Chamarajanagara News: ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಅಂಗವಾಗಿ 5 ದಿನಗಳ ಕಾಲ ನಡೆದ ಅದ್ದೂರಿ ರಥೋತ್ಸವಕ್ಕೆ ತೆರೆ
Chamarajanagara News: ಶಿವರಾತ್ರಿ ಅಂಗವಾಗಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಹಮ್ಮಿಕೊಳ್ಳಲಾದ 5 ದಿನಗಳ ರಥೋತ್ಸವಕ್ಕೆ ಅದ್ಧೂರಿ ತೆರೆ ಬಿದ್ದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಮಾದೇಶ್ವರನ ದರ್ಶನ ಪಡೆಯಲು ಬಂದಿದ್ದರು. ಅನೇಕ ಮಂದಿ ಹರಿಕೆ ತೀರಿಸುತ್ತಿದ್ದ ದೃಶ್ಯವೂ ಕಂಡುಬಂತು.
ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಮಹಾ ಶಿವರಾತ್ರಿ ಅಂಗವಾಗಿ 5 ದಿನಗಳ ಕಾಲ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವಕ್ಕೆ ಅದ್ದೂರಿ ತೆರೆ ಬಿದ್ದಿದೆ. ಐದು ದಿನಗಳ ಕಾಲ ನಡೆದ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತರು ಜಾತ್ರೆಗೆ ಆಗಮಿಸುವ ನಿರೀಕ್ಷೆ ಹಿನ್ನೆಲೆಯಲ್ಲಿ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದಿಂದ ಸಕಲ ಸಿದ್ದತೆ ಮಾಡಿಕೊಳ್ಳಲಾಗಿತ್ತು.
ಮಾದೇಶ್ವರನ ದರ್ಶನ ಮಾಡಲು ಪಾದಯಾತ್ರೆ ಮೂಲಕವೂ ಸಹಸ್ರಾರು ಭಕ್ತರು ಆಗಮಿಸಿದ್ದರು. ಚಾಮರಾಜನಗರ, ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ ಭಾಗದಿಂದ ಲಕ್ಷಾಂತರ ಭಕ್ತರು ಮಲೆ ಮಹದೇಶ್ವರ ಬೆಟ್ಟಕ್ಕೆ ಆಗಮಿಸಿದ್ದರು. ಭಕ್ತರಿಗೆ ಮೂಲಭೂತ ಸೌಕರ್ಯಗಳಿಗೆ ತೊಂದರೆ ಆಗದಂತೆ ಪ್ರಾಧಿಕಾರದಿಂದ ಸಕಲ ವ್ಯವಸ್ಥೆ ಮಾಡಲಾಗಿತ್ತು. ಜಾತ್ರಾ ಮಹೋತ್ಸವ ಸಮಯದಲ್ಲಿ ದ್ವಿಚಕ್ರ ವಾಹಗಳಿಗೆ ನಿರ್ಬಂಧ ವಿಧಿಸಲಾಗಿತ್ತು. ಎಲ್ಲೆಡೆ ಸೂಕ್ತ ಪೋಲಿಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. 400 ಕ್ಕೂ ಹೆಚ್ಚು ಪೋಲಿಸರು, 400 ಕ್ಕೂ ಹೆಚ್ಚು ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ಭದ್ರತೆಗೆ ನಿಯೋಜನೆ ಮಾಡಲಾಗಿತ್ತು.
ಅದ್ದೂರಿಯಾಗಿ ಜರುಗಿದ ಮಲೆ ಮಹದೇಶ್ವರಸ್ವಾಮಿಯ ಮಹಾ ರಥೋತ್ಸವ
ಮಾರ್ಚ್ 11ರಂದು ಬೆಳಗ್ಗೆ 9:40 ರಿಂದ 10:10 ರೊಳಗಿನ ಶುಭ ಮುಹೂರ್ತದಲ್ಲಿ ಬೆಟ್ಟದಲ್ಲಿ ರಥೋತ್ಸವ ನೆರವೇರಿತು. ಶ್ರೀ ಸಾಲೂರು ಬೃಹನ್ ಮಠದ ಅಧ್ಯಕ್ಷರಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಬೇಡಗಂಪಣ ಅರ್ಚಕರು ಹಾಗೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ರಥವನ್ನು ವಿವಿಧ ಬಗೆಯ ಪುಷ್ಪಗಳು, ತಳಿರು ತೋರಣಗಳಿಂದ ಅಲಂಕರಿಸಲಾಗಿತ್ತು. ಶ್ರೀಶಾಂತಮಲ್ಲಿಕಾರ್ಜುನ ಸ್ವಾಮೀಜಿಯವರ ನೇತೃತ್ವದಲ್ಲಿ ಬೇಡಗಂಪಣ ಅರ್ಚಕರು ಮಹದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ರಥಕ್ಕೆ ಸಂಪ್ರದಾಯಕ್ಕೆ ಅನುಸಾರವಾಗಿ ಪೂಜಾ ಕೈಂಕರ್ಯಗಳನ್ನು ನೆರವೇರಿಸಲಾಯಿತು.
