿದೆ.

ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ನಡೆಯುತ್ತಿರುವ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಲು ನ್ಯಾಯಮೂರ್ತಿಗಳು ನಿರಾಕರಿಸಿದ್ದರಿಂದ ವಿಚಾರಣೆ ಸೆಪ್ಟೆಂಬರ್ 21ಕ್ಕೆ ಮುಂದೆ ಹೋಯಿತು. ಈ ಹಿನ್ನೆಲೆಯಲ್ಲಿ ಕರ್ನಾಟಕವು ಅದಕ್ಕೂ ಮುನ್ನ ಕಾವೇರಿ ನಿರ್ವಹಣಾ ಪ್ರಾಧಿಕಾರದ ಮುಂದೆ ಹೋಗಬೇಕು ಇಲ್ಲವೇ ನೀರು ಹರಿಸುವಂತ ಕಷ್ಟಕ್ಕೆ ಸಿಲುಕಿದೆ.

ವಿಚಾರಣೆ ಮುಂದೂಡಿದ ನ್ಯಾಯಮೂರ್ತಿ

ಕರ್ನಾಟಕವು ಕಾವೇರಿ ನದಿ ನೀರು ಹರಿಸುತ್ತಿಲ್ಲ. ಮಾಸಿಕ ಗುರಿಯಂತೆ ನಮಗೆ ನೀರು ಹರಿಸದೇ ಇರುವುದರಿಂದ ತೊಂದರೆಯಾಗಿದೆ. ನೀರು ಬಿಡುಗಡೆಗೆ ನಿರ್ದೇಶನ ನೀಡಬೇಕು ಎಂದು ತಮಿಳುನಾಡು ಮನವಿ ಸಲ್ಲಿಸಿತ್ತು. ಇದಕ್ಕಾಗಿಯೇ ಪ್ರತ್ಯೇಕ ಪೀಠ ರಚಿಸುವಂತೆ ಕರ್ನಾಟಕ ಒತ್ತಾಯಿಸಿತ್ತು. ಈ ಹಿನ್ನೆಲೆಯಲ್ಲಿ ಕಳೆದ ತಿಂಗಳೇ ಮೂವರು ಸದಸ್ಯರ ಪೀಠವನ್ನು ಸುಪ್ರೀಂಕೋರ್ಟ್‌ ನಲ್ಲಿ ರಚಿಸಲಾಗಿತ್ತು. ನ್ಯಾ.ಬಿ.ಆರ್‌.ಗವಾಯಿ ಅವರಿದ್ದ ಪೀಠವು ಹದಿನೈದು ದಿನದ ಹಿಂದೆ ವಿಚಾರಣೆ ಆರಂಭಿಸಿದರೂ ನೀರು ಹಂಚಿಕೆ ವಿಚಾರದಲ್ಲಿ ನಾವು ತಜ್ಞರಲ್ಲ. ಈ ಕುರಿತು ವಸ್ತು ಸ್ಥಿತಿ ವರದಿ ನೀಡುವಂತೆ ಸೂಚಿಸಿತ್ತು.

ಬುಧವಾರ ಈ ಕುರಿತು ವಿಚಾರಣೆಯಲ್ಲಿ ಪಾಲ್ಗೊಂಡ ತಮಿಳುನಾಡು ಪರ ವಕೀಲ ಮುಕುಲ್‌ ರೊಹಟಗಿ, ತಮಿಳುನಾಡಿಗೆ ಹೆಚ್ಚಿನ ನೀರು ಹರಿಸುವಂತೆ ನಿರ್ದೇಶನ ನೀಡಬೇಕು ಎಂದು ಕೋರಿದರು.

ಆದರೆ ಇದಕ್ಕೆ ಒಪ್ಪದ ನ್ಯಾಯಮೂರ್ತಿಗಳು, ಬೇಕಾದರೆ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳ ಎದುರು ಹೋಗಿ ಎಂದು ಹೇಳಿದರು. ಇದಕ್ಕೊಪ್ಪದ ರೋಹಟಗಿ ಇಲ್ಲಿಯೇ ವಿಚಾರಣೆ ಮುಂದುವರೆಸಿ ಎಂದು ಮನವಿ ಮಾಡಿದರು.

