Bharachukki Falls: ತುಂಬಿ ಹರಿಯುತ್ತಿರುವ ಕಾವೇರಿ, ಚಾಮರಾಜನಗರ ಜಿಲ್ಲೆಯಲ್ಲಿ ಆಗಸ್ಟ್‌ ಇಂದು ಭರಚುಕ್ಕಿ ಜಲಪಾತೋತ್ಸವ, ಸಂಗೀತ ಸಂಜೆ ಸಡಗರ-chamarajanagar cauvery river flow bharachukki falls utsav in kollegal taluk of chamarajanagar on august 10 ,ಕರ್ನಾಟಕ ಸುದ್ದಿ
ಕನ್ನಡ ಸುದ್ದಿ  /  ಕರ್ನಾಟಕ  /  Bharachukki Falls: ತುಂಬಿ ಹರಿಯುತ್ತಿರುವ ಕಾವೇರಿ, ಚಾಮರಾಜನಗರ ಜಿಲ್ಲೆಯಲ್ಲಿ ಆಗಸ್ಟ್‌ ಇಂದು ಭರಚುಕ್ಕಿ ಜಲಪಾತೋತ್ಸವ, ಸಂಗೀತ ಸಂಜೆ ಸಡಗರ

Bharachukki Falls: ತುಂಬಿ ಹರಿಯುತ್ತಿರುವ ಕಾವೇರಿ, ಚಾಮರಾಜನಗರ ಜಿಲ್ಲೆಯಲ್ಲಿ ಆಗಸ್ಟ್‌ ಇಂದು ಭರಚುಕ್ಕಿ ಜಲಪಾತೋತ್ಸವ, ಸಂಗೀತ ಸಂಜೆ ಸಡಗರ

Chamarajanagar Tourism ಚಾಮರಾಜನಗರ ಜಿಲ್ಲೆಯ ಭರಚುಕ್ಕಿಯ ವೈಭವ ತುಂಬಿಕೊಳ್ಳಲು ಆಗಸ್ಟ್‌ 10ರಂದು ನಡೆಯುವ ಭರಚುಕ್ಕಿ ಜಲಪಾತೋತ್ಸವಕ್ಕೆ ಬನ್ನಿ..

ಭರಚುಕ್ಕಿ ಜಲಪಾಲತೋತ್ಸವಕ್ಕೆ ಭರದಿಂದ ಸಿದ್ದತೆಗಳು ನಡೆದಿವೆ.
ಭರಚುಕ್ಕಿ ಜಲಪಾಲತೋತ್ಸವಕ್ಕೆ ಭರದಿಂದ ಸಿದ್ದತೆಗಳು ನಡೆದಿವೆ.

ಚಾಮರಾಜನಗರ: ಕರ್ನಾಟಕದಲ್ಲಿ ಭಾರೀ ಮಳೆಯಿಂದ( Karnataka Rains) ಜಲಾಶಯಗಳು( Karnataka Reservoirs) ಭರ್ತಿಯಾಗಿ ಜಲಪಾತಗಳೂ( Falls of Karnataka) ಮೈದುಂಬಿ ಧುಮ್ಮಿಕ್ಕುತ್ತಿವೆ. ಇದರಲ್ಲಿ ಮಂಡ್ಯ- ಮೈಸೂರು- ಚಾಮರಾಜನಗರ ಗಡಿ ಭಾಗದಲ್ಲಿರುವ ಗಗನ ಚುಕ್ಕಿ ಹಾಗೂ ಭರಚುಕ್ಕಿಗಳೂ( Bharachukki Falls) ಜಲಪಾತಗಳೂ ಸೇರಿವೆ. ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಭರಚುಕ್ಕಿ ಜಲಪಾರದಲ್ಲಿ ಜಲವೈಭವ ಆಕರ್ಷಿಸುತ್ತಿದೆ. ಪ್ರವಾಸಿಗರನ್ನು ಆಕರ್ಷಿಸುವ ನಿಟ್ಟಿನಲ್ಲಿ ಚಾಮರಾಜನಗರ ಜಿಲ್ಲಾಡಳಿತವು( ChamarajaNagar) ಹತ್ತು ವರ್ಷಗಳ ನಂತರ ಭರಚುಕ್ಕಿ ಜಲಪಾತೋತ್ಸವನ್ನು ಹಮ್ಮಿಕೊಂಡಿದೆ. ಆಗಸ್ಟ್‌ 10ರ ಶನಿವಾರ ಸಂಜೆ ಭರಚುಕ್ಕಿಯಲ್ಲಿ ಪ್ರವಾಸಿಗರ ಆಕರ್ಷಣೆಯ ಕಾರ್ಯಕ್ರಮಗಳು ನಿಗದಿಯಾಗಿದೆ. ಮೈಸೂರು, ಮಂಡ್ಯ, ಚಾಮರಾಜನಗರ, ಬೆಂಗಳೂರು ಭಾಗ ಮಾತ್ರವಲ್ಲದೇ ತಮಿಳುನಾಡು ಹಾಗೂ ಕೇರಳದಿಂದಲೂ ಪ್ರವಾಸಿಗರು ಭರಚುಕ್ಕಿ ಉತ್ಸವಕ್ಕೆ ಆಗಮಿಸಲಿದ್ದಾರೆ.

