ಕನ್ನಡ ಸುದ್ದಿ  /  ಕರ್ನಾಟಕ  /  Chamarajnagar Result: ಚಾಮರಾಜನಗರ ಕ್ಷೇತ್ರದಲ್ಲಿ ಗೆದ್ದ ಕಾಂಗ್ರೆಸ್‌, ಸಚಿವ ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ ವಿಜಯಿ

Chamarajnagar Result: ಚಾಮರಾಜನಗರ ಕ್ಷೇತ್ರದಲ್ಲಿ ಗೆದ್ದ ಕಾಂಗ್ರೆಸ್‌, ಸಚಿವ ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ ವಿಜಯಿ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣಾ ಫಲಿತಾಂಶ 2024: ಕಾಂಗ್ರೆಸ್‌ ಹಾಗೂ ಬಿಜೆಪಿ ನಡುವೆ ತೀವ್ರ ಹಣಾಹಣಿಗೆ ವೇದಿಕೆಯಾಗಿದ್ದ ಚಾಮರಾಜನಗರ ಮೀಸಲು ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ ಗೆದ್ದಿದೆ. ಸಚಿವ ಮಹದೇವಪ್ಪ ಪುತ್ರ ಸುನೀಲ್‌ ಬೋಸ್‌ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ಅಭ್ಯರ್ಥಿಎಸ್‌.ಬಾಲರಾಜು ಸುಮಾರು 188706 ಮತಗಳ ಅಂತರದಿಂದ ಸೋಲು ಅನುಭವಿಸಿದ್ದಾರೆ.

ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸುನೀಲ್‌ ಬೋಸ್‌ ಗೆದ್ದಿದ್ದಾರೆ.
ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಸುನೀಲ್‌ ಬೋಸ್‌ ಗೆದ್ದಿದ್ದಾರೆ.