ಬುಧವಾರದಂದು ನ್ಯಾಯಮೂರ್ತಿ ನರಸಿಂಹ ಅವರು ರಜೆಯಲ್ಲಿದ್ದಾರೆ. ನಾನೂ ಮುಂದಿನ ವಾರ ಲಭ್ಯ ಇರುವುದಿಲ್ಲ. ಇದರಿಂದ ವಿಚಾರಣೆಯನ್ನು ಸೆ.21ಕ್ಕೆ ನಡೆಸೋಣ ಎನ್ನುವ ಸೂಚನೆ ನೀಡಿದರು. ಆ ದಿನವೇ ರೈತಸಂಘದ ಮತ್ತೊಂದು ಅರ್ಜಿಯನ್ನೂ ಕೈಗೆತ್ತಿಕೊಳ್ಳುವುದಾಗಿಯೂ ನ್ಯಾ.ಗವಾಯಿ ತಿಳಿಸಿದರು.

ಸಚಿವರ ಪ್ರತಿಕ್ರಿಯೆ

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ವಿಚಾರಣೆ ಮೂಂದೂಡಿರುವ ಹಿನ್ನಲೆಯಲ್ಲಿ ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನಲ್ಲಿ ಪ್ರತಿಕ್ರಿಯಿಸಿರುವ ಸಚಿವ ಎನ್‌.ಚಲುವರಾಯಸ್ವಾಮಿ, ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರೊಂದಿಗೆ ಚರ್ಚಿಸಿ ಸಂಕಷ್ಟ ಪರಿಸ್ಥಿತಿಯಲ್ಲಿರುವ ರೈತರ ಹಿತ ಕಾಯವುದು ಹಾಗೂ ಮುಂದಿನ ನಡೆಗಳ ನಿರ್ಧಾರ ಕೈಗೊಳ್ಳುವ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದರು.

ಇಂದು ಸುಪ್ರೀಂ ಕೋರ್ಟ್ ನಲ್ಲಿ ರಾಜ್ಯದ ಪರ ಆದೇಶ ಬರೋ ಆಶಾ ಭಾವನೆ ಇತ್ತು, ಸುಪ್ರೀಂಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 21ಕ್ಕೆ ಮುಂದೂಡಿರೋ ಹಿನ್ನಲೆ ಅಲ್ಲಿಯವರೆಗೂ ತಮಿಳುನಾಡಿಗೆ ನೀರು ಬಿಡಲು ಕಷ್ಟವಾಗುತ್ತದೆ.. ಈ ಹಿನ್ನಲೆ ಕಾವೇರಿ ನದಿ ನೀರು ಪ್ರಾಧಿಕಾರದ ಮುಂದೆ ರಾಜ್ಯದ ಸಂಕಷ್ಟ ಪರಿಸ್ಥಿತಿಯನ್ನು ವಿವರಿಸುವ ಪ್ರಯತ್ನವನ್ನು ಮತ್ತೆ ನಮ್ಮ ರಾಜ್ಯದ ಪರ ವಕೀಲರ ಮೂಲಕ ಮುಂದೂವರೆಸುವುದಾಗಿ ಸಚಿವರು ತಿಳಿಸಿದರು.

ಕೆ.ಆರ್.ಎಸ್ ಅಣೆಕಟ್ಟಿನಲ್ಲಿ ಸದ್ಯ ಸಂಗ್ರಹವಾಗಿರುವ ನೀರು ಜನರಿಗೆ ಕುಡಿಯುವ ನೀರು ಮಾತ್ರ ಒದಗಿಸಲು ಸಾಧ್ಯವಾಗುತ್ತದೆ‌, ರೈತರ ಬೆಳೆಗಳಿಗೂ ನೀರು ಬಿಡದ ಪರಿಸ್ಥಿತಿ ನಿರ್ಮಾಣವಾಗಿರುವ ಹಿನ್ನಲೆ ಪ್ರಾಧಿಕಾರದ ಗಮನ ಸೆಳೆಯುವ ಪ್ರಯತ್ನ ಮುಂದುವರೆಸುವುದಾಗಿ ಸಚಿವರು ತಿಳಿಸಿದರು.

