ಚಾಮರಾಜನಗರ ಜಿಲ್ಲೆ 31 ಹಾಡಿಗಳಿಗೆ ಬೆಳಕಿನ ಭಾಗ್ಯ, 2000 ಕುಟುಂಬಗಳ ಮನೆಗೆ ಸಿಗಲಿದೆ ವಿದ್ಯುತ್ ಸಂಪರ್ಕ
ಕರ್ನಾಟಕದ ಗಡಿ ಜಿಲ್ಲೆಯಾದ ಚಾಮರಾಜನಗರ ಈಗಲೂ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿದೆ. ಇಲ್ಲಿನ ಹಲವು ಹಾಡಿಗಳಿಗೆ ಈಗ ವಿದ್ಯುತ್ ಕಲ್ಪಿಸುವ ಕೆಲಸ ನಡೆದಿದೆ.

ಚಾಮರಾಜನಗರ: ಕರ್ನಾಟಕದಲ್ಲೇ ಅತಿ ಹೆಚ್ಚು ಅರಣ್ಯ, ವನ್ಯಜೀವಿ ಧಾಮಗಳನ್ನು ಹೊಂದಿರುವ ಚಾಮರಾಜನಗರ ಜಿಲ್ಲೆಯಲ್ಲಿ ಗಿರಿಜನರ ವಾಸವೂ ಅಧಿಕ. ಹೆಚ್ಚು ಹಾಡಿಗಳು ಚಾಮರಾಜನಗರ ಜಿಲ್ಲೆಯಲ್ಲಿವೆ. ಮಲೈಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ ಹಾಗೂ ಬಂಡೀಪುರ ಅರಣ್ಯದಂಚಿನಲ್ಲಿ ಹಲವು ಹಾಡಿಗಳಿವೆ. ಬಂಡೀಪುರ ಅರಣ್ಯ ವ್ಯಾಪ್ತಿಯಲ್ಲಿ ಗಿರಿಜನರಿಗೆ ಪುನರ್‌ವಸತಿ ಕಲ್ಪಿಸಿದ್ದರೆ, ಇನ್ನೂ ಕೆಲವು ಕಡೆ ಕಾಡಿನ ಭಾಗದ ಹಾಡಿಗಳಲ್ಲೇ ಜನ ವಾಸಿಸುತ್ತಿದ್ಧಾರೆ. ಹಲವು ಹಾಡಿಗಳಿಗೆ ಈಗಲೂ ವಿದ್ಯುತ್ ಸಂಪರ್ಕವೂ ಇಲ್ಲ. ಹಾಡಿ ಜನರಿಗೆ ಸೋಲಾರ್ ವಿದ್ಯುತ್ ಸೌಲಭ್ಯ ನೀಡಿದ್ದರೂ ಕಾಯಂ ವಿದ್ಯುತ್ ಸಂಪರ್ಕ ಕೊಡುವ ಪ್ರಯತ್ನ ನಡೆದೇ ಇದೆ. ಸ್ಥಳೀಯರ ಬೇಡಿಕೆಗ ಸ್ಪಂದಿಸಿರುವ ಕರ್ನಾಟಕ ಸರ್ಕಾರ ಈಗ ಹಾಡಿಗಳಿಗೆ ವಿದ್ಯುತ್ ಕಲ್ಪಿಸುತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಅರಣ್ಯದಂಚಿನಲ್ಲಿರುವ ಎಲ್ಲಾ 125 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅರಣ್ಯದೊಳಗಿರುವ 33 ಹಾಡಿಗಳ ಪೈಕಿ 15 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಇನ್ನುಳಿದಿರುವ 18 ಹಾಡಿಗಳಿಗೆ ಇಂಧನ ಇಲಾಖೆಯಿಂದ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿಯಿರುವ ಪ್ರಸ್ತಾವನೆಗಳಿಗೆ ಶೀಘ್ರ ಅನುಮತಿ ನೀಡಿ ಶಾಶ್ವತ ವಿದ್ಯುತ್ ಸಂಪರ್ಕ ಕಲ್ಪಿಸಬೇಕು ಎನ್ನುವ ಸಿಎಂ ಸಿದ್ದರಾಮಯ್ಯ ಅವರ ಸೂಚನೆ ನಂತರ ಅನುದಾನ ನೀಡಲಾಗಿದೆ.