ಕಾವೇರಿ ತೀರದ ಪ್ರವಾಸೋದ್ಯಮ ಮಾನ್‌ ಸೂನ್‌ ನಲ್ಲಿ ಜಲಮುಖಿಯಾಗಿದರಲಿದೆ. ಕಾವೇರಿ ನದಿ ತೀರದ ಹಲವಾರು ತಾಣಗಳು ಹೆಚ್ಚು ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲಿವೆ. ಕೊಡಗು, ಮೈಸೂರು, ಮಂಡ್ಯ, ರಾಮನಗರ ಹಾಗೂ ಚಾಮರಾಜನಗರ ಜಿಲ್ಲೆಯಲ್ಲಿ ಹರಿಯುವ ಕಾವೇರಿಯು ಹಲವು ರೂಪದಲ್ಲಿ ಪ್ರವಾಸಿಗರನ್ನು ಆಕರ್ಷಿಸುತ್ತದೆ. ಇದರಲ್ಲಿ ಜಲಪಾತವೂ ಕೂಡ. ಕಾವೇರಿಯು ಮಂಡ್ಯ ಜಿಲ್ಲೆಯಲ್ಲಿ ಗಗನಚುಕ್ಕಿಯಾಗಿ, ಚಾಮರಾಜನಗರ ಜಿಲ್ಲೆಯಲ್ಲಿ ಭರಚುಕ್ಕಿಯಾಗಿ ಆನಂತರ ತಮಿಳುನಾಡು ಗಡಿ ಭಾಗದಲ್ಲಿ ಹೊಗೆನೆಕಲ್‌ ಜಲಪಾತವನ್ನು ಸೃಷ್ಟಿಸಿದೆ. ಇವುಗಳ ವೀಕ್ಷಣೆಗೆ ಪ್ರವಾಸಿಗರು ನಾನಾ ಭಾಗಗಳಿಂದ ಆಗಮಿಸುತ್ತಾರೆ. ಮಂಡ್ಯ ಜಿಲ್ಲಾಡಳಿತವು ಗಗನಚುಕ್ಕಿ ಜಲಪಾತೋತ್ಸವನ್ನು ಆಯೋಜಿಸಿದರೆ ಚಾಮರಾಜನಗರ ಜಿಲ್ಲಾಡಳಿತ ಭರಚುಕ್ಕಿ ಜಲಪಾತೋತ್ಸವ ಆಚರಿಸುತ್ತಾ ಬಂದಿವೆ. ಚಾಮರಾಜನಗರ ಜಿಲ್ಲಾಡಳಿತವು 2007ರಲ್ಲಿಭರಚುಕ್ಕಿ ಜಲಪಾತೋತ್ಸವವನ್ನು ಆರಂಭಿಸಿತ್ತು. ಆಗ ಉಸ್ತುವಾರಿ ಸಚಿವರಾಗಿದ್ದ ಎಚ್‌.ಎಸ್‌.ಮಹಾದೇವಪ್ರಸಾದ್‌ ಹಾಗೂ ಆಹಾರ ಇಲಾಖೆ ಅಧಿಕಾರಿಯಾಗಿದ್ದ ಕಾ.ರಾಮೇಶ್ವರಪ್ಪ ಅವರ ಆಸಕ್ತಿಯಿಂದ ವಿಶೇಷವಾಗಿ ಮೂಡಿ ಬಂದು ಸಹಸ್ರಾರು ಪ್ರವಾಸಿಗರನ್ನು ಆಕರ್ಷಿಸಿತ್ತು.

ಇದಾದ ನಂತರ 2011 ಹಾಗೂ 2014ರಲ್ಲಿ ಎರಡು ದಿನಗಳ ಜಲಪಾತೋತ್ಸವವನ್ನು ಆಯೋಜಿಸಲಾಗಿತ್ತು. ದಶಕದ ನಂತರ ಈಗ ಒಂದು ದಿನದ ಜಲಪಾತೋತ್ಸವ ವಾರಾಂತ್ಯದ ಶನಿವಾರ ಆಯೋಜಿಸಲಾಗುತ್ತಿದೆ. ಚಾಮರಾಜನಗರ ಜಿಲ್ಲಾಧಿಕಾರಿಯಾಗಿರುವ ಶಿಲ್ಪಾ ನಾಗ್‌ ಅವರ ವಿಶೇಷ ಆಸಕ್ತಿಯ ಫಲವಾಗಿ ಈ ಉತ್ಸವ ಆಯೋಜನೆಗೊಂಡಿದೆ.

