ಕನ್ನಡ ಸುದ್ದಿ  /  ಕರ್ನಾಟಕ  /  Muttiah Muralitharan: ಚಾಮರಾಜನಗರ ಜಿಲ್ಲೆಯಲ್ಲಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ 1,400 ಕೋಟಿ ರೂ. ಉದ್ಯಮ, ಸಿಗಲಿದೆ ಹಲವರಿಗೆ ಉದ್ಯೋಗ

Muttiah Muralitharan: ಚಾಮರಾಜನಗರ ಜಿಲ್ಲೆಯಲ್ಲಿ ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ 1,400 ಕೋಟಿ ರೂ. ಉದ್ಯಮ, ಸಿಗಲಿದೆ ಹಲವರಿಗೆ ಉದ್ಯೋಗ

Chamarajanagar News ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌(Muttiah Muralitharan) ಅವರು ತಮ್ಮ ಉದ್ಯಮವನ್ನು ಕರ್ನಾಟದಲ್ಲಿ ವಿಸ್ತರಿಸಲು ಮುಂದಾಗಿದ್ದಾರೆ.

ಬೆಂಗಳೂರಿನಲ್ಲಿ ಸಚಿವ ಎಂ.ಬಿ.ಪಾಟೀಲ್‌ ಅವರನ್ನು ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ ಭೇಟಿಯಾದರು.
ಬೆಂಗಳೂರಿನಲ್ಲಿ ಸಚಿವ ಎಂ.ಬಿ.ಪಾಟೀಲ್‌ ಅವರನ್ನು ಕ್ರಿಕೆಟಿಗ ಮುತ್ತಯ್ಯ ಮುರಳೀಧರನ್‌ ಭೇಟಿಯಾದರು.

ಬೆಂಗಳೂರು: ಶ್ರೀಲಂಕಾ ಕ್ರಿಕೆಟಿಗ ಮುತ್ತಯ್ಯ ಮುರಳೀಧರ್‌ ಯಾರಿಗೆ ಗೊತ್ತಿಲ್ಲ. ಗೂಗ್ಲಿ ಬೌಲಿಂಗ್‌ ಹಾಗೂ ವಿಭಿನ್ನ ಹಾವಭಾವದ ಮೂಲಕ ಗಮನ ಸೆಳೆದಿದ್ದ ಅಂತರಾಷ್ಟ್ರೀಯ ಕ್ರಿಕೆಟಿಗ ಈಗ ಉದ್ಯಮಿ. ಆಹಾರೋದ್ಯಮಕ್ಕೆ ಸಂಬಂಧಿಸಿ ಅವರು ಉದ್ಯಮವನ್ನು ನಡೆಸುತ್ತಿದ್ದು,. ಕರ್ನಾಟಕದಲ್ಲಿ ಉದ್ಯಮ ವಿಸ್ತರಿಸುತ್ತಿದ್ದಾರೆ. ಇದಕ್ಕಾಗಿ ಕರ್ನಾಟಕದ ಗಡಿ ಜಿಲ್ಲೆ ಚಾಮರಾಜನಗರವನ್ನು ಅವರು ಆಯ್ಕೆ ಮಾಡಿಕೊಂಡಿದ್ದಾರೆ. ಚಾಮರಾಜನಗರದಿಂದ ಸ್ವಲ್ಪವೇ ದೂರದಲ್ಲಿರುವ ಬದನಗುಪ್ಪೆಯಲ್ಲಿ ಶ್ರೀಲಂಕಾದ ಖ್ಯಾತ ಕ್ರಿಕೆಟ್ ಆಟಗಾರ ಮುತ್ತಯ್ಯ ಮುರಳೀಧರನ್ ತಂಪು ಪಾನೀಯ ಮತ್ತು ಸಿಹಿತಿಂಡಿಗಳ ಉದ್ಯಮ ಆರಂಭಿಸುತ್ತಿದ್ದು, ಹಂತಹಂತವಾಗಿ ಒಟ್ಟು 1,400 ಕೋಟಿ ರೂ. ಹೂಡಿಕೆ ಮಾಡಲಿದ್ದಾರೆ.

ಮಂಗಳವಾರ ಕರ್ನಾಟಕದ ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರನ್ನು ಬೆಂಗಳೂರಿನಲ್ಲಿ ಮುತ್ತಯ್ಯ ಭೇಟಿಯಾದರು. ಮುತ್ತಯ್ಯ ಅವರೊಂದಿಗೆ ಸಚಿವರು ಈ ಸಂಬಂಧ ಮಾತುಕತೆ ನಡೆಸಿದರು.

ಟ್ರೆಂಡಿಂಗ್​ ಸುದ್ದಿ

ಬಳಿಕ ಮಾತನಾಡಿದ ಸಚಿವರು, ಬದನಗುಪ್ಪೆಯಲ್ಲಿ ಮುರಳೀಧರನ್ ಅವರು 'ಮುತ್ತಯ್ಯ ಬ್ರಿವರೇಜಸ್ ಮತ್ತು ಕನ್ಫೆಕ್ಷನರೀಸ್' ಎನ್ನುವ ಬ್ರ್ಯಾಂಡ್ ನಲ್ಲಿ ತಮ್ಮ ಉದ್ದಿಮೆ ಆರಂಭಿಸುತ್ತಿದ್ದು, ಶುರುವಿನಲ್ಲಿ 230 ಕೋಟಿ ರೂಪಾಯಿ ಹೂಡಿಕೆಗೆ ಯೋಜನೆ ರೂಪಿಸಲಾಗಿತ್ತು. ನಂತರ ಅದು ಈಗ ಸಾವಿರ ಕೋಟಿ ಮುಟ್ಟುತ್ತಿದೆ. ಮುಂದಿನ ದಿನಗಳಲ್ಲಿ 1,400 ಕೋಟಿ ಆಗಲಿದೆ ಎಂದು ಮುತ್ತಯ್ಯ ತಮಗೆ ತಿಳಿಸಿದ್ದಾರೆ ಎಂದು ಅವರು ವಿವರಿಸಿದರು.