ಚಾಮರಾಜನಗರ: ಕರ್ನಾಟಕದೊಂದಿಗೆ ತಮಿಳುನಾಡು, ಕೇರಳ ಗಡಿ ಹಂಚಿಕೊಂಡಿರುವ ಮೀಸಲು ಕ್ಷೇತ್ರ ಚಾಮರಾಜನಗರದಲ್ಲಿ ಮತ್ತೆ ಕಾಂಗ್ರೆಸ್‌ ಗೆದ್ದಿದೆ. ಇಲ್ಲಿ ಅಪ್ಪ ಮಾಡಲಾಗದ್ದನ್ನು ಮಗ ಸಾಧಿಸಿ ತೋರಿಸಿದ್ದಾರೆ. ಸಚಿವ ಡಾ.ಎಚ್‌.ಸಿ.ಮಹಾದೇವಪ್ಪ ಮೂರೂವರೆ ದಶಕದ ಹಿಂದೆ ಇದೇ ಕ್ಷೇತ್ರದಿಂದ ಲೋಕಸಭೆ ಚುನಾವಣೆಗೆ ಸ್ಪರ್ಧಿಸಿ ಸೋತಿದ್ದರು. ಮಗ ಸುನೀಲ್‌ ಬೋಸ್‌ ಇಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದಿದ್ದಾರೆ. ಕೊಳ್ಳೇಗಾಲದಿಂದ ಒಮ್ಮೆ ಪಕ್ಷೇತರರಾಗಿ ಶಾಸಕರಾಗಿ ಆನಂತರ ಜೆಡಿಎಸ್‌, ಕೆಜೆಪಿ, ಕಾಂಗ್ರೆಸ್‌ ನಲ್ಲಿದ್ದು ಬಿಜೆಪಿಗೆ ಬಂದ ಮಾಜಿ ಶಾಸಕ ಎಸ್.ಬಾಲರಾಜು ತುರುಸಿನ ಸ್ಪರ್ಧೆ ನಡುವೆ ಸೋಲು ಕಂಡಿದ್ದಾರೆ. ಈ ಕ್ಷೇತ್ರದಲ್ಲಿ ಕಾಂಗ್ರೆಸ್‌, ಜನತಾದಳ, ಜೆಡಿಯು, ಜೆಡಿಎಸ್‌, ಬಿಜೆಪಿಗೂ ಮತದಾರ ಜೈ ಎಂದಿದ್ದಾನೆ. ಹೆಚ್ಚು ಬಾರಿ ಕಾಂಗ್ರೆಸ್‌ ಗೆದ್ದಿದೆ. ಅದರಲ್ಲಿ ಶ್ರೀನಿವಾಸಪ್ರಸಾದ್‌ ಅವರು ಕಾಂಗ್ರೆಸ್‌, ಜೆಡಿಯು ಹಾಗೂ ಬಿಜೆಪಿಯಿಂದ ಗೆದ್ದವರು, ಒಮ್ಮೆ ಸ್ಪರ್ಧಿಸದೇ ಜೆಡಿಎಸ್‌ ಅಭ್ಯರ್ಥಿ ಗೆಲುವಿಗೂ ಕಾರಣರಾಗಿದ್ದರು. ಈ ಬಾರಿ ಅವರ ಕುಟುಂಬದವರಿಗೆ ಟಿಕೆಟ್‌ ನೀಡುವ ವಾತಾವರಣವಿತ್ತಾದರೂ ಕೊನೆಗೆ ಯಡಿಯೂರಪ್ಪ ಅವರೊಂದಿಗೆ ಕೆಜೆಪಿ ಸೇರಿದ್ದ ಬಾಲರಾಜುಗೆ ಅವಕಾಶ ಮಾಡಿಕೊಡಲಾಯಿತು. ಕೊನೆಗೆ ಶ್ರೀನಿವಾಸಪ್ರಸಾದ್‌ ಪರೋಕ್ಷವಾಗಿ ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದರು. ಇದಾಗಿ ಕೆಲವೇ ದಿನಕ್ಕೆ ತೀರಿಕೊಂಡರು. ಇದರ ಜತೆಗೆ ಸಚಿವ ಡಾ.ಮಹದೇವಪ್ಪ ಅವರು ತಮ್ಮ ಮಗನನ್ನು ಗೆಲ್ಲಿಸಲೇಬೇಕು ಎಂದು ಸಿದ್ದರಾಮಯ್ಯ ಅವರ ಬೆಂಬಲದೊಂದಿಗೆ ಶ್ರಮ ಹಾಕಿದರು. ಎಲ್ಲಾ ಶಕ್ತಿಗಳನ್ನು ಧಾರೆ ಎರೆದಿರುವುದು ಫಲ ಕೊಟ್ಟಿರುವಂತೆ ಕಾಣುತ್ತಿದೆ. ಎರಡು ಬಾರಿ ಗೆದ್ದು ಅಭಿವೃದ್ದಿ ವಿಚಾರದಲ್ಲಿ ಮಾದರಿಯಾಗಿದ್ದ ಆರ್‌.ಧೃವನಾರಾಯಣ್‌ ಅವರ ನೆನಪು ಉಳಿಯುವಂತೆ ಈ ಗೆಲುವು ದಕ್ಕಿದೆ.