ಇದಕ್ಕಾಗಿ ಈಗಾಗಲೇ ಸಿದ್ದತೆಗಳನ್ನು ಆರಂಭಿಸಲಾಗಿದೆ. ಖುದ್ದು ಡಿಸಿ ಶಿಲ್ಪಾನಾಗ್‌ ಅವರೇ ಭರಚುಕ್ಕಿಗೆ ಭೇಟಿ ನೀಡಿ ಸಿದ್ದತೆ ಪರಿಶೀಲಿಸಿದ್ದಾರೆ. ಪ್ರವಾಸಿಗರಿಗೆ ಅನುಕೂಲವಾಗುವಂತೆ ಶಾಮೀಯಾನ ಸಹಿತ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಒಂದೇ ಕಡೆ ವಾಹನ ನಿಲ್ಲಿಸಿ ಬರಲು ಪಾರ್ಕಿಂಗ್‌ ವ್ಯವಸ್ಥೆ ಮಾಡಲಾಗಿದೆ. ಜಲಪಾತದ ಬಳಿ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ ನಂತರ ಕಾರ್ಯಕ್ರಮ ಆಕರ್ಷಕವಾಗಿರಲಿವೆ. ಆನಂತರ ಬೆಳಕಿನಲ್ಲಿ ಭರಚುಕ್ಕಿ ಜಲಪಾತದ ವೈಭವವನ್ನು ನೋಡಲು ಅವಕಾಶವಿದೆ. ಜಲಪಾತ ನೋಡುತ್ತಾ ಬಾಯಿ ರುಚಿ ತಣಿಸಿಕೊಳ್ಳಲು ಅಲ್ಲಲ್ಲಿ ತಿಂಡಿ, ಉಪಹಾರದ ವ್ಯವಸ್ಥೆಗಳೂ ಬರಲಿವೆ. ಒಂದು ದಿನದ ಪ್ರವಾಸಕ್ಕೆ ಇದು ಹೇಳಿ ಮಾಡಿಸಿದ ಚಟುವಟಿಕೆಯಾಗಲಿದೆ.

ಬೆಂಗಳೂರಿನಿಂದ ಬರುವವರಿಗೆ ಕನಕಪುರ, ಮಳವಳ್ಳಿ ಮಾರ್ಗವಾಗಿ ಬರಬಹುದು. ಕೊಳ್ಳೇಗಾಲಕ್ಕೆ ಬರುವ ಮುನ್ನವೇ ಭರಚುಕ್ಕಿ ಸಿಗಲಿದೆ.ಮಂಡ್ಯದಿಂದ ಬರುವವರು ಮಳವಳ್ಳಿಗೆ ಬಂದು ಕೊಳ್ಳೇಗಾಲ ಮಾರ್ಗದಲ್ಲೇ ಬರಬಹುದು. ಮೈಸೂರಿನಿಂದ ಆಗಮಿಸುವವರಿಗೆ ಎರಡು ಮಾರ್ಗ ಇದೆ. ಒಂದು ಮಳವಳ್ಳಿ ಮಾರ್ಗವಾಗಿ ಬರಬಹುದು. ಇಲ್ಲವೇ ತಿ.ನರಸೀಪುರ, ಮೂಗೂರು, ಕೊಳ್ಳೇಗಾಲ ಮಾರ್ಗವಾಗಿ ಬಂದು ಭರಚುಕ್ಕಿ ಕಡೆಗೆ ಬರಬಹುದು. ಚಾಮರಾಜನಗರ ಕಡೆಯಿಂದ ಬರುವವರಿಗೆ ಸಂತೇಮರಳ್ಳಿ , ಕೊಳ್ಳೇಗಾಲ ಮಾರ್ಗವಾಗಿ ತಲುಪಬಹುದು.

ಭರಚುಕ್ಕಿ ಜಲಪಾತೋತ್ಸವಕ್ಕೆ ಬರುವವರು ಗಗನಚುಕ್ಕಿ ಜಲಪಾತ, ಶಿವನಸಮುದ್ರ ನೋಡಬಹುದು. ತಲಕಾಡಿಗೂ ಹೋಗಿಬರಬಹುದು. ರಸ್ತೆಗಳೂ ಉತ್ತಮವಾಗಿವೆ. ಸಾರ್ವ ಜನಿಕ ಬಸ್‌ ವ್ಯವಸ್ಥೆಯೂ ಚೆನ್ನಾಗಿದೆ. ಬೆಂಗಳೂರು- ಕೊಳ್ಳೇಗಾಲ, ಮೈಸೂರು- ಕೊಳ್ಳೇಗಾಲ, ಚಾಮರಾನಗರ-ಕೊಳ್ಳೆಗಾಲ ಮಾರ್ಗದಲ್ಲಿ ಬಸ್‌ ವ್ಯವಸ್ಥೆಯೂ ಉಂಟು.