Forest News: ಕಾಡಲ್ಲಿ ಆನೆ ಸತ್ತರೂ ಅರಣ್ಯ ಇಲಾಖೆಗೆ ಆರು ತಿಂಗಳು ಮಾಹಿತಿಯೇ ಇಲ್ಲ; ಬಿಆರ್‌ಟಿಯಲ್ಲಿ ಮೂರು ಆನೆ ಸಾವು-chamarajanagar 3 wild elephants death in brt forest chamarajanagar carcass found after 6 months shows negligence kub ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Forest News: ಕಾಡಲ್ಲಿ ಆನೆ ಸತ್ತರೂ ಅರಣ್ಯ ಇಲಾಖೆಗೆ ಆರು ತಿಂಗಳು ಮಾಹಿತಿಯೇ ಇಲ್ಲ; ಬಿಆರ್‌ಟಿಯಲ್ಲಿ ಮೂರು ಆನೆ ಸಾವು

Forest News: ಕಾಡಲ್ಲಿ ಆನೆ ಸತ್ತರೂ ಅರಣ್ಯ ಇಲಾಖೆಗೆ ಆರು ತಿಂಗಳು ಮಾಹಿತಿಯೇ ಇಲ್ಲ; ಬಿಆರ್‌ಟಿಯಲ್ಲಿ ಮೂರು ಆನೆ ಸಾವು

BRT Forest ಕಾಡಾನೆ ಮೃತಪಟ್ಟು ಆರು ತಿಂಗಳ ಬಳಿಕ ಅಸ್ಥಿಪಂಜರ ಹಾಗೂ ದಂತಗಳು ದೊರೆತಿರುವ ಪ್ರಕರಣ ಚಾಮರಾಜನಗರದ ಬಿಆರ್‌ಟಿಯಲ್ಲಿ ವರದಿಯಾಗಿದೆ.

ಚಾಮರಾಜನಗರ ಜಿಲ್ಲೆ ಬಿಆರ್‌ಟಿ ಹುಲಿಧಾಮದಲ್ಲಿ ಪತ್ತೆಯಾದ ಕಾಡಾನೆ ಪಂಜರ ಹಾಗೂ ದಂತಗಳು.
ಚಾಮರಾಜನಗರ ಜಿಲ್ಲೆ ಬಿಆರ್‌ಟಿ ಹುಲಿಧಾಮದಲ್ಲಿ ಪತ್ತೆಯಾದ ಕಾಡಾನೆ ಪಂಜರ ಹಾಗೂ ದಂತಗಳು.

ಚಾಮರಾಜನಗರ: ಕಾಡು ಪ್ರಾಣಿಗಳ ನಿರ್ವಹಣೆ ಅರಣ್ಯ ಇಲಾಖೆ ಸಿಬ್ಬಂದಿಯ ಕರ್ತವ್ಯ. ಇದಕ್ಕಾಗಿ ಇಲಾಖೆ ಲಕ್ಷಗಟ್ಟಲೇ ಸಂಬಳ, ವಾಹನ, ವಸತಿ ಸಹಿತ ಹತ್ತಾರು ಸೌಲಭ್ಯ ನೀಡುತ್ತದೆ. ಇದಕ್ಕಾಗಿ ವಲಯ ಅರಣ್ಯಾಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ಅವರು ತಮ್ಮ ವಲಯದ ವನ್ಯಜೀವಿಗಳ ಪೋಷಕರೇ. ಅದರೆ ಬಿಳಿಗಿರಿರಂಗನ ಬೆಟ್ಟ ಹುಲಿಧಾಮದಲ್ಲಿ ಆನೆಗಳ ಸತ್ತರೂ ಅಧಿಕಾರಿಗಳಿಗೂ ಮಾಹಿತಿ ಇಲ್ಲ. ಸಿಬ್ಬಂದಿಯೂ ಗೊತ್ತೇ ಇಲ್ಲ. ಕೆಲವೇ ದಿನಗಳ ಅಂತರದಲ್ಲಿ ಮೂರು ಕಾಡಾನೆಗಳು ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆಯ ಬಿಳಿರಂಗನ ಬೆಟ್ಟ ಹುಲಿಧಾಮದಲ್ಲಿ ವರದಿಯಾಗಿದೆ. ಅದರಲ್ಲಿ ಒಂದು ಆನೆ ಸತ್ತು ಆರು ತಿಂಗಳಾಗುತ್ತಾ ಬಂದಿದ್ದು ಅದರ ಪಂಜರ ಈಗ ಸಿಕ್ಕಿದೆ, ಇದೇ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಹೇಗೆ ಕೆಲಸ ಮಾಡುತ್ತಾರೆ ಎನ್ನುವುದಕ್ಕೆ ಸಾಕ್ಷಿ ಎನ್ನುವಂತಿದೆ.