ಹಾಡಿಗಳಿಗೆ ವಿದ್ಯುತ್ ಕಲ್ಪಿಸುವ ಸಂಬಂಧ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ಕೂಡ ಸಭೆಗಳನ್ನು ನಡೆಸಿದೆ. ಸದ್ಯ 31 ಹಾಡಿಗಳ 2000 ಕುಟುಂಬಕ್ಕೆ ವಿದ್ಯುತ್ ಪೂರೈಸಲು ಸರ್ಕಾರ 42 ಕೋಟಿ ರೂ.ಗಳನ್ನು ಒದಗಿಸಿದೆ.
ಚಾಮರಾಜನಗರಜಿಲ್ಲೆಯ ಹಾಡಿಗಳಿಗೆ ವಿದ್ಯುತ್ ಪೂರೈಸಲು ಅಗತ್ಯವಿರುವ ಕೆಲಸವನ್ನು ಅಧಿಕಾರಿಗಳು ಕೂಡಲೇ ಆರಂಭಿಸಬೇಕು. ಆನಂತರದಲ್ಲಿ ಯಾವುದೇ ಅಡೆತಡೆಗಳು ಅಥವಾ ಸಮಸ್ಯೆ ಉಂಟಾದಲ್ಲಿ ಖುದ್ದಾಗಿ ನಾನೇ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರದ ಹಂತದಲ್ಲಿ ಮಾತುಕತೆ ನಡೆಸಿ ಅನುಮತಿ ಕೊಡಿಸುತ್ತೇನೆ ಎನ್ನುವುದು ಸೆಸ್ಕ್ ಅಧ್ಯಕ್ಷರೂ ಆಗಿರುವ ಶಾಸಕ ರಮೇಶ್ ಬಂಡಿಸಿದ್ದೇಗೌಡ ನೀಡಿರುವ ಸೂಚನೆ.
ಚಾಮರಾಜನಗರ ಜಿಲ್ಲೆಯ ವ್ಯಾಪ್ತಿಯಲ್ಲಿರುವ 31 ಹಾಡಿಗಳಲ್ಲಿ ಬಾಕಿ ಇರುವ ಕುಟುಂಬಗಳಿಗೆ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಸೆಸ್ಕ್ ವತಿಯಿಂದ ಉತ್ತಮ ಸಹಕಾರ ಸಿಕ್ಕಿದೆ. 31 ಹಾಡಿಗಳ 2000 ಕುಟುಂಬಕ್ಕೆ ವಿದ್ಯುತ್ ಪೂರೈಸಲು ಯಾವುದೇ ಸರ್ಕಾರ 42 ಕೋಟಿ ರೂ.ಗಳನ್ನು ಖರ್ಚು ಮಾಡುವುದು ತೀರಾ ವಿರಳ. ಆದರೆ ಮುಖ್ಯಮಂತ್ರಿಗಳು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಯಾವುದೇ ಅನುದಾನದ ಬಗ್ಗೆ ಯಾವುದೇ ವಿಳಂಬ ಮಾಡದೆ, ಮೂಲಭೂತ ಹಕ್ಕು ಎಂದು ಪರಿಗಣಿಸಿ ವಿದ್ಯುತ್ ಪೂರೈಸಲು ಒಪ್ಪಿಗೆ ನೀಡಿದರು. ಆದರೆ, ಹಾಡಿಗಳಿಗೆ ವಿದ್ಯುತ್ ಪೂರೈಕೆ ಮಾಡಲು ಜಿಲ್ಲೆಯ ಹೆಚ್ಚಿನ ಭೂ ಪ್ರದೇಶ ಅರಣ್ಯ ಇಲಾಖೆಗೆ ಸೇರಿರುವುದು ದೊಡ್ಡ ಸವಾಲಾಗಿದೆ. ಅದನ್ನು ಸರಿಪಡಿಸಲು ಅಗತ್ಯ ಕ್ರಮ ವಹಿಸಲಾಗುವುದು ಎನ್ನುತ್ತಾರೆ ಚಾಮರಾಜನಗರ ಜಿಲ್ಲಾಧಿಕಾರಿ ಶಿಲ್ಪಾ ನಾಗ್
