Chamarajanagar: ಮಾದಪ್ಪನ ದರ್ಶನಕ್ಕೆ ಹೋದವರ ಮೇಲೆ ಕಾಡಾನೆ ದಾಳಿ; ಓರ್ವ ಸಾವು
Elephant Attack: ಪುಣ್ಯಕ್ಷೇತ್ರ ನಾಗಮಲೆಗೆ ತೆರಳಿ ಮಲೆ ಮಾದಪ್ಪನ ದರ್ಶನ ಪಡೆಯಲು ತೆರಳುತ್ತಿದ್ದ ಬೆಂಗಳೂರು ಮೂಲದ ಗೋವಿಂದರಾಜು ಮತ್ತು ಈತನ ಸ್ನೇಹಿತ ಲೋಕೇಶ್ ಎಂಬುವವರ ಮೇಲೆ ಕಾಡಾನೆ ದಾಳಿ ನಡೆಸಿದ್ದು ಓರ್ವ ಮೃತಪಟ್ಟಿದ್ದು, ಮತ್ತೋರ್ವ ಬಚಾವಾಗಿರುವ ಘಟನೆ ನಡೆದಿದೆ.
ಚಾಮರಾಜನಗರ (ಹನೂರು): ಪುಣ್ಯಕ್ಷೇತ್ರ ನಾಗಮಲೆಗೆ ತೆರಳಿ ಮಲೆ ಮಾದಪ್ಪನ ದರ್ಶನ ಪಡೆಯಲು ತೆರಳುತ್ತಿದ್ದ ವ್ಯಕ್ತಿಗಳಿಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ್ದು, ಓರ್ವ ಮೃತಪಟ್ಟಿದ್ದು, ಮತ್ತೋರ್ವ ಬಚಾವಾಗಿರುವ ಘಟನೆ ಇಂಡಿಗನತ್ತ- ನಾಗಮಲೆ ಮಾರ್ಗ ಮಧ್ಯದಲ್ಲಿ ಜರುಗಿದೆ.
ಬೆಂಗಳೂರು ಮೂಲದ ಗೋವಿಂದರಾಜು(35) ಎಂಬಾತನೇ ಮೃತಪಟ್ಟ ದುರ್ದೈವಿಯಾಗಿದ್ದು, ಈತನ ಸ್ನೇಹಿತ ಲೋಕೇಶ್ ಆನೆ ದಾಳಿಯಿಂದ ಬಚಾವಾಗಿರುವ ವ್ಯಕ್ತಿಯಾಗಿದ್ದಾನೆ.
ಘಟನೆ
ಬೆಂಗಳೂರು ಮೂಲದ ಗೋವಿಂದರಾಜು ಮತ್ತು ಆತನ ಸ್ನೇಹಿತ ಲೋಕೇಶ್ ಶನಿವಾರ ಸಂಜೆ ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿ ಮಲೆ ಮಾದಪ್ಪನ ದರ್ಶನ ಪಡೆದು ಬಳಿಕ ನಾಗಮಲೆಗೆ ತೆರಳಲು ನಿರ್ಧರಿಸಿದ್ದಾರೆ. ಈ ವೇಳೆ ಇಂಡಿಗನತ್ತ ಸಮೀಪದ ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ನಿಂದ ಸ್ವಲ್ಪ ಮುಂದೆ ತೆರಳುತ್ತಿದ್ದಂತೆ ಕಾಡಾನೆಯೊಂದು ಏಕಾಏಕಿ ದಾಳಿ ನಡೆಸಿದೆ. ಕಾಡಾನೆ ದಾಳಿಯಿಂದ ಗೋವಿಂದರಾಜು ಸ್ಥಳದಲ್ಲಿಯೇ ಮೃತಪಟ್ಟರೆ ಆತನ ಸ್ನೇಹಿತ ಲೋಕೇಶ್ ಆನೆ ದಾಳಿಯಿಂದ ಬಚಾವಾಗಿ ಬಂದಿದ್ದಾನೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ಕೂಡಲೇ ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಮಲೆ ಮಹದೇಶ್ವರ ಬೆಟ್ಟ ಪೊಲೀಸರು ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ರಾತ್ರಿ ಸಂಚಾರ ನಿಷೇಧಿಸಲು ಆಗ್ರಹ
ಮಲೆ ಮಹದೇಶ್ವರ ಬೆಟ್ಟದಿಂದ ನಾಗಮಲೆ ಕ್ಷೇತ್ರಕ್ಕೆ ತೆರುಳುವ ಭಕ್ತಾದಿಗಳ ಮೇಲೆ ಆಗಿಂದಾಗ್ಗೆ ಕಾಡಾನೆ ದಾಳಿ ನಡೆಸುತ್ತಿರುವುದರಿಂದ ಅನಾಹುತಗಳು ಸಂಭವಿಸುತ್ತಿವೆ. ಈ ನಿಟ್ಟಿನಲ್ಲಿ ರಾತ್ರಿ ವೇಳೆ ಭಕ್ತಾದಿಗಳು ನಾಗಮಲೆ ಕ್ಷೇತ್ರಕ್ಕೆ ತೆರಳುವುದನ್ನು ನಿಷೇಧ ಪಡಿಸುವಂತೆ ಭಕ್ತಾದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಗಹಿಸಿದ್ದಾರೆ.