ಕರ್ನಾಟಕದ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಬೈಲೂರು ವ್ಯಾಪ್ತಿಯಲ್ಲಿ ಬೀಟ್ ಸಿಬ್ಬಂದಿಗೆ ಸತ್ತ ಆನೆಯ ಅಸ್ಥಿಪಂಜರ ಪತ್ತೆಯಾಗಿದೆ. ಅರಣ್ಯ ಅತಿಥಿ ಗೃಹದಿಂದ ಕೇವಲ 500 ಮೀಟರ್‌ಗಳ ಅಂತರದಲ್ಲಿ ಆನೆಯ ಮೂಳೆಗಳು ಮತ್ತು ದಂತಗಳು ಪತ್ತೆಯಾಗಿದ್ದು, ಮಾಹಿತಿ ಪ್ರಕಾರ ಕನಿಷ್ಠ ಆರು ತಿಂಗಳ ಮೊದಲು ಸಾವನ್ನಪ್ಪಿದೆ ಎಂದು ಅಂದಾಜಿಸಲಾಗಿದೆ.

ಯಳಂದೂರು ವ್ಯಾಪ್ತಿಯಲ್ಲಿ ಮತ್ತೊಂದು ಆನೆಯ ಕೊಳೆತ ಅವಶೇಷಗಳು ಪತ್ತೆಯಾಗಿವೆ. ಮೂರು ತಿಂಗಳ ಹಿಂದೆಯೇ ಆನೆ ಮೃತಪಟ್ಟಿರಬೇಕು ಎನ್ನುವುದು ಮರಣೋತ್ತರ ಪರೀಕ್ಷೆಯಿಂದ ಗೊತ್ತಾಗಿದೆ.

ಇದಾದ ಮರು ದಿನವೇ ಮತ್ತೊಂದು ಆನೆ ದೇಹ ಈಗ ಕಂಡು ಬಂದಿದೆ. ಕಡಿಮೆ ಅವಧಿಯಲ್ಲಿಯೇ ಮೂರು ಆನೆಗಳು ಒಂದೇ ವಿಭಾಗದಲ್ಲಿ ಮೃತಪಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ.

ಬಿಳಿರಂಗನ ಬೆಟ್ಟ ವನ್ಯಜೀವಿ ವಲಯದ ವ್ಯಾಪ್ತಿಯ ಬೈಲೂರು ಮತ್ತುಯಳಂದೂರು ವಲಯಗಳಲ್ಲಿಯೇ ಆನೆಗಳು ಮೃತಪಟ್ಟಿದ್ದರೂ ನಿರ್ಲಕ್ಷ್ಯ ವಹಿಸಿದ ಆರೋಪಗಳು ಕೇಳಿ ಬಂದಿವೆ. ಈ ಬಗ್ಗೆ ಆಕ್ರೋಶಗೊಂಡಿರುವ ವನ್ಯಪ್ರಿಯರು ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಕೋರಿದ್ದಾರೆ.