ಇದಕ್ಕಾಗಿ ಅವರಿಗೆ ಈಗಾಗಲೇ 46 ಎಕರೆ ಭೂಮಿ ಕೊಡಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಕೆಲ ಸಣ್ಣಪುಟ್ಟ ತೊಡಕುಗಳಿದ್ದವು. ಅವುಗಳನ್ನು ಕೂಡಲೇ ಸರಿಪಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಬದನಗುಪ್ಪೆಯಲ್ಲಿ ಮುಂಬರುವ ಜನವರಿಯಲ್ಲಿ ಉತ್ಪಾದನಾ ಚಟುವಟಿಕೆ ಆರಂಭವಾಗಲಿದೆ ಎಂದು ಅವರು ನುಡಿದರು.

ಕೈಗಾರಿಕಾ ಇಲಾಖೆ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್, ಆಯುಕ್ತರಾದ ಗುಂಜನ್ ಕೃಷ್ಣ, ಕೆಐಎಡಿ ಸಿಇಒ ಡಾ.ಮಹೇಶ, ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ದೊಡ್ಡ ಬಸವರಾಜು ಸಚಿವರೊಂದಿಗೆ ಇದ್ದರು.

ಸೆಮಿಕಂಡಕ್ಟರ್ ಉದ್ಯಮ ಸ್ಥಾಪನೆ ಸಂಬಂಧ ಸದ್ಯದಲ್ಲೇ ಎಚ್ ಡಿಕೆ ಭೇಟಿ

ರಾಜ್ಯದವರೇ ಆದ ಎಚ್ ಡಿ ಕುಮಾರಸ್ವಾಮಿ ಅವರು ಈಗ ಕೇಂದ್ರ ಸರ್ಕಾರದಲ್ಲಿ ಭಾರೀ ಕೈಗಾರಿಕಾ ಸಚಿವರಾಗಿದ್ದಾರೆ. ರಾಜ್ಯದಲ್ಲಿ ಸೆಮಿಕಂಡಕ್ಟರ್ ಉದ್ಯಮಕ್ಕೆ ಹೂಡಿಕೆ ಆಕರ್ಷಣೆ ಮತ್ತು ಮುಂದಿನ ಬೆಳವಣಿಗೆ ಕುರಿತು ಚರ್ಚಿಸಲು ಸದ್ಯದಲ್ಲೇ ಅವರನ್ನು ಭೇಟಿ ಮಾಡಲಾಗುವುದು ಎಂದು ಭಾರೀ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ‌ ಬಿ ಪಾಟೀಲ ಮಂಗಳವಾರ ತಿಳಿಸಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪ್ರಧಾನಿ ನರೇಂದ್ರ ಮೋದಿ ಅವರ ತವರು ರಾಜ್ಯವಾದ ಗುಜರಾತಿನಲ್ಲಿ ನೆಲೆಯೂರಲಿರುವ ಅಮೆರಿಕದ ಮೈಕ್ರಾನ್ ಸೆಮಿಕಂಡಕ್ಟರ್ ಕಂಪನಿಗೆ ಕೇಂದ್ರ ಸರಕಾರ ಶೇ 50 ಮತ್ತು ಅಲ್ಲಿನ ರಾಜ್ಯ ಸರಕಾರ ಶೇ 20ರಷ್ಟು ಪ್ರೋತ್ಸಾಹಧನ ನೀಡುತ್ತಿವೆ. ನಮಗೂ ಇದೇ ಮಾದರಿಯ ಉತ್ತೇಜನ ಬೇಕಾಗಿದೆ. ಈ ಸಂಬಂಧ ಕುಮಾರಸ್ವಾಮಿ ಅವರನ್ನು ಭೇಟ ಮಾಡಿ ಬಂಡವಾಳ ಆಕರ್ಷಣೆ ಕುರಿತು ಚರ್ಚಿಸಲಾಗುವುದು ಎಂದು ಅವರು ಹೇಳಿದ್ದಾರೆ.

ಸೆಮಿಕಂಡಕ್ಟರ್ ಕ್ಷೇತ್ರವು ಆಧುನಿಕ ಜಗತ್ತಿನಲ್ಲಿ ಪ್ರಮುಖ ಉದ್ಯಮವಾಗಿದೆ. ಕೇಂದ್ರ ಸರಕಾರವು ಎಲ್ಲ ರಾಜ್ಯಗಳಿಗೂ ಸಮಾನ ಅವಕಾಶ ಮತ್ತು ಪ್ರೋತ್ಸಾಹ ನೀಡಬೇಕಾದ್ದು ಅಪೇಕ್ಷಣೀಯ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.