Chamarajanagar News: ಪತ್ನಿಯಿಂದ ಕರಿ ಮಣಿ ಮಾಲೀಕ ನೀನಲ್ಲ ರೀಲ್ಸ್‌, ಚಾಮರಾಜನಗರ ಜಿಲ್ಲೆಯಲ್ಲಿ ವ್ಯಕ್ತಿ ಆತ್ಮಹತ್ಯೆ
ಕನ್ನಡ ಸುದ್ದಿ  /  ಕರ್ನಾಟಕ  /  Chamarajanagar News: ಪತ್ನಿಯಿಂದ ಕರಿ ಮಣಿ ಮಾಲೀಕ ನೀನಲ್ಲ ರೀಲ್ಸ್‌, ಚಾಮರಾಜನಗರ ಜಿಲ್ಲೆಯಲ್ಲಿ ವ್ಯಕ್ತಿ ಆತ್ಮಹತ್ಯೆ

Chamarajanagar News: ಪತ್ನಿಯಿಂದ ಕರಿ ಮಣಿ ಮಾಲೀಕ ನೀನಲ್ಲ ರೀಲ್ಸ್‌, ಚಾಮರಾಜನಗರ ಜಿಲ್ಲೆಯಲ್ಲಿ ವ್ಯಕ್ತಿ ಆತ್ಮಹತ್ಯೆ

Reels ಎಷ್ಟೇ ಬುದ್ದಿವಾದ ಹೇಳಿದರೂ ರೀಲ್ಸ್‌ ಹುಚ್ಚು ಮುಂದುವರಿಸಿ ಕರಿಮಣಿ ಮಾಲೀಕ ನೀನಲ್ಲ ರೀಲ್ಸ್‌ ಅನ್ನು ಸೋದರ ಮಾವನ ಜತೆಗೆ ಹಾಕಿದ್ದ ಪತ್ನಿಯ ವರ್ತನೆಯಿಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚಾಮರಾಜನಗರ ಜಿಲ್ಲೆಯಲ್ಲಿ ನಡೆದಿದೆ.

ಪತ್ನಿ ರೀಲ್ಸ್‌ ಹುಚ್ಚಿಗೆ ಬಲಿಯಾದ ಯುವಕ ಕುಮಾರ್‌.
ಪತ್ನಿ ರೀಲ್ಸ್‌ ಹುಚ್ಚಿಗೆ ಬಲಿಯಾದ ಯುವಕ ಕುಮಾರ್‌.

ಚಾಮರಾಜನಗರ: ಪತ್ನಿ ರೀಲ್ಸ್‌ ಬಗ್ಗೆ ಬುದ್ದಿವಾದರೂ ಹೇಳಿದರೂ ಮಾತು ಕೇಳದೇ ಕರಿ ಮಣಿ ಮಾಲೀಕ ನೀನಲ್ಲ ರೀಲ್ಸ್‌ ಮಾಡಿದ್ದರಿಂದ ಬೇಸತ್ತು ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ನಡೆದಿರುವುದು ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಪಿಜಿ ಪಾಳ್ಯದಲ್ಲಿ. ಗುರುವಾರ ಮಧ್ಯಾಹ್ನ ಪಿಜಿ ಪಾಳ್ಯ ಗ್ರಾಮ ಕುಮಾರ್ (33) ನೇಣಿಗೆ ಶರಣಾದ ವ್ಯಕ್ತಿ. ಈ ಕುರಿತು ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಘಟನೆ ಕುರಿತು ತನಿಖೆಯನ್ನು ಕೈಗೊಂಡಿದ್ಧಾರೆ.

ಗ್ರಾಮದ ರೂಪಾ ಜತೆ ಕುಮಾರ್‌ ವಿವಾಹ ಕೆಲ ವರ್ಷದ ಹಿಂದೆ ನಡೆದಿತ್ತು. ಸ್ಥಳೀಯವಾಗಿ ಕೆಲಸ ಮಾಡಿಕೊಂಡಿದ್ದ ಕುಮಾರ್‌ಗೆ ಪತ್ನಿ ಯಾವಾಗಲೂ ಮೊಬೈಲ್‌ನಲ್ಲಿಯೇ ಮಗ್ನವಾಗಿರುವುದು ಇಷ್ಟವಾಗುತ್ತಿರಲಿಲ್ಲ. ಈ ಬಗ್ಗೆ ಇಬ್ಬರ ನಡುವೆ ಆಗಾಗ್ಗೆ ಜಗಳ ನಡೆಯುತ್ತಲೇ ಇತ್ತು.ಮನೆಯವರು ಬುದ್ದಿವಾದ ಹೇಳಿದರೂ ರೂಪ ಮೊಬೈಲ್‌ ಗೀಳು ಬಿಟ್ಟಿರಲಿಲ್ಲ.

ಇತ್ತೀಚಿನ ದಿನಗಳಲ್ಲಿ ರೂಪಾ ರೀಲ್ಸ್‌ ಹುಚ್ಚಿಗೆ ಸಿಲುಕಿದ್ದು ಇಬ್ಬರ ನಡುವೆ ಜಗಳ ಹೆಚ್ಚಲು ಕಾರಣವಾಗಿತ್ತು.