ನಿಲ್ಲದ ಪ್ರತಿಭಟನೆ

ಈಗಾಗಲೇ ಒಂದು ತಿಂಗಳಿನಿಂದಲೂ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಮಂಡ್ಯ, ಮೈಸೂರು, ಚಾಮರಾಜನಗರ ಭಾಗದಲ್ಲಿ ನಿರಂತರ ಪ್ರತಿಭಟನೆ ನಡೆದಿವೆ. ರೈತಸಂಘಟನೆಗಳ ಜತೆಗೆ ಇತರೆ ಸಂಘಟನೆಗಳೂ ಶಾಂತಿಯುತವಾಗಿ ಹಾಗೂ ವಿಭಿನ್ನವಾಗಿ ಹೋರಾಟ ಕೈಗೊಂಡಿವೆ. ಕಾವೇರಿ ನೀರು ಹರಿಸುವುದನ್ನು ಕೂಡಲೇ ನಿಲ್ಲಿಸಬೇಕು ಎನ್ನುವ ಬೇಡಿಕೆಯನ್ನಿಟ್ಟುಕೊಂಡು ಹೋರಾಟ ನಡೆಸುತ್ತಿವೆ.

ಮಂಡ್ಯ ಜಿಲ್ಲೆಯಲ್ಲಂತೂ ಹೋರಾಟದ ಕಾವು ಜೋರಾಗಿಯೇ ಇದೆ. ಮಂಡ್ಯ. ಶ್ರೀರಂಗಪಟ್ಟಣ ತಾಲ್ಲೂಕಿನಲ್ಲಿ ಅಹೋರಾತ್ರಿ ಧರಣಿಯೂ ಸೇರಿ ಪ್ರತಿಭಟನೆಗಳು ನಡೆಯುತ್ತಲೇ ಇವೆ.

ಕುಸಿದ ಜಲಾಶಯ ಮಟ್ಟ

ನೀರು ಹರಿಸುತ್ತಿರುವುದರಿಂದ ದಿನದಿಂದ ದಿನಕ್ಕೆ ಕಾವೇರಿ ಕೊಳ್ಳದ ಜಲಾಶಯಗಳ ನೀರಿನ ಮಟ್ಟ ಕಡಿಮೆಯಾಗುತ್ತಿದೆ. ಮಂಡ್ಯ ಜಿಲ್ಲೆ ಕೃಷ್ಣರಾಜಸಾಗರ ಜಲಾಶಯದ ನೀರಿನ ಮಟ್ಟ ಬುಧವಾರ ಬೆಳಿಗ್ಗೆ ಹೊತ್ತಿಗೆ 98.60 ಅಡಿಗೆ ಕುಸಿದಿದೆ. ಜಲಾಶಯದ ಗರಿಷ್ಠ 124.80 ಅಡಿ. ಜಲಾಶಯದ ಒಳ ಹರಿವಿನ ಪ್ರಮಾಣ 2432 ಕ್ಯೂಸೆಕ್‌ ಇದ್ದರೆ,. ಹೊರ ಹರಿವಿನ ಪ್ರಮಾಣ 6344 ಕ್ಯೂಸೆಕ್‌. ಜಲಾಶಯದಲ್ಲಿ 21.734 ಟಿಎಂಸಿ ನೀರು ಮಾತ್ರ ಸಂಗ್ರಹವಿದೆ. ಗರಿಷ್ಠ 49.452 ಟಿಎಂಸಿ ನೀರು ಸಂಗ್ರಹಕ್ಕೆ ಅವಕಾಶವಿದೆ.

ಮೈಸೂರು ಜಿಲ್ಲೆಯ ಕಬಿನಿ ಜಲಾಶಯದ ನೀರಿನ ಮಟ್ಟ ಬುಧವಾರಕ್ಕೆ 2273.65 ಅಡಿ ತಲುಪಿದೆ. ಜಲಾಶಯದ ಒಳಹರಿವು 788 ಕ್ಯೂಸೆಕ್‌ ಇದ್ದರೆ, ಹೊರ ಹರಿವಿನ ಪ್ರಮಾಣ 500 ಕ್ಯೂಸೆಕ್‌ಗೆ ಇಳಿಸಲಾಗಿದೆ. ಜಲಾಶಯದಲ್ಲಿ 13.54ಟಿಎಂಸಿ ನೀರು ಸಂಗ್ರಹವಾಗಿದೆ.

Whats_app_banner