ಬೇಡಗಂಪಣ ಸಮುದಾಯದ 108 ಮಹಿಳೆಯರು ಬೆಲ್ಲದ ಆರತಿ ಬೆಳಗಿದ ನಂತರ ಮಹಾರಥೋತ್ಸವಕ್ಕೆ ಚಾಲನೆ ನೀಡಲಾಯಿತು. ದೇಗುಲದ ಮುಖ್ಯ ದ್ವಾರದಿಂದ ಸತ್ತಿಗೆ, ಸೂರಿಪಾನಿ, ಛತ್ರಿ, ಚಾಮರ, ನಂದಿ ಧ್ವಜ ಹಾಗೂ ಮಂಗಳ ವಾದ್ಯಗಳೊಂದಿಗೆ ರಥವನ್ನು ಎಳೆಯಲಾಯಿತು. ಹುಲಿ ವಾಹನ, ಬಸವ ವಾಹನ ಹಾಗೂ ರುದ್ರಾಕ್ಷಿ ಮಂಟಪೋತ್ಸವವೂ ನಡೆಯಿತು. ವೀರಗಾಸೆ ಸೇರಿದಂತೆ ವಿವಿಧ ಜನಪದ ಕಲಾಪ್ರಕಾರಗಳು ಮೆರುಗು ತಂದವು.
5 ದಿನಗಳ ಕಾಲ ನಡೆದ ಉತ್ಸವ
ಉಘೇ ಮಾದಪ್ಪ, ಉಘೇ ಮಾದಪ್ಪ ಎಂದು ಜೈಕಾರ ಕೂಗಿ ಹರ್ಷೋದ್ಗಾರದೊಂದಿಗೆ ರಥೋತ್ಸವ ಅದ್ದೂರಿಯಾಗಿ ಜರುಗಿತು. ಕಿಕ್ಕಿರಿದು ಸೇರಿದ್ದ ಭಕ್ತರು ರಥಕ್ಕೆ ಹಣ್ಣು ಜವನ ದವಸ ಧಾನ್ಯಗಳನ್ನು ಎಸೆದು ಹರಕೆ ತೀರಿಸಿ ಪುನೀತರಾದರು. ದೇವಾಲಯದ ಸುತ್ತಲೂ ಒಂದು ಸುತ್ತು ಮೆರವಣಿಗೆ ಮೂಲಕ ರಥೋತ್ಸವ ಸಾಗಿತು.
ಈ ಬಾರಿ ಐದು ದಿನಗಳ ಕಾಲ ನಡೆದ ಮಲೆ ಮಹದೇಶ್ವರ ಜಾತ್ರಾ ಮಹೋತ್ಸವದಲ್ಲಿ ಲಕ್ಷಾಂತರ ಭಕ್ತಾಧಿಗಳು ಭಾಗಿಯಾದರು. ಮಲೆ ಮಹದೇಶ್ವರ ಬೆಟ್ಟದಲ್ಲಿ ಪ್ರತಿದಿನವೂ ರಥೋತ್ಸವ ನಡೆಯುತ್ತದೆ. ಭಕ್ತರು ಹರಕೆ ಸಲ್ಲಿಸಿದರ ಅನುಗುಣವಾಗಿ ಬೆಳ್ಳಿ ರಥೋತ್ಸವ, ಚಿನ್ನದ ರಥೋತ್ಸವ ನಡೆಯುತ್ತದೆ. ಹಬ್ಬ ಹಾಗೂ ಇನ್ನಿತರ ವಿಶೇಷ ಸಂದರ್ಭಗಳಲ್ಲಿ ಇಲ್ಲಿ ಇನ್ನೂ ಅದ್ದೂರಿಯಾಗಿ ರಥೋತ್ಸವ ನೆರವೇರುತ್ತದೆ.
ವರದಿ: ರಂಗಸ್ವಾಮಿ.ಪಿ, ಮೈಸೂರು