ಟ್ರೆಂಡಿಂಗ್​ ಸುದ್ದಿ

ಚಾಮರಾಜನಗರ ಲೋಕಸಭೆ ಎಲೆಕ್ಷನ್ ಕ್ವಿಕ್‌ ಲುಕ್‌

ಲೋಕಸಭಾ ಕ್ಷೇತ್ರದ ಹೆಸರು: ಚಾಮರಾಜನಗರ

ಅಭ್ಯರ್ಥಿಯ ಹೆಸರು ಮತ್ತು ಪಡೆದ ಮತಗಳು

ಸುನೀಲ್‌ ಬೋಸ್‌ (ಕಾಂಗ್ರೆಸ್‌):751671ಮತಗಳು

ಎಸ್‌.ಬಾಲರಾಜು (ಬಿಜೆಪಿ): 562965 ಮತಗಳು

ಚಾಮರಾಜನಗರ ಲೋಕಸಭಾ ಕ್ಷೇತ್ರದಲ್ಲಿ ಗೆಲುವು ಪಡೆದ ಸುನೀಲ್‌ ಬೋಸ್‌ ಪರಿಚಯ

ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಗೆದ್ದಿರುವ ಸುನೀಲ್‌ ಬೋಸ್‌ ಅವರು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಅವರ ಪುತ್ರ. ಜನತಾದಳದಲ್ಲಿ ಸಕ್ರಿಯರಾಗಿದ್ದು, ನಂತರ ಕಾಂಗ್ರೆಸ್‌ನಲ್ಲಿ ಸುನೀಲ್‌ ಗುರುತಿಸಿಕೊಂಡಿದ್ದಾರೆ. ಪದವೀಧರರಾದ ಸುನೀಲ್‌ ಬೋಸ್‌ ಅವರಿಗೆ 40 ವರ್ಷ. ತಂದೆಯೊಂದಿಗೆ ರಾಜಕೀಯ ಮಾಡುತ್ತಾ ಬಂದವರು. ಎರಡು ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವಂತೆ ಕೇಳಿಕೊಂಡರೂ ಅವಕಾಶ ಸಿಕ್ಕಿರಲಿಲ್ಲ. ತಿ.ನರಸೀಪುರ ಕ್ಷೇತ್ರದ ಕೆಡಿಪಿ ಸಮಿತಿ ಅಧ್ಯಕ್ಷರೂ ಆಗಿದ್ದವರು.

ಚುನಾವಣಾ ಕಣ: ಚಾಮರಾಜನಗರ ಲೋಕಸಭಾ ಕ್ಷೇತ್ರ

ಚಾಮರಾಜನಗರ ಹಾಗೂ ಮೈಸೂರಿನ ಅರ್ಧಭಾಗವನ್ನು ಹೊಂದಿರುವ ಕ್ಷೇತ್ರ ಚಾಮರಾಜನಗರ. ಸಿಎಂ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣಾ ಕ್ಷೇತ್ರ,. ಸಚಿವ ಡಾ.ಮಹದೇವಪ್ಪ ಅವರು ಗೆದ್ದಿರುವ ತಿ.ನರಸೀಪುರ ಕ್ಷೇತ್ರ, ನಂಜನಗೂಡು,ಎಚ್‌.ಡಿಕೋಟೆ ಕ್ಷೇತ್ರಗಳ ಜತೆಗೆ ಚಾಮರಾಜನಗರದ ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೆಗಾಲ, ಹನೂರು ಕ್ಷೇತ್ರ ವ್ಯಾಪ್ತಿಯ ಕ್ಷೇತ್ರ. ಚಾಮುಂಡಿಬೆಟ್ಟದಿಂದ ಮುಂದಕ್ಕೆ ಹೋದರೆ ಶುರುವಾಗುವ ಕ್ಷೇತ್ರ ಮೂರು ತುದಿಗಳಲ್ಲಿ ಮಲೈಮಹದೇಶ್ವರ ಬೆಟ್ಟ, ಬಿಳಿಗಿರಿರಂಗನಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಹೊಂದಿದೆ. ಈ ಕ್ಷೇತ್ರದಿಂದ ಶ್ರೀನಿವಾಸಪ್ರಸಾದ್‌ ಆರು ಬಾರಿ ಸಂಸದರಾಗಿದ್ದವರು. ಧೃವನಾರಾಯಣ್‌ ಕೂಡ ಎರಡು ಬಾರಿ ಗೆದ್ದು ಅಭಿವೃದ್ದಿಗೆ ವಿಶೇಷ ಗಮನ ನೀಡಿದ ಕ್ಷೇತ್ರವಿದು.

(Disclaimer: ಗಮನಿಸಿ; ಇದು ಮತ ಎಣಿಕೆ ಕೇಂದ್ರಗಳಲ್ಲಿ ಲಭ್ಯವಿರುವ ಮಾಹಿತಿ ಆಧರಿಸಿ ಪ್ರಕಟಿಸಿದ ಬರಹ. ಚುನಾವಣಾ ಆಯೋಗವು ಅಧಿಕೃತವಾಗಿ ಅಂಕಿಅಂಶಗಳನ್ನು ಪ್ರಕಟಿಸಿದ ನಂತರ ಮತಗಳ ಸಂಖ್ಯೆ ಏರುಪೇರಾಗಬಹುದು. ಅಂತಿಮ ಫಲಿತಾಂಶದ ವಿವರವನ್ನು ಇದೇ ಬರಹದಲ್ಲಿ ಅಪ್‌ಡೇಟ್ ಮಾಡಲಾಗುವುದು.)

ಟಿ20 ವರ್ಲ್ಡ್‌ಕಪ್ 2024