ಕೆಲ ದಿನಗಳ ಹಿಂದೆ ಇತ್ತೀಚಿಗೆ ಜನಪ್ರಿಯವಾಗಿರುವ ಕರಿಮಣಿ ಮಾಲೀಕ ನೀನಲ್ಲ ಎನ್ನುವ ರೀಲ್ಸ್‌ ಅನ್ನು ರೂಪಾ ಮಾಡಿದ್ದಳು. ಅದರಲ್ಲಿ ತನ್ನ ಸಹೋದರಿ ಹಾಗೂ ಸೋದರ ಮಾವ ಗೋವಿಂದ ಜತೆಯಲ್ಲಿ ಕರಿಮಣಿ ಹಾಡಿನಲ್ಲಿ ಕಾಣಿಸಿಕೊಂಡಿದ್ದಳು. ಇದನ್ನು ಸಾಮಾಜಿಕ ಮಾಧ್ಯಮಗಳಿಗೂ ಅಪ್‌ಲೋಡ್‌ ಮಾಡಿದ್ದಳು. ಈ ಹಾಡು ಗಮನಿಸಿದ್ದ ಸ್ನೇಹಿತರು ಕುಮಾರ್‌ಗೆ ಇದನ್ನು ತಿಳಿಸಿದ್ದರು.

ಈ ವಿಚಾರದಲ್ಲಿಯೇ ಭಾರೀ ಗಲಾಟೆಯೇ ಆಗಿತ್ತು. ರೀಲ್ಸ್‌ ತೆಗೆದು ಹಾಕುವಂತೆ ಕುಮಾರ್‌ ಒತ್ತಾಯಿಸಿದ್ದ. ಆಕೆ ಒಪ್ಪಿರಲಿಲ್ಲ. ಗುರುವಾರ ಮಧ್ಯಾಹ್ನವೂ ಇದೇ ವಿಚಾರದಲ್ಲಿ ಜಗಳ ನಡೆದು ಪತ್ನಿ ನಡೆಯಿಂದ ಬೇಸತ್ತು ಕುಮಾರ್‌ ಊರಿನ ಹೊರ ವಲಯದ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಘಟನೆ ಹಿನ್ನೆಲೆಯಲ್ಲಿ ರೂಪಾ, ಆಕೆಯ ಸಹೋದರಿ ಯಶೋಧಾ ಹಾಗೂ ಸೋದರ ಮಾವ ಗೋವಿಂದ ವಿರುದ್ದ ಪ್ರಕರಣ ದಾಖಲಾಗಿದೆ. ಕುಮಾರ್‌ ಸಹೋದರ ಮಹದೇವಸ್ವಾಮಿ ದೂರು ನೀಡಿದ್ದು, ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಮನವಿ ಮಾಡಿದ್ಧಾರೆ.

ಕುಮಾರ್‌ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಕುರಿತು ಕುಮಾರ್‌ ಸಹೋದರ ಮಹದೇವಸ್ವಾಮಿ ಆತನ ಪತ್ನಿ ರೂಪಾ ಇತರರ ವಿರುದ್ದ ದೂರು ನೀಡಿದ್ದು, ತನಿಖೆ ಕೈಗೊಂಡಿದ್ದೇವೆ ಎಂದು ಹನೂರು ಪೊಲೀಸರು ತಿಳಿಸಿದ್ದಾರೆ.

ಗಮನಿಸಿ: ಖಿನ್ನತೆ, ಆತ್ಮಹತ್ಯೆಯ ಆಲೋಚನೆಗಳು ಬಾಧಿಸುತ್ತಿದ್ದರೆ ನಿಮ್ಮ ಗೆಳತಿ / ಗೆಳೆಯರೊಂದಿಗೆ, ಹೆತ್ತವರೊಂದಿಗೆ, ಸಂಬಂಧಿಕರು, ಆಪ್ತರೊಂದಿಗೆ ಮುಕ್ತವಾಗಿ ಮಾತನಾಡಿ. ಪೊಲೀಸರ, ಆಪ್ತಸಮಾಲೋಚಕರ, ವೈದ್ಯರ ನೆರವು ಪಡೆಯಿರಿ. ಕರ್ನಾಟಕದಲ್ಲಿ ಆರೋಗ್ಯ ಸಹಾಯವಾಣಿ 104, ವೃದ್ಧರ ಸಹಾಯವಾಣಿ 1090, ಮಕ್ಕಳ ಸಹಾಯವಾಣಿ 1098 ಮತ್ತು ಸ-ಮುದ್ರ ಸಹಾಯವಾಣಿ 98803 96331 ಮೂಲಕ ಟೆಲಿ ಕೌನ್ಸೆಲಿಂಗ್ ನೆರವು ಪಡೆದುಕೊಳ್ಳಿ. ಕೊನೇ ನಿರ್ಧಾರಕ್ಕೆ ಮೊದಲು ನಿಮ್ಮವರ ಬಗ್ಗೆ ಒಂದು ಕ್ಷಣ ಯೋಚಿಸಿ.

Whats_app_banner