ಚಾಮರಾಜನಗರ ಜಿಲ್ಲೆಯ ಶೇ.52ರಷ್ಟು ಭೂಪ್ರದೇಶ ಅರಣ್ಯ ಪ್ರದೇಶದಿಂದ ಕೂಡಿರುವ ಕಾರಣ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗುತ್ತಿದೆ. ಹೀಗಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅರಣ್ಯ ಇಲಾಖೆ ವತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕಿದೆ. ಆದರೂ ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಪಾಲಾರ್ ಹಾಡಿಗೆ ವಿದ್ಯುತ್ ಸಂಪರ್ಕ ನೀಡಿರುವುದು ನಮಗೆ ಸಿಕ್ಕಿರುವ ದೊಡ್ಡ ಯಶಸ್ಸು. ಈಗ ಉಳಿದ ಹಾಡಿಗಳಿಗೂ ವಿದ್ಯುತ್ ಪೂರೈಕೆ ಮಾಡುವ ನಿಟ್ಟಿನಲ್ಲಿ ಮುಂದಿನ ಕ್ರಮವನ್ನು ಕೈಗೊಳ್ಳಬೇಕಿದೆ. ಇದಕ್ಕಾಗಿ ಮುಂದಿನ ಮೂರು ತಿಂಗಳಲ್ಲಿ ಯೋಜನೆಯನ್ನು ಪೂರ್ಣಗೊಳಸಬೇಕಿದ್ದು, ಇದಕ್ಕಾಗಿ ಜಿಲ್ಲಾಡಳಿತದಿಂದ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಡಿಸಿ ಹೇಳುತ್ತಾರೆ.
ಇತರೆ ಜಿಲ್ಲೆಗಳಲ್ಲಿ ಹೇಗಿದೆ ಸ್ಥಿತಿ
ಮೈಸೂರು ಜಿಲ್ಲೆಯಲ್ಲಿ 215 ಹಾಡಿಗಳಿದ್ದು, 49,778 ಜನರು ವಾಸಿಸುತ್ತಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ 158 ಹಾಡಿಗಳಿದ್ದು, 27,763 ಜನರು ವಾಸಿಸುತ್ತಿದ್ದಾರೆ. ಕೊಡಗು ಜಿಲ್ಲೆಯಲ್ಲಿ 228 ಹಾಡಿಗಳಿದ್ದು, 26,909 ಮಂದಿ ವಾಸಿಸುತ್ತಿದ್ದಾರೆ
* ಮೈಸೂರು ಜಿಲ್ಲೆಯಲ್ಲಿ 194 ಹಾಡಿಗಳು ಅರಣ್ಯದಂಚಿನಲ್ಲಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಅರಣ್ಯದೊಳಗಿರುವ 21 ಹಾಡಿಗಳ ಪೈಕಿ ಮೂರು ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದ್ದು, 18 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ. 18 ಹಾಡಿಗಳಿಗೆ ಇಂಧನ ಇಲಾಖೆಯಿಂದ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ.
•ಕೊಡಗು ಜಿಲ್ಲೆಯಲ್ಲಿ ಅರಣ್ಯದಂಚಿನಲ್ಲಿರುವ 211 ಹಾಡಿಗಳ ಪೈಕಿ 154 ಹಾಡಿಗಳಿಗೆ ಹಾಗೂ ಅರಣ್ಯದೊಳಗಿರುವ 74 ಹಾಡಿಗಳ ಪೈಕಿ 57 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. 17 ಹಾಡಿಗಳಿಗೆ ವಿದ್ಯುತ್ ಸಂಪರ್ಕ ಇರುವುದಿಲ್ಲ. 5 ಹಾಡಿಗಳಿಗೆ ಸೋಲಾರ್ ದೀಪಗಳನ್ನು ಅಳವಡಿಸಲಾಗಿದೆ.