ಈ ಹಿಂದೆ ಸುಮಾರು ಎರಡು ವರ್ಷಗಳ ಕಾಲ ದೀಪ್‌ ಜೆ ಕಂಟ್ರಾಕ್ಟರ್‌ ಬಿಆರ್‌ಟಿ ನಿರ್ದೇಶಕರಾಗಿದ್ದರು. ಅವರಿಗೆ ಸ್ಥಳ ತೋರಿಸದೇ ಸರ್ಕಾರ ವರ್ಗಾವಣೆ ಮಾಡಿದೆ. ಅವರ ಸ್ಥಳಕ್ಕೆ ಇತ್ತೀಚಿಗಷ್ಟೇ ಐಎಫ್‌ಎಸ್‌ಗೆ ಬಡ್ತಿ ಪಡೆದಿರುವ ಬಿ.ಎಸ್‌.ಶ್ರೀಪತಿ ಅವರನ್ನು ನಿಯೋಜಿಸಿದೆ. ಎರಡು ದಿನದ ಹಿಂದೆಯಷ್ಟೇ ಅವರು ಅಧಿಕಾರ ವಹಿಸಿಕೊಂಡಿದ್ದಾರೆ. ದೀಪ್‌ ಅವರು ಡಿಸಿಎಫ್‌ ಆಗಿದ್ದಾಗ ಕಾಡಿನ ಬೆಂಕಿ ಪ್ರಕರಣಗಳೂ ಮಿತಿ ಮೀರಿದ್ದು, ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯಂತ್ರಣ ಸಾಧ್ಯವಾಗದೇ ಈ ರೀತಿಯ ಬೆಳವಣಿಗೆಗಳು ಆದವು ಎನ್ನುವ ಆರೋಪಗಳು ಕೇಳಿ ಬಂದಿದ್ದವು. ಈಗ ಆನೆ ಸಾವಿನ ಪ್ರಕರಣಗಳು ವರದಿಯಾಗಿವೆ.

ಬೈಲೂರು ಮತ್ತು ಯಳಂದೂರು - ಎರಡೂ ವಲಯದಲ್ಲಿ ಈ ಬಾರಿಯ ಬೇಸಿಗೆಯಲ್ಲಿ ಪದೇ ಪದೇ ಬೆಂಕಿ ಪ್ರಕರಣಗಳು ಕಂಡು ಬಂದಿದ್ದವು. ಆಗಲೂ ಆಕ್ರೋಶ ವ್ಯಕ್ತವಾಗಿತ್ತು.

ಈ ಕುರಿತು ಪ್ರತಿಕ್ರಿಯೆ ನೀಡಿರುವ ಚಾಮರಾಜನಗರ ವೃತ್ತ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್‌, ಬಿಆರ್‌ಟಿಯಲ್ಲಿ ಕೆಲವು ಪ್ರದೇಶಗಳಲ್ಲಿ ಸಮಸ್ಯೆ ಇರುವುದು ನಿಜ. ಈಗ ಆನೆಗಳ ಸಾವಿನ ಪ್ರಕರಣ ಇದನ್ನು ಎತ್ತಿ ತೋರಿಸಿದೆ. ಈ ಸಮಸ್ಯೆಯನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಬಿಆರ್‌ಟಿ ವ್ಯಾಪ್ತಿಯ ಅರಣ್ಯ ಅಧಿಕಾರಿ ಸೇರಿದಂತೆ ಸಿಬ್ಬಂದಿ ನಿಯಮಿತವಾಗಿ ಕಾಲ್ನಡಿಗೆಯಲ್ಲಿ ಗಸ್ತು ತಿರುಗುವಂತೆ ನೋಡಿಕೊಳ್ಳಬೇಕು ಎನ್ನುವ ಸೂಚನೆಯನ್ನು ನೀಡಲಾಗಿದೆ ಎಂದರು.